ADVERTISEMENT

ಮಣ್ಣಿನ ಘಮಲು ನೀರಿನ ಅಮಲು!

​ಪ್ರಜಾವಾಣಿ ವಾರ್ತೆ
Published 4 ಜುಲೈ 2014, 19:30 IST
Last Updated 4 ಜುಲೈ 2014, 19:30 IST
ಮಣ್ಣಿನ ಘಮಲು ನೀರಿನ ಅಮಲು!
ಮಣ್ಣಿನ ಘಮಲು ನೀರಿನ ಅಮಲು!   

ಪೌರಾಣಿಕ, ಐತಿಹಾಸಿಕ ಎರಡೂ ನೆಲೆಯಲ್ಲೂ ತಲಕಾಡು ಬಹಳ ಮಹತ್ವ ಪಡೆದ ಪ್ರವಾಸಿ ತಾಣ. ಪ್ರಕೃತಿ ಸೌಂದರ್ಯ, ಕಪಿಲಾ- ಹಾಗೂ ಕಾವೇರಿ ನದಿ ಸಂಗಮ, ಜಲರಾಶಿಯ ಸೊಬಗು, ದೇವಾಲಯಗಳ ತವರು, ಇದೀಗ ಸುವ್ಯವಸ್ಥಿತ ರೆಸಾರ್ಟ್‌ ಅನ್ನೂ ಒಳಗೊಂಡ ಸುಂದರ ಸ್ಥಳ ತಲಕಾಡು. ಒಂದು ದಿನದ ಪ್ರವಾಸ ಕೈಗೊಳ್ಳುವವರಿಗೆ ಹೇಳಿ ಮಾಡಿದಂತಹ ಅದ್ಭುತ ಜಾಗವಿದು. ಮೈಸೂರಿನ ತಿ. ನರಸೀಪುರ ತಾಲ್ಲೂಕಿನಲ್ಲಿರುವ ತಲಕಾಡು ಮರುಳೇಶ್ವರ ಸ್ವಾಮಿ, ಪಾತಾಳೇಶ್ವರ ಸ್ವಾಮಿ, ವೀರಭದ್ರಸ್ವಾಮಿ ಮುಂತಾದ ದಿವ್ಯ ದೇವಾಲಯಗಳು ದೈವಭಕ್ತರನ್ನು ಸೆಳೆಯುತ್ತವೆ.

ಬೇಸಿಗೆಯಲ್ಲಿ ಮೈಮನಗಳಿಗೆ ತಂಪು ನೀಡಲು ಸಮೃದ್ಧ ಜಲತಾಣವೂ ಇಲ್ಲಿದೆ. ಸಾಹಸ ಚಟುವಟಿಕೆಗಳಿಗೆ ಜಲಕ್ರೀಡೆ, ಚಾರಣ, ರಾಕ್‌ ಕ್ಲೈಂಬಿಂಗ್‌, ರಿಲ್ಯಾಕ್ಸ್ ಪ್ರಿಯರಿಗಾಗಿ ಸುಂದರ-ಸೊಬಗಿನ ರೆಸಾರ್ಟ್‌ ಇವೆಲ್ಲವೂ ಒಂದೇ ಕಡೆಯಲ್ಲಿದ್ದರೆ ಪ್ರವಾಸ ವಿಶಿಷ್ಟ ಅನುಭವ ಕೊಡುವುದರಲ್ಲಿ ಸಂಶಯವೇ ಇಲ್ಲ. ಇಂತಹ ಅಪರೂಪ ಮತ್ತು ಅನನ್ಯ ತಾಣ ತಲಕಾಡು.

ತಲಕಾಡು ಪ್ರವಾಸ ಕೈಗೊಳ್ಳುವವರಿಗೆ ಪ್ರವಾಸ ಎಂದಿಗೂ ನೆನಪಿನಂಗಳದಲ್ಲಿ ನಿಲ್ಲಲೆಂದೇ ಇಲ್ಲಿ ಸುವ್ಯವಸ್ಥಿತ ರೆಸಾರ್ಟ್‌ ಒಂದಿದೆ. ‘ಜಲಧಾಮ’ ಹೆಸರಿನ ಈ ರೆಸಾರ್ಟ್ ಕಾವೇರಿ- ಕಪಿಲಾ ನದಿಯ ಹಿನ್ನೀರಿನಿಂದ ಆವೃತವಾಗಿದೆ. ಹೀಗಾಗಿ ಇದು ದ್ವೀಪವಾಸದ ಅನುಭೂತಿ ನೀಡುತ್ತದೆ. ಹಿನ್ನೀರು ಪರಿಕ್ರಮಿಸಿ ಮೋಟರ್ ಬೋಟ್ ಮೂಲಕವೇ ಈ ರೆಸಾರ್ಟ್‌್ ಪ್ರವೇಶಿಸುವುದೂ ಅಪೂರ್ವ ಅನುಭವ.

ಮರಳು ಗುಡ್ಡೆಯ ನಡುವೆ ಅಲ್ಲಲ್ಲಿ ಆವಿರ್ಭವಿಸಿರುವ ದೇವಾಲಯಗಳಿಗೂ, ಉತ್ಖನನಗಳಿಂದ ಮೇಲೆದ್ದು ಬಂದಿರುವ ಐತಿಹಾಸಿಕ ಅವಶೇಷಗಳಿಗೂ ತಲಕಾಡು ಪ್ರಸಿದ್ಧ. ಹೀಗಾಗಿ ಜಲಧಾಮಕ್ಕೆ ಬರುವ ಪ್ರವಾಸಿಗರಿಗೆ ಇವುಗಳ ವೀಕ್ಷಣೆಯ ಅವಕಾಶದ ಬೋನಸ್ ಲಭ್ಯ. ಜಲಧಾಮ- ತಲಕಾಡಿನ ಸುತ್ತಮುತ್ತ ಇನ್ನೂ ಹಸಿರಿನ ಚೆಲುವು, ಕಾಡು-ಮೇಡುಗಳು ಉಳಿದುಕೊಂಡಿರುವುದರಿಂದ ಪ್ರಕೃತಿಪ್ರಿಯರಿಗೆ-, ಚಾರಣ ಪ್ರೇಮಿಗಳಿಗೆ ಇದು ತಕ್ಕ ತಾಣ.

