ADVERTISEMENT

ಭೂತಾನದಲ್ಲೊಬ್ಬ ‘ಮಲೆ ಮಹಾದೇವ’

ಲಿಂಗರಾಜು ಡಿ.ಎಸ್
Published 1 ಏಪ್ರಿಲ್ 2017, 19:30 IST
Last Updated 1 ಏಪ್ರಿಲ್ 2017, 19:30 IST
ಭೂತಾನದಲ್ಲೊಬ್ಬ ‘ಮಲೆ ಮಹಾದೇವ’
ಭೂತಾನದಲ್ಲೊಬ್ಬ ‘ಮಲೆ ಮಹಾದೇವ’   

ಭೂತಾನ್ ದೇಶದ ಪ್ರವಾಸಕ್ಕೆ ಹೊರಟು ನಿಂತಾಗ ನನ್ನ ಮನಸ್ಸಲ್ಲಿ ಇದ್ದುದು ‘ಟೈಗರ್ ನೆಸ್ಟ್’ ಬೆಟ್ಟದ ಟ್ರೆಕಿಂಗ್. ಅದಕ್ಕಾಗಿ ಮುಂದಾಗಿಯೇ ಹಲವು ಬಾರಿ ನಮ್ಮ ಪ್ರವಾಸಿ ಏಜೆಂಟ್‌ಗೆ ಹೇಳಿಟ್ಟಿದ್ದೆ. ಆತ ‘ಟೈಗರ್ ನೆಸ್ಟ್’ ಪ್ರವಾಸದ ಕಾರಣದಿಂದ ಒಂದು ದಿನದ ಇತರೇ ಸ್ಥಳಗಳ ಭೇಟಿ ತಪ್ಪಿಹೋಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ. ನಾನು ಖಡಾಖಂಡಿತವಾಗಿ ‘ಟೈಗರ್ ನೆಸ್ಟ್’ ತಪ್ಪಿಸಲಾಗದು ಎಂದು ಹೇಳಿದ್ದರಿಂದ ಆತ ಒಪ್ಪಿದ್ದ.

ನಮ್ಮನ್ನು ಸಿಲಿಗುರಿಯಿಂದ ರಸ್ತೆಯಲ್ಲಿ ಕರೆದುಕೊಂಡು ಹೊರಟು ಫುಂಟ್‌ಶೋಲಿಂಗ್ ಮೂಲಕ ಭೂತಾನ್ ದೇಶದ ಕಣಿವೆಗಳ ಸೌಂದರ್ಯ ತೋರಿಸುತ್ತಾ ತಿಂಪು ತಲುಪಿಸಿದ್ದ. ಅಲ್ಲಿಂದ ಪಾರೋ ನಗರಕ್ಕೆ ಹೊರಟಾಗ ಮಳೆ ಇಲ್ಲದಿದ್ದರೆ ಮಾತ್ರ ಬೆಳಿಗ್ಗೆ ‘ಟೈಗರ್ ನೆಸ್ಟ್’ ಪ್ರವಾಸ ಎನ್ನುವ ಷರತ್ತು ಹಾಕಿದ್ದ. ‘ಪಾರೋದಲ್ಲಿ ಮಳೆ ಇಲ್ಲದಿರಲಿ’ ಎಂದು ನಾನು ಪದ್ಮಸಂಭವನನ್ನು ಹಲವಾರು ಬಾರಿ ಪ್ರಾರ್ಥಿಸಿದ್ದೆ.

