ADVERTISEMENT

ಸಂಪಿಗೆ ಎಂಬ ಚಂಪಕಾಪುರಿ

ಸುತ್ತಾಣ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2015, 19:59 IST
Last Updated 28 ಆಗಸ್ಟ್ 2015, 19:59 IST
ಶ್ರೀನಿವಾಸ ದೇವಾಲಯ
ಶ್ರೀನಿವಾಸ ದೇವಾಲಯ   

ಸಂಪಿಗೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಹೇಮಾವತಿ ಕಳೆದೊಂದು ದಶಕದಿಂದ ಹಚ್ಚ ಹಸಿರನ್ನಾಗಿಸಿದ್ದಾಳೆ. ಹೇಮಾವತಿ ನೀರು ಬಂದಮೇಲೆ ತುರುವೇಕೆರೆ ತಾಲ್ಲೂಕಿನ ಬಹುತೇಕ ಪ್ರದೇಶ ನೀರಾವರಿಯಿಂದ ಸಮೃದ್ಧವಾಗಿದೆ. ಹೇಮಾವತಿ ಬರುವ ಮುಂಚೆಯೂ ಸಂಪಿಗೆ ತನ್ನ ಹಸಿರನ್ನೇನೂ ಕಳೆದುಕೊಂಡಿರಲಿಲ್ಲ. ವೀರಸಾಗರ ಕೆರೆ, ಸಂಪಿಗೆ ಕೆರೆಯಿಂದ ಸಂಪಿಗೆ ಗ್ರಾಮದ ಸುತ್ತಮುತ್ತ ಹಸಿರೇ ಹಸಿರು. ಹೀಗೆ ಹಸಿರಿನ ಮಡಿಲಲ್ಲಿ ತಣ್ಣಗಿರುವ ಸಂಪಿಗೆ ಇಲ್ಲಿನ ಶ್ರೀನಿವಾಸ ದೇವಾಲಯದಿಂದ ಪ್ರಸಿದ್ಧವಾಗಿದೆ. ಇಲ್ಲಿನ ಸ್ವರ್ಣಗೌರಿ ದೇವಾಲಯವೂ ಕೂಡಾ ಹಳೇ ಮೈಸೂರು ಭಾಗದ ಹೆಚ್ಚಿನ ಭಕ್ತರನ್ನು ಹೊಂದಿದೆ.

ತಿರುಪತಿಯ ಶ್ರೀನಿವಾಸನಿಗೆ ನಡೆಯುವ ಎಲ್ಲ ಕೈಂಕರ್ಯಗಳೂ ಸಂಪಿಗೆ ಶ್ರೀನಿವಾಸನಿಗೆ ನಡೆಯುತ್ತವೆ. ಹಾಗೆಂದೇ ಸಂಪಿಗೆಗೆ ಎರಡನೇ ತಿರುಪತಿ ಎಂಬ ಹೆಸರೂ ಇದೆ.

ವೈಕುಂಠ ಏಕಾದಶಿ ಹಾಗೂ ಶ್ರಾವಣದ ಶನಿವಾರಗಳಲ್ಲಿ ಇಲ್ಲಿನ ಶ್ರೀನಿವಾಸನಿಗೆ ವಿಶೇಷ ಪೂಜೆ ನಡೆಯುತ್ತದೆ. ಗೌರಿ ಹಬ್ಬದ ವೇಳೆ ಇಲ್ಲಿನ ಸ್ವರ್ಣಗೌರಿ ದೇವಾಲಯದಲ್ಲಿ ವಿಶೇಷ ಉತ್ಸವಗಳು ನಡೆಯುತ್ತವೆ. ಆಸ್ತಿಕರು ಇಲ್ಲಿನ ದೇವಾಲಯಗಳಿಗೆ ಭೇಟಿ ನೀಡಿ ಭಕ್ತಿ ಅರ್ಪಿಸಿ ಧನ್ಯರಾಗಬಹುದು. ಅಲ್ಲದೆ ದೇವರ ಮೇಲೆ ನಂಬಿಕೆ ಇಲ್ಲದವರಿಗೂ ಇಲ್ಲಿಗೆ ಭೇಟಿ ನೀಡಲು ಹಲವು ವಿಶೇಷಗಳಿವೆ.

ಬಿಎಂಶ್ರೀ ಹುಟ್ಟೂರು
ಕನ್ನಡದ ಕಣ್ವ ಬಿಎಂಶ್ರೀ ಅವರ ಹುಟ್ಟೂರು ಸಂಪಿಗೆ. ಬಿಎಂಶ್ರೀ ತಾಯಿ ಭಾಗೀರಥಮ್ಮ ಅವರ ತವರು ಮನೆ ಸಂಪಿಗೆ. ಬಿಎಂಶ್ರೀ ಅವರು ಹುಟ್ಟಿದ್ದು ಸಂಪಿಗೆ ಶ್ರೀನಿವಾಸ ದೇವಾಲಯದ ಬಳಿಯಲ್ಲೇ ಇರುವ ಮನೆಯಲ್ಲಿ. ಅವರ ನೆನಪಿಗಾಗಿ ಇಲ್ಲಿ ಬಿಎಂಶ್ರೀ ಸ್ಮಾರಕ ಭವನವನ್ನೂ ನಿರ್ಮಿಸಲಾಗಿದೆ. ಆದರೆ, ಭವನದ ನಿರ್ವಹಣೆ ಅಷ್ಟು ಸರಿಯಾಗಿಲ್ಲ. ಅದೇನೇ ಇದ್ದರೂ ಕನ್ನಡ ನವೋದಯ ಸಾಹಿತ್ಯಕ್ಕೆ ಅಡಿಪಾಯ ಹಾಕಿದ ಕನ್ನಡದ ಕಣ್ವರ ಹುಟ್ಟೂರು ಎಂಬ ಕಾರಣಕ್ಕೂ ಸಂಪಿಗೆ ಮಹತ್ವವಾದುದು.

