ADVERTISEMENT

‘ಧನಂಜಯನ್ಸ್’ಜೋಡಿಯ ದಿವ್ಯಾಭಿನಯ

ವೈ.ಕೆ.ಸಂಧ್ಯಾಶರ್ಮ
Published 22 ಮಾರ್ಚ್ 2017, 19:30 IST
Last Updated 22 ಮಾರ್ಚ್ 2017, 19:30 IST
ಧನಂಜಯ
ಧನಂಜಯ   

‘ಧನಂಜಯನ್ಸ್’ ಎಂದೇ ಹೆಸರಾದ ನೃತ್ಯ ಜೋಡಿ ಧನಂಜಯ್‌ ಮತ್ತು ಶಾಂತಾ ಇತ್ತೀಚೆಗೆ ನಗರದ ‘ಕೆ.ಇ.ಎ. ಪ್ರಭಾತ್ ರಂಗಮಂದಿರ’ದಲ್ಲಿ ನೃತ್ಯ ಪ್ರದರ್ಶನ ನೀಡಿದರು.

ಕೇರಳ ಮೂಲದ ಧನಂಜಯ ದಂಪತಿ ‘ಕಲಾಕ್ಷೇತ್ರ’  ಸ್ಥಾಪಕಿ ರುಕ್ಮಿಣಿದೇವಿ ಅರುಂಡೆಲ್ ಅವರಲ್ಲಿ ಭರತನಾಟ್ಯವನ್ನು ಕಲಿತು ಕಥಕ್ಕಳಿ ನೃತ್ಯ ಪಾರಂಗತರೂ ಹೌದು. ಕಳೆದ ಆರು ದಶಕಗಳಿಂದ ತಮ್ಮದೇ ಆದ ‘ಭರತ ಕಲಾಂಜಲಿ’ ನೃತ್ಯ ಸಂಸ್ಥೆಯನ್ನು ಚೆನ್ನೈನಲ್ಲಿ ನಡೆಸುತ್ತಿದ್ದಾರೆ.
ಎಪ್ಪತ್ತೆಂಟರ ಧನಂಜಯ ಮತ್ತು ಎಪ್ಪತ್ನಾಲ್ಕರ ಶಾಂತಾ ಅವರಲ್ಲಿ ಕುಂದದ ಉತ್ಸಾಹ, ಚಿಮ್ಮುವ ಚಟುವಟಿಕೆ.  ನರ್ತಿಸತೊಡಗಿದರೆ ಅವರಿಗೆ ತಮ್ಮ ವಯಸ್ಸೇ ಮರೆತುಹೋಗುವ ತನ್ಮಯತೆ.

ಅವರು ಪ್ರದರ್ಶಿಸಿದ್ದು ಅರುಣಾಚಲಂ ಕವಿಯ ‘ರಾಮನಾಟಕಂ’ ನೃತ್ಯರೂಪಕ. ಶ್ರೀರಾಮನ ಪಟ್ಟಾಭಿಷೇಕದ ಸನ್ನಿವೇಶದಲ್ಲಿ ಮಂಥರೆ, ಕೈಕೇಯಿಯ ಮನಸ್ಸಿಗೆ ಹುಳಿಹಿಂಡಿ  ರಾಮಾಯಣ ಕಥೆಯ ಮಗ್ಗುಲನ್ನೇ ಬದಲಾಯಿಸಿಬಿಡುವ ಮಹತ್ವದ ಪ್ರಹಸನ. ಇದರಲ್ಲಿ ಬರುವುದು ಮೂರೇ ಪಾತ್ರಗಳು. ದಶರಥನಾಗಿ ಧನಂಜಯ, ಮಂಥರೆಯಾಗಿ ಶಾಂತಾ ಧನಂಜಯ ಮತ್ತು ಕೈಕೇಯಿಯಾಗಿ ದಿವ್ಯಾ ಶಿವಸುಂದರ್ ಅತ್ಯ ಪೂರ್ವ ದಿವ್ಯಾನುಭವ ಕಟ್ಟಿಕೊಟ್ಟರು.

ADVERTISEMENT

(ಶಾಂತಾ, ದಿವ್ಯಾ)
ಮುಖದ ಮೆರುಗನ್ನು ಮಂಕಾಗಿಸದ ಹೊಳಪಿಲ್ಲದ ಆಭರಣಗಳು, ಸರಳ ಅಲಂಕಾರ-ಉಡುಪು ಇವರ ವಿಶೇಷತೆ. ಹೊರ ಪ್ರಭಾವಳಿಗಿಂತ ಪಾತ್ರಾಭಿನಯ, ಭಾವಾಭಿವ್ಯಕ್ತಿಯ ತೀವ್ರತೆ ತಟ್ಟಬೇಕೆಂಬುದೇ ಇದರ ಉದ್ದೇಶ. ಶಾಸ್ತ್ರೀಯ ಚೌಕಟ್ಟಿನೊಳಗೇ ವಿಹರಿಸುವ ನೃತ್ತ-ನೃತ್ಯಗಳು. ಹಳೆಯ ಕಾಲದ ಚಿತ್ರಪಟದಲ್ಲಿ ಕಂಡುಬರುವಂಥ ಕಲಾವಿದರ ರೂಪುರೇಷೆಗಳು.

ಅಭಿನಯಪ್ರಧಾನವಾದ ಈ ರೂಪಕದಲ್ಲಿ ಧನಂಜಯ ಅವರ ಸಾತ್ವಿಕಾಭಿನಯದೊಂದಿಗೆ ನವರಸಗಳು ಸಾಂದರ್ಭಿಕ ವ್ಯಕ್ತವಾದವು. ಶಾಂತಾ ಅವರ ನುರಿತ ಆಂಗಿಕಾಭಿನಯ, ಪದಗತಿಯ ಅರ್ಥಪೂರ್ಣತೆ ಮನಸೂರೆಗೊಂಡರೆ, ದಿವ್ಯಾ ಅವರ ನಿರ್ಮಲ ಮನೋಭಾವ ಸೂಸುವ ವಿವಿಧ ವಿನ್ಯಾಸದ ಲವಲವಿಕೆಯ ಜತಿಗಳು, ಹಸ್ತಚಲನೆ, ಆಕರ್ಷಕ ಅಡವುಗಳು ಹಿರಿಯ ಕಲಾವಿದರಿಗೆ ಸಾಥ್ ನೀಡಿದವು.

ಹೃದ್ಯಗಾಯನ ನೀಡಿದ ಎಂ.ಕೆ.ರಾಜೇಶರ ಸಂಗೀತ ರೂಪಕದ ಜೀವಾಳವೆನಿಸಿತು. ನಟುವಾಂಗ- ಸತ್ಯಜಿತ್, ಮೃದಂಗ-ಶಿವಪ್ರಸಾದ್ ಮತ್ತು ತಂಬೂರ-ಜಗನ್ನಾಥರಾವ್ ಹಿಮ್ಮೇಳದಲ್ಲಿ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.