ಪಾರೋ ತಲುಪಿದಾಗ ಸಂಧ್ಯಾಕಾಲ. ಬೆಳಗಾಗೆದ್ದು ನಮ್ಮ ತಂಡದ ಹತ್ತೂ ಜನ ಖುಷಿಯಿಂದಲೇ ಹೊರಟಿದ್ದರು. ‘ಟೈಗರ್ ನೆಸ್ಟ್’ ಬಳಿಗೆ ಬರುವ ವೇಳೆಗಾಗಲೇ ಬೆಳಗಿನ ಹನ್ನೊಂದಾಗಿತ್ತು. ಬೆಟ್ಟದ ಅಗಾಧತೆ, ಎತ್ತರ ನೋಡಿದ ನಮ್ಮವರೆಲ್ಲ ‘ಟೈಗರ್ ನೆಸ್ಟ್’ ಹತ್ತುವ ಆಸೆಗೆ ಎಳ್ಳುನೀರು ಬಿಟ್ಟು ಸುಮ್ಮನಾದರು. ಆದರೆ ಮನಸ್ಸಲ್ಲಿ ತುಡಿಯುತ್ತಿದ್ದ ಆಸೆ ನನ್ನನ್ನು ಸುಮ್ಮನೆ ಬಿಡಲಿಲ್ಲ. ತಂಡದಲ್ಲಿದ್ದ ಕೃಷ್ಣಪ್ಪ ಮತ್ತು ರೀನಾರನ್ನು ಪುಸಲಾಯಿಸಿ ಹೊರಡಿಸಿದೆ.

ಹಾರುವ ಲಾಮಾ ಪ್ರಭಾವಳಿ
ಪಾರೋ ಕಣಿವೆಯಲ್ಲಿ ಪಾರೋ ನಗರದಿಂದ ಸುಮಾರು 20 ಕಿಲೋಮೀಟರ್ ದೂರವಿರುವ ಇದನ್ನು ‘ತಕ್ಷಿಂಗ್ ಪಲ್ಪುಗ್ ಮಾನೆಸ್ಟ್ರಿ’ ಎಂದೂ ಕರೆಯಲಾಗುತ್ತದೆ. ಕ್ರಿ.ಶ. 8ನೇ ಶತಮಾನದಲ್ಲಿ ಇಲ್ಲಿನ ಗುಹೆಯಲ್ಲಿ ಬೌದ್ಧ ಗುರು ಪದ್ಮಸಂಭವ ಘೋರ ತಪಸ್ಸನ್ನು ಕೈಗೊಂಡಿದ್ದ ಎಂಬ ನಂಬಿಕೆ ಇದೆ.

ಆತ ಈ ಕಡಿದಾದ ಬೆಟ್ಟದ ಮೇಲೆ ಬರಲು ಮತ್ತು ಬೇರೆಡೆ ಹೋಗಲು ಹುಲಿಯ ಮೇಲೆ ಕುಳಿತು ಹಾರುತ್ತಿದ್ದ ಎಂದು ಹೇಳಲಾಗುತ್ತದೆ. ಇದರಿಂದ ಆತನನ್ನು ‘ಹಾರುವ ಲಾಮಾ’ ಎಂದೂ ಕರೆಯುತ್ತಿದ್ದರಂತೆ. ನನಗೆ ನಮ್ಮ ‘ಮಲೆ ಮಹಾದೇವ’ನ ನೆನಪಾಯ್ತು.

ನಾವು ಬಹಳ ಕಡಿದಾದ ಹಾದಿಯಲ್ಲಿ ಹತ್ತಿ ಗುಹೆಯ ಬಳಿ ಬರುವ ವೇಳೆಗಾಗಲೆ ಮಧ್ಯಾಹ್ನ 1.30 ಆಗಿತ್ತು. ಮೂರು ಗಂಟೆಯ ನಂತರವೇ ಗುಹೆಗೆ ಪ್ರವೇಶ ಎಂದು ತಿಳಿಸಲಾಯ್ತು. ಸುಮಾರು 10 ಸಾವಿರ ಅಡಿಗೂ ಹೆಚ್ಚು ಎತ್ತರದಲ್ಲಿದ್ದುದರಿಂದ ಬೀಸುವ ಗಾಳಿಯಲ್ಲಿ ನಡುಕ ಆರಂಭವಾಗಿತ್ತು. ಕುಡಿಯಲು ನೀರು ಮತ್ತು ಆಹಾರ ಏನನ್ನೂ ತೆಗೆದುಕೊಂಡು ಹೋಗದ ಕಾರಣ ಹಸಿವು ಬೇರೆ ಕಾಡುತ್ತಿತ್ತು.

