ADVERTISEMENT

ಕಾರ್ಮಿಕರ ಮಕ್ಕಳ ‘ಹೊಂಬೆಳಕು’

ಹೇಮಾ ವೆಂಕಟ್
Published 26 ಆಗಸ್ಟ್ 2016, 19:30 IST
Last Updated 26 ಆಗಸ್ಟ್ 2016, 19:30 IST
ಹೊಂಬಾಳೆ ಕನ್‌ಸ್ಟ್ರಕ್ಷನ್‌ ಕಂಪೆನಿ  ಆರಂಭಿಸಿರುವ ‘ಹೊಂಬೆಳಕು’ ಶಾಲೆಯಲ್ಲಿ ಕಾರ್ಮಿಕರ ಮಕ್ಕಳು
ಹೊಂಬಾಳೆ ಕನ್‌ಸ್ಟ್ರಕ್ಷನ್‌ ಕಂಪೆನಿ ಆರಂಭಿಸಿರುವ ‘ಹೊಂಬೆಳಕು’ ಶಾಲೆಯಲ್ಲಿ ಕಾರ್ಮಿಕರ ಮಕ್ಕಳು   

ಬೇರೆ ರಾಜ್ಯಗಳಿಂದ ನಗರಕ್ಕೆ ಕಟ್ಟಡ ಕಾರ್ಮಿಕರಾಗಿ ಬರುವವರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಜೀವನೋಪಾಯಕ್ಕೆ  ಬರುವ ಕಾರ್ಮಿಕರಿಗೆ ಕೈತುಂಬ ಕೆಲಸವೂ ಸಿಗುತ್ತಿದೆ, ಹೊಟ್ಟೆಯೂ ತುಂಬುತ್ತಿದೆ. ಆದರೆ, ಅವರ ಮಕ್ಕಳ ಭವಿಷ್ಯ ಮಾತ್ರ ಸಿಮೆಂಟು, ಕಲ್ಲುಗಳ ಜೊತೆಗೇ ಕರಗಿ ಹೋಗುತ್ತಿದೆ ಎಂಬುದೂ ಅಷ್ಟೇ ನಿಜ.

30ಕ್ಕಿಂತ ಹೆಚ್ಚು ಕಟ್ಟಡ ಕಾರ್ಮಿಕರ ಮಕ್ಕಳಿದ್ದರೆ, ದುಡಿಯುವ ಜಾಗದಲ್ಲಿಯೇ ಶಾಲೆ ತೆರೆಯಬೇಕು ಎಂಬ ನಿಯಮ ಕಾಗದದಲ್ಲಿ ಮಾತ್ರವೇ ಉಳಿದಿದೆ.

‘ಹೊಂಬಾಳೆ ಕನ್‌ಸ್ಟ್ರಕ್ಷನ್ಸ್‌ ಅಂಡ್‌ ಎಸ್ಟೇಟ್‌ ಪ್ರೈವೇಟ್‌ ಲಿಮಿಟೆಡ್‌’ ಕಟ್ಟಡ ನಿರ್ಮಾಣ ಕಂಪೆನಿಯವರು ತಮ್ಮ ಬಳಿ ಕೆಲಸ ಮಾಡುತ್ತಿರುವ  ಕಾರ್ಮಿಕರ ಮಕ್ಕಳಿಗೆ ಅಲ್ಲಿಯೇ ಶಾಲೆ ತೆರೆಯುವ ಮೂಲಕ ಸಾಮಾಜಿಕ ಕಾಳಜಿಯ ಮಾದರಿ ಹೆಜ್ಜೆ ಇಟ್ಟಿದ್ದಾರೆ.

ಕೆಂಗೇರಿ ಬಳಿಯ ಕೊಮ್ಮಘಟ್ಟ(ನೈಸ್‌ ರಸ್ತೆ ಬಳಿ)ದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಿರ್ಮಿಸುತ್ತಿರುವ  ವಸತಿ ಸಮುಚ್ಚಯಗಳ ನಿರ್ಮಾಣ ಹೊಣೆ ಹೊತ್ತಿರುವ ಹೊಂಬಾಳೆ ಕನ್‌ಸ್ಟ್ರಕ್ಷನ್‌ ಕಂಪೆನಿ  ಆಗಸ್ಟ್‌ 15ರಂದು ‘ಹೊಂಬೆಳಕು’ ಶಾಲೆ ತೆರೆದಿದೆ. ಸ್ಪರ್ಶ ಟ್ರಸ್ಟ್‌ ಶಾಲೆಯ ನಿರ್ವಹಣೆಯ  ಜವಾಬ್ದಾರಿ ಹೊತ್ತಿದೆ.

