ADVERTISEMENT

ಖಳಪಾತ್ರವೇ ನನಗಿಷ್ಟ: ಹರ್ಷವರ್ಧನ್‌

ರೇಷ್ಮಾ ಶೆಟ್ಟಿ
Published 25 ಜುಲೈ 2017, 19:30 IST
Last Updated 25 ಜುಲೈ 2017, 19:30 IST
ಖಳಪಾತ್ರವೇ ನನಗಿಷ್ಟ: ಹರ್ಷವರ್ಧನ್‌
ಖಳಪಾತ್ರವೇ ನನಗಿಷ್ಟ: ಹರ್ಷವರ್ಧನ್‌   

ರಾಯಚೂರು ಮೂಲದ ಹರ್ಷವರ್ಧನ್‌ ಬಿಎಸ್ಸಿ ಪದವೀಧರ. ಮಾತಿನಷ್ಟೇ ನೋಟವೂ ಖಡಕ್‌. ಖಳನಟನ ಪಾತ್ರಕ್ಕೆ ಜೀವ ತುಂಬುವಾಸೆ.

ಪದವಿ ಮುಗಿದ ಮೇಲೆ ಹವ್ಯಾಸಿ ರಂಗಭೂಮಿ ಸೇರಿ ಮೂರು ವರ್ಷ ತರಬೇತಿ ಪಡೆದಿದ್ದಾರೆ ಹರ್ಷವರ್ಧನ್‌.

ಸಿನಿಮಾ ಕ್ಷೇತ್ರದಲ್ಲಿ ಮಿಂಚಬೇಕು ಎಂಬ ಹಂಬಲದೊಂದಿಗೆ ಬೆಂಗಳೂರಿಗೆ ಬಂದ ಇವರು, ‘ಬೆಂಗಳೂರು ಕಲಾವಿದರ ಸಂಘ’ ಎಂಬ ರಂಗತಂಡವನ್ನು ಸೇರಿಕೊಂಡರು. 35ರಿಂದ 40 ನಾಟಕಗಳಿಗೆ ಬಣ್ಣ ಹಚ್ಚಿದ್ದಾರೆ. ಅಂದುಕೊಂಡಂತೆ ಅವಕಾಶಗಳು ಸಿಗದಿರುವ ಕಾರಣಕ್ಕೆ ಇವರಿಗೆ ಬೇಸರವೇನೂ ಇಲ್ಲ. ತಾಳ್ಮೆಯಿಂದ ಕಾದರೆ ಯಶಸ್ಸು ಖಂಡಿತ ಎನ್ನುವುದು ಇವರ ಸಿದ್ಧಾಂತ.

ADVERTISEMENT

‘ಮನಸ್ಸಿನಲ್ಲಿ ಮಹತ್ವಾಕಾಂಕ್ಷೆ ಇಟ್ಟುಕೊಂಡು ಬಣ್ಣದ ಲೋಕಕ್ಕೆ ಕಾಲಿಡುವವರಿಗೆ ನಿರಾಸೆ ಆಗುವುದು ಖಚಿತ.

ಆದರೆ ತಾಳ್ಮೆಯಿಂದಿದ್ದರೆ ದಾರಿ ಕಾಣಿಸುತ್ತದೆ’ ಎನ್ನುವುದು ಅವರ ಅನುಭವದ ಮಾತು.

ಯಾರ ಸಹಕಾರವೂ ಇಲ್ಲದೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಇವರು, ಪ್ರಾರಂಭದಲ್ಲಿ ಸಾಕಷ್ಟು ನೋವು ಕಂಡಿದ್ದಾರೆ.

‘ಮನೆಯವರ ಬೆಂಬಲ, ನಟನಾ ಕ್ಷೇತ್ರದಲ್ಲಿ ಬೆನ್ನೆಲುಬಾಗುವವರು ಇಲ್ಲದಿರುವುವಾಗ ಇಲ್ಲಿ ಅವಕಾಶ ದೊರಕುವುದು ಕಷ್ಟ. ನಟನೆಗೆ ಪದಾರ್ಪಣೆ ಮಾಡಬೇಕು ಎಂದು ಸಾಕಷ್ಟು ಅಲೆದಿದ್ದೇನೆ. ಆದರೆ ಅಂದುಕೊಂಡದ್ದನ್ನು ಸಾಧಿಸುವ ಉತ್ಸಾಹದಲ್ಲಿ ಆ ನೋವುಗಳು ಮರೆಯಾದವು’ ಎಂದು ತಮ್ಮ ಜೀವನ ಪಯಣ ವಿವರಿಸುತ್ತಾರೆ.

ಮಹಾಭಾರತ, ಆಕಾಶದೀಪ, ಅರುಂಧತಿ, ಬ್ರಹ್ಮಋಷಿ, ರಾಘವೇಂದ್ರ ವೈಭವ, ಮೇಘಮಯೂರಿ ಮುಂತಾದ ಧಾರಾವಾಹಿಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ.

