ADVERTISEMENT

‘ದೊಡ್ಡ ಮಣಿ’ಯ ಅಂತರಂಗದಿಂದ...

ವಿದ್ಯಾಶ್ರೀ ಎಸ್.
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST
‘ದೊಡ್ಡ ಮಣಿ’ಯ ಅಂತರಂಗದಿಂದ...
‘ದೊಡ್ಡ ಮಣಿ’ಯ ಅಂತರಂಗದಿಂದ...   
‘ಕಲರ್ಸ್‌ ಕನ್ನಡ’ದಲ್ಲಿ ಪ್ರಸಾರವಾಗುತ್ತಿರುವ ಕಿನ್ನರಿ ಧಾರಾವಾಹಿ ನೋಡುವವರಿಗೆ ಮಣಿ ಅಚ್ಚುಮೆಚ್ಚು. ಅಂದಹಾಗೆ ಮಣಿ ಈಗ ದೊಡ್ಡವಳಾಗಿದ್ದಾಳೆ. ‘ಅಯ್ಯೋ ಅಷ್ಟು ಬೇಗ ಮಣಿ ದೊಡ್ಡವಳಾದಳೇ...’ ಎಂದು ಬೆರಗಾಗಬೇಡಿ. ಅದು ಧಾರಾವಾಹಿಯಲ್ಲಿ ಮಾತ್ರ.
 
ಮಣಿಯ ಪಾತ್ರವನ್ನು ಈಗ ನಿಭಾಯಿಸುತ್ತಿರುವುದು ಭೂಮಿಕಾ ಶೆಟ್ಟಿ. ಲವಲವಿಕೆಯ ಈ ಪಾತ್ರವನ್ನು ನಿಭಾಯಿಸಲು ತಯಾರಾಗಿರುವ ಇವರು, ಅಷ್ಟೇ ಹುರುಪಿನಿಂದ ಇಲ್ಲಿ ಮಾತನಾಡಿದ್ದಾರೆ.
 
lನೀವು ಮಣಿ ತರಹವೇ ಇದ್ದೀರಲ್ವಾ? 
ಧಾರಾವಾಹಿ ತಂಡದವರು ಸೇರಿದಂತೆ ತುಂಬಾ ಜನ ಹೀಗೆ ಹೇಳುತ್ತಾರೆ. ಹಿಂದೆ ಸ್ನೇಹಿತರೆಲ್ಲ ನೀನು ಮಣಿಯ ಹಾಗೇ ಇದ್ದೀಯಾ. ಮಣಿ ದೊಡ್ಡವಳಾಗುವ ಪಾತ್ರಕ್ಕೆ ನೀನು ಆಡಿಷನ್‌ ಕೊಡು ಅಂತೆಲ್ಲಾ ರೇಗಿಸುತ್ತಿದ್ದರು. ಅದು  ಈಗ ನಿಜವಾಗಿದೆ. 
 
l ಊರು, ಶಿಕ್ಷಣದ ಬಗ್ಗೆ ಹೇಳಿ? 
ನನ್ನ ಸ್ವಂತ ಊರು ಕುಂದಾಪುರ. ಈಗ ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ    ಎರಡನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದೇನೆ.
 
lನಟನಾ ಪ್ರೀತಿ ಹುಟ್ಟಲು ಕಾರಣ...
ಚಿಕ್ಕವಳಿದ್ದಾಗಿನಿಂದಲೂ ಯಕ್ಷಗಾನ, ಭರತನಾಟ್ಯ  ಮಾಡುತ್ತಿದ್ದೆ. ಶಾಲೆಯಲ್ಲಿದ್ದಾಗ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ  ಪಾಲ್ಗೊಳ್ಳುತ್ತಿದ್ದೆ. ಕಲೆಯ ಬಗ್ಗೆ ಆಸಕ್ತಿಯಿದ್ದ ಕಾರಣ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕೆಂಬ ಹಂಬಲ ಮೂಡಿತು.
 
lನಿಮಗೂ ಮಣಿ ತರಹವೇ  ಸವಾಲುಗಳು ಎದುರಾಗುತ್ತವೆಯೇ? 
ಹೌದು, ಪಾತ್ರ ಅದೇ ರೀತಿ ಮುಂದುವರೆಯುತ್ತದೆ. ಮುಂದೆ ಕಥೆಯಲ್ಲಿ ಇನ್ನಷ್ಟು ಕುತೂಹಲ ಇರಲಿದೆ. 
 
lಈಗಾಗಲೇ ಜನಪ್ರಿಯವಾಗಿರುವ ಪಾತ್ರದ ನಿರ್ವಹಣೆ ಕಷ್ಟ ಅನಿಸುತ್ತಿದೆಯೇ?
ನಾನು ಮಣಿ ತರಹವೇ ಇರುವುದು ಪ್ಲಸ್‌ ಪಾಯಿಂಟ್‌. ಆದರೆ ಇದೊಂದು ಸವಾಲಿನ ಪಾತ್ರ. ಹಳೆಯ ಮಣಿಯನ್ನು ಇಷ್ಟಪಟ್ಟಂತೆ ನನ್ನನ್ನು ಜನ ಮೆಚ್ಚಬೇಕಾದರೆ ಪಾತ್ರಕ್ಕೆ ನಾನು ಸಂಪೂರ್ಣ ನ್ಯಾಯ ಒದಗಿಸುವ ಅಗತ್ಯವಿದೆ.  
 
lಧಾರಾವಾಹಿಯಲ್ಲಿ ಅವಕಾಶ ದೊರಕಿದ್ದು ಹೇಗೆ?
ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಜೀವನಚೈತ್ರ’ ಧಾರಾವಾಹಿಯಲ್ಲಿ ಚಿಕ್ಕ ಪಾತ್ರವೊಂದರಲ್ಲಿ ನಟಿಸಿದ್ದೆ. ಒಂದು ವರ್ಷದಿಂದ ಸುಮಾರು ಆಡಿಷನ್‌ ನೀಡಿದ್ದೇನೆ. ಕಿನ್ನರಿ ಧಾರಾವಾಹಿ ಕಡೆಯಿಂದ ಆಡಿಷನ್‌ನಲ್ಲಿ  ಭಾಗವಹಿಸುವಂತೆ ಕರೆ ಬಂತು. ಮೊದಲ ಸುತ್ತಿನಲ್ಲಿಯೇ ಆಯ್ಕೆಯಾದೆ.
 
lಮನೆಯವರ ಪ್ರೋತ್ಸಾಹ ಹೇಗಿದೆ?
ನಮ್ಮದು ಕೂಡು ಕುಟುಂಬ. ಅಮ್ಮನನ್ನು ಹೊರತುಪಡಿಸಿ ಮನೆಯಲ್ಲಿ ಬೇರೆ ಯಾರಿಗೂ ನಾನು ನಟಿಯಾಗುವುದು ಇಷ್ಟವಿಲ್ಲ. ಓದಿ ಯಾವುದಾದರೂ ಕೆಲಸಕ್ಕೆ ಸೇರಿಕೊ ಎನ್ನುತ್ತಾರೆ. ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರಕಿದಾಗ ನಾನು ಯಾರಿಗೂ ಹೇಳಿರಲಿಲ್ಲ.  ಪ್ರೋಮೊ ನೋಡಿದಾಗಲೇ ಮನೆಯವರಿಗೆ ಗೊತ್ತಾಗಿದ್ದು.
 
lಎಂಥ ಪಾತ್ರಗಳ ನಿರೀಕ್ಷೆಯಲ್ಲಿದ್ದೀರಿ?
ಆಧುನಿಕ ಪಾತ್ರಗಳಿಗಿಂತ ಸರಳ ಹುಡುಗಿಯಾಗಿ ಕಾಣಿಸಿಕೊಳ್ಳುವುದೇ ಇಷ್ಟ. ಜನರಿಗೆ  ಸಂದೇಶ ತಲುಪಿಸಬೇಕು. ಅವರ ಮುಖದಲ್ಲಿ ನಗು ಮೂಡಿಸುವ ಪಾತ್ರಗಳು ನನಗಿಷ್ಟ.
 
lನಿಮ್ಮ ನೆಚ್ಚಿನ ನಟ, ನಟಿ?
ರಕ್ಷಿತ್‌ ಶೆಟ್ಟಿ, ರಾಧಿಕಾ ಪಂಡಿತ್‌. 
 
lಕಾಲೇಜು ದಿನಗಳು ಹೇಗಿವೆ? ಮೊದಲ ಕ್ರಶ್‌...?
ಕ್ರಶ್‌ ಏನೂ ಇಲ್ಲಪ್ಪ. ಕಾಲೇಜಿನಲ್ಲಿ ತುಂಬಾ ಮೋಜುಮಸ್ತಿ ಮಾಡುತ್ತೇವೆ. ಮೆಕ್ಯಾನಿಕಲ್‌ ವಿಭಾಗದಲ್ಲಿ ಇರುವುದರಿಂದ ಹುಡುಗಿಯರು ತುಂಬಾ ಕಡಿಮೆ. ಹುಡುಗರ ಸಂಖ್ಯೆಯೇ ಹೆಚ್ಚು. ಯಾವಾಗಲೂ ತಮಾಷೆ ಮಾಡುತ್ತಾ, ಸಂತೋಷದಿಂದ ಇರುತ್ತೇವೆ.  
 
lಯಕ್ಷಗಾನದಲ್ಲಿ ಆಸಕ್ತಿ...
ಒಂದನೇ ತರಗತಿಯಿಂದಲೂ ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದೆ. ನಮ್ಮ ಶಾಲೆಯ ಮುಖ್ಯಶಿಕ್ಷಕ ವಿಶ್ವೇಶ್ವರ ಅಡಿಗ ಯಕ್ಷಗಾನ ಕಲಾವಿದರಾಗಿದ್ದರು. ಅವರು ಹೆಣ್ಣುಮಕ್ಕಳು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಚಿಂತನೆ ಉಳ್ಳವರು. ಅವರ ಪ್ರೋತ್ಸಾಹವೇ ನಾನು ಈ ಕಲೆಯನ್ನು ಪ್ರೀತಿಸಲು ಕಾರಣ. ಊರ ಹಬ್ಬ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಯಕ್ಷಗಾನ ಮಾಡುತ್ತಿದ್ದೆ. 
 
l ಬಿಡುವಿನ ವೇಳೆ ಏನು ಮಾಡುತ್ತೀರಿ?  
ಚಿತ್ರ ಬಿಡಿಸುತ್ತೇನೆ. ಚಿತ್ರಕಲೆಯಲ್ಲಿ ಆಸಕ್ತಿ ಇದ್ದ ಕಾರಣ ಅನಿಮೇಷನ್‌ನಲ್ಲಿ ಡಿಪ್ಲೊಮಾ  ಮಾಡಿದ್ದೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.