ADVERTISEMENT

ಗಡಿ ಮೀರುವ ಇಂಗಿತದಲ್ಲಿ ವಿದ್ಯಾ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST
-ವಿದ್ಯಾ ಬಾಲನ್‌
-ವಿದ್ಯಾ ಬಾಲನ್‌   

ತಮ್ಮ ಮನೋಜ್ಞ ಅಭಿನಯದ ಮೂಲಕ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಗೊಂಡಿರುವ ನಟಿ ವಿದ್ಯಾ ಬಾಲನ್‌ ಅವರಿಗೆ ಹಿಂದಿ ಚಿತ್ರರಂಗಕ್ಕಷ್ಟೇ ಸೀಮಿತಗೊಳ್ಳಲು ಇಷ್ಟವಿಲ್ಲ. ಇತ್ತೀಚೆಗೆ ಮುಂಬೈನಲ್ಲಿ ಐಎಎನ್‌ಎಸ್‌ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ವಿದ್ಯಾ, ತಮ್ಮ ಗಡಿ ಮೀರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಹಿಂದಿ ಸಿನಿಮಾಗಳಾಚೆ ಅವರ ಗಮನವಿರುವುದು ಮರಾಠಿಯತ್ತ.

‘ನನಗೆ ಮರಾಠಿ ಸಿನಿಮಾದಲ್ಲಿ ಅಭಿನಯಿಸಬೇಕು ಎಂಬ ಆಸೆಯಿದೆ. ನಾನು ಮುಂಬೈ ಮೂಲದವಳು. ಅಲ್ಲಿನ ಸಂಸ್ಕೃತಿಯ ಪರಿಚಯ ನನಗಿದೆ. ಆದ್ದರಿಂದ ನಾನು ಮರಾಠಿಯಲ್ಲಿ ಒಳ್ಳೆಯ ಕಥೆಗಾಗಿ ಎದುರು ನೋಡುತ್ತಿದ್ದೇನೆ. ಕೆಲವು ಅವಕಾಶಗಳು ಬಂದರೂ ಅವು ನನಗೆ ಇಷ್ಟವಾಗಲಿಲ್ಲ’ ಎಂದು ಹೇಳಿಕೊಂಡಿದ್ದಾರೆ.

‘ಏಕ್‌ ಅಲ್‌ಬೇಲಾ’ ಸಿನಿಮಾದ ‘ಶೋಲಾ ಜೋ ಭಡ್‌ ಕೆ’ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಲಯಾಳಿ ಭಾಷೆಯಲ್ಲಿ ಒಂದು ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ನಾನು ಅತಿಯಾಸೆಯ ನಟಿ. ಎಲ್ಲಿ ಒಳ್ಳೆಯ ಅವಕಾಶ ಸಿಕ್ಕರೂ ಒಪ್ಪಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

‘ಏಕ್‌ ಅಲ್‌ಬೇಲಾ’ ಸಿನಿಮಾದ ಕುರಿತು ಮಾತನಾಡಿದ ಅವರು, ‘ಈ ಸಿನಿಮಾದಲ್ಲಿ ನಟಿಸಲು ಅವಕಾಶ ಬಂದಾಗ ನಾನು ನರ್ವಸ್‌ ಆಗಿದ್ದೆ. ನಾನು ಗೀತಾ ಬಾಲಿ ಅವರಂತೆ ಕಾಣುವುದಿಲ್ಲ. ಆದರೆ ಅವರಂತೆಯೇ ಕಾಣಿಸಿಕೊಳ್ಳಲು ಪ್ರಯತ್ನಿಸಿದ್ದೇನೆ. ಅವರ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ ಎಂಬ ನಂಬಿಕೆ ನನಗಿದೆ’ ಎಂದು ಹೇಳಿದ್ದಾರೆ.

ನಟ ಭಗವಾನ್‌ ದಾದಾ ಅವರ ಸಿನಿ ಬದುಕನ್ನು ಆಧರಿಸಿದ ‘ಏಕ್‌ ಅಲ್‌ಬೇಲಾ’ ಚಿತ್ರದಲ್ಲಿ ವಿದ್ಯಾ ಗೀತಾ ಬಾಲಿ ಅವರ ಪಾತ್ರದಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.