ADVERTISEMENT

ಭೂತಾನ್‌ನಲ್ಲೊಂದು ಸ್ವಿಟ್ಜರ್ಲೆಂಡ್

​ಪ್ರಜಾವಾಣಿ ವಾರ್ತೆ
Published 4 ಜೂನ್ 2016, 19:30 IST
Last Updated 4 ಜೂನ್ 2016, 19:30 IST
ಭೂತಾನ್‌ನಲ್ಲೊಂದು ಸ್ವಿಟ್ಜರ್ಲೆಂಡ್
ಭೂತಾನ್‌ನಲ್ಲೊಂದು ಸ್ವಿಟ್ಜರ್ಲೆಂಡ್   

ಪ್ರಾಕೃತಿಕ ಸೌಂದರ್ಯದೊಂದಿಗೆ ಸರಳತೆಯನ್ನು ಆವಾಹಿಸಿಕೊಂಡಿರುವ ವಿಶಿಷ್ಟ ದೇಶ ಭೂತಾನ್‌. ಇಲ್ಲಿನ ಭೂಮ್‌ತಾಂಗ್‌ ತನ್ನ ಅನುಪಮ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರ ನಡುವೆ ‘ಭೂತಾನ್‌ನ ಸ್ವಿಟ್ಜರ್ಲೆಂಡ್’ ಎಂದು ಪ್ರಸಿದ್ಧವಾಗಿದೆ. ಭೂಮ್‌ತಾಂಗ್‌ಗೆ ಸಾಗುವ ದಾರಿ ಕೂಡ ಪ್ರವಾಸಿಗರಲ್ಲಿ ವಿಶಿಷ್ಟ ಅನುಭೂತಿಯನ್ನು ಮೂಡಿಸಬಲ್ಲದು.

ಭೂಮ್‌ತಾಂಗ್ ಅನ್ನು ‘ಭೂತಾನ್‌ನ ಸ್ವಿಟ್ಜರ್ಲೆಂಡ್’ ಎನ್ನುತ್ತಾರೆ. ಭೂತಾನ್‌ ರಾಜಧಾನಿ ಥಿಂಪುವಿನಿಂದ ಭೂಮ್‌ತಾಂಗ್‌ 270 ಕಿ.ಮೀ ದೂರವಿದ್ದರೂ, ಅಲ್ಲಿಗೆ ತಲುಪಲು 10–12 ತಾಸು ಪ್ರಯಾಣ ಮಾಡಬೇಕು.

ಬೆಟ್ಟಗುಡ್ಡಗಳ ದುರ್ಗಮ ರಸ್ತೆಯಲ್ಲಿ ನಿಧಾನವಾಗಿ ಸಾಗಬೇಕು. ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ದಾರಿಯುದ್ದಕ್ಕೂ ಕಾಣುವ ಕಣಿವೆ, ನದಿ, ಹಸಿರು, ಬೆಟ್ಟದ ಸಾಲು ಆಸ್ವಾದಿಸುತ್ತಾ ಸಾಗುವ ಪ್ರಯಾಣ ದೀರ್ಘವಾದರೂ ಪ್ರಯಾಸವೇನಲ್ಲ.
ಸಂಪೂರ್ಣ ಸಾವಯವ

ಭೂತಾನ್ ಸಂಪೂರ್ಣ ಸಾವಯವ ದೇಶ. ಅಲ್ಲಿ ರಾಸಾಯನಿಕ ಗೊಬ್ಬರ ದುಬಾರಿ ಎಂದು ಯಾರೂ ಬಳಸುವುದಿಲ್ಲ ಹಾಗೂ ಅಲ್ಲಿನ ಫಲವತ್ತಾದ ಭೂಮಿಗೆ ಅದರ ಅಗತ್ಯವೂ ಇಲ್ಲ. ಹಾಗಾಗಿ ಅಲ್ಲಿ ಬೆಳೆಯುವ ತರಕಾರಿ, ಹಣ್ಣುಗಳೆಲ್ಲವೂ ಸಾವಯವ. ರೈತರ ಉತ್ಪನ್ನಗಳನ್ನು ರಸ್ತೆ ಬದಿಯಲ್ಲಿಟ್ಟು ಮಾರಾಟ ಮಾಡಲು ಅನುಕೂಲವಾಗುವಂತೆ ಅಲ್ಲಿನ ಸರ್ಕಾರ ದಾರಿಯುದ್ದಕ್ಕೂ ತಂಗುದಾಣಗಳನ್ನು ನಿರ್ಮಿಸಿದೆ.

