ADVERTISEMENT

ದೇಹದಾರ್ಢ್ಯದಲ್ಲಿ ಅಡಗಿರುವ ‘ಸೌಂದರ್ಯ’ದ ಒಳಗುಟ್ಟು

ಸುಬ್ರಹ್ಮಣ್ಯ ಎಚ್.ಎಂ
Published 24 ಜೂನ್ 2016, 19:30 IST
Last Updated 24 ಜೂನ್ 2016, 19:30 IST
ರೇಮಂಡ್ ಡಿಸೋಜಾ
ರೇಮಂಡ್ ಡಿಸೋಜಾ   

ದೇಹದಾರ್ಢ್ಯ ಕ್ಷೇತ್ರದಲ್ಲಿ ರೇಮಂಡ್ ಡಿಸೋಜಾ ಹೆಸರು ಚಿರಪರಿಚಿತ. ವಯಸ್ಸು ಐವತ್ತೈದಾರೂ, ಉತ್ಸಾಹ ಇಪ್ಪತ್ತಾರು ವಯಸ್ಸಿನ ಯುವಕನದ್ದು. ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದಾದ್ಯಂತ ದೇಹದಾರ್ಢ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪಟುಗಳಿಗೆ ಅವರು ಗುರು.

ಈ ಕ್ಷೇತ್ರದ ಸಾಧನೆಗಾಗಿ ಅವರು ‘ಭಾರತ ಶ್ರೀ’, ‘ಭಾರತ ಶ್ರೇಷ್ಠ’, ‘ಭಾರತ ಕೇಸರಿ’ ಸೇರಿದಂತೆ  ಹಲವು ರಾಷ್ಟ್ರಮಟ್ಟದ ಚಾಂಪಿಯನ್ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ದೇಹದಾರ್ಢ್ಯ ಪಟುಗಳಿಗೆ ಕಳೆದ 15 ವರ್ಷದಿಂದ ತರಬೇತಿ ನೀಡುತ್ತಿದ್ದಾರೆ.

ಬಾಡಿ ಕಟ್ಟಲು ಹೊರಡುವ ತರುಣರಿಗಾಗಿ ಈ ಕಲೆಯ ಹಲವು ಒಳಗುಟ್ಟುಗಳನ್ನು ‘ಮೆಟ್ರೊ’ಗೆ ನೀಡಿರುವ ಸಂದರ್ಶನದಲ್ಲಿ ಬಿಟ್ಟುಕೊಟ್ಟಿದ್ದಾರೆ.

* ಬಾಡಿ ಬಿಲ್ಡಿಂಗ್‌ನಿಂದ ವ್ಯಕ್ತಿಯೊಬ್ಬನಿಗೆ ಸಿಗುವ ಅತಿದೊಡ್ಡ ಲಾಭ ಏನು?
ನಮ್ಮ ದೇಹ ಸುಂದರವಾಗಿರಬೇಕು. ಆರೋಗ್ಯವಾಗಿರಬೇಕು ಎನ್ನುವುದು ದೇಹದಾರ್ಢ್ಯ ಸ್ಪರ್ಧೆಗಳ ಮುಖ್ಯ ಗುರಿ. ಸ್ಪರ್ಧೆಗಾಗಿ ಬಾಡಿ ಕಟ್ಟಬಾರದು. ಆರೋಗ್ಯಕ್ಕಾಗಿ ದೇಹ ಹುರಿಗೊಳಿಸಿಕೊಳ್ಳಬೇಕು. ಇದರಿಂದ ದೇಹದ ದಾರ್ಢ್ಯತೆ ಹೆಚ್ಚುವುದರ ಜೊತೆಗೆ ಮನಸಿಗೂ ನೆಮ್ಮದಿ ಸಿಗುತ್ತದೆ.

*ದೇಹದಾರ್ಢ್ಯ ಎಂದರೆ ಮಾಂಸಖಂಡಗಳ ಪ್ರದರ್ಶನವೇ?
ಈಗಿನವರು ಚಾಂಪಿಯನ್‌ಗಳಾಗಲು ಯತ್ನಿಸುತ್ತಿಲ್ಲ. ಕೇವಲ ತಮ್ಮ ದೇಹ ಸುಂದರವಾಗಿ, ಬಲಿಷ್ಠವಾಗಿ ಕಾಣಬೇಕೆಂಬ ಹಂಬಲದಿಂದ ತರಬೇತಿಗೆ ಬರುತ್ತಿದ್ದಾರೆ. ದೇಹದಾರ್ಢ್ಯವೇ ಬೇರೆ– ಮಾಡೆಲಿಂಗ್‌ ಕ್ಷೇತ್ರವೇ ಬೇರೆ. ಸೌಂದರ್ಯದ ಬಗ್ಗೆ ವಿಪರೀತ ಕಾಳಜಿ ಇರುವವರು ಈ ಕ್ಷೇತ್ರಕ್ಕೆ ಬರಬಾರದು.