ಈ ಶಾಲೆಯಲ್ಲಿ ಒಂದು ವರ್ಷದಿಂದ ಹನ್ನೆರಡು ವರ್ಷದೊಳಗಿನ ಸುಮಾರು 40 ಮಕ್ಕಳು ಇದ್ದಾರೆ.  ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆಟಕ್ಕೆ ಅಂಗಳವಿದೆ.

‘ಉತ್ತರ ಭಾರತದಿಂದ ಕಟ್ಟಡ ನಿರ್ಮಾಣ ಕೆಲಸಕ್ಕೆ  ಬಂದಿರುವ  ನೂರಾರು ಕುಟುಂಬಗಳು ಇಲ್ಲಿವೆ. ಪೋಷಕರು ಕೆಲಸ ಮಾಡುತ್ತಿರುವಾಗ ಮಕ್ಕಳು ಇದೇ ಕಲ್ಲು–ಮಣ್ಣುಗಳ  ರಾಶಿಯಲ್ಲಿ ಆಟವಾಡುತ್ತಾ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. 

ಬೃಹತ್‌ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಬಂದಿರುವ ಜೆಸಿಬಿ, ಕ್ರೇನ್, ಟ್ರಕ್‌ಗಳು ಮುಂತಾದ ಬೃಹತ್‌ ವಾಹನಗಳು ಇಲ್ಲಿ ಓಡಾಡುತ್ತಿರುತ್ತವೆ. ಕಾರ್ಮಿಕರ ಮಕ್ಕಳು ಇದೇ ಜಾಗಗಳಲ್ಲಿ ಆಟವಾಡುತ್ತಾ ಇರುತ್ತಾರೆ. ಅನೇಕ ಸಂದರ್ಭಗಳಲ್ಲಿ ಇದು ಆತಂಕಕ್ಕೆ ಕಾರಣವಾಗುತ್ತಿದೆ.

ಹತ್ತಿರದಲ್ಲಿ ಜನವಸತಿ ಪ್ರದೇಶ ಇಲ್ಲ. ಶಾಲೆಗಳೂ ಇಲ್ಲ. ಹಾಗಾಗಿ, ಈ ಮಕ್ಕಳಿಗೆ  ಇಲ್ಲೇ ಶಾಲೆ ತೆರೆಯುವ ಯೋಚನೆ ಬಂತು.  ಆದರೆ, ಶಾಲೆ ನಡೆಸುವ ಜವಾಬ್ದಾರಿ ವಹಿಸಿಕೊಳ್ಳುವವರು ಬೇಕಿತ್ತು.

ಅದಕ್ಕಾಗಿ ಅಂತರ್ಜಾಲದಲ್ಲಿ ಹುಡುಕಿದಾಗ ಸ್ಪರ್ಶ ಟ್ರಸ್ಟ್‌ನ  ಬಗ್ಗೆ ಮಾಹಿತಿ ಸಿಕ್ಕಿತು. ಇದು ಹೊಂಬೆಳಕು ಶಾಲೆಯ ಆರಂಭಕ್ಕೆ ಕಾರಣವಾಯಿತು’ ಎಂದು ಹೊಂಬಾಳೆ ಕಂಪೆನಿಯ ಎಚ್‌ಎಸ್‌ಇ ಮ್ಯಾನೇಜರ್‌ ಡಾ.ಹರಿ ಹೇಳುತ್ತಾರೆ. 

‘ಬಿಡಿಎ ವಸತಿ ಸಮುಚ್ಚಯ ಮೊದಲ ಹಂತ ಪೂರ್ಣಗೊಂಡಿದೆ. ಎರಡನೇ  ಮತ್ತು ಮೂರನೆಯ ಹಂತ ನಿರ್ಮಾಣ ಕೆಲಸ ಆರಂಭಗೊಂಡಿದೆ. ಕನಿಷ್ಠ ಇನ್ನು ಮೂರು ವರ್ಷ ಕಾರ್ಮಿಕರು ಇಲ್ಲೇ ಇರುತ್ತಾರೆ. ಅಷ್ಟು ಕಾಲ ಈ ಮಕ್ಕಳಿಗೆ ಶಿಕ್ಷಣ ಸಿಗಲಿದೆ. ಸದ್ಯ ನಮಗೆ ಬರುವ ಊಟವನ್ನೇ  ಈ ಮಕ್ಕಳಿಗೂ  ನೀಡಲಾಗುತ್ತಿದೆ. ಮುಂದಿನ ತಿಂಗಳಿಂದ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ’ ಎನ್ನುತ್ತಾರೆ ಅವರು.