ಮಧುಚಂದ್ರಕ್ಕೆ ಹೋಗುವ ಜೋಡಿಗಳಿಗೆಂದೇ ಗಿಡ-ಮರಗಳ ನೆರಳಿನಡಿನಲ್ಲಿ ಪ್ರತ್ಯೇಕ ಕಾಟೇಜ್‌ಗಳು, ಕುಟುಂಬ ಸಮೇತ ಗುಂಪಿನಲ್ಲಿ ಬರುವವರಿಗೆ, ಕಂಪೆನಿ ಸಹೋದ್ಯೋಗಿಗಳೊಂದಿಗೆ ಬಂದು ಪ್ರವಾಸದ ಮಜಾ ಅನುಭವಿಸುವವರಿಗೆ ಅನುಕೂಲವಾಗುವಂತೆ ಜಂಬೋ ಕಾಟೇಜ್‌ಗಳು, ಈಜುಕೊಳದಿಂದ ಹಿಡಿದು ವಾಲಿಬಾಲ್, ಕ್ರಿಕೆಟ್, ಟೆನ್ನಿಸ್ ಮುಂತಾದ ಕ್ರೀಡಾ ಚಟುವಟಿಕೆಗಳಿಗೂ ಸೂಕ್ತ ಸೌಲಭ್ಯಗಳು, ಸಸ್ಯಾಹಾರಿ ಮತ್ತು ಮಾಂಸಾಹಾರಿಗಳಿಗೆ ಪ್ರತ್ಯೇಕ ಊಟ ತಿಂಡಿ ವ್ಯವಸ್ಥೆ, ಮೀನು ಪ್ರಿಯರಾದರೆ ಆಗಷ್ಟೇ ಮೆಲ್ಲಗೆ ಗಾಳಕ್ಕೆ ಬಿದ್ದ ಮೀನನ್ನು ಹುರಿದು ಮೆಲ್ಲುವ ಅವಕಾಶ ಇಲ್ಲಿದೆ.

ಇಲ್ಲಿ ನೀರಿಗಿಳಿಯುವ ಸಾಹಸಿಗಳಿಗೆ ಮೋಟಾರ್ ಬೋಟ್, ವಾಟರ್ ಸ್ಕೂಟರ್, ಕೆನೋಯಿಂಗ್, ಪೆಡಲ್ ಬೋಟ್, ಕೂರ್ಯಾಕಲ್, ದೋಣಿ ವಿಹಾರಗಳ ಮೂಲಕವೂ ನೀರಿನಲ್ಲೇ ಚಿನ್ನಾಟ-, ಚೆಲ್ಲಾಟ ನಡೆಸುವುದು ಸಾಧ್ಯ. ದೊಡ್ಡ ಬೋಟ್‌ ಸಂಚರಿಸುವ ಈಜುಕೊಳದಲ್ಲೂ ಮುಳುಗೇಳಬಹುದು. ಇದರ ಜತೆಗೆ ರಾಯ ರೆಸಾರ್ಟ್‌, ಕೆಲವು ಹೋಟೆಲ್‌ಗಳು ಕೂಡ ಇಲ್ಲಿ ತಂಗುವ ಪ್ರವಾಸಿಗರಿಗೆ ಲಭ್ಯವಿದೆ.

ನಗರದ ಸುತ್ತ ಪಿಕ್‌ನಿಕ್‌ ಹೋಗಬಲ್ಲ ತಾಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಒಂದೇ ದಿನದಲ್ಲಿ ಹೋಗಿ, ಸಂತಸದ ಕ್ಷಣಗಳನ್ನು ಮೊಗೆದುಕೊಂಡು ಬರಬಹುದಾದ ಕೆಲವು ತಾಣಗಳು ಅಪ್‌ಡೇಟ್‌ ಆಗಿವೆ. ತಲೆಎತ್ತಿರುವ ಹೊಸ ಪಿಕ್‌ನಿಕ್‌ ಸ್ಪಾಟ್‌ಗಳೂ ಉಂಟು. ವಾರಾಂತ್ಯದ ಓದಿಗೆ ಪ್ರತಿ ಶನಿವಾರದ ಸಂಚಿಕೆಯಲ್ಲಿ ಒಂದು ‘ಸುತ್ತಾಣ’ ಪ್ರಕಟವಾಗಲಿದೆ. ಓದುಗರೂ ಉತ್ತಮ ಗುಣಮಟ್ಟದ ಚಿತ್ರಗಳ ಸಹಿತ 500 ಪದಗಳಿಗೆ ಮೀರದಂತೆ ತಾಣಗಳ ಪರಿಚಯ ಮಾಡಿಕೊಡಬಹುದು. ಬರಹ, ನುಡಿ ಅಥವಾ ಯೂನಿಕೋಡ್‌ನಲ್ಲಿ ಬರೆದು metropv@prajavani.co.in ಇ–ಮೇಲ್‌ಗೆ ಕಳುಹಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.