ADVERTISEMENT

ನನ್ನೊಳಗೊಬ್ಬ ಹಿರಿಯನಿದ್ದ ಅಂತಾರೆ ಗುಲ್ಜಾರ್‌

​ಪ್ರಜಾವಾಣಿ ವಾರ್ತೆ
Published 21 ಮೇ 2018, 19:30 IST
Last Updated 21 ಮೇ 2018, 19:30 IST
ಗುಲ್ಜಾರ್‌
ಗುಲ್ಜಾರ್‌   

ನಾನು ಯಾವಾಗಲೂ ವೃದ್ಧರಂತೆ ಅಥವಾ ಹಿರಿಯರಂತೆಯೇ ಇದ್ದೆ. ನನ್ನ ಸಿನಿಮಾದಲ್ಲಿ ಎಂದಿಗೂ ಹದಿಹರೆಯದವರು ಪ್ರೀತಿ ಪ್ರೇಮದ ಮಾತುಗಳಾಡಲಿಲ್ಲ. ಮರ ಸುತ್ತಲಿಲ್ಲ. ಏನಿದ್ದರೂ ಪ್ರೌಢ ಪಾತ್ರಗಳೇ ಇರುತ್ತಿದ್ದವು. ಸಂಬಂಧಗಳ ಬಗ್ಗೆಯೇ ಇರುತ್ತಿದ್ದವು. ಕೆಲವೊಂದು ಚಿತ್ರಗಳು ಆ ಕಾಲದ ಏಕತಾನತೆಯನ್ನು ಮುರಿಯುವಲ್ಲಿ ಮಹತ್ವದ ಪಾತ್ರವಹಿಸಿದವು.

ಇಜಾಝತ್‌ ಚಿತ್ರವೂ ತ್ರಿಕೋನ ಪ್ರೇಮಕಥೆಯ ಚಿತ್ರ. ಆದರೂ ಅಲ್ಲಿ ಅವರವರ ಅಸ್ಮಿತೆಗಾಗಿ, ಅವರವರ ನೆಮ್ಮದಿಗಾಗಿ ಅವರ ದಾರಿಗಳು ಬೇರ್ಪಡುತ್ತವೆ. ಸಂಬಂಧದಲ್ಲಿನ ಹೊರಳುಗಳು ಅಲ್ಲಿದ್ದವು. ನಾಸಿರುದ್ದಿನ್‌ ಶಾ, ರೇಖಾ ಹಾಗೂ ಅನುರಾಧಾ ಪಟೇಲ್‌ ತಾರಾಗಣದಲ್ಲಿದ್ದರು. ಎಲ್ಲಿಯೂ ಯಾವತ್ತಿಗೂ ಹುಡುಗನೊಬ್ಬ ಹುಡುಗಿಯನ್ನು ಭೇಟಿ ಮಾಡಿ, ನಂತರ ಅವರಿಬ್ಬರಲ್ಲಿ ಪ್ರೀತಿ ಹುಟ್ಟಿ.. ಕಲ್ಲುಮುಳ್ಳಿನ ದಾರಿ ತುಳಿದು ಸುಖಸಂಸಾರದಲ್ಲಿ ಕತೆ ಮುಗಿಯುವಂತೆ ಯಾವತ್ತಿಗೂ ನಾನು ಯೋಚಿಸಲಿಲ್ಲ. ಬಹುಶಃ ಅಂದಿಗೂ, ಇಂದಿಗೂ ನನ್ನೊಳಗೊಬ್ಬ ಹಿರಿಯ ಇದ್ದೇ ಇದ್ದ ಎನಿಸುತ್ತದೆ.

ಗುಲ್ಜಾರ್‌ 83 ವರ್ಷದ ಕವಿ, ಸಿನಿಮಾ ನಿರ್ದೇಶಕ, ನಿರ್ಮಾಪಕರಾಗಿದ್ದು, ತಮ್ಮ ಸಿನಿಯಾನದ ಪಯಣವನ್ನು ಸಿನಿಮಾ ನಿರ್ದೇಶಕರಾದ ವಿಶಾಲ್‌ ಭಾರದ್ವಜ್‌ ಹಾಗೂ ರಾಕೇಶ್‌ ಓಂಪ್ರಕಾಶ್‌ ಮೆಹ್ರಾ ಜೊತೆಗಿನ ಸಂವಾದದಲ್ಲಿ ತಮ್ಮ ಚಿತ್ರಗಳ ಬಗ್ಗೆ ಬಿಚ್ಚುಮನಸಿನ ಮಾತುಗಳನ್ನಾಡಿದರು.

ADVERTISEMENT

ಇಜಾಝತ್‌ ಚಿತ್ರ ನಿರ್ಮಾಣವಾದಾಗ ವಿವಾಹಿತೆಯೊಬ್ಬಳ ಬಗ್ಗೆ ಭಾರತೀಯ ಸಮಾಜದಲ್ಲಿ ಬೇರೆಯದ್ದೇ ಪರಿಕಲ್ಪನೆಗಳಿದ್ದವು. ಆ ಕಾಲದಲ್ಲಿ ಗೃಹಿಣಿಯೊಬ್ಬಳ ಆತಂಕ ತಲ್ಲಣಗಳು, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಬಗೆಗಿನ ಚಿತ್ರ ಸ್ವೀಕಾರಾರ್ಹ ಎನಿಸಿರಲಿಲ್ಲ. ಹಾಗಾಗಿ ಸೋತಿತು.

