ADVERTISEMENT

ಕತೆ ಓದುವ ಸ್ವಾತಂತ್ರ್ಯ....

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 19:30 IST
Last Updated 20 ಫೆಬ್ರುವರಿ 2017, 19:30 IST
ಕತೆ ಓದುವ ಸ್ವಾತಂತ್ರ್ಯ....
ಕತೆ ಓದುವ ಸ್ವಾತಂತ್ರ್ಯ....   
ಮಕ್ಕಳ ಕಥೆಗಳು ಸಾಕಷ್ಟಿದ್ದರೂ ಇಂಗ್ಲಿಷ್, ಹಿಂದಿ ಭಾಷೆಗಳಲ್ಲೇ ಹೆಚ್ಚು ಲಭ್ಯವಿರುವ ಕಾರಣ ಮಕ್ಕಳು ಅವುಗಳಿಂದ ದೂರವುಳಿಯುವ ಸಾಧ್ಯತೆಯೇ ಹೆಚ್ಚು. ಆದರೆ ಹಾಗಾಗದೆ, ಮಕ್ಕಳಿಗೆ ತಮ್ಮ ಮಾತೃಭಾಷೆಯಲ್ಲೇ ಕತೆ ಓದುವಂತೆ ಪ್ರೇರೇಪಿಸುವ ಮೂಲಕ ಕತೆಗಳ ಬಗ್ಗೆ ಒಲವು ಮೂಡಿಸುವ, ಹೊಸತನಕ್ಕೆ ತೆರೆದುಕೊಳ್ಳುವಂತೆ ಮಾಡುವ ಉದ್ದೇಶದಿಂದ ನಗರದ ಪ್ರಕಾಶನ ಸಂಸ್ಥೆ ‘ಪ್ರಥಮ್ ಬುಕ್ಸ್‌’ 2015ರಲ್ಲಿ   ಸ್ಟೋರಿವೀವರ್ ಎಂಬ ಡಿಜಿಟಲ್ ವೇದಿಕೆ ರೂಪಿಸಿತ್ತು.
 
ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಗಟ್ಟಿಗೊಳಿಸುವ, ಮಾತೃಭಾಷೆಗೆ ಒತ್ತು ನೀಡುವ ಉದ್ದೇಶದಿಂದಲೇ ಇದರ ಒಂದು ಭಾಗವಾಗಿ ರೂಪುಗೊಂಡಿದ್ದು ‘ಫ್ರೀಡಂ ಟು ರೀಡ್’ ಅಭಿಯಾನ. ‘ಅಂತರರಾಷ್ಟ್ರೀಯ ಸಾಕ್ಷರತಾ ದಿನ’ದಂದು ಆರಂಭಗೊಂಡ ಈ ಅಭಿಯಾನ, ಇಂದು, (ಅಂತರರಾಷ್ಟ್ರೀಯ ಮಾತೃಭಾಷಾ ದಿನ) ಪೂರ್ಣಗೊಂಡಿದೆ. ಇದರ ಫಲವಾಗಿ  ಸಾಕಷ್ಟು ಹೊಸ ಭಾಷೆಗಳೂ ಸೇರಿಕೊಂಡಿವೆ.  
 
ಕತೆ ಓದಲು ಡಿಜಿಟಲ್ ವೇದಿಕೆ
ಮಕ್ಕಳ ಕತೆಗಳ ಡಿಜಿಟಲ್ ವೇದಿಕೆಯಾಗಿ ರೂಪುಗೊಂಡ ಸ್ಟೋರಿವೀವರ್ ಆರಂಭಗೊಂಡಿದ್ದು 24 ಭಾಷೆಗಳ 800 ಕತೆಗಳಿಂದ. ಇದೀಗ ಅದರಲ್ಲಿ 62 ಭಾಷೆಗಳ 2900 ಕತೆಗಳಿದ್ದು, ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದೆ. 
 
ಗಣನೆಗೆ ಬಾರದ, ನಿರ್ಲಕ್ಷ್ಯಕ್ಕೆ ಒಳಗಾದ ಅಳಿವಿನ ಅಂಚಿನಲ್ಲಿರುವ ಭಾಷೆಗಳನ್ನು ಉಳಿಸುವ ಪ್ರಯತ್ನದ ಹಿಂದೆ ಆಯಾ ಭಾಷೆಯ ಮಕ್ಕಳ ಬಗೆಗಿನ ಕಾಳಜಿಯೂ ವ್ಯಕ್ತಗೊಂಡಿದೆ. ಅದನ್ನು ಪ್ರಥಮ್‌ ಬುಕ್ಸ್‌ನ ಅಧ್ಯಕ್ಷೆ ಸುಜಾನ್‌ ಸಿಂಗ್‌ ಅವರು ವಿವರಿಸುವುದು ಹೀಗೆ...
 
