ADVERTISEMENT

ನೂರೆಂಟು ಸ್ತೂಪ, ನೂರಾರು ನೆನಪು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2015, 19:30 IST
Last Updated 4 ಏಪ್ರಿಲ್ 2015, 19:30 IST
ದೋಚುಲಾ ಪಾಸ್‌ನ ನೂರೆಂಟು ಸ್ತೂಪಗಳು
ದೋಚುಲಾ ಪಾಸ್‌ನ ನೂರೆಂಟು ಸ್ತೂಪಗಳು   

‘ನರನು ಕೆರಳುವ ಹುಂಬ / ಬಾಳು ಯೂಪಸ್ತಂಭ / ಉತ್ತಮರ ಬಲಿ ಇಲ್ಲಿ ನೆರಳಾಡಿತು’– ಕವಿ ಗಂಗಾಧರ ಚಿತ್ತಾಲರ ಕವಿತೆಯ ಸಾಲುಗಳಿವು. ಈ ಸಾಲುಗಳು ನೆನಪಾದುದು, ದೋಚುಲಾ ಪಾಸ್‌ನ ಸ್ಮಾರಕಗಳ ನಡುವೆ ನಿಂತಾಗ.

ಭೂತಾನ್‌ ರಾಜಧಾನಿ ಥಿಂಪುವಿನಿಂದ 30 ಕಿ.ಮೀ. ದೂರದಲ್ಲಿದೆ ದೋಚುಲಾ ಪಾಸ್‌. ಮಂಜು ಮುಸುಕಿದ ದೂರದ ಹಿಮಾಲಯ ಪರ್ವತ ಶ್ರೇಣಿಗಳ ರಮಣೀಯ ದೃಶ್ಯ ಸೌಂದರ್ಯ, ಹಸಿರು ಹೊದ್ದ ನಿಸರ್ಗದ ನಡುವಿನ  ಪ್ರಕೃತಿ ಸೌಂದರ್ಯ ಮೇಳೈಸಿರುವ ಸುಂದರ ತಾಣವಿದು. 2003ರಲ್ಲಿ ಭೂತಾನ್ ಗಡಿ ಪ್ರವೇಶಿಸಿದ್ದ ಉಗ್ರರನ್ನು ಹೊಡೆದೋಡಿಸುವಾಗ ಮೃತರಾದ ಸೈನಿಕರ ನೆನಪಿಗೆ ಭೂತಾನ್ ರಾಜಮಾತೆ ಆಶೀ ದೊರ್ಜಿ ವಾಂಗ್ಮೊ ವಾಂಗ್ಚುಕ್ ಅಲ್ಲಿ 108 ಸ್ತೂಪಗಳನ್ನು ಕಟ್ಟಿಸಿದ್ದಾರೆ. ರಾಜಮಾತೆ ಬರೆದಿರುವ ‘ಟ್ರೆಷರ್ಸ್ ಆಫ್ ದಿ ಥಂಡರ್ ಡ್ರಾಗನ್’ ಪುಸ್ತಕದಲ್ಲಿ ಆ ಘಟನೆಯ ಬಗ್ಗೆ  ಬರೆದಿರುವುದು ಹೀಗೆ:

‘‘ಬ್ರಿಟಿಷರ ವಿರುದ್ಧ 1864–65ರಲ್ಲಿ ನಡೆದ ದುಅರ್ ಯುದ್ಧವೇ ಕೊನೆ. ನಂತರ ನಾವು ಶಾಂತಿಯಿಂದ ನೆಲೆಸಿದ್ದೆವು. ಇದ್ದಕ್ಕಿದ್ದಂತೆ ಭಾರತದ ಈಶಾನ್ಯ ರಾಜ್ಯಗಳಿಂದ ಉಗ್ರರು ಬಂದು ದಕ್ಷಿಣ ಭೂತಾನ್ ಕಾಡುಗಳಲ್ಲಿ ಕ್ಯಾಂಪ್ ಹಾಕಿಬಿಟ್ಟರು. ಹಲವು ಬಾರಿ ಮಾತುಕತೆ ನಡೆಸಿದರೂ ಪ್ರಯೋಜನ ವಾಗದೇ ಯುದ್ಧಕ್ಕೆ ದೇಶ ಸಿದ್ಧಗೊಂಡಿತು. ಆಕ್ಸ್‌ಫರ್ಡ್‌ನಲ್ಲಿ ಓದಲು ತಯಾರಿ ನಡೆಸಿದ್ದ ಯುವರಾಜ ನಮ್ಮಿಬ್ಬರಿಗೂ ಹೇಳದೆ ಮಿಲಿಟರಿ ಸೇರಿಕೊಂಡ. 2003ರ ಡಿಸೆಂಬರ್ 6ರಂದು ಮಹಾರಾಜ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಮತ್ತು ಯುವರಾಜ ಜಿಗ್ಮೆ ಕೇಸರ್ ನಾಮ್‌ಗೈಲ್ ವಾಂಗ್‌ಚುಕ್ ಯುದ್ಧಕ್ಕೆ ತೆರಳಿದರು. ಆತಂಕಗೊಂಡಿದ್ದ ನನಗೆ ಮಗ, ‘ಈ ಸಮಯದಲ್ಲಿ ಸೇನೆಯನ್ನು ಮುನ್ನಡೆಸುವುದು ಮುಖ್ಯ’ ಎಂದು ಹೇಳಿ ಹೊರಟ.

