ADVERTISEMENT

ಗ್ಯಾಪಲ್ಲೊಂದು ಹೊಸಬರ ಸಿನಿಮಾ!

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಮಮತಾ ರಾವುತ್
ಮಮತಾ ರಾವುತ್   

‘ಗ್ಯಾಪಲ್ಲೊಂದು ಸಿನಿಮಾ’ – ಗಾಂಧಿನಗರಕ್ಕೆ ಚಿರಪರಿಚಿತವಾದ ಮಾತಿದು. ಈ ಗಲ್ಲಿಯಲ್ಲಿ ಯಾರನ್ನು ಮಾತನಾಡಿಸಿದರೂ, ‘ಗ್ಯಾಪಲ್ಲೊಂದು ಸಿನಿಮಾ’ ಮಾಡಿದ್ದೀವಿ ಸರ್ ಎನ್ನುವುದು ಸಾಮಾನ್ಯ. ಇದೀಗ ಹೊಸಬರ ತಂಡವೊಂದು ತಾವು ನಿರ್ಮಿಸಿರುವ ಚಿತ್ರಕ್ಕೆ ‘ಗ್ಯಾಪಲ್ಲೊಂದು ಸಿನಿಮಾ’ ಎಂಬ ಶೀರ್ಷಿಕೆಯನ್ನೇ ಇಟ್ಟಿದೆ. ಆಡಿಯೊ ಸಿ.ಡಿ ಬಿಡುಗಡೆ ಸಂಭ್ರಮದಲ್ಲಿದ್ದ ತಂಡ ಉತ್ಸಾಹವನ್ನೇ ಬಂಡವಾಳವನ್ನಾಗಿ ಮಾಡಿಕೊಂಡಂತಿತ್ತು.

ಶೀರ್ಷಿಕೆಯಿಂದಲೇ ಕುತೂಹಲವನ್ನು ಹುಟ್ಟಿಸಿರುವ ಈ ಚಿತ್ರಕ್ಕೆ ಮಂಜು ಹೆದ್ದೂರ್ ಆ್ಯಕ್ಷನ್–ಕಟ್ ಹೇಳಿದ್ದಾರೆ. ರವಿಚಂದ್ರನ್ ಗರಡಿಯಲ್ಲಿ ಪಳಗಿ, ನಿರ್ದೇಶನದ ಪಾಠಗಳನ್ನು ಕಲಿತವರು ಮಂಜು. ಈ ಮುಂಚೆ ‘ಲೋ ಬಜೆಟ್’ ಎಂಬ ಚಿತ್ರಕ್ಕೆ ಕೈ ಹಾಕಿ ಸುಮ್ಮನಾದ ಅವರು, ಹಳೆಯ ಚಿತ್ರದ ಶೀರ್ಷಿಕೆಯಂತೆ ಕಡಿಮೆ ಬಜೆಟ್‌ನಲ್ಲಿ ಹಳ್ಳಿಯಲ್ಲಿ ತಿರುಗಾಡಿ ‘ಗ್ಯಾಪಲ್ಲೊಂದು ಸಿನಿಮಾ’ ಮಾಡಿದ್ದಾರೆ.

‘ಆರಂಭದಲ್ಲೇ ಅಂತ್ಯ ಕಂಡ ನನ್ನ ಮೊದಲ ಪ್ರಾಜೆಕ್ಟ್ ಮತ್ತು ಇತರ ಕಮಿಟ್‌ಮೆಂಟ್‌ಗಳ ಗ್ಯಾಪ್‌ನಲ್ಲಿ ಮೂಡಿಬಂದ ಚಿತ್ರವಿದು. ನನ್ನ ತಂಡದಲ್ಲಿರುವವರಿಗೂ ಇದು ಗ್ಯಾಪ್‌ನಲ್ಲೊಂದು ಸಿನಿಮಾನೇ! ಕೇವಲ ₹ 60 ಲಕ್ಷ ಬಜೆಟ್‌ನಲ್ಲಿ ನಿರ್ಮಿಸಿರುವ ಚಿತ್ರವಾದ್ದರಿಂದ ಯಾರಿಗೂ ಸಂಭಾವನೆ ಕೊಟ್ಟಿಲ್ಲ. ಕಥೆ ಕೇಳಿ ಉತ್ಸುಕತೆಯಿಂದ ಎಲ್ಲರೂ ಬಂದು ನಟಿಸಿದ್ದಾರೆ. ಹೊಸ ಮುಖಗಳಾದರೂ ಅನುಭವಿಗಳಿಗೂ ಕಮ್ಮಿ ಇಲ್ಲದಂತೆ ಅಭಿನಯಿಸಿದ್ದಾರೆ’ ಎಂದರು ನಿರ್ದೇಶಕ ಮಂಜು.

ADVERTISEMENT

‘ಪಕ್ಕಾ ಹಳ್ಳಿಕಥೆಯ ಈ ಸಿನಿಮಾದಲ್ಲಿ ಹಾಸ್ಯ, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಮಿಳಿತವಾಗಿವೆ’ ಎಂದು ಚಿತ್ರದ ಪ್ರಮುಖಾಂಶಗಳನ್ನು ಹೇಳಿದ ಅವರು, ಕಥೆಯ ಎಳೆ ಬಿಟ್ಟುಕೊಡದೆ ಮಾತು ಮುಗಿಸಿದರು.