ಮಧ್ಯವರ್ತಿಗಳಿಲ್ಲದೆ ರೈತ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ ಅಲ್ಲಿದೆ. ದಾರಿಯುದ್ದಕ್ಕೂ ಮಾರಾಟಕ್ಕಿರುವ ಸೇಬು, ಲಿಚಿ, ಪೀಚ್, ಚೆರ್ರಿ ಮುಂತಾದ ಹಣ್ಣುಗಳನ್ನು ಸವಿಯುತ್ತಾ ಸಾಗಬಹುದು. ಬೆಣ್ಣೆ, ಚೀಸ್‌ಗಳನ್ನೂ ಎಲೆಯಲ್ಲಿ ಸುತ್ತಿ ಮಾರಾಟಕ್ಕೆ ಇಟ್ಟಿರುತ್ತಾರೆ. ಅಲ್ಲಿನ ಥಂಡಿ ವಾತಾರಣಕ್ಕೆ ಶೀತಲ ಯಂತ್ರದ ಅಗತ್ಯವೇ ಅವರಿಗಿಲ್ಲ!

ಪ್ರಾರ್ಥನಾ ಬಾವುಟಗಳು
ಮಾರ್ಗಮಧ್ಯೆ ವಿವಿಧ ರೀತಿಯ ಪ್ರಾರ್ಥನಾ ಬಾವುಟಗಳನ್ನು ಕಾಣಬಹುದು. ಅವುಗಳ ಉದ್ದೇಶ ಗಾಳಿಯ ಮೂಲಕ ನಮ್ಮ ಪ್ರಾರ್ಥನೆ ಭಗವಂತನನ್ನು ಮುಟ್ಟಲಿ ಎಂಬುದಾಗಿದೆ. ಒಟ್ಟು ಐದು ವಿಧದ ಪ್ರಾರ್ಥನಾ ಬಾವುಟಗಳಿವೆ. ಐದು ಬಣ್ಣಗಳ ಚೌಕಾಕಾರದ ಪ್ರಾರ್ಥನೆಯನ್ನು ಬರೆದಿರುವ ಬಟ್ಟೆಗಳನ್ನು ಬಂಟಿಂಗ್ಸ್ ರೀತಿ ಕಟ್ಟಿರುವುದನ್ನು ‘ಲುಗ್ದಾರ್’ ಎನ್ನುತ್ತಾರೆ.

ಅವೇ ಐದು ಬಣ್ಣಗಳದ್ದು ಲಂಬವಾಗಿ ನೆಟ್ಟಿರುವ ಕೋಲಿಗೆ ಸಿಕ್ಕಿಸಿರುವುದನ್ನು ‘ದರ್ಚೋರ್’ ಎನ್ನುವರು. ಏನನ್ನೂ ಬರೆಯದೆ ಬಿಳಿಯ ಬಟ್ಟೆಗಳನ್ನು ಉದ್ದುದ್ದ ಕೋಲಿಗೆ ಕಟ್ಟಿರುವುದನ್ನು ‘ಲ್ಹಾಧಾರ್’ ಎಂದು ಕರೆದರೆ, ಮನೆಗಳ ಮೇಲೆ ಚಿಕ್ಕಚಿಕ್ಕದಾದ ಹಸಿರು ಹಳದಿ ಮತ್ತು ನೀಲಿ ಪಟ್ಟಿಗಳಂತಿರುವುದನ್ನು ‘ಗೋಯೆಂಧಾರ್’ ಹಾಗೂ ಬಹಳ ಎತ್ತರದ ಕಂಬಗಳಿಗೆ ಕಟ್ಟಿರುವುದನ್ನು ‘ಮನಿಧಾರ್’ ಎನ್ನುವರು.