*ದೇಹದಾರ್ಢ್ಯ ಪಟುಗಳು ಮಾಂಸ ಸೇವನೆ ಮಾಡುವುದರಿಂದ ದಪ್ಪಗೆ ಇರುತ್ತಾರೆ ಎಂಬ ಭಾವನೆ ಇದೆ. ಇದು ನಿಜವೇ?
ಇದು ಶುದ್ಧ ಸುಳ್ಳು. ಮಾಂಸ ಸೇವನೆಯಿಂದ ದಪ್ಪಗಾಗುವುದಿಲ್ಲ. ಸಸ್ಯಹಾರಿ ದೇಹದಾರ್ಢ್ಯ ಪಟುಗಳು ಸಾಕಷ್ಟು ಮಂದಿ ಇದ್ದಾರೆ. ಹಾಗೆಯೇ  ಮಾಂಸಹಾರ ಸೇವಿಸುವ ದೇಹದಾರ್ಢ್ಯ ಪಟುಗಳೂ ಇದ್ದಾರೆ. ಆಹಾರ ಪದ್ಧತಿಯಲ್ಲಿ ನಿಯಮ ಪಾಲನೆ ಮುಖ್ಯ.

*ದೇಹ ಬೆಳೆಸಿಕೊಳ್ಳಲು ಉದ್ದೀಪನಾ ಮದ್ದು ಸೇವನೆಯನ್ನು ನೀವು ಒಪ್ಪುವಿರಾ?
ಈಗಿನವರು ಬಹುಬೇಗ ಫಲಿತಾಂಶ ನಿರೀಕ್ಷೆ ಮಾಡುತ್ತಾರೆ. ಮಾತ್ರೆ, ಪೌಡರ್ ಸೇವನೆ ಆರೋಗ್ಯಕ್ಕೆ ಹಾನಿಕಾರ ಎಂದು ತಿಳಿದಿದ್ದರೂ, ಅದರ ಬಳಕೆ ನಿಲ್ಲಿಸುತ್ತಿಲ್ಲ.

ದೇಹ ದಂಡಿಸುವ ತಾಳ್ಮೆ ಮತ್ತು ತರಬೇತಿ ಪಡೆಯುವ ವ್ಯವಧಾನ ಇಲ್ಲದವರು ಈ ಮಾರ್ಗ ಅನುಸರಿಸುತ್ತಿದ್ದಾರೆ. ಕೆಲ ಜಿಮ್ ಸೆಂಟರ್‌ಗಳು ಇಂತಹ ಅಡ್ಡದಾರಿ ಮಾರ್ಗಗಳ ಮೂಲಕ ಯುವ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ.

*ಹಿಂದಿನವರು ಹರಳೆಣ್ಣೆ ಮೈಗೆ ಹಚ್ಚಿಕೊಂಡು ಸಹಜತೆ ಕಾಪಾಡಿಕೊಳ್ಳುತ್ತಿದ್ದರು. ಈಗ ಕ್ರಿಮ್ ಮತ್ತು ವಿವಿಧ ತೈಲಗಳನ್ನು ಹಚ್ಚಿಕೊಂಡು ಸಹಜತೆ ಇಲ್ಲದಂತೆ ಕಾಣುತ್ತಿದ್ದಾರೆ ಅಲ್ಲವೇ ?
ಹೌದು ನಿಮ್ಮ ಮಾತು ಅಕ್ಷರಶಃ ನಿಜ; ಹಿಂದೆ ನಾವೆಲ್ಲ ಅಭ್ಯಾಸ ಮಾಡುವ ಸಮಯದಲ್ಲಿ ಆಧುನಿಕ ಸೌಲಭ್ಯಗಳು ಇರಲಿಲ್ಲ. 40 ವರ್ಷಗಳ ಹಿಂದೆ ಮಧ್ಯಾಹ್ನದ ಬಿರುಬಿಸಿಲಿಗೆ ಮೈಕಾಯಿಸಿಕೊಂಡು ದೇಹ ಕಪ್ಪುಬಣ್ಣಕ್ಕೆ ತಿರುಗುವಂತೆ ಮಾಡಿಕೊಳ್ಳುತ್ತಿದ್ದೆವು.
ಈಗ ಮಾರುಕಟ್ಟೆಗೆ ಬೇಕಾದಷ್ಟು ಕ್ರೀಮ್‌ಗಳು, ತೈಲಗಳು ದಾಳಿ ಇಟ್ಟಿವೆ. ಇದರಿಂದ ಸಹಜತೆ ಮರೆಯಾಗಿ ಕೃತಕತೆ ಸೃಷ್ಟಿಯಾಗಿದೆ.

