ADVERTISEMENT

ನಕ್ಕು ಸುಸ್ತಾಗಿಸುವ ಬಾಹುಬಲಿ2 ವ್ಯಂಗ್ಯ ರೂಪ

​ಪ್ರಜಾವಾಣಿ ವಾರ್ತೆ
Published 21 ಮೇ 2017, 19:30 IST
Last Updated 21 ಮೇ 2017, 19:30 IST
ನಕ್ಕು ಸುಸ್ತಾಗಿಸುವ ಬಾಹುಬಲಿ2 ವ್ಯಂಗ್ಯ ರೂಪ
ನಕ್ಕು ಸುಸ್ತಾಗಿಸುವ ಬಾಹುಬಲಿ2 ವ್ಯಂಗ್ಯ ರೂಪ   

ಹಿಟ್ ಸಿನಿಮಾಗಳ ವ್ಯಂಗ್ಯ ರೂಪಗಳು ಯೂಟ್ಯೂಬ್‌ನಲ್ಲಿ ಭಾರಿ ಜನಪ್ರಿಯಗುತ್ತವೆ. ‘ಸ್ಪೂಪ್‌’ ಎಂದು ಕರೆಯಲಾಗುವ ಇಂತಹ ವಿಡಿಯೊಗಳನ್ನು ಮಾಡುವ ಯೂಟ್ಯೂಬ್‌ ಚಾನೆಲ್‌ಗಳು ಸಾಕಷ್ಟಿವೆ. ಇದೀಗ ಲಕ್ಷಾಂತರ ಜನರಿಂದ ಮೆಚ್ಚುಗೆ ಗಳಿಸಿರುವುದು ಬಾಹುಬಲಿ–2ರ  ರೂಪಾಂತರದ ವಿಡಿಯೊ.

ಇತ್ತೀಚೆಗೆಷ್ಟೇ ಬಿಡುಗಡೆಯಾಗಿ ಭಾರಿ ಜನಪ್ರಿಯತೆ ಗಳಿಸಿರುವ ‘ಬಾಹುಬಲಿ2; ದಿ ಕನ್‌ಕ್ಲೂಶನ್’ ಚಿತ್ರದ ಸ್ಪೂಪ್‌ ವಿಡಿಯೊಗಳು ಯೂಟ್ಯೂಬ್‌ನಲ್ಲಿ ಸಾಕಷ್ಟು ಲಭ್ಯವಿವೆ. ಅವುಗಳಲ್ಲಿ ಹೆಚ್ಚು ಜನಪ್ರಿಯಗೊಂಡ ಕೆಲವಲ್ಲಿ ಎಂಎಸ್‌ಕೆ ಟಿವಿ ಎಂಬ ಯುಟ್ಯೂಬ್ ಚಾನೆಲ್ ತಂಡ ಮಾಡಿರುವ ಸ್ಪೂಪ್‌.

ನರಪೇತಲ ಬಾಹುಬಲಿ, ವ್ಯಂಗ್ಯಚಿತ್ರದಂತಹ ರಮ್ಯಕೃಷ್ಣ, ಪುಕ್ಕಲ ಕಟ್ಟಪ್ಪ, ವಂಡರ್‌ಗಣ್ಣಿನ ದೇವಸೇನ  ಮೊದಲ ನೋಟದಲ್ಲಿಯೇ ನಗೆ ಉಕ್ಕಿಸುತ್ತಾರೆ. ಎಂಎಸ್‌ಕೆ ಟಿವಿ ಅವರ ಬಾಹುಬಲಿಯಲ್ಲಿ ವಿಡಿಯೊದಲ್ಲಿ ಒಂಟಿ ಕೈಯ ಬಿಜ್ಜಳದೇವ ಗೋಡೆಗೆ ಗುದ್ದಿ ಇನ್ನೊಂದು ಕೈಯನ್ನೂ ಊನ ಮಾಡಿಕೊಳ್ಳುತ್ತಾನೆ. ಸಿನಿಮಾದಲ್ಲಿ ಬಾಹುಬಲಿ ಬಾಣಗಳಿಗೆ ಎದೆಕೊಟ್ಟು ನಿಂತರೆ ಇಲ್ಲಿನ ಬಾಹುಬಲಿ ಕಲ್ಲುಗಳಿಗೆ ಎದೆಯೊಡ್ಡುತ್ತಾನೆ, ಕಲ್ಲಿನ ಹೊಡೆತ ತಿಂದು ಕಲ್ಲು ಎಸೆದವರನ್ನು ಬೈದುಕೊಳ್ಳುತ್ತಾ ಪೇರಿ ಕೀಳುತ್ತಾನೆ.

