ADVERTISEMENT

‘ಝಫ್ರಾನಿ’ ಬಿರಿಯಾನಿ ಹಬ್ಬ

ಹೇಮಾ ವೆಂಕಟ್
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST
‘ಝಫ್ರಾನಿ’ ಬಿರಿಯಾನಿ ಹಬ್ಬ
‘ಝಫ್ರಾನಿ’ ಬಿರಿಯಾನಿ ಹಬ್ಬ   

ಗರದಲ್ಲಿ ಬಿರಿಯಾನಿಪ್ರಿಯರ ಸಂಖ್ಯೆ  ಹೆಚ್ಚಾಗಿದೆ. ಅದಕ್ಕೆ ಅನುಗುಣವಾಗಿ ವೈವಿಧ್ಯಮಯ ಬಿರಿಯಾನಿಗಳನ್ನು  ಉಣಬಡಿಸುವ ರೆಸ್ಟೋರೆಂಟ್‌ಗಳೂ ಹೆಚ್ಚುತ್ತಿವೆ.

ಸಾಂಪ್ರದಾಯಿಕವಾಗಿ ಸಿದ್ಧಪಡಿಸುವ ಬಿರಿಯಾನಿಗೆ ಬಳಸುವ ಅಕ್ಕಿ, ಸಾಂಬಾರ ಪದಾರ್ಥಗಳು, ಕೇಸರಿ, ಮಾಂಸ, ತಯಾರಿಸುವ ವಿಧಾನ, ಎಲ್ಲವೂ ಭಿನ್ನ.
ಪಾರಂಪರಿಕ ವಿಧಾನದಲ್ಲಿ ಬಿರಿಯಾನಿ ತಯಾರಿಸಿ ಅದೇ ರುಚಿ, ಪರಿಮಳ, ಸ್ವಾದವನ್ನು ನಗರದ ಆಹಾರಪ್ರಿಯರಿಗೆ ಬಡಿಸುತ್ತಿರುವ ಹೋಟೆಲ್ ‘ಪ್ಯಾರಡೈಸ್’. 

1953ರಲ್ಲಿ ಹೈದರಾಬಾದಿನಲ್ಲಿ ಚಿಕ್ಕ ಕೆಫೆಯಲ್ಲಿ ಆರಂಭವಾದ ಪ್ಯಾರಡೈಸ್‌ ಈಗ ದೇಶದ ನಾಲ್ಕು ನಗರಗಳಲ್ಲಿ ತನ್ನ ಪಾರುಪತ್ಯ ಮೆರೆದಿದೆ. ಬೆಂಗಳೂರಿನಲ್ಲಿ  2015ರಲ್ಲಿ ಆರಂಭವಾದ ಪ್ಯಾರಡೈಸ್‌ನ ಆರು ಶಾಖೆಗಳು ವೈಟ್‌ಫೀಲ್ಡ್, ಕೋರಮಂಗಲ, ಇಂದಿರಾನಗರ, ನ್ಯೂಬಿಎಲ್‌ ರಸ್ತೆ, ಜೆ.ಪಿನಗರ, ಎಲೆಕ್ಟ್ರಾನಿಕ್‌ ಸಿಟಿಗಳಲ್ಲಿ ಇವೆ.

ಝಫ್ರಾನಿ ಬಿರಿಯಾನಿ ಹಬ್ಬ
ನಗರದಲ್ಲಿರುವ ಎಲ್ಲ ಪ್ಯಾರಡೈಸ್‌ ಶಾಖೆಗಳಲ್ಲಿ  ‘ಝಫ್ರಾನಿ ಬಿರಿಯಾನಿ’ ಹಬ್ಬ ಆರಂಭವಾಗಿದೆ. ಈ ಹಬ್ಬ ಮಾರ್ಚ್‌ 31ರವರೆಗೆ ನಡೆಯಲಿದೆ. ಮೊಗಲ್‌ ನವಾಬರು ತಮ್ಮ ಅತಿಥಿಗಳಿಗೆಂದೇ ತಯಾರಿಸುತ್ತಿದ್ದ  ಝಫ್ರಾನಿ ಬಿರಿಯಾನಿಯನ್ನು ಅದೇ ರುಚಿಯೊಂದಿಗೆ ನಗರದ ಬಿರಿಯಾನಿ ಪ್ರಿಯರಿಗೆ  ಉಣಬಡಿಸುವ ಉಸ್ತುವಾರಿ ವಹಿಸಿರುವವರು ಪ್ಯಾರಡೈಸ್‌ ಸರಣಿಗಳ ಕಾರ್ಪೊರೇಟ್‌ ಬಾಣಸಿಗ  ವಿಜಯ್‌ ಆನಂದ್‌ ಬಕ್ಷಿ.

