ADVERTISEMENT

ಒಂದು ಸಹಿಯ ಸುತ್ತಮುತ್ತ...

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST
ಮಯೂರಿ
ಮಯೂರಿ   

‘ಸಿಗ್ನೇಚರ್‌ ಎಂದರೆ ಸಹಿ. ಆದರೆ ಆ ಶಬ್ದಕ್ಕೆ ನೆನಪುಗಳನ್ನು ಉಳಿಸುವುದು, ಛಾಪು ಮೂಡಿಸುವುದು ಎಂಬ ಅರ್ಥವೂ ಇದೆ’. ಹೀಗೆ ಶೀರ್ಷಿಕೆಯಲ್ಲಿನ ಹಲವು ಅರ್ಥಸಾಧ್ಯತೆಗಳ ಮೂಲಕವೇ ಸಿನಿಮಾ ಕುರಿತು ಮಾಹಿತಿ ನೀಡಲು ಯತ್ನಿಸಿದರು ವಿ. ಮನೋಹರ್‌.

ಅದು ಗುರು ಮದ್ಲೇಸರ ನಿರ್ದೇಶನದ ‘ಸಿಗ್ನೇಚರ್’ ಚಿತ್ರದ ಚಿತ್ರೀಕರಣಪೂರ್ವ ಪತ್ರಿಕಾಗೋಷ್ಠಿ. ಅದಕ್ಕೆ ಸಮರ್ಥವಾದ ಆರಂಭ ಒದಗಿಸಲೆಂದೇ ಚಿತ್ರತಂಡ ಮನೋಹರ್‌ ಕೈಗೆ ಮೊದಲು ಮೈಕ್‌ ಕೊಟ್ಟಂತಿತ್ತು. ‘ಈಗ ಸಿನಿಮಾದ ಕಥೆ, ಶೈಲಿ, ನಿರೂಪಣೆ ಎಲ್ಲ ಬದಲಾಗಿದೆ. ಪ್ರೇಕ್ಷಕನ ಬೌದ್ಧಿಕ ಮಟ್ಟ ಜಾಸ್ತಿಯಾಗಿದೆ. ಹಾಗಾಗಿ ಇಂದು ಸಿನಿಮಾ ಮಾಡಿ ಗೆಲ್ಲುವುದು ಸುಲಭವಲ್ಲ. ಗುರು ಅವರಿಗೆ ಈ ವಿಷಯದ ಕುರಿತು ಎಚ್ಚರ ಇದೆ’ ಎಂದರು ಮನೋಹರ್. ಅವರು ‘ಸಿಗ್ನೇಚರ್‌’ನ ಆರು ಹಾಡುಗಳಿಗೆ ಸಂಗೀತ ಸಂಯೋಜನೆಯ ಸಹಿ ಹಾಕುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಮನೋಹರ್ ನಂತರ ಮಾತಿಗಿಳಿದಿದ್ದು ನಾಯಕಿ ಮಯೂರಿ. ‘ಈ ಚಿತ್ರದಲ್ಲಿ ನಾನು ಮಾಜಿ ಮುಖ್ಯಮಂತ್ರಿಯ ಮಗಳಾಗಿ ಕಾಣಿಸಿಕೊಂಡಿದ್ದೇನೆ. ಸೋನು ಎಂಬುದು ಪಾತ್ರದ ಹೆಸರು. ಕೇಳಿದ್ದೆಲ್ಲವನ್ನೂ ಪಡೆದುಕೊಳ್ಳುತ್ತ, ಬದುಕಿನಲ್ಲಿ ಕೊರತೆಯನ್ನೇ ನೋಡದೆ ಬೆಳೆದ ಹುಡುಗಿಯ ಬದುಕಿನಲ್ಲಿ ಪ್ರೇಮದ ಪ್ರವೇಶವಾದಾಗ ಏನಾಗುತ್ತದೆ ಎಂಬುದು ಸಿನಿಮಾದ ಕಥೆ’ ಎಂದು ಕಥೆಯ ಎಳೆ ಕೊಂಚ ಬಿಡಿಸಿಟ್ಟ ಅವರು ‘ಈ ಚಿತ್ರದಲ್ಲಿ ನಾನು ಪಾಶ್ಚಾತ್ಯ ಶೈಲಿಯ ಉಡುಗೆ ತೊಡುಗೆಯಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಖುಷಿಯಿಂದಲೇ ಹೇಳಿಕೊಂಡರು.

ADVERTISEMENT

ನಿರ್ದೇಶಕ ಗುರು ‘ಈ ಸಿನಿಮಾದ ಮಾಜಿ ಮುಖ್ಯಮಂತ್ರಿ ಪಾತ್ರಕ್ಕೂ ವಾಸ್ತವದ ಯಾವ ಮುಖ್ಯಮಂತ್ರಿಗಳಿಗೂ ಸಂಬಂಧ ಇಲ್ಲ. ಇದೊಂದು ಕಾಲ್ಪನಿಕ ಕಥೆ’ ಎಂದು ಸ್ಪಷ್ಟೀಕರಣ ಕೊಟ್ಟೇ ಮಾತನಾಡಿದರು. ಇದೇ ತಿಂಗಳ 21ರಿಂದ ಕುಂದಾಪುರದ ಮಂದಾರ್ತಿಯಲ್ಲಿ ಚಿತ್ರೀಕರಣ ಆರಂಭಿಸಿ ಒಂದೇ ಶೆಡ್ಯೂಲ್‌ನಲ್ಲಿ ಮುಗಿಸುವ ಯೋಜನೆಯನ್ನು ಅವರು ಹಾಕಿಕೊಂಡಿದ್ದಾರೆ. ‘ದಕ್ಷ, ಪ್ರಾಮಾಣಿಕ ಜಿಲ್ಲಾಧಿಕಾರಿ ಮತ್ತು ಮಾಜಿ ಮುಖ್ಯಮಂತ್ರಿಗಳ ಕುಟುಂಬಗಳ ನಡೆಯುವ ಜಿದ್ದಾಜಿದ್ದಿಯ ಕಥೆ ಇದು. ಇದಕ್ಕೆ ಪೂರಕವಾಗಿ ಒಂದು ಒಳ್ಳೆಯ ಪ್ರೇಮಕಥೆಯ ಎಳೆಯೂ ಇದೆ’ ಎಂದು ಸಿನಿಮಾ ಕ್ಯಾನ್ವಾಸನ್ನು ಇನ್ನಷ್ಟು ಬಿಡಿಸಿದರು. ಥ್ರಿಲ್, ಫ್ಯಾಮಿಲಿ ಸೆಂಟಿಮೆಂಟ್ ಮತ್ತು ಪ್ರೇಮಕಥೆ ಮೂರನ್ನೂ ಹದವಾಗಿ ಬೆಳೆದು ಕಥೆ ಕಟ್ಟಿದ್ದಾರಂತೆ.

ರಂಜಿತ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕನಾಗಿ ನಟಿಸುತ್ತಿದ್ದಾರೆ. ಮಧ್ಯಮವರ್ಗದ ಹುಡುಗನ ಪಾತ್ರ ಅವರದು. ಪೂರ್ಣಿಮಾ ಭಾಸ್ಕರ್ ಪೂಜಾರಿ ಮತ್ತು ನವೀನ್‌ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಪೂರ್ಣಿಮಾ ಮಗಳಾದ ಶ್ರಾವ್ಯಾ ಕೂಡ ಈ ಚಿತ್ರದ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.