ಬೆಳ್ಳಿತೆರೆ ನಾಯಕನಾಗಿ ಶಶಿ ಮೊದಲ ಸಲ ಬಣ್ಣ ಹಚ್ಚಿದ್ದು, ಮಮತಾ ರಾವುತ್ ನಾಯಕಿಯಾಗಿ ಅವರಿಗೆ ಸಾಥ್ ನೀಡಿದ್ದಾರೆ.

‘ಅರ್ಧಕ್ಕೆ ನಿಂತಿದ್ದ ನಿರ್ದೇಶಕರ ಮೊದಲ ಸಿನಿಮಾದ ಆಡಿಷನ್‌ಗೆ ಹೋಗಿದ್ದ ನನಗೆ, ಈ ಸಿನಿಮಾದ ಭಾಗವಾಗುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಹೊಸಬರ ಪ್ರಯತ್ನದ ಮೇಲೆ ನಿಮ್ಮ ಆಶೀರ್ವಾದ ಇರಲಿ’ ಎಂದು ಶಶಿ ಕೋರಿದರು. ಪಾತ್ರಕ್ಕಾಗಿ ಮೈ ಹುರಿಗಟ್ಟಿಸಿಕೊಂಡಿರುವ ಶಶಿ, ಅದರ ಪ್ರಭೆಯಿಂದ ಇನ್ನೂ ಹೊರಬಂದಿಲ್ಲ ಎಂಬುದನ್ನು ಅವರ ದೇಹಸಿರಿ ಒತ್ತಿ ಹೇಳುತ್ತಿತ್ತು.

ಬಳುಕುವ ಮೈಮಾಟದ ಮೂಲಕ ಗಮನ ಸೆಳೆದಿರುವ ಮಮತಾ ರಾವುತ್, ‘ಮೊದಲ ಸಲ ಹಳ್ಳಿ ಹುಡುಗಿಯ ಪಾತ್ರವೊಂದು ಸಿಕ್ಕಿದೆ. ಬಾಯಿಬಡಕಿ ಮಂಗಳಾ ಎಂಬುದು ಪಾತ್ರದ ಹೆಸರು’ ಎಂದರು. ಚಿತ್ರದ ಶೂಟಿಂಗ್ ನಡೆದ ತಿಪಟೂರಿನ ಮಡೇನೂರು ಗ್ರಾಮದ ಸ್ಥಿತಿ ಕಂಡು ಮರುಗಿದ ಮಮತಾ, ಆ ಊರಿನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಇಂಗಿತ ವ್ಯಕ್ತಪಡಿಸಿದರು.

ಎಂ.ಬಿ. ಹಳ್ಳಿಕಟ್ಟಿ ಅವರ ಛಾಯಾಗ್ರಹಣವಿರುವ ಚಿತ್ರಕ್ಕೆ, ಶರವಣ ಆರ್. ಬಂಡವಾಳ ಹಾಕಿದ್ದಾರೆ. ಶ್ರೀಧರ್ ಕಲ್ಯಾಣ್ ಎರಡು ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರೆ, ಗಂಧರ್ವ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.  ‘ಸಿ’ ಮ್ಯೂಸಿಕ್ ಹೊರತಂದಿರುವ ಚಿತ್ರದ ಆಡಿಯೊ ಸಿ.ಡಿ.ಯನ್ನು ನಟಿ ಭಾವನಾ ರಾಮಣ್ಣ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

**

‘ಹಳ್ಳಿಪಂಚಾಯಿತಿ’ಯಲ್ಲಿ ಗೀತಾ

ಜಿ.ಉಮೇಶ್ ನಿರ್ದೇಶನದ ‘ಹಳ್ಳಿ ಪಂಚಾಯಿತಿ’ ಚಿತ್ರದಲ್ಲಿ ಹಿರಿಯ ನಟಿ ಗೀತಾ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಸಂಪೂರ್ಣವಾಗಿ ಗ್ರಾಮೀಣ ಪರಿಸರದ ಕಥೆ ಹೊಂದಿದೆ. ಹಳ್ಳಿ ಪಂಚಾಯಿತಿ, ಅಲ್ಲಿನ ರಾಜಕೀಯ ಈ ಚಿತ್ರದ ಕಥಾವಿಶೇಷ. ಚಿತ್ರವನ್ನು ಮಂಡ್ಯ ಸುತ್ತಮುತ್ತ ಚಿತ್ರೀಕರಿಸಲಾಗಿದ್ದು, ಇದೀಗ ಬಿಡುಗಡೆಗೆ ಸಿದ್ದವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ‘ತಿಥಿ’ ಚಿತ್ರದಲ್ಲಿ ನಟಿಸಿದ್ದ ಗಡ್ಡಪ್ಪ ಹಾಗೂ ಸೆಂಚುರಿಗೌಡ ಇದರಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಎ.ಸಿ. ಮಹೇಂದ್ರನ್ ಛಾಯಾಗ್ರಹಣ, ಹರಿಕಾವ್ಯ ಅವರ ಸಂಗೀತ ಈ ಚಿತ್ರಕ್ಕಿದೆ.

