ADVERTISEMENT

ನಗರ ಬದುಕಿನ ಜಾಡು ಹಿಡಿದ ಸಿನಿಮಾಗಳು...

ಹರವು ಸ್ಫೂರ್ತಿ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ನಗರ ಬದುಕಿನ ಜಾಡು ಹಿಡಿದ ಸಿನಿಮಾಗಳು...
ನಗರ ಬದುಕಿನ ಜಾಡು ಹಿಡಿದ ಸಿನಿಮಾಗಳು...   

*ನಗರ ಬದುಕಿನ ಬಗ್ಗೆ ಸಂಶೋಧನೆ ಮಾಡುತ್ತಿರುವ ನಿಮ್ಮ ಸಂಸ್ಥೆ ಬಗ್ಗೆ ಹೇಳಿ...

ಇಂಡಿಯನ್ ಇನ್‌ಸ್ಟಿಟ್ಯೂಷನ್ ಫಾರ್ ಹ್ಯೂಮನ್ ಸೆಟಲ್‌ಮೆಂಟ್‌ ಶಿಕ್ಷಣ ಸಂಸ್ಥೆ ಹಲವು ವರ್ಷಗಳಿಂದ ನಗರ ಬದುಕಿನ ಬಗ್ಗೆ ಸಂಶೋಧನೆಗಳನ್ನು ಮಾಡುತ್ತಿದೆ. ಹಲವು ಫೆಲೋಶಿಫ್ ಕಾರ್ಯಕ್ರಮಗಳನ್ನೂ ರೂಪಿಸಿದ್ದೇವೆ. ಪ್ರತಿ ವರ್ಷ ಸಿನಿಮೋತ್ಸವ ಆಯೋಜನೆ ಮಾಡುತ್ತಿದ್ದೇವೆ. ಈ ವರ್ಷ ನಗರ ಬದುಕನ್ನು ಕೇಂದ್ರವಾಗಿಸಿಕೊಂಡು ಅಂತರರಾಷ್ಟ್ರೀಯ ಸಿನಿಮೋತ್ಸವ ಮಾಡುತ್ತಿದ್ದೇವೆ. ಈ ಬಾರಿ ‘ಅರ್ಬನ್ ಲೆನ್ಸ್‌’ ಎಂಬ ಪರಿಕಲ್ಪನೆಯಲ್ಲಿ ಸಿನಿಮೋತ್ಸವ ದೆಹಲಿ ಹಾಗೂ ಬೆಂಗಳೂರಿನಲ್ಲಿ ನಡೆಯಲಿದೆ.

‘ಅರ್ಬನ್ ಲೆನ್ಸ್‌’ ಸಿನಿಮೋತ್ಸವದ ಉದ್ದೇಶ?

ADVERTISEMENT

ದೃಶ್ಯ ಮಾಧ್ಯಮದಿಂದ ನಗರ ಬದುಕಿನ ಬಗ್ಗೆ ಉತ್ತಮವಾಗಿ ಅರ್ಥ ಮಾಡಿಸಬಹುದು. ಪ್ರದರ್ಶನವಾಗುತ್ತಿರುವ ಎಲ್ಲಾ ಸಿನಿಮಾಗಳೂ ನಗರ ಬದುಕು, ನಗರದ ಪರಿಸರ, ಹವಾಮಾನ ಬದಲಾವಣೆ, ಕಸ ಸಮಸ್ಯೆ, ಜನಸಂಖ್ಯೆ, ಉದ್ಯೋಗ, ಬಾಡಿಗೆ ಮನೆ, ವಲಸಿಗರು, ಸಾರಿಗೆ ವ್ಯವಸ್ಥೆ ಹೀಗೆ ನಗರ ಬದುಕಿನ ಸಮಸ್ಯೆ ಸವಾಲು ಹಾಗೂ ಬವಣೆಗಳನ್ನು ಬಿಂಬಿಸುವ ಸಿನಿಮಾಗಳನ್ನು ಆಯ್ಕೆ ಮಾಡಿದ್ದೇವೆ.

ನಗರ ಬದುಕನ್ನು ಅರ್ಥ ಮಾಡಿಕೊಳ್ಳಲು ಸಿನಿಮಾ ಕೂಡ ಒಂದು ಮಾಧ್ಯಮ, ಸಾಂಸ್ಕೃತಿಕ, ಸಾಮಾಜಿಕ ಪಲ್ಲಟಗಳನ್ನು ಸಿನಿಮಾ ಉತ್ತಮವಾಗಿ ಹಿಡಿದಿಡಬಲ್ಲದು.

ಪ್ರದರ್ಶನಕ್ಕೆ ಸಿನಿಮಾ ಆಯ್ಕೆ ಪ್ರಕ್ರಿಯೆ ಹೇಗಿತ್ತು ?

ನಾವೆಲ್ಲರೂ ಸಿನಿಮಾ ವಿದ್ಯಾರ್ಥಿಗಳೇ ಆದ ಕಾರಣ ಸಿನಿಮಾಗಳನ್ನು ಸೂಕ್ಷ್ಮವಾಗಿ ಆಯ್ಕೆ ಮಾಡಿಕೊಂಡಿದ್ದೇವೆ. ಈ ಹಿಂದೆ ನಾವೇ ಒಂದಿಷ್ಟು ಸಿನಿಮಾಗಳ ಪಟ್ಟಿ ಮಾಡಿ ಅಂತಿಮಗೊಳಿಸುತ್ತಿದ್ದೆವು. ಆದರೆ ಈ ಬಾರಿ ಸಾರ್ವಜನಿಕರಿಂದ ಪ್ರದರ್ಶನಕ್ಕೆ ಸಿನಿಮಾ ಕಳಿಸುವಂತೆ ಆಹ್ವಾನಿಸಿದ್ದೆವು. ಒಟ್ಟಾರೆ 102 ದೇಶದಿಂದ 1605 ಸಿನಿಮಾಗಳನ್ನು ಕಳುಹಿಸಿದ್ದಾರೆ. ಇದರಲ್ಲಿ ಕಿರುಚಿತ್ರ, ಅನಿಮೇಶನ್ ಸಿನಿಮಾ, ಸಾಕ್ಷ್ಯಚಿತ್ರ, ಫೀಚರ್ ಸಿನಿಮಾ ಎಲ್ಲಾ ವಿಭಾಗದಿಂದಲ್ಲೂ ಸಿನಿಮಾಗಳು ಬಂದಿವೆ. ಇಂಗ್ಲೆಂಡ್, ಬಾಂಗ್ಲಾದೇಶ, ಪಾಕಿಸ್ತಾನ, ಜರ್ಮನಿ, ಇಸ್ರೇಲ್ ಹೀಗೆ 10 ದೇಶದ 23 ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ.

ಸಿನಿಮೋತ್ಸವದಲ್ಲಿ ಪ್ರದರ್ಶನವಾಗಲಿರುವ ಪ್ರಮುಖ ಸಿನಿಮಾಗಳು ಯಾವುವು?

ಪಿ. ಬಾಲಚಂದ್ರನ್ ಕಥೆ ಬರೆದಿರುವ, ರಾಜೀವ್ ರವಿ ನಿರ್ದೇಶನದ ಮಲಯಾಳಂನ ‌‘ಕಮ್ಮಟಿಪಾದಂ’ ಸಿನಿಮಾ ಇದೆ. ಇದು ನಗರೀಕರಣದ ಗುಂಗಿನಲ್ಲಿ ಬಡವರಿಂದ ಭೂಮಿಯನ್ನು ಆಕ್ರಮಿಸಿಕೊಳ್ಳುವ ಕಥೆಯನ್ನು ಒಳಗೊಂಡಿದೆ. ‌‘ಕಮ್ಮಟಿಪಾದಂ’ ಎಂಬ ಕೊಳೆಗೇರಿಯ ಜನರನ್ನು ಭೂಮಿಗಾಗಿ ಹೇಗೆ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಶೋಷಣೆ ಮಾಡುತ್ತಾರೆ. ಭೂಮಿ ಹಕ್ಕಿಗಾಗಿ ಹೋರಾಡುವ ಜನ, ಕತ್ತಲಿಗೆ ಬಿದ್ದ ನೂರಾರು ಬಡವರ ಬದುಕು ಈ ಸಿನಿಮಾದಲ್ಲಿ ಅನಾವರಣಗೊಂಡಿದೆ. ಇದರೊಂದಿಗೆ ಗಿರೀಶ ಕಾಸರವಳ್ಳಿ ನಿರ್ದೇಶನದ ‘ಘರ್’ (ಕನ್ನಡದ ‘ಮನೆ’ ಸಿನಿಮಾ) ಹಿಂದಿ ಸಿನಿಮಾ ಪ್ರದರ್ಶನವಾಗಲಿದೆ. ಮಾರ್ಕಸ್ ಲೆನ್ಜ ನಿರ್ದೇಶನದ ಜರ್ಮನಿಯ ‘ರುಯಿನಾ’ ಸಿನಿಮಾ ಮತ್ತೊಂದು ಪ್ರಮುಖ ಆಕರ್ಷಣೆ. ನಗರದ ವಸತಿ ಸಮುಚ್ಚಯಗಳ ನಿರ್ಮಾಣದ ಸಂದರ್ಭದ, ಸರ್ಕಾರ ಮತ್ತು ಜನರ ನಡುವಿನ ಘರ್ಷಣೆ, 3 ಸಾವಿರ ಜನರ ಬದುಕು ಅತಂತ್ರಗೊಳ್ಳುವುದನ್ನು ಸಿನಿಮಾದಲ್ಲಿ ಹಿಡಿದಿಟ್ಟಿದ್ದಾರೆ.