ಸ್ವರ್ಗದ ಲೋಕ
ಭೂಮ್‌ಥಾಂಗ್ ಹತ್ತಿರವಾಗುತ್ತಿದ್ದಂತೆ ವಾತಾವರಣದಲ್ಲಿನ ಬದಲಾವಣೆ ಗೋಚರಿಸತೊಡಗುತ್ತದೆ. ಎತ್ತರವೇರುತ್ತಿದ್ದಂತೆ ಮಂಜಿನ ಮುಸುಕನ್ನು ಹಾಯುತ್ತಾ ಸ್ವರ್ಗದ ಲೋಕಕ್ಕೆ ತೆರಳಿದಂತೆ ಭಾಸವಾಗುತ್ತದೆ. ಅಲ್ಲಿನ ಚಳಿ ವಾತಾವರಣ ತಡೆಯಲೆಂದು ಕಟ್ಟಡಗಳನ್ನು ಮರದಲ್ಲೇ ನಿರ್ಮಿಸಿರುತ್ತಾರೆ.

ಅವುಗಳಿಗೆ ವಿವಿಧ ಬಣ್ಣಗಳಿಂದ ಮಾಡಿರುವ ಸಿಂಗಾರವೂ ಆಕರ್ಷಣೀಯ. ಈ ವರ್ಣರಂಜಿತ ಪರಿಸರವನ್ನು ನೋಡುವಾಗ, ಭೂಮ್‌ತಾಂಗ್‌ ಅನ್ನು ‘ಭೂತಾನ್‌ನ ಸ್ವಿಟ್ಜರ್ಲೆಂಡ್’ ಎಂದು ಏಕೆ ಕರೆಯುತ್ತಾರೆ ಎನ್ನುವುದರ ಅನುಭವ ಪ್ರವಾಸಿಗರಿಗೆ ಆಗುತ್ತದೆ.

ಝಕರ್ ಝೋಂಗ್
ಝಕರ್ ಝೋಂಗ್ ಎನ್ನುವ ಮೋಹಕ ಸ್ಥಳ ಬೆಟ್ಟವೊಂದರ ಮೇಲಿದೆ. ಹಿಂದೆ ರಕ್ಷಣಾ ಕೇಂದ್ರಗಳಾಗಿದ್ದ ಈ ಝೋಂಗ್‌ಗಳು ಈಗ ಆಡಳಿತ ಕೇಂದ್ರಗಳಾಗಿವೆ ಮತ್ತು ಮೊನಾಸ್ಟ್ರಿಗಳಾಗಿ ಗುರ್ತಿಸಿಕೊಂಡಿವೆ. ಮೊನಾಸ್ಟ್ರಿ ಅಂದರೆ ಬೌದ್ಧ ವಿದ್ಯಾರ್ಥಿ ಭಿಕ್ಷುಗಳು ವಿದ್ಯಾಭ್ಯಾಸ ಮಾಡುವ ಸ್ಥಳಗಳು.

ಶ್ವೇತ ವರ್ಣದ ಝೋಂಗ್‌ಗಳು ಭೂತಾನ್‌ನ ಇಪ್ಪತ್ತು ಜಿಲ್ಲೆಗಳಲ್ಲೂ ಇವೆ. ಕಲ್ಲು, ಮಣ್ಣು ಮತ್ತು ಮರದಿಂದ ಇವನ್ನು ನಿರ್ಮಿಸಲಾಗಿದೆ. ಅಷ್ಟೊಂದು ಮರವನ್ನು ಬಳಸಿದ್ದರೂ ಒಂದೇ ಒಂದು ಮೊಳೆಯನ್ನೂ ಬಳಸದೆ ಅವನ್ನು ನಿರ್ಮಿಸಿರುವುದು ವಿಶೇಷ. ಝೋಂಗ್‌ಗಳಲ್ಲಿ ದೇವಸ್ಥಾನ ಮತ್ತು ಬೌದ್ಧ ಭಿಕ್ಷುಗಳ ವಾಸಸ್ಥಳ ಒಂದೆಡೆಯಿದ್ದರೆ, ಆಡಳಿತ ಕಚೇರಿಗಳು ಮತ್ತೊಂದೆಡೆ ಇರುತ್ತವೆ.