ಹೃದಯ ಬಂಡೆಯಂತೆ ಭಾರವಾಗಿತ್ತು. ಯುದ್ಧಕ್ಕೆ ತೆರಳಿದ ಸೈನಿಕರ ಕುಟುಂಬದವರ ಮನಸ್ಥಿತಿ ಹೇಗಿರಬಹುದು ಎಂಬುದು ಅರಿವಿಗೆ ಬಂತು. ತಕ್ಷಣ ಬೆಟ್ಟದ ಮೇಲೆ ಶಬ್‌ದ್ರುಂಗ್ ಅವರು ಧ್ಯಾನ ಮಾಡಿದ್ದ ಚೇರಿ ಮೊನಾಸ್ಟರಿಗೆ ಹೋಗಿ ಧ್ಯಾನಿಸಿದೆ. ನಾನು ಮಾಡಬೇಕಾದ ಕರ್ತವ್ಯಗಳ ಕಲ್ಪನೆ ಮನಸ್ಸಿನಲ್ಲಿ ಮೂಡಿತು. ಕೆಲವೇ ಗಂಟೆಗಳಲ್ಲಿ ನೂರಾರು ಸ್ವಯಂಸೇವಕರು ಜೊತೆಯಾದರು. ರಕ್ತದಾನ ಶಿಬಿರಗಳು, ಯುದ್ಧ ನಡೆಯುವ ಸ್ಥಳದ ಹತ್ತಿರ ಇರುವ ಗ್ರಾಮಸ್ಥರ ಸ್ಥಳಾಂತರ ಕೆಲಸ ತ್ವರಿತವಾಗಿ ನಡೆಯತೊಡಗಿತು. ಜನರಿಂದ ಹಣದ ಹೊಳೆಯೇ ಹರಿದು ಬಂದಿತು. ಚೇರಿ ಮೊನಾಸ್ಟರಿಯಲ್ಲಿ ಪ್ರಾರ್ಥಿಸುವಾಗ ನಮ್ಮ ಸೈನಿಕರು ಮತ್ತು ದೊರೆ ಸುರಕ್ಷಿತವಾಗಿ ಹಿಂದಿರುಗಲೆಂದು ದೋಚುಲಾ ಪಾಸ್‌ನಲ್ಲಿ 108 ಸ್ತೂಪಗಳನ್ನು ಕಟ್ಟಿಸುವುದಾಗಿ ಅಂದುಕೊಂಡಿದ್ದೆ.

ಡಿಸೆಂಬರಿನ ಮಂಜು ತುಂಬಿದ ಆ ದಿನದಲ್ಲೇ ಕೆಲಸವನ್ನೂ ಪ್ರಾರಂಭಿಸಿದೆವು. ಸ್ತೂಪಗಳ ನಿರ್ಮಾಣ ಮಾಡುವಾಗ ಹಲವು ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಈ ಕೆಲಸದಲ್ಲಿ ಜನರೆಲ್ಲ ವಿವಿಧ ರೀತಿಯಲ್ಲಿ ಸಹಕಾರ ನೀಡಿದರು. ರೈತರು, ಸನ್ಯಾಸಿಗಳು, ಎಂಜಿನಿಯರುಗಳು, ಗಾರೆ ಕೆಲಸ ಮಾಡುವವರು, ವೃದ್ಧರು,  ಗೃಹಿಣಿಯರು, ಅಧಿಕಾರಿಗಳು– ಹೀಗೆ, ಎಲ್ಲರೂ ಈ ಸತ್ಕಾರ್ಯದಲ್ಲಿ ತೊಡಗಿಸಿಕೊಂಡರು. ಕೇವಲ ಒಂದೂವರೆ ದಿನಗಳಲ್ಲಿ ಉಗ್ರರ 30 ಕ್ಯಾಂಪ್‌ಗಳನ್ನು ನಾಶ ಮಾಡುವಲ್ಲಿ ನಮ್ಮ ಸೈನ್ಯ ಸಫಲವಾಯಿತು. ಯುದ್ಧದ ಗೆಲುವಿಗೆ ಸಂಭ್ರಮಿಸುವ ಸಂಸ್ಕಾರ ನಮ್ಮದಲ್ಲ. ವೀರಮರಣ ಹೊಂದಿದ ಹನ್ನೊಂದು ಮಂದಿ ಭೂತಾನ್ ಸೈನಿಕರಿಗಾಗಿ ಮರುಗಿದೆವು, ದುಃಖಿತರಾದೆವು. ಯುದ್ಧದಲ್ಲಿ ಮೃತಪಟ್ಟ ನಮ್ಮ ಸೈನಿಕರು ಮತ್ತು ಉಗ್ರರ ಆತ್ಮಕ್ಕೆ ಶಾಂತಿ ಸಿಗಲೆಂದು ದೀಪ ಹಚ್ಚಿ ಪ್ರಾರ್ಥಿಸಿದೆವು.

