ADVERTISEMENT

ಚಿತ್ರಮುಖಿ ಲೇಖಕಿ

ಕಲಾಪ

ಅನಿತಾ ಎಚ್.
Published 7 ಜುಲೈ 2015, 19:51 IST
Last Updated 7 ಜುಲೈ 2015, 19:51 IST

ಒಳಾಂಗಣ ವಿನ್ಯಾಸಕಿ, ಲೇಖಕಿಯೂ ಆಗಿರುವ ಕಲಾವಿದೆ ಅಂಜನಾ ಚಂದಕ್ ಅವರ ಹದಿನೆಂಟಕ್ಕೂ ಹೆಚ್ಚು ಕಲಾಕೃತಿಗಳು ‘ನಿಶ್ಶಬ್ದದ ಸೊಬಗು’ ಶೀರ್ಷಿಕೆಯಡಿ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಜುಲೈ 8ರಿಂದ 12ರವರೆಗೆ ಪ್ರದರ್ಶನಗೊಳ್ಳಲಿವೆ.

ವೃತ್ತಿಯಿಂದ ಒಳಾಂಗಣ ವಿನ್ಯಾಸಕಿ. ಚಿತ್ರಕಲೆ ಬಗೆಗಿನ ಮೋಹ ಸೆಳೆದಿದ್ದು ಆಕಸ್ಮಿಕ. ‘ಟು ಟೇಲ್ಸ್’ ಪುಸ್ತಕದ ಮೂಲಕ ಲೇಖಕಿಯಾಗಿಯೂ ಗುರುತಿಸಿಕೊಂಡಿರುವ ಅಪರೂಪದ ಕಲಾವಿದೆ ಅಂಜನಾ ಚಂದಕ್‌.ಮೂಲತಃ ಮಹಾರಾಷ್ಟ್ರದ ನಾಗಪುರದವರಾದ ಅಂಜನಾ, ವಿವಾಹದ ನಂತರ ಬೆಂಗಳೂರಿನ ನಂಟು ಬೆಳೆಸಿಕೊಂಡವರು. ಹತ್ತಾರು ಅಭಿರುಚಿಗಳ ನಡುವೆಯೂ ಕಲಾರಾಧನೆಗೆ ಮೊದಲ ಆದ್ಯತೆ ಎನ್ನುವ ಅವರು, ಕಳೆದ ಐದು ವರ್ಷಗಳಿಂದ ವೃತ್ತಿಪರ ಚಿತ್ರಕಲಾವಿದೆಯಾಗಿಯೇ ಗುರುತಿಸಿಕೊಂಡಿದ್ದಾರೆ.

ಬಿ–ಟೆಕ್‌ ಪದವೀಧರೆಯಾಗಿರುವ ಅವರು  ಹದಿನೈದು ವರ್ಷಗಳಿಂದ ಮನೆ ಅಥವಾ ಕಚೇರಿಗಳ ಒಳಾಂಗಣ ವಿನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹವ್ಯಾಸಕ್ಕಾಗಿ ಆಕ್ರಿಲಿಕ್‌ ಕ್ಯಾನ್‌ವಾಸ್‌ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದ ಅವರು, ಈಗ ವೃತ್ತಿಪರ ಚಿತ್ರಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.

ಕಬೀರನ ಆರಾಧಕಿ
ಅಧ್ಯಾತ್ಮದ ಬಗ್ಗೆ ಹೆಚ್ಚು ಒಲವು ಇಟ್ಟುಕೊಂಡಿರುವ ಅಂಜನಾ ಅವರಿಗೆ ಕವಿ ಕಬೀರನ ದೋಹಾಗಳೆಂದರೆ ಪ್ರೀತಿ. ‘ನನ್ನ ಚಿತ್ರಕಲೆಗೆ ಕಬೀರರ ದೋಹಾಗಳೇ ಪ್ರೇರಣೆ’ ಎನ್ನುವ ಅವರು, 2013ರಲ್ಲಿ ‘ಅಂತರಾತ್ಮದ ಒಳದನಿ’ ಶೀರ್ಷಿಕೆಯಡಿ ಚಿತ್ರ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.
‘ಪ್ರತಿಯೊಬ್ಬ ಮನುಷ್ಯನಿಗೂ ಒಳಧ್ವನಿ ಇರುತ್ತದೆ. ಅದಕ್ಕೆ ವಿರುದ್ಧವಾಗಿ ಯಾರೂ ನಡೆದುಕೊಳ್ಳಲು ಸಾಧ್ಯವಿಲ್ಲ. ಆ ಒಳಧ್ವನಿಯೇ ಮನುಷ್ಯನನ್ನು ಸತ್ಯದ ದಾರಿಯಲ್ಲಿ ನಡೆಸುತ್ತದೆ’ ಎನ್ನುವ ಅಂಜನಾ, ವ್ಯಕ್ತಿಯ ಆಂತರಿಕ ಬೆಳವಣಿಗೆ ವಿಷಯವಾಗಿ ಇಂಗ್ಲಿಷ್ ಮಾಸಿಕ ಪತ್ರಿಕೆಯೊಂದಕ್ಕೆ ಹಲವು ಲೇಖನಗಳನ್ನೂ ಬರೆದಿದ್ದಾರೆ. ‌

ಚಿತ್ರಕಲೆ ಅಲ್ಲದೆ ಸಂಗೀತ ಹಾಗೂ ನೃತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು ‘ಕಥಕ್‌’ನಲ್ಲಿ ಜೂನಿಯರ್‌ ಪರೀಕ್ಷೆ ಪಾಸು ಮಾಡಿದ್ದು, ಉನ್ನತ ಅಭ್ಯಾಸದ ದಿಕ್ಕಿನಲ್ಲಿ ಸಾಗಿದ್ದಾರೆ.‘ಜೀವನದ ಪಯಣದಲ್ಲಿ ಎದುರಾಗುವ ಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು. ಆ ಅನುಭವಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ. ನನಗೆ ಸಂಗೀತ, ನೃತ್ಯ, ಚಿತ್ರಕಲೆಯಲ್ಲಿ ಆಸಕ್ತಿ. ಅದರಿಂದ ನೆಮ್ಮದಿಯೂ ಸಿಕ್ಕಿದೆ. ಇದಕ್ಕೆ ಕುಟುಂಬ ಸದಸ್ಯರಿಂದಲೂ ಬೆಂಬಲವಿದೆ’ ಎನ್ನುತ್ತಾರೆ ಅಂಜನಾ.ಜುಲೈ 8 ರಂದು ಸಂಜೆ 7ಕ್ಕೆ ಚಿತ್ರಕಲಾ ಪ್ರದರ್ಶನದ ಉದ್ಘಾಟನೆ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 7ರವರೆಗೆ ಅವರ ಚಿತ್ರಕಲೆಗಳು ಸಾರ್ವಜನಿಕರ ವೀಕ್ಷಣೆಗೆ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.