* 40 ವರ್ಷದ ದಾಟಿದ ಮೇಲೆ ದೇಹದಾರ್ಢ್ಯ ಪಟುಗಳು ತಮ್ಮ ಹಿಂದಿನ ವರ್ಚಸ್ಸು ಮತ್ತು ದೈಹಿಕ ಸಾಮರ್ಥ್ಯ ಕಳೆದುಕೊಳ್ಳಲಿದ್ದಾರೆಯೇ ?
ಅದು ಅವರ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಇರುತ್ತದೆ. ಈಗಲೂ 50 ವರ್ಷ ದಾಟಿದ ಕೆಲವರು ವೇದಿಕೆಗಳ ಮೇಲೆ ಪ್ರದರ್ಶನ ನೀಡುತ್ತಾರೆ. ಉತ್ಸಾಹ ಮತ್ತು ಜೀವನ ಪ್ರೀತಿ ಕಳೆದುಕೊಂಡಾಗ ಅಸಮರ್ಥತೆ ಮನೆ ಮಾಡುತ್ತದೆ. ಅದಕ್ಕೆ ಅವಕಾಶ ಕೊಡದಂತೆ ಸುಂದರವಾದ ಜೀವನ ಶೈಲಿ ರೂಪಿಸಿಕೊಳ್ಳಬೇಕು.

* ಇಂದಿನ ಯುವಪೀಳಿಗೆಗೆ ನಿಮ್ಮ ಕಿವಿ ಮಾತು
ಆಕರ್ಷಣೆಗೆ ಒಳಗಾಗಿ ಈ ಕ್ಷೇತ್ರಕ್ಕೆ ಬರುವುದು ಬೇಡ. ಕುಟುಂಬದ ಆರ್ಥಿಕ ಬೆಂಬಲವೂ ಬೇಕಾಗುತ್ತದೆ. ಈ ಕ್ಷೇತ್ರದಲ್ಲಿ ಬದ್ಧತೆ  ಬಹಳ ಮುಖ್ಯ. ಇದರಿಂದ ಕೀರ್ತಿ, ಹಣ ಎಲ್ಲವೂ ಸಿಗುತ್ತದೆ. ದೇಶ, ರಾಜ್ಯದ ಕೀರ್ತಿಗಾಗಿ ಬೆಳೆಯಬೇಕು. ನಿಷ್ಠೆ, ಪ್ರಾಮಾಣಿಕತೆ ಇದ್ದರೆ ಸಾಕು. ಮತ್ತೇನು ಬೇಕಿಲ್ಲ. 
ಸ್ಥಳೀಯ ದೇಹದಾರ್ಢ್ಯ ಯುವ ಪಟುಗಳನ್ನು ಸರ್ಕಾರ ಗುರುತಿಸಬೇಕು.  ಅವರ ಬದುಕು ಹಸನುಗೊಳ್ಳಲು  ಯೋಜನೆಗಳನ್ನು ರೂಪಿಸಿ ಉದ್ಯೋಗಾವಕಾಶ ಸೃಷ್ಟಿಸಬೇಕು.

ದೇಹದಾರ್ಢ್ಯ ಸ್ಪರ್ಧೆ ಇಂದು
ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಜೂನ್ 25ರಂದು ಬೆಳಿಗ್ಗೆ 10ಕ್ಕೆ ರಾಜ್ಯಮಟ್ಟದ ಮನೋಜ್ ಕ್ಲಾಸಿಕ್ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ.

ಕಿರಿಯ ಹಾಗೂ ಹಿರಿಯರ ವಿಭಾಗದಲ್ಲಿ ಸಣ್ಣ, ಮಧ್ಯಮ, ಎತ್ತರ ಹಾಗೂ ಅತಿಎತ್ತರ ಎಂಬ ನಾಲ್ಕು ಪ್ರತ್ಯೇಕ ಸ್ಪರ್ಧೆಗಳು ನಡೆಯುತ್ತವೆ. ಪ್ರತಿ ವಿಭಾಗದಲ್ಲೂ ಮೊದಲ ಐದು ಸ್ಥಾನ ಗಳಿಸಿದ ಸ್ಪರ್ಧಿಗಳಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು.