‘ಬಿರಿಯಾನಿ ಹಬ್ಬ ಮಾಡಬೇಕು. ಈ ಬಾರಿ ಏನಾದರೂ ಪ್ರಯೋಗ ಮಾಡಬೇಕು ಎಂದುಕೊಂಡು ಯೋಚಿಸಿದಾಗ ಝಫ್ರಾನಿ ಬಿರಿಯಾನಿ ಮಾಡುವ ಬಗ್ಗೆ ನಾವೆಲ್ಲ ತೀರ್ಮಾನಿಸಿದೆವು. ಇದಕ್ಕಾಗಿ ಆರು ತಿಂಗಳು ತಯಾರಿ ನಡೆಸಿದ್ದೇವೆ. ನವಾಬರ ಕಾಲದಲ್ಲಿ ತಯಾರಿಸುತ್ತಿದ್ದ  ಝಫ್ರಾನಿಯ ರುಚಿಯನ್ನು ಹಾಗೇ ಉಳಿಸಿಕೊಂಡು ರೆಸಿಪಿ ಸಿದ್ಧಪಡಿಸಲಾಗಿದೆ’ ಎಂದು ಬಕ್ಷಿ ವಿವರಿಸಿದರು.

ಭಿನ್ನ ರುಚಿ
ಝಫ್ರಾನಿ ಬಿರಿಯಾನಿ ರುಚಿ ನಿಜಕ್ಕೂ ಭಿನ್ನ. ಹೈದರಾಬಾದ್ ಬಿರಿಯಾನಿಯನ್ನು ಹೈದರಾಬಾದಿನ ರೆಸ್ಟೊರೆಂಟ್‌ಗಳಲ್ಲಿಯೇ ತಿನ್ನಬೇಕು.  ಹಾಗೆಯೇ ನವಾಬರ ಕಾಲದ ಝಫ್ರಾನಿ ಬಿರಿಯಾನಿಯನ್ನು ಪ್ಯಾರಡೇಸ್‌ನಲ್ಲೇ ತಿನ್ನಬೇಕು.

ಬಿರಿಯಾನಿ ಬಟ್ಟಲ ಮುಂದೆ ಕೂತರೆ ಸಾಕು ಕೇಸರಿಯ ಘಮ ಮೊದಲು ಮೂಗಿಗೆ ಬಡಿಯುತ್ತದೆ.  ಮಲ್ಲಿಗೆಯಂತೆ ಬಿಡಿಬಿಡಿಯಾಗಿರುವ ಬಾಸ್ಮತಿ ಅನ್ನ, ಮಸಾಲೆಯ ಜೊತೆ ಹದವಾಗಿ ಬೆರೆತು ಮೃದುವಾದ ಮಾಂಸ, ತಾಜಾ ಸಾಂಬಾರದ ಸ್ವಾದ ಬಿರಿಯಾನಿ ಪ್ರಿಯರನ್ನು ಅದ್ದೂರಿಯಾಗಿಯೇ ಸ್ವಾಗತಿಸುತ್ತದೆ.
ತಯಾರಿ ವಿಧಾನವೇ ಭಿನ್ನ: ಝಫ್ರಾನಿ ಬಿರಿಯಾನಿ ಮಾಡುವ ವಿಧಾನವೇ ಅದರ ರುಚಿಯ ಗುಟ್ಟು ಎಂದು ಹೇಳುವ ಬಾಣಸಿಗ ವಿಜಯ್‌ ಆನಂದ್‌ ಬಕ್ಷಿ, ಬಿರಿಯಾನಿ ರೆಸಿಪಿಯ ಗುಟ್ಟು ಬಿಟ್ಟುಕೊಡದಿದ್ದರೂ ತಯಾರಿಸುವ ವಿಧಾನವನ್ನು ವಿವರಿಸಿದರು.

ಬಿರಿಯಾನಿಗೆ ಬಳಸುವ ಮಾಂಸವನ್ನು  ಶುಚಿ ಮಾಡಿ ಅದಕ್ಕೆ ಎಲ್ಲ ಮಸಾಲೆ ಪದಾರ್ಥಗಳನ್ನು ಬೆರೆಸಿ ಎಂಟು ಗಂಟೆಗಳ ಕಾಲ  ಇಡಲಾಗುತ್ತದೆ.  ನಂತರ   ಪಾತ್ರೆಯಲ್ಲಿ ಒಂದು ಪದರ ನೆನೆಸಿಟ್ಟ ಮಾಂಸ ಹಾಕಿ, ಅದರ ಮೇಲೆ ತೊಳೆದ ಬಿರಿಯಾನಿ ಅಕ್ಕಿ ಹರಡಲಾಗುತ್ತದೆ, ಇದೇ ರೀತಿ ನಾಲ್ಕು ಪದರಗಳಲ್ಲಿ ಮಾಂಸ ಮತ್ತು ಅಕ್ಕಿಯನ್ನು ಹರಡಲಾಗುತ್ತದೆ. ನಂತರ ಹಾಲು ಮತ್ತು  ಕೇಸರಿಯ ನೀರನ್ನು ಸುರಿದು ಪಾತ್ರೆಯ ಬಾಯಿಯ ಸುತ್ತ ಬಟ್ಟೆ ಸುತ್ತಿ, ಆವಿ ಹೊರ ಹೋಗದಂತೆ ಸಮತಟ್ಟಾದ ಪ್ಲೇಟ್‌ ಮುಚ್ಚಿ ಸೀಲ್‌ ಮಾಡಲಾಗುತ್ತದೆ. ಈ ಪ್ಲೇಟಿನ ಮೇಲೆ ಕೆಂಡ ಹರಡಿ ಒಂದು ಗಂಟೆ ಬೇಯಿಸಲಾಗುತ್ತದೆ.

