ADVERTISEMENT

ಅರ್ಧಾಂಗಿಯನ್ನು ಅರ್ಧ ಕೂಡ ಅರ್ಥ ಮಾಡಿಕೊಂಡಿಲ್ಲ!

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2014, 19:30 IST
Last Updated 23 ಅಕ್ಟೋಬರ್ 2014, 19:30 IST
ಅರ್ಧಾಂಗಿಯನ್ನು ಅರ್ಧ ಕೂಡ ಅರ್ಥ ಮಾಡಿಕೊಂಡಿಲ್ಲ!
ಅರ್ಧಾಂಗಿಯನ್ನು ಅರ್ಧ ಕೂಡ ಅರ್ಥ ಮಾಡಿಕೊಂಡಿಲ್ಲ!   

*ಯಾವ ಸೀಮೆಯವರ್ರೀ ನೀವು ಅಂತ ಕೇಳಿದರೆ ಬೇಸರ ಆಗಲ್ಲ ತಾನೆ?
ಯಾಕೆ ಬೇಸರ, ಸ್ವಾಮಿ? ನಾನು ಈ ಮಹಾನಗರಕ್ಕೆ ಬಂದದ್ದೇ ಯಾವುದೋ ನೀವು ಕೇಳರಿಯದ ಸೀಮೆಯಿಂದ. ಕಾಸರಗೋಡು ಸಮೀಪ ಅಂದರೆ ಮೈಲುಗಟ್ಟಲೆ ದೂರದ ಕುಂಟಾರ್ ಎಂಬ ಕುಗ್ರಾಮದಲ್ಲಿ ನಿಮ್ಮೆದುರು ನಿಂತಿರುವ ಈ ಮನುಷ್ಯನ ಜನನವಾಯಿತು. ಆಶ್ಚರ್ಯ ನೋಡಿ... ನಾನೀಗ ವಕೀಲನಾಗಿದ್ದೇನೆ.

*ಅರೆ! ನಂಬೋಕಾಗಲ್ಲ!  ನಿಮ್ಮ ಮೈಯಲ್ಲಿ ಕಪ್ಪು ಕೋಟ್ ಕಾಣುತ್ತಿಲ್ಲವಲ್ಲ!
ನಾನೀಗ ಬ್ಯಾಂಕೊಂದರಲ್ಲಿ ಲೀಗಲ್ ಅಂಡ್ ರಿಕವರಿ ಅಡ್ವೈಸರ್ ಆಗಿದ್ದೇನೆ. ಕೋಟು ಹಾಕುವ ಪ್ರಮೇಯವಿಲ್ಲ.

*ಕೋರ್ಟು ಬದಲು ಬ್ಯಾಂಕು!!  ಕಪ್ಪು ಕೋಟು ಹಾಕ್ಕೊಂಡು ತಿರುಗಾಡುವುದಕ್ಕೆ ಮುಜುಗರವೇ?
ಹಾಗೇನಿಲ್ಲ , ಕೋಟುಧಾರಿಯಾಗಿ ತಿರುಗಾಡುವುದು ಒಂದು ಅಂತಸ್ತಲ್ಲವೇ? ಐದು ವರ್ಷ ಕಾಸರಗೋಡಿನಲ್ಲಿ ವಕಾಲತ್ತು ಮಾಡಿದ್ದೆ. ಕಪ್ಪು ಕೋಟು ಹಾಕುವವನಿಗೆ ದುಡ್ಡು ಮಾಡುವ ತಂತ್ರವೂ ಗೊತ್ತಿರಬೇಕು. ಅದು ನನಗೆ ಗೊತ್ತಿರಲಿಲ್ಲ. ರಾಜಕೀಯದವರ ಸಂಗ ಇದ್ದರೆ ಇನ್ನೂ ಒಳ್ಳೆಯದು. ಅದೂ ನನಗಿರಲಿಲ್ಲ. ತಮಾಷೆಯೆಂದರೆ  ವಕಾಲತ್ತು ಬಿಟ್ಟ ಮೇಲೆ ಹೈಲೆವೆಲ್ ರಾಜಕಾರಣಿಗಳು ಹತ್ತಿರವಾದರು! ಹೇಗೆಂದರೆ ನಾನು ತಾಳಿ ಕಟ್ಟಿದ್ದು ಬಿಜೆಪಿಯ ಖ್ಯಾತ ಮುಖಂಡರೊಬ್ಬರ ಮಗಳಿಗೆ!

