ADVERTISEMENT

ಝೈರಾಗೆ ‘ದಂಗಲ್‌’ ಪಾಠ

ಪಂಚರಂಗಿ

ಮಂಜುನಾಥ ರಾಠೋಡ
Published 20 ಜನವರಿ 2017, 19:30 IST
Last Updated 20 ಜನವರಿ 2017, 19:30 IST
ಝೈರಾಗೆ ‘ದಂಗಲ್‌’ ಪಾಠ
ಝೈರಾಗೆ ‘ದಂಗಲ್‌’ ಪಾಠ   
‘ದಂಗಲ್’ ಚಿತ್ರದಲ್ಲಿ ಅಖಾಡಕ್ಕಿಳಿದು ಹುಡುಗರೊಂದಿಗೆ ಕುಸ್ತಿ ಮಾಡಿ ಜಯಿಸುವ ಗೀತಾ ಪೋಗಟ್‌ ಪಾತ್ರಧಾರಿ ಝೈರಾ ವಾಸಿಮ್, ಆ ಪಾತ್ರ ಗಿಟ್ಟಿಸಿಕೊಳ್ಳಲು 19 ಸಾವಿರ ಮಂದಿ ಬಾಲಕಿಯರೊಂದಿಗೆ ಸೆಣೆಸಿದ್ದಳು.
 
ದಂಗಲ್‌ನ  ಗೀತಾ ಪೋಗಟ್‌ ಪಾತ್ರಕ್ಕೆ ಬರೋಬ್ಬರಿ 19 ಸಾವಿರ ಹುಡುಗಿಯರ ಆಡಿಷನ್ ಮಾಡಲಾಗಿತ್ತು, ಆದರೆ ಪಾತ್ರಕ್ಕೆ ಆಯ್ಕೆಯಾಗಿದ್ದು ಕಾಶ್ಮೀರದ ಝೈರಾ ವಾಸಿಮ್. ಝೈರಾಳ ಪ್ರತಿಭೆ, ಸಮರ್ಪಣಾ ಭಾವವೇ ಅವರಿಗೆ ಗೀತಾ ಪೋಗಟ್‌ ಪಾತ್ರ ದೊರಕುವಂತೆ ಮಾಡಿದ್ದು.
 
ಝೈರಾ ತಂದೆ ಬ್ಯಾಂಕರ್‌, ತಾಯಿ ಶಿಕ್ಷಕಿ. ಸಾಮಾನ್ಯ ಕುಟುಂಬ ಹಿನ್ನೆಲೆಹೊಂದಿರುವ ಝೈರಾಗೆ ನಟನೆ ಅಚ್ಚು ಮೆಚ್ಚಂತೆ, ಆದರೆ ಇದು ಹೆತ್ತವರಿಗೆ ಇಷ್ಟವಿರಲಿಲ್ಲ. ಆಗ ಝೈರಾಳ ಸಹಾಯಕ್ಕೆ ಬಂದವರು ಅವರ ಚಿಕ್ಕಮ್ಮ. ಚಿಕ್ಕಮ್ಮನ ಒತ್ತಾಸೆಯಿಂದಲೇ ದಂಗಲ್ ಆಡಿಷನ್‌ನಲ್ಲಿ ಭಾಗವಹಿಸಿದ ಝೈರಾ ಈಗ ದೇಶದ ಭರವಸೆಯ ನಟಿಯಲ್ಲೊಬ್ಬಳು.
 
ಝೈರಾಗೆ ದಂಗಲ್ ಮೊದಲ ಚಿತ್ರವಾದರೂ ಕ್ಯಾಮೆರಾ ಎದುರಿಸಿದ್ದು ಮೊದಲೇನಲ್ಲ. ಈ ಮುಂಚೆಯೇ ಅವರು ಟಾಟಾ ಸ್ಕೈ ಮತ್ತು ನೋಕಿಯಾ ಲುಮಿಯಾ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಳು.
 
ಕಾಶ್ಮೀರದ ಮಿಷನರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ಝೈರಾಗೆ ‘ದಂಗಲ್‌’ ಸಾಕಷ್ಟು ಸವಿನೆನಪುಗಳನ್ನು ನೀಡುವುದರ ಜತೆಗೆ ಗುಣಾತ್ಮಕ ಪಾಠಗಳನ್ನು ಕಲಿಸಿದೆಯಂತೆ.
 
ಚಿತ್ರಕ್ಕಾಗಿ ಕೂದಲು ಕತ್ತರಿಸುವಾಗ ನಿಜವಾಗಿಯೂ ಅತ್ತಿದ್ದ ಝೈರಾಗೆ ಅಮೀರ್‌ ಅವರು ತಮ್ಮ ಪಾತ್ರಕ್ಕೆ ಪಡುವ ಶ್ರಮದ ಮುಂದೆ ತಮ್ಮ ಶ್ರಮ ಕಡಿಮೆಯೇ ಎಂದು ಆಮೇಲೆ ಅನಿಸಿತಂತೆ.
 