ಈಜಿಪ್ಟ್ ಯುವ ನಿರ್ದೇಶಕ ಅಹ್ಮದ್ ನೂರ್ ಸಿನಿಮಾ ‘ವೇವ್’ ಕೂಡ ನೋಡಲೇಬೇಕಾದ ಸಿನಿಮಾ. ಸುಯೆಜ್ ನಗರದಲ್ಲಿ ಆರಂಭವಾದ ‘ಈಜಿಪ್ಟ್ ಕ್ರಾಂತಿ’ ಬಗ್ಗೆ ಸಿನಿಮಾ ಬೆಳಕು ಚೆಲ್ಲಿದೆ. ಈ ಸಿನಿಮಾದ ವಿಶೇಷತೆ ಎಂದರೆ ಕಾವ್ಯಾತ್ಮಕವಾದ ಸಂಭಾಷಣೆ, ವಿಶೇಷ ಅನಿಮೇಶನ್, ಸಂಗೀತ ವಿನ್ಯಾಸ, ಸಿನಿಮಾದ ವಿಶೇಷ ನಿರೂಪಣಾ ಶೈಲಿಯಿಂದ ಇದು ಪ್ರಮುಖವಾಗಿದೆ. ಹಾಗೇ ದಕ್ಷಿಣ ಆಫ್ರಿಕಾದ ಪ್ಯಾಬ್ಲೋ ಪಿನಾಡೋ ನಿರ್ದೇಶನದ ‘ನಮೋ’ ಎಂಬ ಮಹಿಳಾ ಕೇಂದ್ರಿತ ರಾಜಕೀಯ ಸಿನಿಮಾ ಹಾಗೂ ಪಾಯಲ್ ಕಪಾಡಿಯಾ ನಿರ್ದೇಶನದ ‘ವಾಟರ್‌ಮೆಲನ್, ಫಿಶ್ ಅಂಡ್‌ ಹಾಫ್‌ ಗೋಸ್ಟ್‌’ ಎಂಬ ಭಾರತೀಯ ಸಿನಿಮಾವನ್ನು ಈ ಸಿನಿಮೋತ್ಸವದಲ್ಲಿ ನೋಡಬಹುದು.

ಸಿನಿಮಾ ತಂತ್ರಜ್ಞರು, ನಿರ್ದೇಶಕರೊಂದಿಗೆ ಸಂವಾದ ಇರುತ್ತದೆಯೇ?

ಎಲ್ಲಾ ಸಿನಿಮಾದ ತಂತ್ರಜ್ಞರನ್ನು ಕರೆಸಲು ಸಾಧ್ಯವಿಲ್ಲ. ಆದರೆ ಪ್ರದರ್ಶನವಾಗಲಿರುವ ಪ್ರಮುಖ ಸಿನಿಮಾದ ನಿರ್ದೇಶಕರು, ಕಥೆಗಾರರು ಬರುತ್ತಾರೆ. ಸಿನಿಮಾ ಪ್ರದರ್ಶನದ ನಂತರ ಸಂವಾದ ಕಾರ್ಯಕ್ರಮವೂ ಇರುತ್ತದೆ. ಮಲಯಾಳಂನ ‌‘ಕಮ್ಮಟಿಪಾಡಮ್’ ಸಿನಿಮಾದ ನಿರ್ದೇಶಕ ರಾಜೀವ್ ರವಿ, ಕಥೆಗಾರ ಪಿ. ಬಾಲಚಂದ್ರನ್ ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.