‘ಶಾಲೆ ಆರಂಭವಾಗಿ ಎರಡು ವಾರವಷ್ಟೇ ಆಗಿದೆ. ಈ ಮಕ್ಕಳು ಈವರೆಗೆ ಶಾಲೆಯನ್ನೇ ಕಂಡಿಲ್ಲ. ಹಾಗಾಗಿ ಸದ್ಯ ಶಾಲಾ ವಾತಾವರಣಕ್ಕೆ ಮಕ್ಕಳು ಒಗ್ಗಿಕೊಳ್ಳುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ ಅಕ್ಷರಾಭ್ಯಾಸ ಮಾಡಿಸಲಾಗುತ್ತಿದೆ. ಬೆಳಿಗ್ಗೆ10ರಿಂದ ಮಧ್ಯಾಹ್ನ 2ರವರೆಗೆ ಮಕ್ಕಳು ಶಾಲೆಯಲ್ಲಿರುತ್ತಾರೆ.

ಸೆಪ್ಟಂಬರ್‌ನಿಂದ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭವಾಗಲಿದೆ’ ಎಂದು ಸ್ಪರ್ಶ ಟ್ರಸ್ಟ್‌ನ  ಕೋ–ಆರ್ಡಿನೇಟರ್‌ ಮಹಾಂತೇಶ್‌ ವಿವರಿಸುತ್ತಾರೆ.

‘ಮೂರು ವರ್ಷದೊಳಗಿನ ಮಕ್ಕಳು, ಮೂರರಿಂದ ಆರು ವರ್ಷದ ಮಕ್ಕಳು, ಆರರಿಂದ ಹನ್ನೆರಡು ವರ್ಷದೊಳಗಿನ ಮಕ್ಕಳು ಹೀಗೆ ಮೂರು ವಿಭಾಗ ಮಾಡಿ ಅವರಿಗೆ ಅನೌಪಚಾರಿಕ ಶಿಕ್ಷಣ ನೀಡಲಾಗುತ್ತದೆ. ಮೂರು ವಿಭಾಗಕ್ಕೆ ಮೂವರು ಶಿಕ್ಷಕರು, ಒಬ್ಬರು ಆಯಾ ಮತ್ತು ಉಸ್ತುವಾರಿ ನೋಡುಕೊಳ್ಳುವವರು ಸೇರಿ ಐವರು ಸಿಬ್ಬಂದಿ ಇರುತ್ತೇವೆ.

ಮೂರು ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳಿಗೆ  ಪ್ರತ್ಯೇಕ ಕೊಠಡಿ ಇದೆ. ಅಲ್ಲಿ ತೊಟ್ಟಿಲು, ಆಟಿಕೆಗಳ ವ್ಯವಸ್ಥೆ ಮಾಡಲಾಗುತ್ತದೆ. ಹೆಚ್ಚಿನ ಮಕ್ಕಳಿಗೆ ಅಪೌಷ್ಟಿಕತೆಯಿದೆ. ಅದಕ್ಕಾಗಿ ಹಾಲು, ಮೊಟ್ಟೆ ಸೇರಿದಂತೆ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಇವೆಲ್ಲವನ್ನೂ ಸರ್ಕಾರದ ಮತ್ತು ಖಾಸಗಿಯವರ ನೆರವಿನಿಂದ ಸ್ಪರ್ಶ ಟ್ರಸ್ಟ್‌ ಪೂರೈಸುತ್ತದೆ’ ಎಂದು ಅವರು ಮಾಹಿತಿ ನೀಡಿದರು.

*
‘ಕೆಲವರಷ್ಟೇ ಅವಕಾಶ ಕಲ್ಪಿಸಿದ್ದಾರೆ’
30ಕ್ಕಿಂತ ಹೆಚ್ಚು ಕಟ್ಟಡ ಕಾರ್ಮಿಕರ ಮಕ್ಕಳಿದ್ದಲ್ಲಿ ಅಲ್ಲಿ ಸಂಚಾರಿ ಶಾಲೆ ತೆರೆಯಬೇಕು ಎಂಬ ನಿಯಮವಿದೆ.  ಆದರೆ, ಕೆಲವರಷ್ಟೇ ಅವಕಾಶ ಕಲ್ಪಿಸಿದ್ದಾರೆ. ಸ್ಪರ್ಶ ಟ್ರಸ್ಟ್‌ ಕಟ್ಟಡ ನಿರ್ಮಾಣ ಕಂಪೆನಿಗಳ ಮನವೊಲಿಸುವ ಪ್ರಯತ್ನ ಮಾಡುತ್ತಿದೆ. 

ಹೊಂಬಾಳೆ ಕಂಪೆನಿಯವರು ತಾವಾಗಿಯೇ ನಮ್ಮನ್ನು ಸಂಪರ್ಕಿಸಿದ್ದಾರೆ.  ಈ ಕಂಪೆನಿ ಎಲ್ಲೆಲ್ಲ ಕಟ್ಟಡ ನಿರ್ಮಾಣಕ್ಕೆ ತೆರಳುತ್ತದೆಯೋ ಅಲ್ಲಿಗೆ, ಹೊಂಬೆಳಕು ಶಾಲೆ ಸಂಚರಿಸಲಿದೆ ಎಂದು ಮಹಾಂತೇಶ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT