ADVERTISEMENT

ಸಿಂಗಪುರದಲ್ಲಿ ‘ಕಾಂತಾ’ ಎಂಬ ಕರೆ

ಸಹನಾ ಕಾಂತಬೈಲು
Published 17 ಡಿಸೆಂಬರ್ 2016, 19:30 IST
Last Updated 17 ಡಿಸೆಂಬರ್ 2016, 19:30 IST
ಸಿಂಗಪುರದಲ್ಲಿ ‘ಕಾಂತಾ’ ಎಂಬ ಕರೆ
ಸಿಂಗಪುರದಲ್ಲಿ ‘ಕಾಂತಾ’ ಎಂಬ ಕರೆ   

ಸಿಂಗಪುರದ ‘ಚಾಂಗಿ ವಿಮಾನ ನಿಲ್ದಾಣ’ಕ್ಕೆ ನಾನು ಬಂದು ಇಳಿದಾಗ ಬೆಳಿಗ್ಗೆ 6 ಗಂಟೆ 10 ನಿಮಿಷ. ನನ್ನ ಅಮೆರಿಕ ಸಂಪರ್ಕಿಸುವ ವಿಮಾನ ಹೊರಡಲಿದ್ದುದು ಸಂಜೆ 6.30ಕ್ಕೆ. ಅಲ್ಲಿನ ಸಿಬ್ಬಂದಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ಉಚಿತವಾಗಿ ಬಸ್ಸಿನಲ್ಲಿ ಸಿಂಗಪುರ ತೋರಿಸಿದರು.
ನಮ್ಮ ಬಸ್ಸಿನಲ್ಲಿ ಇದ್ದದ್ದು ಗೈಡ್, ಡ್ರೈವರೂ ಸೇರಿ ಒಟ್ಟು 18 ಮಂದಿ. ನಾನು ಸಹ ಪ್ರಯಾಣಿಕರೊಂದಿಗೆ ಕೂರದೆ ಗೈಡ್ ಜೊತೆ ಕೂತೆ.

ಸಪೂರ ದೇಹ, ಸಣ್ಣ ಕಣ್ಣು, ಸೇಬಿನ ಬಣ್ಣ ಹೊಂದಿರುವ ಆ ಗೈಡ್ ನನಗೆ ಇಷ್ಟವಾದಳು. ಅವಳು ಧರಿಸಿದ ಕಪ್ಪು ಪ್ಯಾಂಟ್, ನೀಲಿ ಹೂ ಇರುವ ಬಿಳಿ ಶರ್ಟ್ ಮೇಲೆ ಕಪ್ಪು ಕೋಟು ಅವಳಿಗೆ ಚೆನ್ನಾಗಿ ಒಪ್ಪುತ್ತಿತ್ತು. ನನ್ನಂತೆ ಮಾತುಗಾತಿ. ಸಿಂಗಪುರ ಕುರಿತಂತೆ ನನ್ನ ಕುತೂಹಲದ ಪ್ರಶ್ನೆಗಳಿಗೆ ಬೇಸರಿಸದೆ ಉತ್ತರಿಸುತ್ತಿದ್ದಳು. ಅವಳ ಹೆಸರು, ಊರು ಇತ್ಯಾದಿಗಳನ್ನು ವಿಚಾರಿಸಿದೆ.

ಅವಳೂ ನನ್ನ ಹೆಸರು, ಉದ್ಯೋಗ, ದೇಶ ಕೇಳಿದಳು. ನಾನು ಭಾರತದ ಸಣ್ಣ ಊರಿನಲ್ಲಿ ವಾಸಿಸುವ ರೈತಮಹಿಳೆ. ನನ್ನ ಹೆಸರು ಸಹನಾ ಕಾಂತಬೈಲು ಎಂದು ಹೇಳಿದೆ. ‘ಓಹ್, ರೈತರೆಂದರೆ ನನಗೆ ತುಂಬ ಅಭಿಮಾನ, ಗೌರವ. ಇಲ್ಲೇ ಬೃಹತ್ ಅಪಾರ್ಟ್‌ಮೆಂಟಿನ ಪುಟ್ಟ ಕೋಣೆಯೊಂದರಲ್ಲಿ ವಾಸ ಮಾಡುತ್ತಿದ್ದೇನೆ. ಒತ್ತಡದ ಜೀವನ. ಬದುಕು ಸಾಕಾಗಿದೆ’ ಎಂದಳು. ನಾವು ಸ್ನೇಹಿತೆಯರಾದೆವು.

