ADVERTISEMENT

‘ನವರತ್ನ’ ಕಟ್ಟಿಕೊಟ್ಟ ಬದುಕು

ಸುಮನಾ ಕೆ
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST
‘ನವರತ್ನ’ ಕಟ್ಟಿಕೊಟ್ಟ ಬದುಕು
‘ನವರತ್ನ’ ಕಟ್ಟಿಕೊಟ್ಟ ಬದುಕು   

ನನಗೆ 15 ವರ್ಷವಾದಾಗಿನಿಂದ ಚಿನ್ನದ ವ್ಯಾಪಾರ– ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದೇನೆ. ಅಪ್ಪನ ಕೈ ಕೆಳಗೆ ಪಳಗಿ, ಅವರ ಕೆಲಸ ನೋಡುತ್ತಾ ನಾನು ಈ ವ್ಯಾಪಾರದ ಗುಟ್ಟು ಅರಿತೆ. ಅನುಭವ ಆದಂತೆ ವ್ಯಾಪಾರವೂ ಕೈ ಹಿಡಿಯಿತು. ಈಗ ಚಿನ್ನದ ತುಂಡು ಸಿಕ್ಕಿದರೂ ಸಾಕು, ಅದರ ಶುದ್ಧತೆ, ಗುಣಮಟ್ಟವನ್ನು ಒಂದೇ ದೃಷ್ಟಿಯಲ್ಲಿ ಹೇಳಿಬಿಡಬಲ್ಲೆ.

ನಾನು ಹುಟ್ಟಿ ಬೆಳೆದಿದ್ದು ಚಿಕ್ಕಪೇಟೆ ಸಮೀಪದ ನಗರ್ತಪೇಟೆಯಲ್ಲಿ. ನಮ್ಮ ಮೂಲ ರಾಜಸ್ಥಾನದ ಅಜ್ಮೀರದಿಂದ 100 ಕಿ.ಮೀ. ದೂರದ ಒಂದು ಹಳ್ಳಿ. ಅದರ ಹೆಸರು ಪಾಲಿ. ನನ್ನ ಅಜ್ಜ (ತಂದೆಯ ತಂದೆ) ವ್ಯಾಪಾರ ಮಾಡಲು 1941ರಲ್ಲಿ ರಾಜಸ್ಥಾನದಿಂದ ಬೆಂಗಳೂರಿಗೆ ಬಂದರು. ಆಗ ನನ್ನಪ್ಪ ಅಜ್ಮೀರದಲ್ಲೇ ಇದ್ದರು. ಇಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತದೆ ಎಂಬ ವಿಶ್ವಾಸ ಹುಟ್ಟಿದಾಗ 1947ರಲ್ಲಿ ನನ್ನ ಅಪ್ಪನನ್ನು ಇಲ್ಲಿಗೆ ಕರೆಸಿಕೊಂಡರು. ಆಗ ಬೆಂಗಳೂರು ಸಣ್ಣ ಗ್ರಾಮದಂತಿತ್ತಂತೆ. ಏನೂ ಅಭಿವೃದ್ಧಿಯಾಗಿರಲಿಲ್ಲ. ಮುಂದೆ ಅಪ್ಪ–ಅಮ್ಮ ಇಬ್ಬರೂ ಇಲ್ಲೇ ನೆಲೆಸಿದರಂತೆ.

1952ರಲ್ಲಿ ನಾನು ಹುಟ್ಟಿದೆ. ನಾವು ಐದು ಜನ ಮಕ್ಕಳು. ಅಪ್ಪ, ಅಜ್ಜ ಇಬ್ಬರೂ ಚಿನ್ನದ ವ್ಯಾಪಾರವನ್ನೇ ಮಾಡುತ್ತಿದ್ದರು. ನಗರ್ತಪೇಟೆಯಲ್ಲಿ ಸಣ್ಣ ಅಂಗಡಿ ಇತ್ತು. ನಾನು ಸಣ್ಣವ ಇದ್ದಾಗ ಆಟ ಆಡುವುದಕ್ಕಿಂತ ಅಪ್ಪನ ಜೊತೆ ಅಂಗಡಿಗೆ ಹೋಗಿ ಅವರಿಗೆ ಸಹಾಯ ಮಾಡಲು ಇಷ್ಟಪಡುತ್ತಿದ್ದೆ. ಅಕ್ಕಸಾಲಿಗರ ಪಕ್ಕದಲ್ಲಿ ಕುಳಿತು ಅವರು ಚಿನ್ನದ ಗಟ್ಟಿಗೆ ಒಡವೆಯ ರೂಪು ಕೊಡುವುದನ್ನು ಕುತೂಹಲದಿಂದ ನೋಡುತ್ತಾ ಕುಳಿತಿರುತ್ತಿದ್ದೆ.

ADVERTISEMENT

ನಾನು ಹುಟ್ಟಿದ ಎರಡು ವರ್ಷಗಳ ನಂತರ ನಗರ್ತಪೇಟೆಯಲ್ಲಿ ಅಪ್ಪ ಸಣ್ಣದಾಗಿ ಒಡವೆ ಅಂಗಡಿ ತೆರೆದರು. ಅದಕ್ಕೆ ನನ್ನ ಹೆಸರು ಇಟ್ಟರು. ಈಗಲೂ ‘ಗೌತಮ್‌ ಜ್ಯುವೆಲ್ಲರ್ಸ್‌’ ಅಲ್ಲಿಯೇ ಇದೆ. ಅದನ್ನು ನನ್ನ ತಮ್ಮ ನೋಡಿಕೊಳ್ಳುತ್ತಿದ್ದಾನೆ. ಅಪ್ಪನಿಗೆ ಚಿನ್ನದ ಕೆಲಸ ಕೈ ಹಿಡಿದಿತ್ತು. ನಾನು ಪ್ರಾಥಮಿಕ ಶಿಕ್ಷಣ ಪಡೆದಿದ್ದು ಸೇಂಟ್‌ ಜೋಸೆಫ್‌ ಶಾಲೆಯಲ್ಲಿ. ಸೆಂಟ್ರಲ್‌ ಕಾಲೇಜಿನಲ್ಲಿ ಬಿ.ಎ ಆನರ್ಸ್‌ ಓದಿದೆ. ನಾನು ಶಾಲೆ, ಕಾಲೇಜು ಮುಗಿಯುತ್ತಿದ್ದಂತೆ ನೇರ ನಮ್ಮ ಒಡವೆ ಅಂಗಡಿಗೆ ಹೋಗುತ್ತಿದ್ದೆ.

ನನಗೆ ಚಿಕ್ಕಂದಿನಿಂದಲೂ ಒಡವೆ ಅಂದರೆ ಇಷ್ಟ. ಒಡವೆ ವಿನ್ಯಾಸಗಳ ಚಿತ್ರಬರೆಯುವುದು, ಕ್ಯಾಟಲಾಗ್‌ ನೋಡುವುದರಲ್ಲಿ ಆಸಕ್ತಿ. ನಾನು ಬೇರೆ ಮಕ್ಕಳ ಹಾಗೇ ಆಟವಾಡಲು ಇಷ್ಟಪಡುತ್ತಿರಲಿಲ್ಲ. ಕೆಲಸಗಾರರ ಜೊತೆ ಒಡವೆ ಮಾಡುವುದನ್ನು ನೋಡುವುದು, ಅವರ ಜೊತೆ ವಿನ್ಯಾಸದ ಬಗ್ಗೆ ಚರ್ಚೆ ಮಾಡುವುದು, ಅವರು ಚಿನ್ನದ ಶುದ್ಧತೆ ಹೇಗೆ ಪರೀಕ್ಷೆ ಮಾಡುತ್ತಾರೆ ಇದನ್ನೆಲ್ಲಾ ಗಮನವಿಟ್ಟು ನೋಡುತ್ತಿದ್ದೆ. ನಾನು ಅಪ್ಪನ ಕೆಲಸವನ್ನು ನೋಡುತ್ತಾ ಬೆಳೆದವನು. ಅವರ ಕೈಕೆಳಗೆ ಪಳಗಿದವನು. ಚಿನ್ನದ ಶುದ್ಧತೆ, ವಿನ್ಯಾಸಗಳಲ್ಲಿನ ವೈವಿಧ್ಯಗಳನ್ನು ಗುರುತಿಸುವುದನ್ನು ಅಪ್ಪನೇ ಹೇಳಿಕೊಟ್ಟಿದ್ದು. ಈಗ ನೋಡಿದ ಕೂಡಲೇ ಚಿನ್ನ ಯಾವ ಕಾಲದ್ದು? ಯಾವಾಗ ವಿನ್ಯಾಸ ಮಾಡಿದ್ದಿರಬಹುದು? ಎಂದು ಅಂದಾಜಿನಲ್ಲೇ ಹೇಳಬಲ್ಲೆ.

ನಾನು 21 ವರ್ಷದವನಿದ್ದಾಗ ಸ್ವತಂತ್ರವಾಗಿ ವ್ಯಾಪಾರ ಮಾಡಲು ಆರಂಭಿಸಿದೆ. ಅಲ್ಲಿಂದ ಇಲ್ಲಿಯವೆರಗೂ ಒಂದು ದಿನವೂ ನನಗೆ ವ್ಯಾಪಾರದಲ್ಲಿ ನಿರಾಸಕ್ತಿ ಬಂದಿಲ್ಲ. ಹೊಸ ಹೊಸ ಟ್ರೆಂಡ್‌ ಬಂದ ಹಾಗೆಯೇ ನಮ್ಮ ಅಂಗಡಿಯಲ್ಲೂ ಅದನ್ನು ಆಳವಡಿಸಿಕೊಂಡಿದ್ದೇವೆ. ಇದೊಂದು ಸೃಜನಾತ್ಮಕ ಕ್ಷೇತ್ರ. ಇಲ್ಲಿ ಕ್ರಿಯಾಶೀಲತೆಗೆ ತುಂಬ ಅವಕಾಶವಿದೆ.

ಅಪ್ಪ ಬೆಂಗಳೂರಿನಲ್ಲಿ ವ್ಯಾ‍ಪಾರ ಆರಂಭಿಸಿದಾಗ ಜ್ಯುವೆಲ್ಲರಿ ಮಾರುಕಟ್ಟೆಗೆ ಹೆಚ್ಚು ಅವಕಾಶಗಳಿರಲಿಲ್ಲ. ಗ್ರಾಹಕರ ನಂಬಿಕೆ ಉಳಿಸಿಕೊಳ್ಳಲು ಚಿನ್ನದ ಶುದ್ಧತೆ, ಗುಣಮಟ್ಟ ಕಾಯ್ದುಕೊಳ್ಳಬೇಕಾಗಿತ್ತು. ಇದಕ್ಕಾಗಿ ಅಪ್ಪ ಒಳ್ಳೆಯ ಅಕ್ಕಸಾಲಿಗರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆಗ ನಗರದಲ್ಲಿ 20–30 ಅಂಗಡಿಗಳೂ ಇರಲಿಲ್ಲ. ಅಷ್ಟೊಂದು ವ್ಯಾಪಾರವೂ ಇರಲಿಲ್ಲ ಎನ್ನಿ. ಕಳೆದ 15 ವರ್ಷಗಳಿಂದಷ್ಟೇ ಚಿನ್ನದ ವ್ಯಾಪಾರ ಅಭಿವೃದ್ಧಿಯಾಗಿರುವುದು.

1990ರಲ್ಲಿ ನಾನು ಎಂ.ಜಿ. ರಸ್ತೆಯಲ್ಲಿ ‘ನವರತನ್‌’ ಜ್ಯುವೆಲ್ಲರ್ಸ್‌ ಪ್ರಾರಂಭಿಸಿದೆ. ಇಲ್ಲಿಗೆ ಬಂದ ಮೇಲೆ ಚಿನ್ನದ ವ್ಯಾಪಾರಕ್ಕೆ ಮತ್ತಷ್ಟು ಅವಕಾಶ ದೊರೆಯಿತು. ವ್ಯಾಪಾರ ವೃದ್ಧಿ ಆಯಿತು. ಈಗ ಜಯನಗರ, ರಾಜಾಜಿನಗರದಲ್ಲೂ ನವರತನ್‌ ಶಾಖೆಗಳು ಇವೆ. ದೆಹಲಿಯ ಖಾನ್‌ ಮಾರ್ಕೆಟ್‌ನಲ್ಲೂ ನಮ್ಮ ಶಾಖೆ ಇದೆ. ದೆಹಲಿಯಲ್ಲಿ ನಾವು ಅನೇಕ ಬಾರಿ ನಮ್ಮ ಆಭರಣ ಪ್ರದರ್ಶನ ಕಾರ್ಯಕ್ರಮಗಳನ್ನು ಮಾಡಿದ್ದೆವು. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಯಿತು. ಅದರಿಂದ ಉತ್ತೇಜಿತರಾಗಿ ಅಲ್ಲಿ ನಮ್ಮ ಶಾಖೆ ತೆರಯಲು ನಿರ್ಧರಿಸಿದೆವು.

ಬೆಂಗಳೂರು ನಗರದ ಪ್ರಮುಖ ಕಡೆಗಳಲ್ಲಿ ನಮ್ಮ ಶಾಖೆಗಳನ್ನು ಆರಂಭಿಸಿ ವ್ಯಾಪಾರ ವೃದ್ಧಿಸುವ ಕನಸೂ ಇದೆ. ನಾನು ವ್ಯಾಪಾರಕ್ಕೆ ಬಂದ‌ಮೇಲೆ ಆರಂಭದ 30-40 ವರ್ಷ ಏನೂ ಬದಲಾವಣೆ ಆಗಿರಲಿಲ್ಲ. ಎಂ.ಜಿ. ರಸ್ತೆಯಲ್ಲಿ ಅಂಗಡಿ ಆರಂಭಿಸಿದಾಗ ಅಂಗಡಿ ವಿಸ್ತೀರ್ಣ 2 ಸಾವಿರ ಚದರ ಅಡಿ. ಈಗ ಅಂಗಡಿ 10 ಸಾವಿರ ಚದರ ಅಡಿಗೆ ವಿಸ್ತಾರಗೊಂಡಿದೆ. ಈಗ ಜನಸಂಖ್ಯೆಯೂ ಜಾಸ್ತಿ ಆಗಿರುವುದರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಿದೆ. ಹಾಗಂತ ಗುಣಮಟ್ಟ, ಪರಿಶುದ್ಧತೆಯಲ್ಲಿ ನಾವು ಈಗಲೂ ಅದೇ ಸ್ಟಾಂಡರ್ಡ್ ಉಳಿಸಿಕೊಂಡಿದೆ.