ಚೋಕರ್ ಕಣೆವೆಯಲ್ಲಿ ಎಲ್ಲಿ ಝೋಂಗ್ ನಿರ್ಮಿಸುವುದೆಂದು ಬೌದ್ಧ ಸನ್ಯಾಸಿಗಳು ಚಿಂತಿಸುವಾಗ ಬಿಳಿಯ ಬಣ್ಣದ ಹಕ್ಕಿಯೊಂದು ಇದ್ದಕ್ಕಿದ್ದಂತೆ ಆಗಮಿಸಿ ಬೆಟ್ಟದ ಮೇಲೆ ಕುಳಿತುಕೊಂಡಿತಂತೆ. ಅದು ದೈವಿಕ ಆಜ್ಞೆ ಎಂದು ಭಾವಿಸಿ 1549ರಲ್ಲಿ ಅಲ್ಲೇ ಝೋಂಗ್ ನಿರ್ಮಾಣ ಮಾಡಿದರಂತೆ.

ಅಲ್ಲಿನ ಪ್ರಕೃತಿ ಸೌಂದರ್ಯದಿಂದಾಗಿ ಈ ಝೋಂಗ್ ಪ್ರಸಿದ್ಧವಾಗಿದೆ. ಈಗಿರುವ ಕಟ್ಟಡವನ್ನು ನಿರ್ಮಾಣ ಮಾಡಿದ್ದು 1667ರಲ್ಲಿ. ಅಲ್ಲಿನ ಒಂದೊಂದು ದ್ವಾರವೂ ಬೃಹದಾಕಾರವಾಗಿದ್ದು, ಎಲ್ಲವನ್ನೂ ಸುಂದರವಾಗಿ ಬಣ್ಣಗಳಿಂದ ಚಿತ್ರಿಸಲಾಗಿದೆ.

ಅಲ್ಲಿನ ಹಸಿರು ಹುಲ್ಲು, ಬಣ್ಣದ ಹೂಗಿಡಗಳು, ಮರಗಳು, ದೂರದಲ್ಲಿನ ಕಾಣುವ ಕಣಿವೆ, ಕಲಾತ್ಮಕ ಕಟ್ಟಡ– ಎಲ್ಲವೂ ಸೇರಿ ಕಿಂದರಿಜೋಗಿಯ ಲೋಕವೊಂದು ರೂಪುಗೊಂಡಿದೆ.

ಭೂಮ್‌ತಾಂಗ್ ಮಾರುಕಟ್ಟೆಯೂ ಬಲು ಸುಂದರ. ಆದರೆ ಥಿಂಪು ಮತ್ತು ಪಾರೋ ನಗರಗಳಿಗೆ ಹೋಲಿಸಿದರೆ ಅಲ್ಲಿನ ಕರಕುಶಲವಸ್ತುಗಳ ಮಳಿಗೆಗಳಲ್ಲಿ ಬೆಲೆ ಹೆಚ್ಚು. ಭೂತಾನ್ ಸಂಗೀತ ಮತ್ತು ಪ್ರಾರ್ಥನಾ ಗೀತೆಗಳಲ್ಲಿ ಹಲವು ನಮ್ಮ ಅಭಂಗ್, ಕೀರ್ತನೆಗಳನ್ನು ನೆನಪಿಸುತ್ತಾ ಜಾನಪದ ಮಟ್ಟುಗಳ ಇಂಪನ್ನು ಕೊಡುತ್ತವೆ. ಅವುಗಳ ಡೀವಿಡಿಗಳು ವಿದೇಶಿಯರಿಗೆ ಅಚ್ಚುಮೆಚ್ಚು.

ಮಾರ್ಗದ ಸೊಗಸು
ಗಮ್ಯದಷ್ಟೇ ಪ್ರಯಾಣದ ಮಾರ್ಗದ ಸೊಗಸನ್ನೂ ಆಸ್ವಾದಿಸಬೇಕು ಎಂಬ ಮಾತಿನಂತೆ, ಭೂಮ್‌ತಾಂಗ್‌ಗೆ ಹೋಗಿ ಬರುವ ಪ್ರಯಾಣವೂ ಆಹ್ಲಾದಕರವೇ. ಹುಲ್ಲುಗಾವಲಿನಲ್ಲಿ ಮೇಯಿಸುತ್ತಿರುವ ಹಿಂಡುಗಟ್ಟಲೆ ಯಾಕ್‌ಗಳನ್ನು ಕಾಣಬಹುದು.