ಸುಧನ್ವನ ರಾಜಧಾನಿ
ಸಂಪಿಗೆ ಹಿಂದೆ ಸುಧನ್ವ ರಾಜನ ರಾಜಧಾನಿಯಾಗಿತ್ತು ಎಂಬುದು ಐತಿಹ್ಯ. ಸುಧನ್ವನ ರಾಜಧಾನಿಯಾಗಿದ್ದ ಸಂಪಿಗೆಗೆ ಹಿಂದೆ ಚಂಪಕಾಪುರಿ ಎಂಬ ಹೆಸರಿತ್ತು ಎನ್ನುತ್ತದೆ ಸ್ಥಳ ಇತಿಹಾಸ. ಸಂಪಿಗೆ ಗ್ರಾಮದೊಳಗೆ ಹಳೆಯ ಕೋಟೆಯೂ ಇದೆ. ಕೋಟೆಯೊಳಗೆ ನಿಧಿ ಇದ್ದು, ಹಿಂದೆ ನಿಧಿ ತೆಗೆಯಲು ಪ್ರಯತ್ನಿಸಿದ ಹಲವರು ರಕ್ತಕಾರಿಕೊಂಡು ಸತ್ತಿದ್ದಾರೆ ಎಂಬುದು ಇಲ್ಲಿನ ಹಳೆಯ ತಲೆಗಳು ಹೇಳುವ ಕಥೆ. ಚಂಪಕಾಪುರಿಯಾಗಿದ್ದ ಸಂಪಿಗೆ ಮಹಾಭಾರತದ ಸುಧನ್ವನ ರಾಜಧಾನಿಯಾಗಿತ್ತೋ ಅಥವಾ ಆ ನಂತರ ಸುಧನ್ವ ಎಂಬ ದೊರೆ ಇಲ್ಲಿ ಆಳಿದ್ದನೇ ಎಂಬ ಬಗ್ಗೆ ಯಾವುದೇ ಸ್ಪಷ್ಟ ಉಲ್ಲೇಖಗಳು ಸಿಗುವುದಿಲ್ಲ.

ಅಂದು ಚಂಪಕ ಇಂದು ಸಂಪಿಗೆ
ಹಿಂದೆ ಚಂಪಕಾಪುರಿ ಎಂಬ ಹೆಸರು ಕ್ರಮೇಣ ಸಂಪಿಗೆ ಎಂದಾಗಿದೆ. ಚಂಪಕ ಎಂದರೆ ಸಂಪಿಗೆ ಎಂದೇ ಅರ್ಥ. ಹೀಗಾಗಿ ಅಂದಿನ ಚಂಪಕಾಪುರಿ ಈಗ ಸಂಪಿಗೆ. ಹಿಂದೆ ಸಂಪಿಗೆ ಮರಗಳು ಹೆಚ್ಚಾಗಿದ್ದ ಈ ಪ್ರದೇಶಕ್ಕೆ ಚಂಪಕಾಪುರಿ ಎಂಬ ಹೆಸರು ಬಂದಿರಬಹುದು ಎಂಬುದು ಈ ಗ್ರಾಮದ ಹಿರಿಯರ ಊಹೆ. ಆದರೆ, ಈಗ ಸಂಪಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲೇನೂ ಸಂಪಿಗೆ ಮರಗಳಿಲ್ಲ. ಈಗ ಈ ಪ್ರದೇಶದಲ್ಲಿ ಹೆಚ್ಚಾಗಿರುವುದು ಅಡಿಕೆ ಮರಗಳು. ಶ್ರೀನಿವಾಸ, ಸ್ವರ್ಣ ಗೌರಿ ದೇವಾಲಯಗಳು, ಬಿಎಂಶ್ರೀ ಹುಟ್ಟೂರು ಎಂಬ ಕಾರಣಗಳನ್ನು ಮೀರಿಯೂ ಸಂಪಿಗೆ ಇಷ್ಟವಾಗುವುದು ಇಲ್ಲಿನ ಹಸಿರು ತೋಟಗಳು ಹಾಗೂ ಕೆರೆಗಳಿಂದಾಗಿ. ವಾರಾಂತ್ಯದಲ್ಲಿ ದೇವರ ದರ್ಶನ ಹಾಗೂ ಒಂದು ದಿನದ ವಿಹಾರಕ್ಕೆ ಸಂಪಿಗೆಗೆ ಬಂದು ಹೋಗಬಹುದು.

ದಾರಿದೂರ
ಸಂಪಿಗೆ ಬೆಂಗಳೂರಿನಿಂದ ಸುಮಾರು 110 ಕಿ.ಮೀ. ದೂರದಲ್ಲಿದೆ. ತುರುವೇಕೆರೆಯಿಂದ 27 ಕಿ.ಮೀ. ದೂರ. ತುಮಕೂರು, ನಿಟ್ಟೂರು ಮಾರ್ಗವಾಗಿ ಸಂಪಿಗೆಗೆ ಹೋಗಬಹುದು. ನಿಟ್ಟೂರಿನಿಂದ ಕಡಬ, ಕಲ್ಲೂರು ಕ್ರಾಸ್ ತಲುಪಿ ಕಲ್ಲೂರು ಕ್ರಾಸ್‌ನಲ್ಲಿ ಬಲಕ್ಕೆ ತಿರುಗಿ ಧರೇಗೌಡನಪಾಳ್ಯ, ಸಂಪಿಗೆ ಹೊಸಹಳ್ಳಿ ಮಾರ್ಗವಾಗಿಯೂ ಸಂಪಿಗೆ ತಲುಪಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT