ADVERTISEMENT

ಕೈಮಗ್ಗ ಶ್ರೀಮಂತಿಕೆ

ಸುರೇಖಾ ಹೆಗಡೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಕೈಮಗ್ಗ ಶ್ರೀಮಂತಿಕೆ
ಕೈಮಗ್ಗ ಶ್ರೀಮಂತಿಕೆ   

* ವಸ್ತ್ರವಿನ್ಯಾಸ ಕ್ಷೇತ್ರದೆಡೆಗೆ ಆಸಕ್ತಿ ಬೆಳೆದಿದ್ದು ಹೇಗೆ?
ವಸ್ತ್ರೋದ್ಯಮ ಕುಟುಂಬದಲ್ಲಿಯೇ ನಾನು ಹುಟ್ಟಿದ್ದು. ಹೀಗಾಗಿ ಚಿಕ್ಕಂದಿನಿಂದಲೂ ಬಟ್ಟೆ, ಬಣ್ಣ, ವಿನ್ಯಾಸಗಳ ಚರ್ಚೆ ನನ್ನ ಕಿವಿ ಮೇಲೆ ಬೀಳುತ್ತಿತ್ತು. ಬಾಲ್ಯದಿಂದಲೇ ವಸ್ತ್ರೋದ್ಯಮದ ಆಗುಹೋಗುಗಳ ಬಗೆಗೆ ತೆರೆದುಕೊಂಡಿದ್ದರಿಂದ ಸಹಜವಾಗಿಯೇ ನನಗೆ ಈ ಕ್ಷೇತ್ರದತ್ತ ಪ್ರೀತಿ ಬೆಳೆಯಿತು. ಮುಂದೆ ಟೆಕ್ಸ್‌ಟೈಲ್‌ಗೆ ಸಂಬಂಧಿಸಿದಂತೆ ಪದವಿಯನ್ನೂ ಗಳಿಸಿದೆ.

*‌ ನಿಮ್ಮ ‘ಎಸ್‌ಎಸ್‌ ಲೇಬಲ್‌’ ಬ್ರಾಂಡ್‌ ಬಗ್ಗೆ ಹೇಳಿ?
ಭಾರತೀಯ ವಸ್ತ್ರೋದ್ಯಮದ ಶ್ರೀಮಂತಿಕೆಯ ಕುರುಹು ಕೈಮಗ್ಗ. ಹೀಗಾಗಿ ಅದೇ ಕ್ಷೇತ್ರದಲ್ಲಿಯೇ ಕೆಲಸ ಮಾಡಬೇಕು ಎನಿಸಿ ‘ಎಸ್‌ಎಸ್‌ ಲೇಬಲ್‌’ ಪ್ರಾರಂಭಿಸಿದೆ. ಅಂದು ಹತ್ತು ನೇಕಾರರನ್ನು ಜೊತೆಗೂಡಿಕೊಂಡು ನಾನು ವಿನ್ಯಾಸ ಕೈಂಕರ್ಯಕ್ಕೆ ಕೈಹಾಕಿದೆ. ಇಂದು ದೇಶದ ವಿವಿಧ ಪ್ರದೇಶಗಳ 900 ನೇಕಾರರು ನಮ್ಮ ಜೊತೆ ಕೆಲಸ ಮಾಡುತ್ತಿದ್ದಾರೆ.

* ಇತ್ತೀಚೆಗೆ ಅನೇಕ ಜನಪ್ರಿಯ ವಿನ್ಯಾಸಕಾರರೂ ಕೈಮಗ್ಗ ವಿನ್ಯಾಸದ ಬಗೆಗೆ ಆಸ್ಥೆ ತೋರುತ್ತಿದ್ದಾರೆ. ಅಂದಿಗೂ ಇಂದಿಗೂ ಬೇಡಿಕೆಯಲ್ಲಿ ವ್ಯತ್ಯಾಸ ಇದೆಯೇ?
ನಾನು ಕೈಮಗ್ಗ ವಸ್ತ್ರ ವಿನ್ಯಾಸದಲ್ಲಿ ತೊಡಗಿಕೊಂಡಾಗ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು. ಕೈಮಗ್ಗದ ಪ್ರಾಮುಖ್ಯತೆ ತಿಳಿದವರೂ ಕಡಿಮೆ ಆಗಿತ್ತು. ನೇಕಾರರಿಗೂ ಬೇಡಿಕೆ ಕುಸಿದಿದ್ದ ಕಾಲವದು. ನೇಕಾರಿಕೆ ನಂಬಿಕೊಂಡ ಕುಟುಂಬದಲ್ಲಿ ಮಕ್ಕಳಿಗೆ ಮದುವೆ ಮಾಡುವುದೂ ಕಷ್ಟವಾಗಿತ್ತು. ಹೀಗಾಗಿ ಹೆಚ್ಚಿನವರು ವಾಚ್‌ಮೆನ್‌ ಮುಂತಾದ ಬೇರೆ ಬೇರೆ ಕೆಲಸ ಕಾರ್ಯಗಳತ್ತ ವಾಲಿದರು. ಆದರೆ ಇಂದು ಹಾಗಿಲ್ಲ, ಎಲ್ಲರಿಗೂ ಕೈಮಗ್ಗದ ಶ್ರೀಮಂತಿಕೆಯ ಅರಿವಾಗಿದೆ. ಆಧುನಿಕ ಹಾಗೂ ಸಮಕಾಲೀನ ಜಾಯಮಾನಕ್ಕೂ ಕೈಮಗ್ಗದ ವಸ್ತ್ರಗಳನ್ನು ಒಗ್ಗಿಸಿರುವುದರಿಂದ ಬೇಡಿಕೆ ಸಾಕಷ್ಟಿದೆ. ಅಳಿವಿನಂಚಿನಲ್ಲಿದ್ದ ಕೈಮಗ್ಗ ಉದ್ಯಮವನ್ನು ನೆಚ್ಚಿಕೊಳ್ಳುವವರೂ ಹೆಚ್ಚಾಗಿದ್ದಾರೆ.

ADVERTISEMENT

* ಈಗಿನ ಟ್ರೆಂಡ್‌ ಏನು?
ಕೈಮಗ್ಗ ಎಂದರೆ ನೈಜ ಸೌಂದರ್ಯ. ಇಲ್ಲಿ ಬಣ್ಣಗಳೂ ವಿಭಿನ್ನವಾ ಗಿರುತ್ತದೆ. ಅಲ್ಲದೆ ವಿನ್ಯಾಸ ವೈವಿಧ್ಯವೂ ಇರುವುದರಿಂದ ಕೈಮಗ್ಗದ ವಸ್ತುಗಳನ್ನು ಕೊಳ್ಳುವವರು ಹೆಚ್ಚಿದ್ದಾರೆ.

* ವಿನ್ಯಾಸಗಳಲ್ಲಿ ಹೊಸ ತಂತ್ರಜ್ಞಾನ ವನ್ನೇನಾದರೂ ಬಳಸಿಕೊಂಡಿದ್ದೀರಾ?
ಮೊದಲು ಕಾಂಜಿವರಂ ಸೀರೆ ಎಂದರೆ ಅದಕ್ಕೇ ಒಂದು ಶೈಲಿಯಿತ್ತು. ಬನಾರಸ್‌ ಸೀರೆ ಎಂದರೆ ಅದರದ್ದೇ ಆದ ಒಂದು ಶೈಲಿಯಿತ್ತು. ಆದರೆ ಇಂದು ಎಲ್ಲ ಶೈಲಿಯ ವಿನ್ಯಾಸಗಳನ್ನು ಎಲ್ಲಾ ಬಟ್ಟೆಯ ಮೇಲೆಯೂ ಬಳಸಿಕೊಳ್ಳಲಾಗುತ್ತಿದೆ. ಕಂಚಿ ದಿರಿಸನ್ನು ಪೋತಂಪಲ್ಲಿ ಶೈಲಿಯಲ್ಲಿ ನೇಯಲಾಗುತ್ತಿದೆ. ಇಕ್ಕತ್‌ಗೆ ಕಾಂಜಿವರಂ ನೇಯ್ಗೆಯಿದೆ. ಪಟೋಲಾ ಹಾಗೂ ಬನಾರಸ್‌ ವಿನ್ಯಾಸವನ್ನು ಮಿಶ್ರಣ ಮಾಡಿದ್ದೇವೆ. ಹೀಗೆ ಕೈಮಗ್ಗ ಆಧುನಿಕ ಜಾಯಮಾನದ ಎಲ್ಲಾ ಮಜಲುಗಳೊಂದಿಗೆ ಹೊಂದಿಕೊಳ್ಳುತಿದೆ.

* ವಿನ್ಯಾಸಕ್ಕೆ ಯಾವೆಲ್ಲಾ ಫ್ಯಾಬ್ರಿಕ್‌ಗಳನ್ನು ಬಳಸುತ್ತೀರಿ?
ನೈಸರ್ಗಿಕವಾಗಿ ತಯಾರಿಸಲಾದ ಬಟ್ಟೆಗಳನ್ನು ಮಾತ್ರ ನಾವು ವಿನ್ಯಾಸದಲ್ಲಿ ಬಳಸಿಕೊಳ್ಳುತ್ತೇವೆ. ಎಲ್ಲಾ ಬಗೆಯ ರೇಷ್ಮೆ, ಕಾಟನ್‌, ಖಾದಿಯಲ್ಲಿ ವಿನ್ಯಾಸವಿದೆ.

* ನಿಮ್ಮ ವಿನ್ಯಾಸದ ವೈಶಿಷ್ಟ್ಯ ಏನು?
ನಾವು ಸಾಂಪ್ರದಾಯಿಕ ಹಾಗೂ ಸಮಕಾಲೀನ ವಿನ್ಯಾಸದ ದಿರಿಸುಗಳನ್ನು ನೀಡುತ್ತೇವೆ. ಬಟ್ಟೆಯ ಮೇಲಿನ ಚಿಕ್ಕಪುಟ್ಟ ವಿನ್ಯಾಸಗಳೂ ವಿಶೇಷ ಆಸ್ಥೆಯಿಂದ ಮಾಡಲಾಗುತ್ತದೆ. ನಮ್ಮಲ್ಲಿ ಬನಾರಸ್‌, ಜಾಮ್ದಾನಿ, ಇಕ್ಕತ್‌, ಕಲಂಕಾರಿ, ಕಾಂಜಿವರಂ, ಒರ್ಗಾನ್ಸಾ ಶೈಲಿಯ ಸೀರೆಗಳು ಲಭ್ಯವಿವೆ. ಸಿಲ್ಕ್‌ ಕಾಟನ್‌, ಕಾಟನ್‌, ಟಸ್ಸಾರ್‌ ಸಿಲ್ಕ್‌, ಕೋಟಾ, ಖಾದಿ ಒರ್ಗಾನ್ಸಾ ಫ್ಯಾಬ್ರಿಕ್‌ಗಳಲ್ಲಿ ಪ್ರಿಂಟೆಡ್‌ ವಿನ್ಯಾಸ ಲಭ್ಯವಿದೆ. ಅಲ್ಲದೆ ಸೀರೆ, ದಿರಿಸುಗಳಿಗೆ ಸರಿ ಹೊಂದುವಂಥ ಆಕ್ಸೆಸರೀಸ್‌ಗಳು ಲಭ್ಯವಿರುವುದು ನಮ್ಮ ವಿಶೇಷ.