ರಸ್ತೆ ಬದಿಯಲ್ಲಿ ಕಾಡುಹೂಗಳಂತೆ ಬೆಳೆಯುವ ಚಿಕ್ಕಚಿಕ್ಕ ಸ್ಟ್ರಾಬೆರ್ರಿ ಹಣ್ಣುಗಳನ್ನು ಕಿತ್ತು ತಿಂದು, ಬಾಯಿ ಕೆಂಪು ಮಾಡಿಕೊಳ್ಳಬಹುದು. ದಾರಿಯಲ್ಲಿ ಸಿಗುವ ಕಿರು ಜಲಪಾತಗಳ ಬಳಿ ಇಳಿದು, ಸ್ವಾದಿಷ್ಟ ಕಾಡುಹಣ್ಣುಗಳನ್ನು ಕೊಂಡು, ದೋಮಾ (ಎಲೆ, ಅಡಿಕೆ, ಸುಣ್ಣ) ರುಚಿ ನೋಡಿ, ದಾರಿಯಲ್ಲಿ ಸಿಗುವ ದೇವಸ್ಥಾನಗಳನ್ನು ದರ್ಶಿಸಿ ಪ್ರಯಾಣದ ಸುಖವನ್ನು ಅನುಭವಿಸಬಹುದು.

ನೀರು ಹರಿಯುವ ಝರಿಯು ಪ್ರಾರ್ಥನಾ ಚಕ್ರವನ್ನು ತಿರುಗುವಂತೆ ಮಾಡಿ ಅದರಿಂದ ಗಂಟೆಯ ಢಣ್ ಢಣ್ ಎಂಬ ನಾದ ಕೇಳಿಬರುವಂತೆ ಮಾಡಿರುತ್ತಾರೆ. ಈ ರೀತಿಯ ಪುಟ್ಟ ಪುಟ್ಟ ಪ್ರಾರ್ಥನಾ ಚಕ್ರಗಳ ಗುಡಿಗಳ ಬಳಿ ಗಂಟೆ ದನಿ ಕೇಳುತ್ತಾ ಬೆಟ್ಟದಿಂದ ಹರಿದು ಬರುವ ಶುಭ್ರವಾದ ತಣ್ಣನೆಯ ನೀರನ್ನು ಸವಿಯುವುದನ್ನು ತಪ್ಪಿಸಿಕೊಂಡಲ್ಲಿ ಭೂಮ್‌ತಾಂಗ್‌ ಪ್ರವಾಸ ಅಪೂರ್ಣ. 

ಬರ್ನಿಂಗ್ ಲೇಕ್
‘ಬರ್ನಿಂಗ್ ಲೇಕ್’ ಅಥವಾ ‘ಮೆಬರ್ ತ್ಶೋ’ ಎಂಬ ಭೂತಾನಿಗರ ಪವಿತ್ರ ಸ್ಥಳ ಭೂಮ್‌ತಾಂಗ್‌ನಲ್ಲಿದೆ. ನಮ್ಮ ಮೇಕೆದಾಟು ನೆನಪಿಸುವ ಬಂಡೆ ಕೊರಕಲುಗಳ ನಡುವೆ ಭೋರ್ಗರೆಯುತ್ತಾ ನದಿಯೊಂದು ಹರಿಯುವ ಸ್ಥಳವಿದು. ಹಸಿರನ್ನು ಹೊದ್ದ ಬೆಟ್ಟಗಳ ನಡುವೆ ಹೋಗುವಾಗ ಚಿಲಿಪಿಲಿ ಹಕ್ಕಿಗಳ ನಾದ ಸ್ವಾಗತಿಸುತ್ತದೆ. 

ಗುರು ರಿಂಪೋಚೆಯ ಅನುಯಾಯಿಯಾದ ಟೆರ್ಟನ್ ಪೇಮಾ ಲಿಂಗ್ಪಾ ಎನ್ನುವವರು, ತಮ್ಮ ಗುರುವು ಇಲ್ಲಿಟ್ಟಿದ್ದ ಪವಿತ್ರ ಗ್ರಂಥವನ್ನು ತೆಗೆದುಕೊಂಡು ಬರಲು ಉರಿಯುವ ದೀಪದೊಂದಿಗೆ ನೀರಿನೊಳಗೆ ಹಾರಿದರಂತೆ. ಅಲ್ಲಿಂದ ಉರಿಯುವ ದೀಪ ಹಾಗೂ ಪವಿತ್ರ ಗ್ರಂಥದೊಂದಿಗೆ ನೀರಿನಿಂದ ಅವರು ಹೊರಬಂದರೆಂಬ ಕಥೆಯಿದೆ.

ಪ್ರಕೃತಿ, ಧರ್ಮ ಮತ್ತು ಪೌರಾಣಿಕ ಹಿನ್ನೆಲೆಯನ್ನು ಮೇಳೈಸಿರುವ ಈ ಸುಂದರ ಸ್ಥಳದಲ್ಲಿ ಬೌದ್ಧ ಸನ್ಯಾಸಿಗಳು ಮಂತ್ರೋಚ್ಛಾರ ಮಾಡುತ್ತಾ ‘ಕತಾ’ ಎಂದು ಕರೆಯುವ ಬಿಳಿಯ ಪವಿತ್ರ ವಸ್ತ್ರವನ್ನು ನೀರಲ್ಲಿ ಹಾಕುತ್ತಿರುತ್ತಾರೆ.

ಅಲ್ಲಿ ಬಂಡೆಯ ಮೇಲೆ ಕೆತ್ತಿದ್ದ ಗುರು ರಿಂಪೋಚೆ ಮತ್ತು ಗುರು ಪೇಮಾ ಲಿಂಗ್ಪಾ ಚಿತ್ರದ ಮುಂದೆ ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸುತ್ತಿರುತ್ತಾರೆ. ಕೊರಕಲ ಮೇಲೆ ಮರದ ಸೇತುವೆಯೊಂದನ್ನು ನಿರ್ಮಿಸಿದ್ದು, ಎರಡೂ ಬೆಟ್ಟಗಳ ನಡುವೆ ಕಟ್ಟಿರುವ ಪ್ರಾರ್ಥನಾ ಬಾವುಟಗಳ ಮಧ್ಯೆ ಅದು ಹುದುಗಿ ಹೋದಂತೆ ಭಾಸವಾಗುತ್ತದೆ.

ಮೂರು ದೇವಾಲಯಗಳ ಸಮುಚ್ಛಯವಿರುವ ಕುರ್ಜೆ ಲಾಖಾಂಗ್ ವಿಶಾಲವಾದ ಧಾರ್ಮಿಕ ಸ್ಥಳ. 1652 ರಲ್ಲಿ ನಿರ್ಮಾಣವಾದ ಈ ದೇಗುಲದ ವಾಸ್ತುಶಿಲ್ಪ ಅದ್ಭುತವಾಗಿದೆ. ಅಲ್ಲಿನ ಗೋಡೆಗಳ ಮೇಲಿರುವ ಚಿತ್ರಕಲೆ ಬಲು ಸುಂದರ.

ಇಲ್ಲಿಗೆ ಹತ್ತಿರದಲ್ಲೇ ಅತ್ಯಂತ ಹಳೆಯ ದೇವಾಲಯವೆನ್ನಲಾದ ಜಂಪೆ ಲಾಖಾಂಗ್‌ ಇದೆ. ಅಲ್ಲಿ  ವೃದ್ಧರು ಕುಳಿತು ಜಪ ಮಣಿ ತಿರುವುತ್ತಾ ಬಾಯಲ್ಲಿ ಮಂತ್ರೋಚ್ಛಾರ ಮಾಡುತ್ತಾ ಕುಳಿತಿರುತ್ತಾರೆ. ಅವರಿಗೆ ವಯಸ್ಸಾಗಿ ಮುಖದ ತುಂಬಾ ನೆರಿಗೆಗಳಿದ್ದರೂ ಮಂದಹಾಸ ಮಾಸಿರುವುದಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.