*ಅದು ಸರಿ, ಕಾಸರಗೋಡಿನಲ್ಲಿರುವಾಗ  ಕೈಯಾರ ಕಿಞ್ಞಣ್ಣ ರೈ ಅವರ ಗಡಿ ಹೋರಾಟಕ್ಕೆ ಸಾಥ್ ನೀಡಿ ಧಮನಿ ಧಮನಿಗಳಲ್ಲಿ ಕನ್ನಡ ಹರಿಯುತ್ತಿದೆ ಎಂದು ತೋರಿಸಿದ್ದಿರಾ?
ಗಡಿ ಹೋರಾಟಕ್ಕೆ ಸಾಥ್ ನೀಡಿಲ್ಲ. ಆದರೆ ಕೈಯಾರರ ಯಾವುದೋ ಒಂದು ಸ್ವಂತ ನೆಲದ ‘ಹೋರಾಟ’ದಲ್ಲಿ ನಾನು ಅವರ ವಕೀಲನಾಗಿ ಚಿಕ್ಕ ಪಾತ್ರವಹಿಸಿದ್ದೆ!

*ಕುಗ್ರಾಮದಿಂದ ಬಂದ ನಿಮಗೆ ಬೆಂಗಳೂರು ಏನು ಕೊಟ್ಟಿದೆ ?
ನನಗೆ ಮುಖ್ಯವಾಗಿ ಕೊಟ್ಟಿದ್ದು ಅಸ್ತಮಾ! ವಾಯು ಮಾಲಿನ್ಯ , ಗಲೀಜು, ವಿಪರೀತ ದೂಳಿನಿಂದ ಪಾರಾಗುವ ದಾರಿಯೇ ಇಲ್ಲದಂತಾಗಿದೆ. ಇದೆಲ್ಲಾ ಇದ್ದರೂ ನಾನು ಬೆಳೆಯಬೇಕಾದರೆ ಬೆಂಗಳೂರು ಬಿಟ್ಟು ವಾಪಸು ನನ್ನ ಕುಗ್ರಾಮಕ್ಕೆ ಹೋಗಿ ಕೂಪ ಮಂಡೂಕನಾಗಿರಲು ಇಷ್ಟವಿಲ್ಲ.

*ಹಿಂದೆ ಇಲ್ಲಿನ ಕಂಡಕ್ಟರ್‌ಗಳಾದರೂ ನಮ್ಮನ್ನು ‘ಮುಂದೆ ಬನ್ನಿ’ ಅನ್ನುತ್ತಿದ್ದರು. ಆದ್ರೆ ಈಗ ಯಾರೂ ಹಾಗೆನ್ನುವವರು ಇಲ್ವಲ್ಲ!
ಹೌದಲ್ಲ... ಈಗ ಬಸ್‌ನ ಬಾಗಿಲು ನಡುವೆ ಇರುವುದರಿಂದ ಕಂಡಕ್ಟರ್ ‘ಹಿಂದೆ ಹೋಗಿ..ಹಿಂದೆ ಹೋಗಿ’ ಅನ್ನುತ್ತಾರಷ್ಟೆ! ಹಳೇ ಬಸ್ಸುಗಳಲ್ಲಾದರೆ ಬಾಗಿಲು ಹಿಂದೆ ಇದ್ದುದರಿಂದ ‘ಮುಂದೆ ಬನ್ನಿ, ಮುಂದೆ ಬನ್ನಿ’  ಎಂದು ಕಂಡಕ್ಟರ್ ಜೀವನದ ‘ಮಾರ್ಗದರ್ಶಿ’ಯಾಗಿರುತ್ತಿದ್ದ.

*ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧದ ಎದುರುಗಡೆ ‘ಸರ್ಕಾರದ ಕೆಲಸ, ದೇವರ ಕೆಲಸ ’ ಎಂದು ಬರೆಸಿದ್ದು ತಪ್ಪಲ್ಲವೇ?
ನಿಜ, ಆ ಪುಣ್ಯಾತ್ಮರನ್ನು ಈಗಿನವರು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ವಿಧಾನಸೌಧ ದೇವಾಲಯವೇ ಆಗಿಬಿಟ್ಟಿದೆ. ಕಾಣಿಕೆ ಡಬ್ಬಿಗೆ ಹಣ ಹಾಕೋದು ಸಂಪ್ರ(ಆ)ದಾಯವಾಗಿಬಿಟ್ಟಿದೆ!