ಮಧ್ಯಾಹ್ನ 3ರ ನಂತರ ಗುಹೆಯ ಒಳಕ್ಕೆ ಪ್ರವಾಸಿಗಳನ್ನು ಬಿಡತೊಡಗಿದರು. ಪ್ರವೇಶಕ್ಕೆ ಮುನ್ನ ನಮ್ಮನ್ನು ತಡೆದು ನಿಲ್ಲಿಸಿ, ನಮ್ಮ ರೋಡ್ ಪರ್ಮಿಟ್ ಹಾಜರುಪಡಿಸಲು ಕೇಳಿದರು. ಅದು ನಮ್ಮ ಬಳಿ ಇರದೇ ಬೆಟ್ಟದ ಕೆಳಗಿದ್ದ ನಮ್ಮ ಚಾಲಕನ ಬಳಿ ಇತ್ತು. ನಮ್ಮ ಅಸಹಾಯಕತೆಯನ್ನು ತೋಡಿಕೊಂಡೆವು.

ADVERTISEMENT

ಕೊನೆಗೆ ಭೂತಾನ ಪೊಲೀಸರೊಬ್ಬರು ನಮ್ಮ ಕರುಣಾಜನಕ ಕಥೆ ಕೇಳಿ, ಒಳಹೋಗಲು ಅನುಮತಿ ನೀಡಿದರು. ಆದರೆ ಒಳಹೋಗಲು ಮುಂಗೈ ಮುಚ್ಚುವ ತುಂಬು ತೋಳಿನ ಶರಟು ಹಾಕಬೇಕಿತ್ತಂತೆ. ಅದೂ ಸಹ ನಮಗೆ ಗೊತ್ತಿರಲಿಲ್ಲ. ಕೃಷ್ಣಪ್ಪ ಇದೆಲ್ಲದರ ಬಗ್ಗೆ ಪೊಲೀಸರೊಬ್ಬರ ಬಳಿ ಹೇಳಿಕೊಂಡರು. ಅವರ ಮನಕರಗಿ, ನಮ್ಮನ್ನು ಒಳಗೆ ಕರೆದೊಯ್ದು ತಮ್ಮ ಸ್ವೆಟರ್ ಮತ್ತು ಕೋಟುಗಳನ್ನು ನೀಡಿ ಕಳುಹಿಸಿಕೊಟ್ಟರು.

ಮನಸೆಳೆವ ವಾಸ್ತುಶಿಲ್ಪ
ಗುಹೆಯ ಬಳಿಯೇ ಸುಮಾರು 200 ಅಡಿ ಎತ್ತರದಿಂದ ನೀರು ಬೀಳುವ ಜಲಪಾತವೊಂದಿದೆ. ಇಷ್ಟು ಅಗಾಧವಾದ ಎತ್ತರದಲ್ಲಿ ಮರದ ತೊಲೆ ಮತ್ತು ಇಟ್ಟಿಗೆ ಬಳಸಿ ಕಟ್ಟಡಗಳನ್ನು ಕಟ್ಟಿರುವ ಬೌದ್ಧ ಸನ್ಯಾಸಿಗಳ ಕಾರ್ಯಕ್ಷಮತೆಯ ಬಗ್ಗೆ ಅಚ್ಚರಿ ಉಂಟಾಗದೇ ಇರದು. ಇಡೀ ಪರಿಸರವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ವರ್ಷವಿಡೀ ಪೊಲೀಸ್ ಕಾವಲು ಇರುತ್ತದೆ.

ಬೆಟ್ಟದ ಹಾದಿಯಲ್ಲಿ ಒಂದು ಸಣ್ಣ ಹೋಟೆಲಿತ್ತು. ಅಲ್ಲಿ ಒಂದು ಕಪ್ ಚಹಾ ಮತ್ತು ನಾಲ್ಕು ಬಿಸ್ಕೆಟ್‌ಗೆ ರೂ. 250 ತೆಗೆದುಕೊಂಡರು. ಭೂತಾನದಲ್ಲಿ ಭಾರತೀಯ ರುಪಾಯಿಗಳನ್ನು ಸಹ ಸ್ವೀಕರಿಸಲಾಗುತ್ತದೆ.