**

ಐಫೋನ್‌ನಲ್ಲಿ ‘ಈ ಪಟ್ಟಣ..’!

ರವಿ ಸುಬ್ಬರಾವ್

ಕ್ರಿಕೆಟ್ ಬೆಟ್ಟಿಂಗ್ ಮಾಫಿಯಾವನ್ನೇ ಕೇಂದ್ರವಾಗಿಟ್ಟುಕೊಂಡು, ಹೆಣೆದ ಸಿನಿಮಾ ‘ಈ ಪಟ್ಟಣಕ್ಕೆ ಏನಾಗಿದೆ’. 

ಈ ಸಿನಿಮಾದ ನಿರ್ದೇಶಕ ಮತ್ತು ನಾಯಕ ರವಿ ಸುಬ್ಬರಾವ್.  ಸಿನಿಮಾದ ಅನೇಕ ದೃಶ್ಯಗಳು ಕ್ರಿಕೆಟ್ ಬೆಟ್ಟಿಂಗ್ ಮಾಫಿಯಾದ ಅಡ್ಡಗಳಲ್ಲೇ ನೈಜವಾಗಿ ಚಿತ್ರೀಕರಿಸಿಕೊಳ್ಳಲು ಯೋಜಿಸಲಾಗಿದೆ.

ಅಷ್ಟೇ ಅಲ್ಲ, ಇದೇ ಮೊದಲ ಬಾರಿಗೆ ಆ್ಯಪಲ್ ಐಫೋನ್ 7 ಪ್ಲಸ್‌ ಬಳಸಿ ಚಿತ್ರೀಕರಿಸಲಾಗುತ್ತಿದೆ ಎನ್ನುವುದೂ ಇದರ ವಿಶೇಷತೆಗಳಲ್ಲಿ ಒಂದು. ಈ ಹಿಂದೆ ಐಫೋನ್ 5ಎಸ್ ಬಳಸಿ ಹಾಲಿವುಡ್‌ಲ್ಲಿ ಟಾಂಜರಿನ್ ಎಂಬ ಸಿನಿಮಾ ನಿರ್ಮಾಣಗೊಂಡಿತ್ತು.

ಈ ಚಿತ್ರಕ್ಕೆ ಪ್ರಮೋದ್  ಛಾಯಾಗ್ರಹಣ ಮಾಡುತ್ತಿದ್ದಾರೆ.

‘ನಾವು ಯಾವ ಕ್ಯಾಮೆರಾದಲ್ಲಿ ಶೂಟ್ ಮಾಡುತ್ತೀವಿ ಎನ್ನುವುದಕ್ಕಿಂತ ಎಂಥಾ ಕಂಟೆಂಟ್ ಕೊಡ್ತೀವಿ ಅನ್ನೋದು ಮುಖ್ಯ. ಕಥೆಯಲ್ಲಿ ಶಕ್ತಿ ಇದ್ದರೆ ಸಿನಿಮಾ ಪ್ರೇಕ್ಷಕರನ್ನು ಸೆಳೆದೇ ಸೆಳೆಯುತ್ತದೆ. ಇಷ್ಟಕ್ಕೂ ಇದು ಡಿಜಿಟಲ್ ಯುಗ. 

ಹೀಗಿರುವಾಗ ನಿರ್ದೇಶಕ ರವಿ ಸುಬ್ಬರಾವ್ ಅವರು ಆಯ್ಕೆ ಮಾಡಿಕೊಂಡಿರುವ ಐಫೋನ್ ಟೆಕ್ನಾಲಜಿ ನಿಜಕ್ಕೂ ಸಹಕಾರಿಯಾಗುತ್ತದೆ. ಜೊತೆಗೆ ಗುಣಮಟ್ಟದಲ್ಲಿ ಕೂಡಾ ಯಾವ ಕೊರತೆಯೂ ಆಗುವುದಿಲ್ಲ’ ಎನ್ನುವುದು  ಸಂಕಲನಕಾರ ಶ್ರೀ ಅವರ ಅಭಿಪ್ರಾಯ.

ಮೂವರು ಹುಡುಗರು ಮತ್ತು ಇಬ್ಬರು ಹುಡುಗಿಯರನ್ನು ಪ್ರಮುಖವಾಗಿ ಬಳಸಿಕೊಂಡು ನಿರ್ದೇಶಕರು ಕಾಮಿಡಿ ಮತ್ತು ಥ್ರಿಲ್ಲರ್ ಕಥಾಹಂದರವನ್ನು ರೂಪಿಸಿದ್ದಾರೆ.

ನಾಯಕಿಯರಾಗಿ ಡಿಂಪಿ ಫಾದ್ಯ ಖಾನ್ ಮತ್ತು ಸಂಧ್ಯಾ ವೇಣು ಪಾತ್ರ ನಿರ್ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.