ADVERTISEMENT

ದೇವಸೇನಾಳ ಪಾದ ಮುಟ್ಟುವ ರಮ್ಯಕೃಷ್ಣ, ಪಾದಕ್ಕೆ ಕಚುಗಳಿ ಇಟ್ಟು ಬೈಸಿಕೊಳ್ಳುತ್ತಾಳೆ. ಬಾಲ ಬಾಹುಬಲಿಯ ಪಾದವನ್ನು ಹಣೆಗೆ ಮುಟ್ಟಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ಅದು ಮಲ ವಿಸರ್ಜನೆ ಮಾಡಿದ್ದು ಪಿಚಕಾರಿಯಂತೆ ಕಟ್ಟಪ್ಪನ ಮುಖಕ್ಕೆ ಹಾರುತ್ತದೆ! ಕಟ್ಟಪ್ಪ ವಾಂತಿ ಮಾಡಿಕೊಂಡುಬಿಡುತ್ತಾನೆ. ಬಿಳಿ ಪರದೆ ಹಿಂದೆ ದೇವಸೇನಾಳ ವಂಡರ್‌ಕಣ್ಣು ನೋಡಿ ಬಾಹುಬಲಿ ಮನಸೋಲುತ್ತಾನೆ.

ಬಾಹುಬಲಿ ಮೇಲೆ ಪ್ರಹಾರ ಮಾಡಲು ಗದೆ ಎತ್ತುವ ಬಲ್ಲಾಳದೇವ ತನ್ನದೇ ಬೆವರಿನ ವಾಸನೆ ಮೂಗಿಗೆ ಬಡಿದು ಗದೆ ಇಳಿಸಿ ‘ಛೇ ಡಿಯೋಡರೆಂಟ್‌ ಹಾಕಿಕೊಳ್ಳುವುದು ಮರೆತೆನಲ್ಲ’ ಎಂದು ತನ್ನನ್ನೇ ಹಳಿದುಕೊಳ್ಳುತ್ತಾನೆ.

ವಿಡಿಯೊ ಪ್ರಾರಂಭದಿಂದ ಕೊನೆಯವರೆಗೂ ನಕ್ಕು ನಕ್ಕು ಸುಸ್ತಾಗುವಂತೆ ಮಾಡುತ್ತದೆ. ಆದರೆ ಅಲ್ಲಲ್ಲಿ ಕೆಲವು ಅಶ್ಲೀಲ ಸಂಭಾಷಣೆ ಬಳಕೆಯಾಗಿರುವುದು ಹಾಗೂ ಕೆಲವು ಕಡೆ ಅತಿರೇಕದ ವ್ಯಂಗ್ಯ ಮತ್ತು  ಹಾವಭಾವ, ಆರೋಗ್ಯಕರ ಹಾಸ್ಯದ ಗಡಿ ದಾಟಿದೆ.ಚಿತ್ರೀಕರಣದಲ್ಲಿ ಭಾಗವಹಿಸಿರುವ ತಂಡದ ಸದಸ್ಯರ ಪರಿಚಯ ಮಾಡುವಲ್ಲಿಗೆ ವಿಡಿಯೊ ಮುಗಿಯುತ್ತದೆ.

ವಿಡಿಯೊ ನೋಡಲು bit.ly/2nvW64O
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.