ADVERTISEMENT

ಬಾಡಿ ಕಟ್ಟುವವರ ಮೆನು
ಬಾಡಿ ಬಿಲ್ಡರ್ ಮನೋಜ್ ಅವರು ಪ್ರತಿದಿನ  4ರಿಂದ 5ಗಂಟೆ ದೈಹಿಕ ಕರಸತ್ತು ನಡೆಸುತ್ತಾರೆ.  ದಿನವೊಂದಕ್ಕೆ 40 ಮೊಟ್ಟೆ, 1 ಕೆ.ಜಿ ಚಿಕನ್, ಅರ್ಧ ಕೆ.ಜಿ. ಮಿಶ್ರ ಹಣ್ಣುಗಳು, 5 ಚಪಾತಿ, 1 ಬಟ್ಟಲು ಅನ್ನ ಸೇವಿಸುತ್ತಾರೆ.

ಕಸರತ್ತಿನಿಂದ ಸದೃಢ ಮೈಕಟ್ಟು
ಕಸರತ್ತು, ನಿಯಮಿತ ವ್ಯಾಯಾಮ, ಹದವಾದ ಆಹಾರ ಸೇವನೆ ಮೂಲಕ ದೇಹ ಹುರಿಗೊಳಿಸಿ ಸದೃಢ ಮೈಕಟ್ಟು ಹೊಂದುವುದು ದೇಹದಾರ್ಢ್ಯ ಸ್ಪರ್ಧೆಯ ತಿರುಳು.

ದೇಹದಾರ್ಢ್ಯ ಸ್ಪರ್ಧೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಗ್ರೀಸ್ ದೇಶದಲ್ಲಿ ಮೊದಲ ಬಾರಿಗೆ ದೇಹದಾರ್ಢ್ಯ ಸ್ಪರ್ಧೆ ಆರಂಭವಾಯಿತು ಎಂದು ಇತಿಹಾಸದ ಪುಟಗಳು ಹೇಳುತ್ತವೆ.

ಬಂಡೆಕಲ್ಲುಗಳನ್ನು ಎತ್ತಿ ಎಸೆಯುವ ಮೂಲಕ ವ್ಯಕ್ತಿಯೊಬ್ಬನ ಸಾಮರ್ಥ್ಯ ನಿರ್ಧರಿಸಲಾಗುತ್ತಿತ್ತು.  ಈಜಿಪ್ಟ್‌ನಲ್ಲಿ ಕೂಡ ಈ ಸ್ಪರ್ಧೆ ನಡೆಯುತ್ತಿತ್ತು ಎಂದು ಇತಿಹಾಸ ಹೇಳುತ್ತದೆ.

1880 ಹಾಗೂ 1953 ನಡುವಣ ಅವಧಿಯಲ್ಲಿ ಜಾಗತಿಕವಾಗಿ ದೇಹದಾರ್ಢ್ಯ ಸ್ಪರ್ಧೆ ಜನಪ್ರಿಯತೆ ಪಡೆಯಿತು. ಚಾರ್ಲ್ಸ್‌ ಆಟ್ಲಾಸ್, ಸ್ಟೀವ್ ರೀವ್ಸ್, ರೆಗ್ ಪಾರ್ಕ್, ಅನಾರ್ಡ್ ಮೊದಲಾದವರು ವಿಶ್ವ ಕಂಡ ಖ್ಯಾತ ಬಾಡಿಬಿಲ್ಡರ್‌ಗಳು.

ಭಾರತದಲ್ಲೂ ಕೂಡ ದೇಹದಾರ್ಢ್ಯ ಸ್ಪರ್ಧೆ ಒಂದು ಜನಪ್ರಿಯ ಕ್ರೀಡೆ. ಭಾರತೀಯ ನೌಕಾಪಡೆಯ ಈಜುಗಾರ ಮುರಳಿಕುಮಾರ್ ಇಂದಿಗೂ ಭಾರತೀಯ ದೇಹದಾರ್ಢ್ಯ ಪಟುಗಳಿಗೆ ಸ್ಮರಣೀಯರು. 

ಸುಹಾಸ್ ಖಾಮ್ಕರ್, ರಾಜೇಂದ್ರ ಮಣಿ, ಸಂಗ್ರಾಮ ಚೌಗುಲೆ, ಅಂಕುಲ್ ಶರ್ಮ, ಆಶೀಶ್ ಸರ್ಕಾರ್, ಹೀರಾಲಾಲ್, ವೀರೇಂದ್ರ ಸಿಂಗ್  ಅವರು ದೇಹದಾರ್ಢ್ಯ ಕ್ರೀಡೆಗೆ ದೇಶದಲ್ಲಿ ಮನ್ನಣೆ ತಂದುಕೊಟ್ಟ ಖ್ಯಾತನಾಮರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.