‘ಮಾತೃಭಾಷೆಯ ಶಿಕ್ಷಣ ಮಗುವಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಅದರಲ್ಲೂ ಮಾತೃಭಾಷೆಯಲ್ಲಿ ಕತೆಗಳನ್ನು ಓದುವುದರಿಂದ ಹೊಸ ಹೊಳಹುಗಳು ದೊರಕುತ್ತವೆ, ತನ್ನ ಯೋಚನಾ ಲಹರಿಯನ್ನು, ಆಲೋಚನೆಗಳ ಪರಿಧಿಯನ್ನು ವಿಸ್ತರಿಸುವಲ್ಲಿ ಮಕ್ಕಳಿಗೆ ನೆರವಾಗುತ್ತದೆ. ಪರೋಕ್ಷವಾಗಿ ಭಾಷೆಯ ಉಳಿವೂ ಸಾಧ್ಯವಾಗುತ್ತದೆ.
 
ಸಾಕಷ್ಟು ಭಾಷೆಗಳಲ್ಲಿ ಕತೆಗಳನ್ನು ಪರಿಚಯಿಸುವುದು ಫ್ರೀಡಂ ಟು ರೀಡ್ ಅಭಿಯಾನದ ಉದ್ದೇಶವಾಗಿತ್ತು. ಇಂದು ಆ ಉದ್ದೇಶ ಪೂರ್ಣಗೊಂಡಿದೆ. ಇನ್ನಷ್ಟು ಭಾಷೆಗಳನ್ನು ಸೇರಿಸುವ ಪ್ರಯತ್ನವೂ ಸಾಗಿದೆ’.  ಹಲವು ಭಾಷೆಗಳ ಕತೆಗಳನ್ನು ಪರಿಚಯಿಸುವುದಷ್ಟೇ ಅಲ್ಲದೆ, ಅದನ್ನು ಮಕ್ಕಳಿಗೆ ತಲುಪಿಸುವ ಕೆಲಸದಲ್ಲೂ ಪ್ರಯತ್ನಗಳು ಮುಂದುವರೆದಿವೆ.
 
ಕನ್ನಡದ ಕತೆಗಳು
2900 ಕತೆಗಳಲ್ಲಿ 1811 ಕತೆಗಳು ಭಾರತೀಯ ಭಾಷೆಗಳಲ್ಲಿದ್ದು, 60 ಕತೆಗಳು ದ್ವಿಭಾಷೆಗಳಲ್ಲಿ ಲಭ್ಯವಿದೆ. ಕನ್ನಡದಲ್ಲಿ 200ಕ್ಕೂ ಹೆಚ್ಚು ಮಕ್ಕಳ ಕತೆಗಳು ಈ ತಾಣದಲ್ಲಿವೆ.  ಕನ್ನಡ ಕತೆಗಳ ಅನುವಾದದಲ್ಲಿಯೂ ಸಾಕಷ್ಟು  ಬೆಳವಣಿಗೆಯಾಗಿದೆ ಎಂದು ವಿವರಿಸಿದರು ಸ್ಟೋರಿವೀವರ್‌ನ ಕಮ್ಯುನಿಟಿ  ಮ್ಯಾನೇಜರ್ ಮೇನಕಾ. 
 
ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಹಲವು ಸರ್ಕಾರೇತರ ಸಂಘ–ಸಂಸ್ಥೆಗಳೂ ಸ್ಟೋರಿವೀವರ್ ನೆರವು ಪಡೆದುಕೊಂಡಿದ್ದು, ಸಾಮುದಾಯಿಕವಾಗಿ ಚಟುವಟಿಕೆಗಳು ನಡೆಯುತ್ತಿವೆ. 
 
ಸರ್ಕಾರಿ ಶಾಲೆಗಳಲ್ಲಿ ಈ ಡಿಜಿಟಲ್ ವೇದಿಕೆ ಮೂಲಕ ಹಾಸ್ಯ, ವಿಜ್ಞಾನ, ತಂತ್ರಜ್ಞಾನ, ಗಣಿತ, ಪರಿಸರ, ಇತಿಹಾಸಕ್ಕೆ ಸಂಬಂಧಿಸಿದ ಕನ್ನಡ ಕತೆಗಳು ಪರಿಣಾಮಕಾರಿ ಎನ್ನಿಸಿದ್ದು, ಉತ್ತಮ ಪ್ರತಿಕ್ರಿಯೆಯೂ ಲಭ್ಯವಾಗಿದೆ.ಕತೆಗಳನ್ನು ಓದಲು www.storyweaver.org.in ಭೇಟಿ ನೀಡಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.