ADVERTISEMENT

ಐಟಿ ರಾಘು ಬಿಟಿ ರಾಧಿಕಾ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST

ಬೆಂಗಳೂರಿನ ಬ್ರಿಗೇಡ್ ರಸ್ತೆಯ ಬಳಿಯಿದ್ದ ಹಳೆಯ ಬಂಗಲೆಯಲ್ಲಿ ಹಾಡಿನ ಚಿತ್ರೀಕರಣ ನಡೆದಿತ್ತು. ಇದಕ್ಕಾಗಿ ಸುಂದರವಾದ ಸೆಟ್ ಕೂಡ ಹಾಕಲಾಗಿತ್ತು. ನೃತ್ಯ ನಿರ್ದೇಶಕರ ಮಾರ್ಗದರ್ಶನದಲ್ಲಿ ರಾಧಿಕಾ ಹೆಜ್ಜೆ ಹಾಕುತ್ತಿದ್ದರು. ‘ನಿಮಗಾಗಿ’ ಸಿನಿಮಾಕ್ಕಾಗಿ ನಡೆಯುತ್ತಿದ್ದ ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿದ ಸುದ್ದಿಮಿತ್ರರನ್ನು ಸ್ವಾಗತಿಸಿದ್ದು ನಿರ್ದೇಶಕ ರಘುರಾಮ್.

ಅದು ರಾಧಿಕಾ ಅವರ ಜನ್ಮ ದಿನ ಕೂಡ. ಹೀಗಾಗಿ ಅವರ ಹೆಸರಿನ ಅಕ್ಷರದಲ್ಲಿ ದೊಡ್ಡದೊಂದು ಕೇಕ್ ತರಿಸಲಾಗಿತ್ತು. ರಾಧಿಕಾ ಕೇಕ್ ಕತ್ತರಿಸಿದರು. ನಿರ್ದೇಶಕರು, ಸಹಕಲಾವಿದರು, ತಂತ್ರಜ್ಞರೆಲ್ಲ ‘ಹ್ಯಾಪಿ ಬರ್ತ್ ಡೇ’ ಹಾಡಿದರು.

ದಶಕದ ಹಿಂದೆ ತೆರೆ ಕಂಡಿದ್ದ ‘ನಿನಗಾಗಿ’ ಸೂಪರ್ ಹಿಟ್ ಚಿತ್ರದ ಮುಂದುವರಿಕೆ ‘ನಿಮಗಾಗಿ’. ಆದರೆ ಇದು ತುಸು ವಿಭಿನ್ನ. ವಿಜಯ್ ರಾಘವೇಂದ್ರ ಐಟಿ (ಮಾಹಿತಿ ತಂತ್ರಜ್ಞಾನ) ಉದ್ಯೋಗಿ; ರಾಧಿಕಾ ಬಿಟಿ (ಜೈವಿಕ ತಂತ್ರಜ್ಞಾನ) ಉದ್ಯೋಗಿ. ಇವರಿಬ್ಬರ ನಡುವಿನ ಪ್ರೀತಿ, ಜಗಳ, ತುಂಟಾಟ ಎಲ್ಲವೂ ‘ನಿಮಗಾಗಿ’ ಸಿನಿಮಾದಲ್ಲಿವೆ. ‘ನಾನು ಇದರಲ್ಲಿ ಅನಾಥ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನೃತ್ಯಕ್ಕೆ ಹೆಚ್ಚು ಆದ್ಯತೆ ಇದೆ. ಈಗಿನ ಪ್ರೇಕ್ಷಕರಿಗೆ ಏನು ಬೇಕೋ ಅದೆಲ್ಲವೂ ಇದರಲ್ಲಿದೆ’ ಎಂದರು ರಾಧಿಕಾ.

ಅಂದುಕೊಂಡಂತೆ ಕೆಲಸಗಳು ನಡೆಯುತ್ತಿರುವುದು ನಿರ್ದೇಶಕ ರಘುರಾಮ್ ಅವರಲ್ಲಿ ತೃಪ್ತಿ ಮೂಡಿಸಿದೆ. ‘ಮಾತಿನ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇನ್ನು ಎರಡು ಹಾಡುಗಳು ಬಾಕಿ ಇವೆ. ಅವುಗಳನ್ನು ಡಿಸೆಂಬರ್‌ನಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ರಘುರಾಮ್ ವಿವರ ನೀಡಿದರು. ಸ್ವಿಟ್ಜರ್‌ಲೆಂಡ್, ಸಿಂಗಾಪುರ, ಮಲೇಷ್ಯಾದ ಮನಮೋಹಕ ತಾಣಗಳಲ್ಲಿ ಹಾಡುಗಳ ಚಿತ್ರೀಕರಣ ನಡೆಸುವ ಯೋಜನೆಯನ್ನೂ ಅವರು ತೆರೆದಿಟ್ಟರು.

ರಾಧಿಕಾ ಅವರ ತಾಯಿ ಪಾತ್ರದಲ್ಲಿ ಸುಮಿತ್ರಾ ಕಾಣಿಸಿಕೊಳ್ಳಲಿದ್ದಾರೆ. ಆನಂದ್ ಅವರಿಗೆ ಕಾಮಿಡಿ ಪಾತ್ರ ಕೊಡಲಾಗಿದೆ. ಹಲವು ಚಿತ್ರಗಳಲ್ಲಿ ವಿಲನ್ ಆಗಿ ಅಭಿನಯಿಸಿರುವ ಮಂಜು ಅವರಿಗೆ, ಇದರಲ್ಲಿ ಎರಡು ಛಾಯೆಗಳಲ್ಲಿ ತಮ್ಮ ಅಭಿನಯ ಸಾಮರ್ಥ್ಯ ತೋರುವ ಅವಕಾಶ ಸಿಕ್ಕಿದೆ. ಫೆಬ್ರುವರಿ ೧೪ರಂದು ಪ್ರೇಮಿಗಳ ದಿನಾಚರಣೆ. ಅವತ್ತೇ ಹಾಡುಗಳ ಸಿ.ಡಿ ಬಿಡುಗಡೆ ಸಮಾರಂಭ ಆಯೋಜಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಮಾರ್ಚ್ ತಿಂಗಳಲ್ಲಿ ಸಿನಿಮಾ ತೆರೆ ಕಾಣಿಸುವ ಗುರಿಯನ್ನೂ ಇಟ್ಟುಕೊಳ್ಳಲಾಗಿದೆ.

ರಾಧಿಕಾ ಅವರಿಗೆ ಜನ್ಮದಿನದ ಶುಭಾಶಯ ಹೇಳಲು ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದರು. ಸುದ್ದಿಗೋಷ್ಠಿ ಮುಗಿಯುತ್ತಲೇ, ಅಭಿಮಾನಿಗಳ ಗುಂಪು ಪ್ರವಾಹದಂತೆ ಒಳನುಗ್ಗಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.