ADVERTISEMENT

‘ತ್ರಿಧಾರಾ’ ಪ್ರದರ್ಶನ

ಕಲಾಪ

ರಶ್ಮಿ ಕಾಸರಗೋಡು
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST
ತಮ್ಮ ಕಲಾಕೃತಿಯೊಂದಿಗೆ ಕಲಾವಿದೆ ಚಿತ್ರಲೇಖಾ ಅಯ್ಯರ್
ತಮ್ಮ ಕಲಾಕೃತಿಯೊಂದಿಗೆ ಕಲಾವಿದೆ ಚಿತ್ರಲೇಖಾ ಅಯ್ಯರ್   

ಮೂವರು ಚಿತ್ರ ಕಲಾವಿದೆಯರು ಜತೆಯಾಗಿ ಏರ್ಪಡಿಸಿದ್ದ  ಚಿತ್ರ ಪ್ರದರ್ಶನ ‘ತ್ರಿಧಾರಾ’ ಚಿತ್ರಕಲಾ ಪರಿಷತ್ತಿನಲ್ಲಿ  28ರವರೆಗೆ ನಡೆಯಿತು.
ಚಿತ್ರಲೇಖಾ ಅಯ್ಯರ್, ಸುದೇಷ್ಣಾ ಉಕಿಲ್ ಮತ್ತು  ತುಹಿನಾ ಶ್ರೀವಾಸ್ತವ ಅವರ ಕಲಾಕೃತಿಗಳು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಆಕ್ರಿಲಿಕ್‌ ಪೇಂಟಿಂಗ್‌ನಲ್ಲಿ ಮೂಡಿ ಬಂದ ಪ್ರಕೃತಿಯ ಚಿತ್ರಣಗಳು, ಹಲವು ಭಂಗಿಯಲ್ಲಿರುವ ಕುದುರೆಯ ಪೇಂಟಿಂಗ್ ಗಳು ಚಿತ್ರಲೇಖಾ ಅವರ ಕಲಾಕುಂಚದಲ್ಲಿ ಮೂಡಿ ಬಂದಿತ್ತು.

‘ಪ್ರಕೃತಿಯ ಸೊಬಗನ್ನು  ಚಿತ್ರಿಸುವುದರಲ್ಲಿ ನನಗೆ ಹೆಚ್ಚಿನ ಖುಷಿ. ಅಷ್ಟೇ  ಅಲ್ಲ ಕುದುರೆ ಪೇಂಟಿಂಗ್ ನಂಗಿಷ್ಟ. ಕುದುರೆಯ ಕಲಾಕೃತಿ ಜನರಿಗೆ ಹೆಚ್ಚು ಇಷ್ಟವಾಗಿದೆ ಅಂತಾರೆ’ ಚಿತ್ರಲೇಖಾ.

ಕಲಾಕೃತಿಗಳನ್ನು ನೋಡುತ್ತಾ ಮುಂದೆ ಸಾಗಿದಾಗ, ಆಗ ತಾನೇ  ಅರಳಿ ನಿಂತ ಹೂಗಳ ಚಿತ್ರಗಳು ಗಮನ ಸೆಳೆದವು. ಜಲವರ್ಣದಲ್ಲಿ  ಮೂಡಿದ ಈ ಕಲಾಕೃತಿಗಳನ್ನು ರಚಿಸಿದ್ದು ತುಹಿನಾ ಶ್ರೀವಾಸ್ತವ. ಆಕ್ರಿಲಿಕ್‌ ಪೇಂಟಿಂಗ್‌ನಲ್ಲಿ  ಮೂಡಿದ ಬೊಂಬೆ, ನವಿಲು ಮತ್ತು ಸ್ಥಿತ ಪ್ರಜ್ಞನಾದ  ಶ್ರೀಕೃಷ್ಣನ ಪೇಂಟಿಂಗ್ ಆಕರ್ಷಣೆಯ  ಕೇಂದ್ರವಾಗಿತ್ತು. ‘ಹೂವುಗಳೆಂದರೆ ನನಗೆ ತುಂಬಾ ಇಷ್ಟ.  ಪೇಂಟಿಂಗ್‌ನಲ್ಲಿರುವ ಹೂವುಗಳು ಯಾವತ್ತೂ ಬಾಡುವುದೇ ಇಲ್ಲ. ಇದು ಪಾಸಿಟಿವ್ ಎನರ್ಜಿ  ನೀಡುತ್ತದೆ’ ಎಂದು ತುಹಿನಾ ತಮ್ಮ ಚಿತ್ರಗಳ  ಬಗ್ಗೆ ವಿವರಿಸುತ್ತಾರೆ

ಪ್ರಕೃತಿಯ ಚಿತ್ರಗಳಿಗಿಂತ ಭಿನ್ನವಾಗಿ ಗಮನ ಸೆಳೆದ ಇನ್ನೊಂದು ಚಿತ್ರ  ಸೀತೆಯದ್ದು.  ಸೀತಾ ವಿರಹ ಕಾನ್ಸೆಪ್ಟ್ ಇಟ್ಟುಕೊಂಡು ಸೀತೆಯ ಭಾವನೆಗಳನ್ನು ಚಿತ್ರಗಳಲ್ಲಿ ಮೂಡಿಸಿದವರು ಸುದೇಷ್ಣಾ ಉಕಿಲ್.  

ರಾಮನ ನಿರೀಕ್ಷೆಯಲ್ಲಿ ಕಾಯುವ ಸೀತೆಯ ಚಿತ್ರಗಳ ಜತೆಗೆ ಆತ್ಮವಿಶ್ವಾಸದಿಂದ ನೋಡುತ್ತಿರುವ ಸಾಮಾನ್ಯ ಹೆಣ್ಣಿನ ಚಿತ್ರ, ನೆರಳು ಬೆಳಕಿನ ಪ್ರಕೃತಿ ಚಿತ್ರಗಳು ಸುದೇಷ್ಣಾ ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿತ್ತು. ‘ಸೀತೆಯ ಒಂದೊಂದು ಭಾವವನ್ನು ಹಿಡಿದಿಡುವ ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಕಾಡು, ಮುಂಜಾವು, ನೆರಳು ಬೆಳಕು ಪೇಂಟಿಂಗ್ ಮೂಲಕ ನಾನು ಪ್ರಕೃತಿಯ ಒಡನಾಟವನ್ನು ಬಿಂಬಿಸುತ್ತೇನೆ’ ಎಂಬುದು ಸುದೇಷ್ಣಾ ಅವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.