ಆಂಧಿ ಚಿತ್ರದಲ್ಲಿಯೂ ಒಬ್ಬ ಸಮರ್ಥ ಮತ್ತು ಬಲಿಷ್ಠ ಮಹಿಳೆಯ ಪಾತ್ರದ ಮೂಲಕವೇ ಚಿತ್ರವನ್ನು ನೀಡಿದ್ದೆ. ನೀವೆಲ್ಲ ಆಂಧಿ ಚಿತ್ರವನ್ನು ನೋಡಿದ್ದಲ್ಲಿ, ತಿಳಿಯುತ್ತದೆ. ಆ ಚಿತ್ರದಲ್ಲಿ ಕೇವಲ ಸುಚಿತ್ರಾ ಸೇನ್‌ ಮಾತ್ರ ಹೆಣ್ಣುಮಗಳು. ಉಳಿದವೆಲ್ಲ ಪುರುಷ ಪಾತ್ರಗಳೇ. ಅದನ್ನು ಇಂದಿರಾಗಾಂಧಿಯ ಆತ್ಮಕಥನವೆಂಬಂತೆ ಬಿಂಬಿಸಲಾಯಿತು. ಆದರೆ ಅದು ಅಲ್ಲವೇ ಅಲ್ಲ. ಆದರೆ ಒಂದಂತೂ ಸ್ಪಷ್ಟಪಡಿಸಲು ಇಷ್ಟಪಡುವೆ. ಆ ಕಾಲಘಟ್ಟದಲ್ಲಿ ಮಹಿಳಾ ರಾಜಕಾರಣಿಯ ಪಾತ್ರಕ್ಕೆ ಮಾಡೆಲ್‌ನಂತೆ ಕಾಣಿಸಿದ್ದು ಇಂದಿರೆಯೇ ಎಂಬುದಂತೂ ಹೌದು.

ಅಲ್ಲಿಯವರೆಗೂ ಮಹಿಳಾ ಪಾತ್ರಗಳೆಂದರೆ ನಾಯಕನ ಅಮ್ಮ, ತಂಗಿ ಅಥವಾ ಪ್ರೇಯಸಿ ಪಾತ್ರಗಳು ಮಾತ್ರವಾಗಿದ್ದವು. ಮುಖ್ಯ ಭೂಮಿಕೆಯಲ್ಲಿ ಮಹಿಳೆಯನ್ನೇ ಕೇಂದ್ರವಾಗಿಸಿಕೊಂಡ ಚಿತ್ರವದು.  ಆ ಕಾಲದಲ್ಲಿ ಹಲವಾರು ಬದಲಾವಣೆಗಳನ್ನು ತಂದ ಚಿತ್ರ ಅದು.

ಗುಲ್ಜಾರ್‌ ವಿಶಾಲ್‌ ಹಾಗೂ ರಾಕೇಶ್‌ ಮೆಹ್ರಾ ಜೊತೆಗೆ ಸಿನಿಮಾ, ನೆನ್ನೆ, ಇಂದು ಮತ್ತು ನಾಳೆ ಎಂಬ ಕಾರ್ಯಕ್ರಮದಲ್ಲಿ ಸಂವಾದದಲ್ಲಿ ಪಾಲ್ಗೊಂಡಿದ್ದರು. ನಾಳೆಯ ಬಗೆಗೆ ಅವರ ಮಾತುಗಳು ಹೀಗಿದ್ದವು.

ಭಾರತೀಯ ಚಿತ್ರದ ಕಾಲಮಾನದಲ್ಲಿ ಹಲವಾರು ನದಿಗಳು ಹರಿದಾಡಿ ಹೋಗಿವೆ. ಇದೀಗ ಶೇಕ್ಸ್‌ಪಿಯರ್‌ನ ಕಥೆಗಳನ್ನು ಸ್ಥಳೀಯ ಜಾಯಮಾನಕ್ಕೆ ಹೊಂದಿಸುವಲ್ಲಿ ಭಾರತೀಯ ಸಿನಿಮಾ ಪ್ರಯೋಗಗಳು ಶ್ಲಾಘನೀಯವಾಗಿವೆ. ಇದು ದೂರಲ್ಲ. ಇದು ಕೇವಲ ಪ್ರಶಂಸೆ ಮಾತ್ರವಾಗಿದೆ. ಮಖ್ಬೂಲ್‌ ("Macbeth"), ಓಂಕಾರಾ ("Othello")ಮತ್ತು "ಹೈದರ್‌" ("Hamlet"), ಇವೆಲ್ಲವನ್ನು ನೋಡಿದಾಗ ಶೇಕ್ಸ್‌ಪಿಯರ್‌ನ ನೆರಳೂ ಕಾಣಿಸದಂತೆ ಅಪ್ಪಟ ಓರಿಜನಲ್‌ ಎನಿಸುತ್ತವೆ. ಇದು ದೂರು ಅಲ್ಲವೇ ಅಲ್ಲ. ಕೆಲವೊಮ್ಮೆ ಹೋಗಿ ಶೇಕ್ಸ್‌ಪಿಯರ್‌ಗೆ ಹೇಳಬೇಕೆನಿಸುತ್ತದೆ. ದೆವ್ವದೊಂದಿಗೆ ಮಾತನಾಡುವುದು ಬಿಡು, ಬಂದು ಈ ಸಿನಿಮಾಗಳನ್ನು ನೋಡು ಎಂದು. ಅಷ್ಟು ಪರಿಣಾಮಕಾರಿಯಾಗಿ ಇವುಗಳನ್ನು ಹಿರಿತೆರೆಗೆ ಅಳವಡಿಸಲಾಗಿದೆ ಎಂದೂ ಅವರು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.