ADVERTISEMENT

ಕ್ಷಮೆ ಕೇಳಿದ ಸೃಜನ್‌ ಲೋಕೇಶ್‌

ಕಿರುತೆರೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST
ಕ್ಷಮೆ ಕೇಳಿದ ಸೃಜನ್‌ ಲೋಕೇಶ್‌
ಕ್ಷಮೆ ಕೇಳಿದ ಸೃಜನ್‌ ಲೋಕೇಶ್‌   

ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿರುವ, ತಲತಲಾಂತರಗಳಿಂದ ಆಚರಿಸಿಕೊಂಡು ಬಂದಿರುವ ಭೂತಾರಾಧನೆಯ ಕುರಿತು ಆಕ್ಷೇಪಾರ್ಹ ಮಾತುಗಳನ್ನು ಹೇಳಿದ್ದ ‘ಮಜಾ ಟಾಕೀಸ್’ ಶೋ ನಿರೂಪಕ ಸೃಜನ್‌ ಲೋಕೇಶ್‌ ಕ್ಷಮೆ ಯಾಚಿಸಿದ ಮೇಲೆ ವಿವಾದ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ.
‘ಮಜಾ ಟಾಕೀಸ್‌’ನ ಕಳೆದ ವಾರದ ಸಂಚಿಕೆಯಲ್ಲಿ ಸೃಜನ್‌, ಭೂತಾರಾಧನೆಯನ್ನು ಕಾಲ್‌ಸೆಂಟರ್‌ನ ಕೆಲಸಕ್ಕೆ ಹೋಲಿಕೆ ಮಾಡಿ ಅಪಹಾಸ್ಯ ಮಾಡಿದ್ದರು. ಇದನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯೇ ನಡೆದಿತ್ತು.  ಕರಾವಳಿ ಜನರು ಸೃಜನ್‌ ಲೋಕೇಶ್‌ ಹಾಗೂ ಅವರ ಮಜಾ ಟಾಕೀಸ್‌ ಕಾರ್ಯಕ್ರಮವನ್ನು ತೀವ್ರವಾಗಿ ಖಂಡಿಸಿದ್ದರಲ್ಲದೆ ಕ್ಷಮೆ ಕೋರುವಂತೆ ಒತ್ತಾಯಿಸಿದ್ದರು.

ಇದಕ್ಕೆ ಸ್ಪಂದಿಸಿರುವ ಸೃಜನ್‌ ತಮ್ಮ ಫೇಸ್‌ಬುಕ್‌ ಪುಟದಲ್ಲಿ ‘ಭೂತಾರಾಧನೆ ಬಗ್ಗೆ ನಾನು ತಮಾಷೆ ಮಾಡಿದೆ ಎಂದು ತಿಳಿಸಿರುವ  ಕೆಲವು ಫೇಸ್‌ಬುಕ್ ಪೋಸ್ಟ್ ಗಮನಿಸಿದೆ. ನನ್ನ ಉದ್ದೇಶ ಖಂಡಿತ ಭೂತರಾಧನೆಯನ್ನು ಅವಮಾನಿಸೋದಾಗಲೀ, ತಮಾಷೆ ಮಾಡೋದಾಗಲಿ ಆಗಿರಲಿಲ್ಲ. ನಾನು ಸಹ ಭೂತರಾಧನೆಯ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ ದೈವಭಕ್ತ. ನನಗೆ ಅದರ ಅರಿವಿರುವುದರಿಂದಲೇ ನಾನು ‘ಭೂತರಾಧನೆ’ ಪ್ರಸ್ತಾಪಿಸಿದ್ದು. ಯಾರ ಭಾವನೆಗಳಿಗೂ ಧಕ್ಕೆಯಾಗದ ಹಾಗೆ ನಿಮ್ಮನ್ನು ನಗಿಸೋ ಪ್ರಯತ್ನ ಮಾಡುತ್ತಾ ಬಂದಿದ್ದೇವೆ.

ನನಗರಿವಿದ್ದೋ, ಅರಿವಿಲ್ಲದೆಯೋ ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ... ನಿಮ್ಮ ಸೃಜನ್ ಲೋಕೇಶ್’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಇದಕ್ಕೆ 25 ಸಾವಿರ ಜನ ಲೈಕ್‌ ಸೂಚಿಸಿದ್ದು, 450 ಮಂದಿ ಶೇರ್‌ ಮಾಡಿದ್ದಾರೆ. 1,317 ಜನ ಕಮೆಂಟ್‌ ಮಾಡಿದ್ದಾರೆ. ಕೆಲವರು ಕ್ಷಮೆ ಕೇಳಿದ್ದನ್ನು ಮೆಚ್ಚಿಕೊಂಡು ಈ ವಾದಕ್ಕೆ ತೆರೆ ಎಳೆಯೋಣ ಎಂದಿದ್ದಾರೆ.

ಆದರೂ ‘ಮುಂದಿನ ಸಂಚಿಕೆಯಲ್ಲಿ ನೇರವಾಗಿ ಕ್ಷಮೆ ಕೇಳಬೇಕು. ಇಲ್ಲವಾದರೆ ಮಜಾ ಟಾಕೀಸ್‌ ಅನ್ನು ಇನ್ನು ಮುಂದೆ ನೋಡುವುದೇ ಇಲ್ಲ’ ಎಂದು ಕೆಲವರು ಪಟ್ಟು ಹಿಡಿದಿದ್ದಾರೆ.