ಬೆಟ್ಟ ಹತ್ತಲು ಸುಮಾರು ಎರಡರಿಂದ ಮೂರು ಗಂಟೆ ಬೇಕು. ಬೆಟ್ಟದ ತಪ್ಪಲಿನಿಂದ ಅರ್ಧ ದಾರಿಯವರೆಗೆ ಕುದುರೆಗಳ ಮೇಲೆ ಬರಬಹುದು. ಕಡಿದಾದ ಏರುದಾರಿಯಲ್ಲಿ ಬುಸುಗುಟ್ಟುತ್ತಾ ಏರುವ ಕುದುರೆಗಳನ್ನು ನೋಡಿದಾಗ ಸಂಕಟವಾಗುತ್ತದೆ.

ಬೆಟ್ಟ ಏರುವವರು ಬೆಚ್ಚನೆ ಬಟ್ಟೆಗಳನ್ನು ಮತ್ತು ಉತ್ತಮವಾದ ಶೂಗಳನ್ನು ಧರಿಸಬೇಕು. ಜೊತೆಗೆ ನೀರು ಮತ್ತು ಲಘು ಆಹಾರ ಕಡ್ಡಾಯವಾಗಿ ಕೊಂಡೊಯ್ಯಿರಿ. ನೀವು ಭೂತಾನ್‌ ಪ್ರವಾಸಕ್ಕೆ ಹೊರಟರೆ ‘ಟೈಗರ್ ನೆಸ್ಟ್’ ನೋಡಲು ತಪ್ಪಿಸಬೇಡಿ. ಅದೊಂದು ಮರೆಯಲಾಗದ ಅನುಭವ.

ಪಾಸ್‌ಪೋರ್ಟ್ ಅಗತ್ಯವಿಲ್ಲ...
ಭೂತಾನ್ ದೇಶಕ್ಕೆ ರಸ್ತೆಯ ಮೂಲಕ ಹೋಗುವುದಾದಲ್ಲಿ ಪಾಸ್‌ಪೋರ್ಟ್ ಅವಶ್ಯಕತೆ ಇಲ್ಲ. ಸಿಲಿಗುರಿಯ ಮೂಲಕ ರಸ್ತೆಯಲ್ಲಿ ಹೋಗಿ ಭಾರತದ ಗಡಿ ದಾಟಿ, ಭೂತಾನ್ ದೇಶದ ಫುಂಟ್‌ಶೋಲಿಂಗ್ ನಗರದಲ್ಲಿ ನೀವು ಪ್ರವಾಸಿ ಪರ್ಮಿಟ್ ಪಡೆಯಬೇಕಾಗುತ್ತದೆ. ಅದಕ್ಕಾಗಿ ‘ಆಧಾರ್’, ಮತದಾರರ ಚೀಟಿ, ಪ್ಯಾನ್ ಇತ್ಯಾದಿಗಳಲ್ಲಿ ಒಂದನ್ನು ಹಾಜರುಪಡಿಸಿ, ವಾರದ ಪರ್ಮಿಟ್ ಪಡೆಯಬಹುದು.

ಫುಂಟ್‌ಶೋಲಿಂಗ್ ನಗರದಿಂದ ಪಾರೋ ತಲುಪಲು ಸಾಕಷ್ಟು ವಾಹನಗಳು ದೊರೆಯುತ್ತವೆ. ಅಲ್ಲಿನ ಚಾಲಕರು ಮತ್ತು ಜನರು ತಮ್ಮ ಪ್ರಾಮಾಣಿಕತೆಯಿಂದ ಇಷ್ಟವಾಗುತ್ತಾರೆ. ಅತ್ಯಂತ ಸ್ವಚ್ಛ ದೇಶ ಇದು.