ಡಿಸೆಂಬರ್ 28ಕ್ಕೆ ದೊರೆ ಥಿಂಪು ಪಟ್ಟಣಕ್ಕೆ ವಾಪಸಾಗುವಷ್ಟರಲ್ಲಿ 108 ಸ್ತೂಪಗಳ ನಿರ್ಮಾಣ ಒಂದು ಹಂತಕ್ಕೆ ಬಂದಿತ್ತು. ಆದರೆ ಜನವರಿ ಮತ್ತು ಫೆಬ್ರುವರಿ ತಿಂಗಳಿನಲ್ಲಿ ವಿಪರೀತ ಚಳಿ ಇರುವುದರಿಂದ ಕೆಲಸವನ್ನು ಸ್ಥಗಿತಗೊಳಿಸಿದ್ದೆವು. ಆ ನಂತರ ಕೆಲಸವನ್ನು ಪ್ರಾರಂಭಿಸಿ ಜೂನ್ ತಿಂಗಳಿಗೆಲ್ಲಾ ಮುಗಿಸಿದೆವು. ಜನತೆಗೆ ಸಮರ್ಪಿಸುವ ಸಂದರ್ಭದಲ್ಲಿ ಅದರ ಪೂಜೆಯನ್ನು ನಡೆಸಿ ಪ್ರದಕ್ಷಿಣೆ ಹಾಕುವಾಗ, ದೇವತೆಗಳು ವೀಕ್ಷಿಸಲು ಆಗಮಿಸಿ ಹರಸುವಂತೆ ಮುಸುಕಿದ್ದ ಮೋಡಗಳ ನಡುವೆ ಸೂರ್ಯನ ಕಿರಣ ಭೂಮಿಯೆಡೆಗೆ ಬರುತ್ತಾ ಆಗಸದಲ್ಲಿ ಕಾಮನಬಿಲ್ಲನ್ನು ಮೂಡಿಸಿತ್ತು. ಈ ಸ್ಥಳದ ಮಹಿಮೆಗೆ ಮಾರು ಹೋಗಿ ಅಲ್ಲೇ ಬೆಟ್ಟದ ಮೇಲೆ ರಾಜ ಮನೆತನದ ನೂರನೇ ವರ್ಷದ ಸವಿನೆನಪಿಗಾಗಿ ಡ್ರುಕ್ ವ್ಯಾಗ್ಯಿಲ್ ಲಾಖಾಂಗ್ (ದೇವಸ್ಥಾನ) ಕಟ್ಟಿಸಿದೆ...’’.
***
ಬೆಟ್ಟದ ಮೇಲಿನ ದೇವಸ್ಥಾನದಿಂದ 108 ಸ್ತೂಪಗಳು ಮತ್ತು ಸುತ್ತಲಿನ ಕಣಿವೆ ಹಾಗೂ ದೂರದ ಪರ್ವತಗಳು ಅದ್ಭುತವಾಗಿ ಕಾಣಿಸುತ್ತದೆ. ಸಾಮಾನ್ಯವಾಗಿ ಯುದ್ಧ ಗೆದ್ದಾಗ ವಿಜಯದ ಸಂಕೇತವಾಗಿ ಏನನ್ನಾದರೂ ಕಟ್ಟಿಸುತ್ತಾರೆ. ಆದರೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ನೆನಪಿಗಾಗಿ ಅಲ್ಲಿ ಸ್ತೂಪಗಳನ್ನು ಕಟ್ಟಿರುವುದು ವಿಶೇಷ. ಜನವರಿ ಮತ್ತು ಫೆಬ್ರುವರಿ ತಿಂಗಳಿನಲ್ಲಿ ಈ ಸ್ಥಳವೆಲ್ಲಾ ಮಂಜಿನಿಂದ ಕೂಡಿರುತ್ತದೆ. ನೂರೆಂಟು ಸ್ತೂಪಗಳು, ಬೆಟ್ಟದ ಮೇಲಿನ ದೇವಸ್ಥಾನದ ವಾಸ್ತುಶೈಲಿ ಮತ್ತು ಅಲ್ಲಿಂದ ಕಾಣುವ ಪ್ರಕೃತಿ ಸೌಂದರ್ಯವನ್ನು ಆಸ್ವಾದನೆ ದೇಹ ಮತ್ತು ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ಅದರ ಹಿಂದಿನ ಉದ್ದೇಶ ಅರಿತಾಗ ಅವರ ಸಂಸ್ಕಾರ ಮತ್ತು ಸಂಸ್ಕೃತಿಗೆ ಮನಸೋಲುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.