ನವರತನ್ ಅಂದ್ರೆ ನವರತ್ನ ಎಂದರ್ಥ. ನವರತ್ನ ಅದೃಷ್ಟ, ಶುಭ ಎಂಬ ನಂಬಿಕೆಯಿದೆ. ಹೀಗಾಗಿ ಎಲ್ಲರೂ ನವರತ್ನದ ಒಡವೆ ಧರಿಸಲು ಇಷ್ಟಪಡುತ್ತಾರೆ. ಹೀಗಾಗಿ ಅಂಗಡಿಗೂ ನವರತನ್‌ ಎಂದು ಹೆಸರು ಇಟ್ಟೆ. ನಮ್ಮಲ್ಲಿಗೆ ನವರತ್ನದ ಒಡವೆಯನ್ನೇ ವಿಶೇಷವಾಗಿ ಕೇಳಿಕೊಂಡು ನಮ್ಮ ಅಂಗಡಿಗೆ ಜನ ಬರುತ್ತಾರೆ. ಹೀಗಾಗಿ ನಮ್ಮಲ್ಲಿ ನವರತ್ನದ ಬಳೆ, ನೆಕ್ಲೆಸ್‌, ಉಂಗುರ, ಕಿವಿಯೋಲೆ ವಿನ್ಯಾಸಗಳ ಸಂಗ್ರಹ ನಮ್ಮಲ್ಲಿ ಯಾವತ್ತಿಗೂ ಇರುತ್ತದೆ. ಬಾಲ್ಯದಲ್ಲಿ ಕಂಡ ನಗರಕ್ಕೂ, ಈಗಿನ‌ ನಗರಕ್ಕೂ ಅಗಾಧ ವ್ಯತ್ಯಾಸವಿದೆ. ಆಗಿನವರು ಸಾಂಪ್ರದಾಯಿಕ ಮನಃಸ್ಥಿತಿಯವರು. ಈಗಿನವರ ಜೀವನಶೈಲಿ, ಯೋಚನೆ ಎಲ್ಲಾ ಬೇರೆಯದ್ದೆ. ⇒

ಆಗ ಜ್ಯುವೆಲ್ಲರ್ಸ್ ಅಂದ್ರೆ ಚಿಕ್ಕಪೇಟೆ, ಅವೆನ್ಯೂ ರಸ್ತೆಗಳಲ್ಲಿ ಇತ್ತು. ಆಗ ಎಂ.ಜಿ. ರಸ್ತೆ ಆಧುನಿಕ ನಗರ. ಪ್ರವಾಸ ಬಂದವರೆಲ್ಲಾ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಅಲ್ಲಿ ಆಧುನಿಕ ಮನಸ್ಥಿತಿಯವರೇ ಜಾಸ್ತಿ ಇದ್ದರು. ಇಲ್ಲಿ ಆಭರಣ ಅಂಗಡಿಗಳು ಒಂದು ಅಥವಾ ಎರಡು ಇತ್ತಷ್ಟೇ. ಆದರೆ ಇಲ್ಲಿಯ ಜನರ ಮನಸ್ಥಿತಿ ಬೇರೆ ಇತ್ತು. ನಮ್ಮದು ಸಾಂಪ್ರದಾಯಿಕ ಚಿನ್ನದ ವ್ಯಾಪಾರ. ಇಲ್ಲಿ ಅಂಗಡಿ ಆರಂಭಿಸಿದರೆ ವ್ಯಾಪಾರ ಆಗಬಹುದೇ ಎಂಬ ಅಳುಕು ಇತ್ತು. ಧೈರ್ಯ ಮಾಡಿ ಅಂಗಡಿ ಆರಂಭಿಸಿಯೇ ಬಿಟ್ಟೆ.

ಗೌತಮ್‌ ಚಂದ್‌ ಪರಿಚಯ

* ತಂದೆ: ಮಂಗಿಲಾಲ್‌
* ಅಮ್ಮ: ಅಂಬ್ರಾವ್‌ ಬಾಯಿ
* ಮೂಲ: ರಾಜಸ್ತಾನದ ಅಜ್ಮೀರ್‌ ಸಮೀಪದ ಹಳ್ಳಿ ಪಾಲಿ
* ಶಿಕ್ಷಣ: ಬಿ.ಎ ಆನರ್ಸ್‌, ಸೆಂಟ್ರಲ್‌ ಕಾಲೇಜು
* ಪತ್ನಿ: ಪುಷ್ಪಾ
* ವಿಳಾಸ: ಎಂ.ಗೌತಮ್‌ ಚಂದ್‌, ಫೇರ್‌ಫೀಲ್ಡ್‌ ಲೇಔಟ್‌, ರೇಸ್‌ಕೋರ್ಸ್‌ ರಸ್ತೆ.
* ಮೊಬೈಲ್‌ ಸಂಖ್ಯೆ– 9845851078

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.