‘ದೊಡ್ಡ ಪಾತ್ರಗಳಲ್ಲಿ ನಟಿಸಲು ಆಸೆಯಿದ್ದರೂ ಅವಕಾಶ ಸಿಗುತ್ತಿರಲಿಲ್ಲ. ಇದರಿಂದ ಬೇಸರವಾಗುತ್ತಿತ್ತು, ನಟನೆಯಲ್ಲಿ ನಾನು ಕಲಿಯಬೇಕಾದುದ್ದು ಇನ್ನು ಬೇಕಾದಷ್ಟಿದೆ. ಹಾಗಾಗಿ ಒಂದೊಂದೇ ಹೆಜ್ಜೆ ಇರಿಸಿಕೊಂಡು ಮುಂದೆ ಸಾಗುತ್ತಿದ್ದೇನೆ’ ಎನ್ನುತ್ತಾರೆ.

ರಂಗಭೂಮಿ ಹಿನ್ನೆಲೆ ಇರುವುದರಿಂದ ನನ್ನಲ್ಲಿ ಆತ್ಮವಿಶ್ವಾಸಕ್ಕೆ ಕೊರತೆಯಿಲ್ಲ. ಆ ಕಾರಣಕ್ಕೆ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುವುದು ಸುಲಭವಾಯಿತು. ರಂಗಭೂಮಿಯೇ ನನ್ನ ನಟನೆಯೆಂಬ ಕನಸಿನ ಸೌಧಕ್ಕೆ ಅಡಿಪಾಯ ಎನ್ನುತ್ತಾರೆ ಈ ರಂಗಪ್ರೇಮಿ.

‘ರಶ್‌’ ಎಂಬ ಸಿನಿಮಾದ ಮೂಲಕ ಮೊದಲ ಬಾರಿ ಹಿರಿತೆರೆಗೆ ಕಾಲಿರಿಸಿದ ಹರ್ಷ ಈ ಸಿನಿಮಾದಲ್ಲಿ ಖಳ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ನಿರೀಕ್ಷೆಯಷ್ಟು ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯಲು ವಿಫಲವಾಯಿತು. ಹಾಗಾಗಿ ಪುನಃ ರಂಗಭೂಮಿಯೆಡೆಗೆ ಪಯಣ ಬೆಳೆಸಿದರು.

‘ಹೀಗೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದಾಗಲೇ ಸ್ನೇಹಿತರೊಬ್ಬರು ‘ನೂರೊಂದು ನೆನಪು’ ಎಂಬ ಚಿತ್ರಕ್ಕೆ ಆಡಿಷನ್‌ ನಡೆಯುತ್ತಿದೆ, ನೀನೂ ಭಾಗವಹಿಸು’ ಎಂದು ಸಲಹೆ ನೀಡಿದರು. ಅಲ್ಲಿ ಅವಕಾಶವೂ ದೊರಕಿತು’ ಎಂದು ಹಿರಿತೆರೆ ಪ್ರವೇಶಿಸಿದ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ.

‘ನೂರೊಂದು ನೆನಪು ಚಿತ್ರದಲ್ಲಿ ನನ್ನದು ಫೋರ್‌ ಟ್ವೆಂಟಿ ಹುಡುಗನ ಪಾತ್ರ. ಸ್ನೇಹಿತರಿಗೆ ಕಾಗೆ ಹಾರಿಸ್ಕೊಂಡಿರೋ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ರಂಗಭೂಮಿ ಹಿನ್ನೆಲೆ ಇದ್ದರೂ ಮೊದಲ ದಿನದ ಚಿತ್ರೀಕರಣದ ವೇಳೆ ತುಂಬಾ ನರ್ವಸ್‌ ಆಗಿದ್ದೆ. ಆದರೆ ತುಂಬಾ ದಿನಗಳ ನಂತರ ನನ್ನ ಆಸೆಯಂತೆ ಉತ್ತಮ ಪಾತ್ರದಲ್ಲಿ ನಟಿಸಿರುವ ಬಗ್ಗೆ ಖುಷಿಯಿದೆ’ ಎನ್ನುತ್ತಾರೆ.

ನಟ ವಿಷ್ಣುವರ್ಧನ್‌ ಎಂದರೆ ಇವರಿಗೆ ಅಚ್ಚುಮೆಚ್ಚು. ‘ನಾನು ವಿಷ್ಣುದಾದಾ ಅವರ ಸಿನಿಮಾಗಳನ್ನು ತುಂಬಾ ನೋಡುತ್ತೇನೆ. ಅವರ ನಟನೆಯಿಂದ ಕಲಿಯುವುದು ಬಹಳ ಇದೆ’ ಎನ್ನುತ್ತಾರೆ.

‘ಬೇರೆ ಭಾಷೆಗಳಿಂದ ಖಳನಟರನ್ನು ಕರೆಸಿ ಸಿನಿಮಾ ಮಾಡ್ತಾರೆ. ಆದರೆ ಇಲ್ಲಿ ಅದೆಷ್ಟೋ ನಟರು ಪ್ರತಿಭೆ ಇದ್ದರೂ ಸರಿಯಾದ ಅವಕಾಶವಿಲ್ಲದೆ ಸೊರಗುತ್ತಿದ್ದಾರೆ. ರಂಗಭೂಮಿಯಲ್ಲಿ ಅದ್ಭುತ ಎನ್ನುವಂತಹ ಕಲಾವಿದರಿದ್ದಾರೆ. ಆದರೆ ಅವರಿಗೆ ಅವಕಾಶವಿಲ್ಲ ಎನ್ನುವುದು ಇವರ ಬೇಸರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.