* ಯಾವ ಬಣ್ಣದ ಜೊತೆಗೆ ವಿನ್ಯಾಸ ಮಾಡಲು ನಿಮಗೆ ಇಷ್ಟ?
ಕ್ಲೈಂಟ್‌ ಹಾಗೂ ಯಾವ ಶೈಲಿಯ ವಿನ್ಯಾಸ ಮಾಡುತ್ತಿದ್ದೇವೆ ಎನ್ನುವುದರ ಮೇಲೆ ಬಣ್ಣಗಳ ಆಯ್ಕೆಯೂ ಆಗುತ್ತದೆ. ಆದರೆ ವೈಯಕ್ತಿಕವಾಗಿ ಹೇಳಬೇಕೆಂದರೆ ನನಗೆ ಐಶಿ ಬಣ್ಣ, ಪಿಂಕ್‌ ಸ್ಪಿರಿಟ್‌, ಕ್ರಿಸ್ಟಲ್‌ ಅಂಡ್‌ ರೂಬಿಗೆ ಇರುವ ಬಣ್ಣಗಳೊಂದಿಗೆ ಕೆಲಸ ಮಾಡಲು ನನಗೆ ಹೆಚ್ಚು ಇಷ್ಟ. ಆದರೆ ಪ್ರತಿ ವಿನ್ಯಾಸ ಮಾಡುವಾಗಲೂ ಬೇರೆ ಬೇರೆ ಬಣ್ಣಗಳನ್ನು ಬಳಸುತ್ತೇವೆ. ಗಾಢ ಹಾಗೂ ತಿಳಿ ಬಣ್ಣಗಳನ್ನು ನಮ್ಮ ವಿನ್ಯಾಸದಲ್ಲಿ ಕಾಣಬಹುದು.

* ಇತ್ತೀಚೆಗೆ ತುಂಬಾ ಬ್ರಾಂಡ್‌ಗಳು ಕೈಮಗ್ಗದ ವಸ್ತ್ರಗಳನ್ನು ಪರಿಚಯಿಸುತ್ತಿವೆ. ಸ್ಪರ್ಧೆ ಹೇಗಿದೆ?
ಇದನ್ನು ನಾನು ಸ್ಪರ್ಧೆ ಎಂದು ಕರೆಯಲು ಇಷ್ಟಪಡುವುದಿಲ್ಲ. ಕೈಮಗ್ಗದ ಅಭಿವೃದ್ಧಿಗೆ ಯಾರೇ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ. ಹಾಗೆಯೇ ಜನರಲ್ಲಿ ಕೈಮಗ್ಗದ ಪ್ರಾಮುಖ್ಯತೆಯ ಅರಿವಾಗುತ್ತಿರುವುದು ಮುಖ್ಯ ಎನಿಸುತ್ತದೆ. ಹೊಸಬರು ಈ ಕ್ಷೇತ್ರದತ್ತ ವಾಲುತ್ತಿರುವಂತೆ ಹೊಸ ವಿನ್ಯಾಸಗಳೂ ಹುಟ್ಟಿಕೊಳ್ಳುತ್ತವೆ.

* ವಿನ್ಯಾಸವನ್ನು ಹೊರತುಪಡಿಸಿ ನಿಮ್ಮ ಇಷ್ಟದ ಹವ್ಯಾಸ?
ಹಕ್ಕಿಗಳೆಂದರೆ ನನಗೆ ತುಂಬಾ ಇಷ್ಟ. ಬಿಡುವು ಇರುವಾಗ ನಾಯಿಗೆ ಆಹಾರ ತಿನಿಸುವುದು, ಮೀನುಗಳಿಗೆ ಆಹಾರ ನೀಡುವುದರಲ್ಲಿ ಕಾಲ ಕಳೆಯುತ್ತೇನೆ.

* ಬೆಂಗಳೂರಿನ ಬಗೆಗೆ ನಿಮ್ಮ ಅಭಿಪ್ರಾಯ?
ಇದೇ ಮೊದಲ ಬಾರಿಗೆ ನಾನು ಬೆಂಗಳೂರಿಗೆ ಬಂದಿದ್ದು. ಪ್ರದರ್ಶನ ನಡೆದ ಎರಡೂ ದಿನ ಪ್ರತಿಕ್ರಿಯೆ ಚೆನ್ನಾಗಿತ್ತು. ಇಲ್ಲಿಯ ವಾತಾವರಣ, ಬಣ್ಣಬಣ್ಣದ ಸೀರೆ ತೊಟ್ಟ ನೀರೆಯರನ್ನು ಕಂಡು ಬಹಳ ಖುಷಿ ಎನಿಸಿತು. ಬೆಂಗಳೂರು ನನ್ನ ಕಣ್ಣಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.