ADVERTISEMENT

ಇದು ವಿಎಫ್ಎಕ್ಸ್ ಜಮಾನಾ...

ತಂತ್ರಜ್ಞಾನ

ಮಂಜುಶ್ರೀ ಎಂ.ಕಡಕೋಳ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST
ಪ್ರಸಾದ್ ವಸಂತ್ ಸುತಾರ್
ಪ್ರಸಾದ್ ವಸಂತ್ ಸುತಾರ್   

*‘ಬಾಜಿರಾವ್ ಮಸ್ತಾನಿ’ ಮತ್ತು  ‘ದಂಗಲ್’ ಎರಡೂ ಭಿನ್ನ ರೀತಿಯ ಸಿನಿಮಾಗಳಿಗೆ ವಿಎಫ್ಎಕ್ಸ್  ಎಫೆಕ್ಟ್ ನೀಡಿದ್ದೀರಿ. ಅನುಭವ ಹಂಚಿಕೊಳ್ಳಿ?
ಸಿನಿಮಾ ಮೇಕಿಂಗ್‌ ಯಾವ ರೀತಿಯದು, ಚಿತ್ರಕಥೆ ಓದಿದಾಗ ನಿರ್ದೇಶಕ ಏನನ್ನು ಬಯಸುತ್ತಾನೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳುತ್ತೇನೆ.
‘ಬಾಜಿರಾವ್ ಮಸ್ತಾನಿ’ಯಲ್ಲಿ ಎಲ್ಲವನ್ನೂ ದೊಡ್ಡದಾಗಿ ಮತ್ತು ಚೆನ್ನಾಗಿ ತೋರಿಸಬೇಕಿತ್ತು. ‘ದಂಗಲ್‌’ನಲ್ಲಿ ಹಾಗಲ್ಲ. ಅಲ್ಲಿ ವಾಸ್ತವಕ್ಕೆ ಹತ್ತಿರವಾಗಿ ದೃಶ್ಯಗಳನ್ನು ತೋರಿಸಬೇಕಿತ್ತು. ಆಗ ತಾಂತ್ರಿಕವಾಗಿ ಕೆಲ ಬದಲಾವಣೆ ಮಾಡಬೇಕಾಯಿತು.  ಕಲಾವಿದನಾಗಿ ಎಲ್ಲವೂ ಒಂದೇ ಅನಿಸುತ್ತೆ ನನಗೆ.

*‘ಬಾಜಿರಾವ್’ಗೆ ತುಂಬಾ ಶಾಟ್‌ಗಳನ್ನು ತಗೊಂಡಿದ್ದಿರಂತೆ...
‘ಬಾಜಿರಾವ್ ಮಸ್ತಾನಿ’ ಐತಿಹಾಸಿಕ ಸಿನಿಮಾ ಆಗಿದ್ದರಿಂದ ಹಿಂದಿನದನ್ನು ಮರುಸೃಷ್ಟಿ ಮಾಡಬೇಕಿತ್ತು. ರೊಮ್ಯಾನ್ಸ್, ಯುದ್ಧ ಎಲ್ಲವನ್ನೂ ಗ್ರಾಫಿಕ್‌ನಲ್ಲಿ ನೈಜವಾಗಿ ಬಿಂಬಿಸಬೇಕಿತ್ತು. ಸವಾಲು ಅನ್ನುವುದಕ್ಕಿಂತ ಅಲ್ಲಿ ಅಷ್ಟೊಂದು ಶಾಟ್‌ಗಳನ್ನು ತೆಗೆಯಬೇಕಿತ್ತು. ಅದು ಪ್ರೊಡಕ್ಷನ್ ಟೀಂಗೆ ಬಿಟ್ಟಿದ್ದು.  ಅದು ಹೇಗೆ ಕಾಣುತ್ತದೆ ಎನ್ನುವುದು ಮೊದಲೇ ನಿರ್ಧರಿತವಾಗಿರುತ್ತದೆ. ಸೃಜನಾತ್ಮಕವಾಗಿ ಮಾಡುವುದಕ್ಕಿಂತ ಪ್ರೊಡಕ್ಷನ್ ದೃಷ್ಟಿಯಿಂದ ಇದು ದುಬಾರಿ ಅಂತ ನನಗೂ ಅನಿಸಿತ್ತು.