ಮೊದಲ ಚಿತ್ರದಲ್ಲಿಯೇ ಭಾರಿ ಜನಪ್ರಿಯತೆ ಮತ್ತು ಸಿನಿ ವಿಮರ್ಶಕರ ಮೆಚ್ಚುಗೆ ಗಳಿಸಿರುವ ಝೈರಾ ಈಗಾಗಲೇ ತಮ್ಮ ಎರಡನೇ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾಳೆ. 
 
ಎರಡನೇ ಚಿತ್ರದಲ್ಲಿಯೂ ಅಮೀರ್‌ ಜೊತೆಯಾಗಿ ನಟಿಸುವ ಭಾಗ್ಯ ಝೈರಾ ಅವರದ್ದು, ಅಮೀರ್‌ ನಟಿಸಿ ನಿರ್ಮಿಸುತ್ತಿರುವ ‘ಸೀಕ್ರೆಟ್ ಸೂಪರ್‌ಸ್ಟಾರ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಈ ಚಿತ್ರ ಆಗಸ್ಟ್‌ 7ರಂದು ತೆರೆಕಾಣಲಿದೆ.
 
ವಿವಾದ
ದಂಗಲ್‌ನಿಂದಾಗಿ ಕಾಶ್ಮೀರದ ಮನೆ ಮನೆಮಾತಾಗಿರುವ ಝೈರಾಗೆ ಪ್ರತ್ಯೇಕವಾದಿಗಳಿಂದ ವಿರೋಧವೂ ಎದುರಾಗಿದೆ.
 
ಇತ್ತೀಚೆಗೆ ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿಯಾಗಿದ್ದ ಝೈರಾ ತನ್ನ ಬಾಲಿವುಡ್‌ ಪಯಣ ಮತ್ತು ದಂಗಲ್ ಚಿತ್ರೀಕರಣ ನೆನಪುಗಳನ್ನು ಹಂಚಿಕೊಂಡಿದ್ದಳು. ಭೇಟಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಳು.
 
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರತ್ಯೇಕತಾವಾದಿಗಳು  ‘ಇಬ್ಬರೂ ಭಾರತದ ಏಜೆಂಟ್‌ಗಳು’ ಎಂಬ ಸಂದೇಶ ಪ್ರಕಟಿಸಿದ್ದರು. ಇದರಿಂದ ಮನನೊಂದ ಝೈರಾ ಸಾಮಾಜಿಕ ಜಾಲತಾಣದಲಿ ಬಹಿರಂಗ ಪತ್ರವೊಂದನ್ನು ಬರೆದು ನನ್ನನ್ನು ಯಾರೂ ಆದರ್ಶವಾಗಿ ಪರಿಗಣಿಸಬೇಡಿ, ನನ್ನ ದಾರಿಯಲ್ಲಿ ಯಾರೂ ನಡೆಯಬೇಡಿ ಎಂದು ನುಡಿದು ಫೋಟೊಗಳನ್ನು ಡಿಲಿಟ್‌ ಮಾಡಿದ್ದಳು.
 
ಅಮೀರ್‌  ಬೆಂಬಲ
ಝೈರಾಳ ಚಿತ್ರರಂಗದ ಗುರುವೇ ಆಗಿರುವ ಅಮೀರ್‌ ಖಾನ್‌ ಝೈರಾಗೆ ಬೆಂಬಲ ಸೂಚಿಸಿದ್ದಾರೆ. ‘ಈಗ ಬೆಳೆಯುತ್ತಿರುವ ಪ್ರತಿಭಾನ್ವಿತ ನಟಿಯನ್ನು ತನ್ನ ಪಾಡಿಗೆ ಇರಲು ಬಿಡಿ’ ಎಂದಿದ್ದಾರೆ.
 
ಝೈರಾಗೆ ಸಂದೇಶವನ್ನೂ ರವಾನಿಸಿರುವ ಅಮೀರ್‌ ‘ಝೈರಾ ನಾವೆಲ್ಲ ನಿನ್ನ ಜತೆಗಿದ್ದೇವೆ. ತೀಕ್ಷ್ಮ ಬುದ್ಧಿಮತ್ತೆಯ, ಯುವ ಪ್ರತಿಭಾನ್ವಿತ, ಕಠಿಣ ಪರಿಶ್ರಮಪಡುವ, ಧೈರ್ಯವಂತೆಯಾದ ನಿನ್ನಂಥ ಮಕ್ಕಳು ಭಾರತ ಮಾತ್ರವಲ್ಲ ಜಗತ್ತಿನ ಎಲ್ಲ ಮಕ್ಕಳಿಗೂ ಆದರ್ಶ’ ಎಂದಿದ್ದಾರೆ.
 
ಝೈರಾ ‘ದಂಗಲ್‌’ ಸಿನಿಮಾದಲ್ಲಿ ಪ್ರದರ್ಶಿಸಿದ ಧೈರ್ಯವನ್ನೇ ನಿಜಜೀವನದಲ್ಲಿ ಪ್ರದರ್ಶಿಸಿ ವಿವಾದಗಳಿಗೆ ಗಮನಕೊಡದೆ ತಮ್ಮ ಸಿನಿಪಯಣವನ್ನು ಮುಂದುವರಿಸಲಿ ಎಂಬುದೇ ಸಿನಿ ಪ್ರೇಮಿಗಳ ಬಯಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.