‘ಪಾತ್ರೆಯ ಕೆಳಗೆ ಮತ್ತು ಮೇಲ್ಭಾಗದಲ್ಲಿ ಕೆಂಡ ಹಾಕುವುದರಿಂದ ಮಾಂಸ ಮತ್ತು ಅಕ್ಕಿ ಹದವಾಗಿ ಬೇಯುವುದಲ್ಲದೇ ಮಸಾಲೆಯ ಫ್ಲೇವರ್  ಉಳಿಯುತ್ತದೆ. ಇದು ನವಾಬರು ಅನುಸರಿಸುತ್ತಿದ್ದ ವಿಧಾನ. ಪಾರಂಪರಿಕ ರುಚಿಯನ್ನು ಹಾಗೆಯೇ ಉಳಿಸುವ ಉದ್ದೇಶದಿಂದ ಅದೇ ಮಾದರಿಯಲ್ಲಿ ಬಿರಿಯಾನಿ ತಯಾರಿಸುತ್ತಿದ್ದೇವೆ’ ಎಂದು  ಬಕ್ಷಿ ಮಾಹಿತಿ ನೀಡಿದರು.

‘ಬಿರಿಯಾನಿ ತಯಾರಿಕೆಗೆ ಉತ್ತಮ ಗುಣಮಟ್ಟದ ಅಕ್ಕಿ, ಎಳೆ ಕುರಿಯ ಮಾಂಸ, ಉತ್ತಮ ಕೋಳಿಯ ಮಾಂಸ ಬಳಸುತ್ತೇವೆ. ತಾಜಾ ಸಾಂಬಾರ (ಲವಂಗ, ಏಲಕ್ಕಿ, ದಾಲ್ಚಿನ್ನಿ, ದನಿಯಾ, ಜೀರಿಗೆ, ಕಾಳು ಮೆಣಸು) ಪದಾರ್ಥಗಳನ್ನು, ಕೇಸರಿಯನ್ನು ಅಧಿಕೃತ ಪೂರೈಕೆದಾರರಿಂದ ಕೊಳ್ಳುತ್ತೇವೆ’ ಎನ್ನುತ್ತಾರೆ. ಹಾಲಿನಿಂದ ಬಿರಿಯಾನಿ ತಯಾರಿಸುವುದು  ಝಫ್ರಾನಿಯ ವಿಶೇಷ.

ಝಫ್ರಾನಿ ಬಿರಿಯಾನಿ ಹಬ್ಬ
ರೆಸ್ಟೊರೆಂಟ್‌: ಪ್ಯಾರಡೈಸ್‌ ರೆಸ್ಟೊರೆಂಟ್‌
ಚಿಕನ್‌ ಬಿರಿಯಾನಿ: ₹180
ಮಟನ್‌ ಬಿರಿಯಾನಿ: ₹195
ಪ್ರಮಾಣ: 450 ಗ್ರಾಂ
ಎಲ್ಲೆಲ್ಲಿ: ವೈಟ್‌ಫೀಲ್ಡ್, ಕೋರಮಂಗಲ, ಇಂದಿರಾನಗರ, ನ್ಯೂಬಿಎಲ್‌ ರಸ್ತೆ, ಜೆ.ಪಿನಗರ, ಎಲೆಕ್ಟ್ರಾನಿಕ್‌ ಸಿಟಿ.
ಕೊನೆಯ ದಿನ: ಮಾರ್ಚ್‌ 31
ಮಾಹಿತಿಗೆ: 080 68681234

***

ADVERTISEMENT

ಇಲ್ಲಿ ಗುಣಮಟ್ಟದ  ಮಸಾಲೆ ಪದಾರ್ಥಗಳನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಎಣ್ಣೆಸಹಿತ ಸಾಂಬಾರ ಪದಾರ್ಥ ಬಳಸುವುದರಿಂದ ಆಹಾರದ ರುಚಿ ಹೆಚ್ಚುತ್ತದೆ
–ವಿಜಯ್‌ ಆನಂದ ಬಕ್ಷಿ, ಬಾಣಸಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.