ಫೇಸ್‌ಬುಕ್‌ ಪುಟದಲ್ಲಿ ಬಂದಿರುವ ಕೆಲ ಕಮೆಂಟ್‌ಗಳು ಇಂತಿವೆ.

ಪ್ರವೀಣ್‌ ಡಿ.ಕಟೀಲ್‌ ಅವರು ‘ನಾಗಮಂಡಲ, ಢಕ್ಕೆಬಲಿ, ಯಕ್ಷಗಾನ, ಕಂಬಳ, ನಾಗದರ್ಶನ, ಭೂತಕೋಲ/ನೇಮೋತ್ಸವ, ತಾಳಮದ್ದಳೆ, ಕಂಗೀಲು ನೃತ್ಯ, ಹುಲಿವೇಷ, ಶಿವರಾತ್ರಿ ಹಣುಬು, ತುಳಸೀ ಕುಣಿತ, ಕೆಸರಗದ್ದೆ ಕ್ರೀಡೆ– ಇನ್ನೂ ಮುಂತಾದವು, ಸತ್ಯ ಧರ್ಮದ ಮೇಲೆ ನಿಂತಿರುವ ಪಂಚವರ್ಣದ ನಾಗನೆಲೆಯ ದೈವ ದೇವರ ನೆಲೆವೀಡಾದ ಕರಾವಳಿಯ ಈ ಪುಣ್ಯಭೂಮಿಯ ಧಾರ್ಮಿಕ ಶ್ರದ್ಧಾ ಭಕ್ತಿಯ ಆಚರಣೆಗಳು. ಅದರಲ್ಲಿ ಅತೀ ಮಹತ್ವದ್ದು ಭೂತಾರಾಧನೆ. ನಮ್ಮ ನಂಬಿಕೆ, ಶ್ರದ್ಧೆಯ ಭಾಗವಾದ ಈ ಆರಾಧನೆಯನ್ನು ಕಾಲ್‌ ಸೆಂಟರ್‌ ಎಂಬ ವೃತ್ತಿಗೆ ಹೋಲಿಸಿದ್ದು ನಿಮ್ಮ ತಿಳಿವಳಿಕೆಯನ್ನು ಸೂಚಿಸುತ್ತದೆ. ತಪ್ಪಿನ ಅರಿವಾಗಿದ್ದರೆ ಕಾರ್ಯಕ್ರಮದಲ್ಲಿ ತುಳು ನಾಡಿನ ಜನಗಳ ಕ್ಷಮೆ ಕೇಳುವುದು ಒಳಿತು’ ಎಂದು ಹೇಳಿದ್ದಾರೆ.

ವೈಶಾಖ್‌ ಕರ್ಕೇರಾ ಅವರು ‘ದೈವಾರಾಧನೆ ಬರೀ ಆಚರಣೆ ಅಲ್ಲ, ಅದು ತುಳುನಾಡಿನ ಸಂಸ್ಕೃತಿಯ ಭಾಗ.  ಸೃಜನ್‌ ಅವರ ಮಾತು ತುಳು ನಾಡಿನ ಜನರಿಗೆ ನೋವುಂಟು ಮಾಡಿದೆ. ಸಂಸ್ಕೃತಿಯ ಭಾಗವಾಗಿರುವ ಇದನ್ನು ಹಾಸ್ಯದ ವಸ್ತುವನ್ನಾಗಿ ಬಳಸಿಕೊಂಡಿರುವುದು ವಿಪರ್ಯಾಸದ ಸಂಗತಿ ಎಂದಿದ್ದಾರೆ.

ಸುಕೇಶ್‌ ಎನ್‌.ಶೆಟ್ಟಿ, ‘ಇಷ್ಟಪಟ್ಟು ನೋಡುತ್ತಿದ್ದ ಮಜಾ ಟಾಕೀಸ್‌ ಬಗ್ಗೆ ಜಿಗುಪ್ಸೆ ಉಂಟಾಗಿದೆ. ಕ್ಷಮೆ ಕೇಳುವವರೆಗೆ ವಾಹಿನಿಯನ್ನೂ, ನಿಮ್ಮ ಕಾರ್ಯಕ್ರಮವನ್ನೂ ನೋಡುವುದಿಲ್ಲ’ ಎಂದು ಬರೆದಿದ್ದಾರೆ.

ರಾಜೇಶ್‌ ಪ್ರಸಾದ್‌ ಎನ್ನುವವರು ‘ದೈವಾರಾಧನೆಯ ಬಗ್ಗೆ ಹಗುರವಾಗಿ ಮಾತನಾಡಿದ್ದು, ಮಜಾ ಟಾಕೀಸ್‌ ಕಾರ್ಯಕ್ರಮದಲ್ಲಿ. ಹೀಗಾಗಿ ಅದೇ ಕಾರ್ಯಕ್ರಮದಲ್ಲಿ ಕ್ಷಮೆ ಕೇಳಿ. ಇನ್ನು ಮುಂದಾದರೂ ದಕ್ಷಿಣ ಕನ್ನಡದ ಹಾಗೂ ದೈವಾರಾಧಕರ ಮನವನ್ನು ನೋಯಿಸಬೇಡಿ’ ಎಂದಿದ್ದಾರೆ. ಇನ್ನು ಕೆಲವರು, ‘ಮಜಾ ಟಾಕೀಸ್‌’ ಬೋರ್‌ ಹೊಡೆಸುತ್ತಿದೆ. ದಯವಿಟ್ಟು ನಿಲ್ಲಿಸಿ’ ಎಂದೂ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.