*ನಿಮಗೆ ಮೋದಿಯ ಕಸಬರಿಕೆ ಇಷ್ಟವೋ, ಕೇಜ್ರಿವಾಲರ ಕಸಬರಿಕೆ ಇಷ್ಟನೋ?
ಮೋದಿ ಬ್ರಾಂಡೆಡ್ ಕಸಬರಿಕೆ ಒಳ್ಳೆಯದು. ಭಾರತ ಸ್ವಚ್ಛವಾಗಬಹುದೂಂತ ನಂಬಿಕೆ. ಕೇಜ್ರಿವಾಲರ ಕಸಬರಿಕೆಯಿಂದ ಭ್ರಷ್ಟಾಚಾರ ಸ್ವಚ್ಛವಾಗುತ್ತದೆ ಎಂಬುದು ಅನುಮಾನ.

*‘ಭ್ರಷ್ಟಾಚಾರ ಸ್ವಚ್ಛತಾ’ದ ಬಗ್ಗೆ ನೀವು ಆಶಾವಾದಿಯಲ್ಲ ಎಂದು ತೋರುತ್ತದೆ.
ಹಾಗೇನಿಲ್ಲ. ಲಂಚ ತೆಗೆದುಕೊಳ್ಳದವರೂ ನಮ್ಮೊಳಗೆ ಇದ್ದಾರೆ. ನಾನೊಮ್ಮೆ ಒಬ್ಬ ವ್ಯಕ್ತಿಗೆ ಏನೋ ಕೆಲಸ ಮಾಡಿದ್ದಕ್ಕೆ ಖುಷಿಯಲ್ಲಿ ಹಣ ಕೊಡಲು ಮುಂದೆ ಬಂದೆ. ಆದರೆ ಆ ವ್ಯಕ್ತಿ ‘ಬೇಡ ಸಾರ್, ಈ ತರಹ ಹಣ ತೆಗೆದುಕೊಳ್ಳಲ್ಲಾಂತ  ನನ್ನ ಹೆಂಡತಿಗೆ ಭಾಷೆ ಕೊಟ್ಟಿದ್ದೇನೆ ಸಾರ್’ ಅಂದಿದ್ದ!

*ವ್ಹಾವ್! ಹೆಂಡತಿಯನ್ನು ಅರ್ಥಮಾಡಿಕೊಂಡ ಅಪರೂಪದ ಪತಿರಾಯ!  ನೀವು ನಿಮ್ಮ ಅರ್ಧಾಂಗಿಯನ್ನು ಫುಲ್ ಅರ್ಥ ಮಾಡಿಕೊಂಡಿದ್ದೀರಾ?
ಫುಲ್ ಎಲ್ಲಿ ಬಂತು? ನಾನು ಈ ಹತ್ತೊಂಬತ್ತು ವರ್ಷಗಳಲ್ಲಿ ಅರ್ಧಾಂಗಿಯನ್ನು ಅರ್ಧ ಕೂಡ ಅರ್ಥ ಮಾಡಿಕೊಂಡಿಲ್ಲ, ಸ್ವಾಮಿ ! ಇನ್ನಿರುವ ಆಯುಷ್ಯದಲ್ಲಿ ಅರ್ಥ ಮಾಡಿಕೊಳ್ಳಬೇಕೆಂದಿದ್ದೇನೆ.

*ಕೊನೆಗೊಂದು ಗುಟ್ಟಿನ ಪ್ರಶ್ನೆ. ನಿಮಗೆ ಕೋಳಿ ಮಾಂಸ ತಿನ್ನಬೇಕೆನಿಸಿದಾಗ, ನಿಮ್ಮ ಹೆಸರಲ್ಲಿರುವ ‘ರಾವ್ ’ ಅಡ್ಡಿಯಾಗಿದೆಯಾ?
ಮೊದಲನೆಯದಾಗಿ ಇದು ಗುಟ್ಟಿನ ವಿಚಾರವಲ್ಲ. ನಾನು ಮೀನು, ಕೋಳಿ ತಿನ್ನುವ ರಾವ್. ನೀವು ನನ್ನನ್ನು ಬ್ರಾಹ್ಮಣ ಎಂದು ತಪ್ಪು ತಿಳ್ಕೊಂಡಿದ್ದೀರಿ.  ನನ್ನನ್ನು ಇನ್ನೂ ನಂಬದಿದ್ದರೆ ಜಾಸ್ತಿ ವಿವರಣೆ ಕೊಡ್ತೀನಿ. ನಾನೊಬ್ಬ ಮರಾಠಿ ಮೂಲದ ಸಾಧು ಸ್ವಭಾವದ ಕ್ಷತ್ರಿಯ. ಕಾಸರಗೋಡಿನಲ್ಲಿ ಬಂದು ನೆಲೆಸಿದ ಶಿವಾಜಿಯ ಸಿಪಾಯಿಗಳೇ ನಮ್ಮ ವಂಶಸ್ಥರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.