ಅವಳು ಬಹಳ ಚುರುಕಾಗಿದ್ದಳು. ಚಟಪಟನೆ ನಡೆಯುತ್ತಿದ್ದಳು. ಮೂವತ್ತೇಳು ಮೂವತ್ತೆಂಟರ ಆಸುಪಾಸಿನಲ್ಲಿರುವಂತೆ ಕಾಣುತ್ತಿದ್ದಳು. ಅವಳ ವಯಸ್ಸು 58 ಎಂದು ಹೇಳಿದಾಗ ನನಗೆ ನಂಬಲಾಗಲಿಲ್ಲ. ಅವಳು ನನ್ನನ್ನು ‘ಕಾಂತಾ’ ಎಂದು ಕರೆಯಲು ಶುರುಮಾಡಿದಳು. ‘ನನ್ನನ್ನು ಎಲ್ಲರೂ ಸಹನಾ ಎಂದು ಕರೆಯುತ್ತಾರೆ. ಹಾಗೆಯೇ ಕರೆಯಿರಿ’ ಎಂದೆ. ಕಷ್ಟಪಟ್ಟು ಸಹಾನ ಎಂದಳು. ಸಹನಾ ಎಂದು ಕರೆಯಲು ಅವಳಿಗೆ ಸಾಧ್ಯವಾಗಲೇ ಇಲ್ಲ.

ಮೊದಲು ನಮಗೆ ಅವಳು ಸಿಂಗಪುರದ ಪ್ರಮುಖ ಸ್ಥಳ ಸಿಂಹದ ಬಾಯಿಯಿಂದ ನೀರು ಚಿಮ್ಮುವ ತಾಣವನ್ನು ತೋರಿಸಿದಳು. ಐದು ನಿಮಿಷ ಅಲ್ಲಿ ಕಳೆದಿದ್ದೇವೋ ಇಲ್ಲವೋ ಅಷ್ಟರಲ್ಲಿ ‘ಇನ್ನು ಮುಂದಿನ ಜಾಗಕ್ಕೆ ಹೋಗೋಣ. ಅದು ಒಂದು ಪುರಾತನ ಮಸೀದಿ. ಅಲ್ಲಿಯವರೆಗೆ ಬಸ್ ಹೋಗುವುದಿಲ್ಲ. ಸ್ವಲ್ಪ ನಡೆಯಬೇಕಾಗುತ್ತದೆ. ನಿಮಗೆ ಸಿಂಗಪುರದ ಬೀದಿಯ ಪರಿಚಯವೂ ಆದ ಹಾಗೆ ಆಗುತ್ತದೆ’ ಎಂದು ಹೇಳಿ ನಮ್ಮನ್ನೆಲ್ಲ ಬಸ್ಸು ಹತ್ತಿಸಿದಳು.

ನಾವು ಮಸೀದಿ ನೋಡಲು ಅವಳ ಜೊತೆ ಹೆಜ್ಜೆ ಹಾಕಿದೆವು. ಆ ಸ್ವಚ್ಛ ಬೀದಿ, ಬೀದಿಯ ಎರಡೂ ಬದಿ ಸಾಲಾಗಿ ಇರುವ ಐಷಾರಾಮಿ ರೆಸ್ಟೋರೆಂಟುಗಳು, ಗಗನಚುಂಬಿ ಕಟ್ಟಡಗಳನ್ನು ನೋಡುತ್ತ ನಾನು ದಂಗಾಗಿಬಿಟ್ಟೆ. ಅಲ್ಲಿ ಬಿದಿರಿನ ಪರಿಕರಗಳನ್ನು ಮಾರುವ ಒಂದು ಅಂಗಡಿ ಕಣ್ಣಿಗೆ ಬಿತ್ತು. ಕೊಡಗಿನ ನಮ್ಮೂರಲ್ಲಿ ಬಿದಿರು ಯಥೇಚ್ಛವಾಗಿ ಬೆಳೆಯುತ್ತದೆ.

ADVERTISEMENT

ಆದರೆ ಬಿದಿರಿನ ಅಂಥ ಚಂದದ ಬುಟ್ಟಿ, ತಟ್ಟೆ, ಟೀಪಾಯಿ, ಹೂದಾನಿಗಳನ್ನು ನೋಡಿದ್ದು ಅದೇ ಮೊದಲು. ಅಂಗಡಿ ಒಳಹೊಕ್ಕು – ಅವು ಎಲ್ಲಿಂದ ಬಂದ ಪರಿಕರಗಳು, ಮಾಡಿದ್ದು ಯಾರು, ಬೆಲೆ ಎಷ್ಟು, ಎಷ್ಟು ಸಮಯ ಬಳಕೆ ಮಾಡಬಹುದು, ಯಾವ್ಯಾವುದಕ್ಕೆ ಬಳಕೆಯಾಗುತ್ತವೆ? – ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ ಎಸೆಯುತ್ತ ಬಂದ ಉದ್ದೇಶವಾದ ಮಸೀದಿಗೆ ಹೋಗುವುದನ್ನೆ ಮರೆತು ಬಿಟ್ಟೆ.

ಹೊರಬಂದು ನೋಡುತ್ತೇನೆ. ನನ್ನ ಜೊತೆಯವರೆಲ್ಲ ಅದಾಗಲೇ ಹೋಗಿಬಿಟ್ಟಿದ್ದರು. ಅವರು ಯಾವ ದಾರಿಯಾಗಿ ಹೋಗಿದ್ದರು ಎಂದು ನನಗೆ ಗೊತ್ತಾಗಲಿಲ್ಲ. ಅಲ್ಲಿ ಎಲ್ಲ ಬೀದಿಗಳೂ ಒಂದೇ ತೆರನಾಗಿ ತೋರುತ್ತಿದ್ದವು. ಬಂದ ದಾರಿಯಲ್ಲೇ ಹಿಂದಿರುಗಿ ಬಸ್ಸು ಹಿಡಿಯೋಣ ಎಂದರೆ ಅದೂ ಗೊತ್ತಾಗಲಿಲ್ಲ. ಏನೊಂದೂ ಗುರುತು ಪರಿಚಯವಿಲ್ಲದ ಜಾಗ. ಏನು ಮಾಡುವುದು, ಎತ್ತ ಹೋಗುವುದು?

ಹಳ್ಳಿಯಲ್ಲೇ ಹುಟ್ಟಿ, ಹಳ್ಳಿಯಲ್ಲೇ ಬೆಳೆದು, ಹಳ್ಳಿಯಲ್ಲೇ ನೆಲೆಸಿರುವ ಹೆಣ್ಣುಮಗಳು ನಾನು. ಇದು ನನ್ನಮೊದಲ ಪ್ರವಾಸ. ನನ್ನ ಹತ್ತಿರ ಇಂಟರ್ನೆಟ್ ಸೌಲಭ್ಯ ಇರುವ ಮೊಬೈಲೂ ಇರಲಿಲ್ಲ. ಇದ್ದ ಆರ್ಡಿನರಿ ಮೊಬೈಲಿನ ಸಂಪರ್ಕ ಭಾರತ ಬಿಟ್ಟಾಗಲೇ ಕಡಿದುಹೋಗಿತ್ತು. ದುಃಖ ಉಮ್ಮಳಿಸಿ ಬಂತು. ಆಗ ಪಕ್ಕದ ಬೀದಿಯಿಂದ ‘ಕಾಂತಾ’ ಎಂಬ ಕರೆ ಕೇಳಿಸಿತು. ನನಗೆ ಹೋದ ಜೀವ ಮರಳಿ ಬಂದಂತಾಯಿತು.

ಕರೆ ಬಂದ ದಿಕ್ಕಿಗೆ ಓಡಿದೆ. (ಈ ಸಾರಿ ಸಹನಾ ಎಂದು ಕರೆಯಿರಿ ಎಂದು ಹೇಳಲಿಲ್ಲ) ಅಲ್ಲಿ ಕಾತರದಿಂದ ಕಾಯುತ್ತಿದ್ದ ಗೈಡನ್ನು ತಬ್ಬಿ ಹಿಡಿದೆ. ಅವಳೂ ನನ್ನನ್ನು ತಬ್ಬಿಕೊಂಡಳು. ‘ನನ್ನ ಜೊತೆ ಬಿಟ್ಟು ಎಲ್ಲೂ ಹೋಗಬಾರದು’ ಎಂದಳು.

‘ನಮಗೆಲ್ಲ ಬಹಳ ಹೆದರಿಕೆಯಾಗಿತ್ತು. ಇನ್ನೊಮ್ಮೆ ಸಿಂಗಪುರ ನೋಡಲೆಂದೇ ಬನ್ನಿ. ಆಗ ಎಲ್ಲವನ್ನೂ ಬೇಕಾದಷ್ಟು ಹೊತ್ತು ನೋಡಬಹುದು’ ಎಂದಳು. ಸಿಂಗಪುರ ಎಂಬ ಹೆಸರು ಕೇಳಿದಾಕ್ಷಣ ನನಗೆ ನಾನು ಕಳೆದುಹೋದ ಈ ಘಟನೆ ನೆನಪಿಗೆ ಬಂದು ಮನಸ್ಸು ಆರ್ದ್ರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.