ಚಿತ್ತಾಕರ್ಷಕ ಚಿತ್ರಗಳು
ಗುಹೆಯ ಒಳಗೆ ಬೌದ್ಧ ಶೈಲಿಯ ಚಿತ್ರಗಳನ್ನು ಗೋಡೆಗಳ ಮೇಲೆ ಬಿಡಿಸಲಾಗಿತ್ತು. ಶತಮಾನಗಳಷ್ಟು ಹಳೆಯ ಚಿತ್ರಗಳು ಅವು. ಅವುಗಳನ್ನು ಪ್ಲಾಸ್ಟಿಕ್ ಹೊದಿಕೆ ಹಾಕಿ ರಕ್ಷಿಸಲಾಗಿದೆ. ಗುಹೆ ಇನ್ನೂ ಒಳಗೆ ಇದ್ದಂತಿತ್ತು. ಆದರೆ ಒಂದು ಹಂತದವರೆಗೆ ಮಾತ್ರ ಪ್ರವಾಸಿಗಳನ್ನು ಬಿಡಲಾಗುತ್ತದೆ. ಅಲ್ಲಿ ನಾವು ಕಾಣಿಕೆ ಹಾಕಲು ಕಲ್ಲಿನ ಪೊಟರೆಯಂತಹ ಸ್ಥಳವಿದೆ. ನಾವು ಹಾಕುವ ನೋಟು ಎಲ್ಲಿಗೆ ಹೋಗಿಬೀಳುತ್ತದೋ ದೇವರೇ ಬಲ್ಲ.

ಬೆಟ್ಟದ ಮೇಲೆ ಎಂಟು ಗುಹೆಗಳಿವೆ. ಅವುಗಳಲ್ಲಿ ನಾಲ್ಕಕ್ಕೆ ಮಾತ್ರ ಪ್ರವಾಸಿಗರಿಗೆ ಪ್ರವೇಶ. ಅಲ್ಲಿ ನಮ್ಮ ಕನ್ನಡ ಕೇಳಿದ ಒಂದಿಬ್ಬರು ಬೌದ್ಧ ಗುರುಗಳು ನಮ್ಮನ್ನು ಮಾತನಾಡಿಸಿ, ತಾವು ಬೈಲಕುಪ್ಪೆಯಲ್ಲಿ ಸ್ವಲ್ಪ ಕಾಲ ಇದ್ದುದಾಗಿ ತಿಳಿಸಿದರು.

ಗುಹೆಯಿಂದ ಹೊರಬರುವ ವೇಳೆಗೆ ಸಂಜೆ ಸಮೀಪಿಸುತ್ತಿತ್ತು. ಹಸಿವು ಮತ್ತು ಚಳಿ ತಮ್ಮ ಪ್ರಭಾವ ತೋರಿಸಲಾರಂಭಿಸಿದ್ದವು. ಅಲ್ಲಿ ಅಂಗಡಿಗಳಿಲ್ಲ. ಚಹಾ–ಕಾಫಿಯೂ ದೊರೆಯುವುದಿಲ್ಲ. ನಮ್ಮ ಸಂಕಟ ನೋಡಲಾಗದ ರೀನಾ ಮೆಲ್ಲಗೆ ಒಳಹೊಕ್ಕು ನಾಲ್ಕು ಬಿಸ್ಕೆಟ್ ಪ್ಯಾಕ್ ಹಿಡಿದುಬಂದಳು.

ಭಕ್ತರು ಪದ್ಮಸಂಭವನಿಗೆ ಅರ್ಪಿಸಿದ ನೈವೇದ್ಯ ಅದು, ಅಲ್ಲೊಂದೆಡೆ ಕಿಟಕಿಯ ಬಳಿ ಇಡಲಾಗಿತ್ತಂತೆ. ಮೂರು ಮಂದಿಯೂ ಕದ್ದ ಬಿಸ್ಕೆಟ್ ತಿಂದು, ಪ್ರವಾಸಿಯೊಬ್ಬರನ್ನು ಕೇಳಿ ನೀರು ಪಡೆದು ಕುಡಿದು ವಾಪಸ್ ಹೊರಟೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.