*ನೀವು 200ಕ್ಕೂ ಹೆಚ್ಚು ಸಿನಿಮಾ ಮಾಡಿದ್ದೀರಿ. ಯಾವುದು ತುಂಬಾ ಖುಷಿ ಕೊಟ್ಟ ಸಿನಿಮಾ?
ಹಾಗೇನೂ ಇಲ್ಲ. ಬಾಜಿರಾವ್ ನಂತರ ದಂಗಲ್ ಸಿನಿಮಾಕ್ಕೆ ವಿಎಫ್ಎಕ್ಸ್ ಮಾಡಿಕೊಟ್ಟಿದ್ದೆ.  ಹಿಂದಿ ಸಿನಿರಂಗದಲ್ಲಿ ಬಾಜಿರಾವ್ ನೋಡಿದಾಗ ಇಂಥದ್ದೊಂದು ಸಿನಿಮಾ ಮಾಡಬಹುದು ಎಂದುಕೊಂಡಿರಲಿಲ್ಲ. ಇದು ಹಿಟ್ ಆಯಿತು. ಪ್ರೇಕ್ಷಕರೂ ಇಷ್ಟಪಟ್ಟರು. ದಂಗಲ್ ಕೂಡಾ ದೊಡ್ಡ ಹಿಟ್ ಸಿನಿಮಾ. ದಂಗಲ್‌ನಲ್ಲಿ ವಿಎಫ್‌ಎಕ್ಸ್ ಬಳಸಲಾಗಿದೆ ಎಂದು ಗುರುತಿಸಲೇ ಸಾಧ್ಯವಿಲ್ಲ. ಇದು ವಿಎಫ್‌ಎಕ್ಸ್‌ನ ಕಮಾಲ್. ವೈಯಕ್ತಿಕವಾಗಿ ‘ಬಾಜಿರಾವ್’ ನನಗೆ ಇಷ್ಟವಾಯಿತು. ನನ್ನ ಹೊಸ ಕಂಪೆನಿ ಮೂಲಕ ಮಾಡಿದ ಮೊದಲ ಸಿನಿಮಾವದು. ಹಾಗಾಗಿ ಅದರ ಬಗ್ಗೆ ಒಂಥರಾ ಪ್ರೀತಿ.

*ಬಾಹುಬಲಿ–2  ತಾಂತ್ರಿಕತೆ ಬಗ್ಗೆ ನಿಮ್ಮ ಅಭಿಪ್ರಾಯ?
ವಿಎಫ್‌ಎಕ್ಸ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಿರುವ ಸಿನಿಮಾವದು. ಇಡೀ ಸಿನಿಮಾದ ದೃಶ್ಯಾತ್ಮಕ ವ್ಯಾಕರಣವನ್ನೇ ಬದಲಿಸಿದ ಸಿನಿಮಾವದು. ಅದು ಅಷ್ಟೊಂದು ಹಿಟ್ ಆಗುತ್ತದೆ ಅಂದುಕೊಂಡಿರಲಿಲ್ಲ. ಬಾಹುಬಲಿಯಿಂದಾಗಿ ಈಚೆಗೆ ವಿಎಫ್‌ಎಕ್ಸ್ ಬಗ್ಗೆ ಜನರು ಮತ್ತು ನಿರ್ದೇಶಕರ ಒಲವು ಹೆಚ್ಚಾಗಿದೆ. 

ADVERTISEMENT

*ಹಾಲಿವುಡ್‌ ಗ್ರಾಫಿಕ್ಸ್ ತಂತ್ರಜ್ಞಾನದಲ್ಲಿ ಮುಂದಿದೆ. ಅದನ್ನು ಭಾರತೀಯ ಚಿತ್ರರಂಗ ಅಳವಡಿಸಿಕೊಳ್ಳಬೇಕಿದೆಯೇ?
ಭಾರತೀಯ ಸಿನಿಮಾ ರಂಗ ಹಾಲಿವುಡ್‌ನಷ್ಟೇ ತಂತ್ರಜ್ಞಾನದಲ್ಲಿ ನೈಪುಣ್ಯ ಸಾಧಿಸಿದೆ. ಅಲ್ಲಿನ ಶಿಸ್ತನ್ನು ಅಳವಡಿಸಿಕೊಳ್ಳಬೇಕಷ್ಟೇ.
ನಿರ್ದಿಷ್ಟ  ಬಜೆಟ್‌ನಲ್ಲಿ ಒಳ್ಳೆಯ ವಿಎಫ್‌ಎಕ್ಸ್‌ ಸಿನಿಮಾ ಮಾಡಲು ಸಾಧ್ಯ ಎಂದು ‘ಬಾಹುಬಲಿ’ ತೋರಿಸಿಕೊಟ್ಟಿದೆ. ಸೂಪರ್‌ಸ್ಟಾರ್‌ಗಳಿಲ್ಲದೆಯೇ ದೊಡ್ಡ ಬಜೆಟ್‌ನ ಸಿನಿಮಾ ಯಶಸ್ವಿಯಾಗಬಲ್ಲದು ಎಂಬುದನ್ನೂ ತೋರಿಸಿದೆ.

*ಮುಂದಿನ ದಿನಗಳಲ್ಲಿ ಸಿನಿಮಾದಲ್ಲಿ ತಂತ್ರಜ್ಞಾನವೇ ಮೇಲುಗೈ ಸಾಧಿಸುತ್ತೆ ಅನಿಸುತ್ತಾ?
ಈ ಟ್ರೆಂಡ್‌ ಹೀಗೆ ಮುಂದುವರಿದರೆ ಹಾಗೇ ಅನಿಸುತ್ತೆ. ತಂತ್ರಜ್ಞಾನ  ಸಿನಿಮಾಕ್ಕೆ ತಕ್ಕಂತಿರಬೇಕು. ಯಾವುದೇ ಆಗಲಿ ಅತಿಯಾದರೆ ಒಳ್ಳೆಯದಲ್ಲ. ನಮ್ಮಲ್ಲಿ ಒಂದು ಸಿನಿಮಾ ಹಿಟ್ ಆದ ತಕ್ಷಣ ಅಂಥದ್ದೇ ಸಿನಿಮಾ ಮಾಡಬೇಕೆಂದು ನಿರ್ದೇಶಕರು ಬಯಸುತ್ತಾರೆ. ಈಗ ವಿಎಫ್‌ಎಕ್ಸ್ ಕಾಲ. ಬಾಹುಬಲಿ ಹಿಟ್ ಆದದ್ದೇ ತಡ ಅಂಥದ್ದೇ ಸಿನಿಮಾಗಳ ಸರಮಾಲೆಯೇ ಶುರುವಾಗುತ್ತಿದೆ. ಸದ್ಯಕ್ಕೆ ‘ಮಹಾಭಾರತ’ ಸಿನಿಮಾ ಸೆಟ್ಟೇರಿದೆ.

* ಸಂಜಯ್ ಲೀಲಾ ಬನ್ಸಾಲಿ ಜತೆಗಿನ ಅನುಭವ ಹೇಗಿತ್ತು?
ಬನ್ಸಾಲಿ ಅವರ ಜತೆ ಈ ಹಿಂದೆ ಬಾಜಿರಾವ್‌ಗಾಗಿ ಕೆಲಸ ಮಾಡಿದ್ದೇನೆ. ಮತ್ತೀಗ ‘ಪದ್ಮಾವತಿ’ಯಲ್ಲೂ ಕೆಲಸ ಮಾಡುತ್ತಿರುವೆ. ನಮ್ಮಿಬ್ಬರದು ಒಳ್ಳೆಯ ಕಾಂಬಿನೇಷನ್. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.