ADVERTISEMENT

ನ್ಯೂಯಾರ್ಕ್‌ ಸಿನಿಮೋತ್ಸವಕ್ಕೆ ‘ಪಡ್ಡಾಯಿ’

ಸತೀಶ ಬೆಳ್ಳಕ್ಕಿ
Published 22 ಮಾರ್ಚ್ 2018, 19:30 IST
Last Updated 22 ಮಾರ್ಚ್ 2018, 19:30 IST
‘ಪಡ್ಡಾಯಿ’ ಸಿನಿಮಾದ ದೃಶ್ಯ
‘ಪಡ್ಡಾಯಿ’ ಸಿನಿಮಾದ ದೃಶ್ಯ   

ಅಭಯಸಿಂಹ ನಿರ್ದೇಶನದ ತುಳು ಚಿತ್ರ ‘ಪಡ್ಡಾಯಿ’ ಮೇ 7ರಿಂದ 12ರವರೆಗೆ ನ್ಯೂಯಾರ್ಕ್‌ ನಗರಿಯಲ್ಲಿ ನಡೆಯಲಿರುವ ‘ನ್ಯೂಯಾರ್ಕ್‌ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌’ನಲ್ಲಿ ಪ್ರದರ್ಶನಗೊಳ್ಳುವ ಅವಕಾಶ ಪಡೆದುಕೊಂಡಿದೆ. ಈ ಮೂಲಕ ತುಳು ಚಿತ್ರದ ಕಂಪು ಜಾಗತಿಕ ಮಟ್ಟಕ್ಕೆ ಪಸರಿಸಿದಂತಾಗಿದೆ. ಈಚೆಗೆ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲೂ ‘ಪಡ್ಡಾಯಿ’ ಚಿತ್ರ ಪ್ರದರ್ಶನಗೊಂಡಿತ್ತು. ಅಲ್ಲಿ ಚಿತ್ರ ವೀಕ್ಷಿಸಿದ ಜಗತ್ತಿನ ನಾನಾ ದೇಶದ ಸಿನಿಮೋಹಿಗಳು ಮತ್ತು ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಷೇಕ್ಸ್‌ಪಿಯರ್‌ನ ‘ಮ್ಯಾಕ್‌ಬೆತ್‌’ ನಾಟಕದಿಂದ ಸ್ಫೂರ್ತಿ ಪಡೆದ ಚಿತ್ರ ‘ಪಡ್ಡಾಯಿ’. ಅಭಯಸಿಂಹ ಅವರು ‘ಮ್ಯಾಕ್‌ಬೆತ್‌’ ನಾಟಕದ ಆತ್ಮವನ್ನು ಕರಾವಳಿಯ ಮೊಗವೀರರ ಜೀವನಕ್ಕೆ ಒಗ್ಗಿಸಿ, ಸಮಕಾಲೀನಗೊಳಿಸಿ, ವಿಶಿಷ್ಟ ನಿರೂಪಣೆಯ ಮೂಲಕ ಈ ಸಿನಿಮಾ ಮಾಡಿದ್ದಾರೆ. ಹಲವು ಆಯಾಮಗಳಲ್ಲಿ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವ ಈ ಸಿನಿಮಾಕ್ಕೆ ಕಾಡುವ ಗುಣ ಇದೆ.

‘ನ್ಯೂಯಾರ್ಕ್‌ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ನ ಕಾಂಪಿಟೇಷನ್‌ ವಿಭಾಗದಲ್ಲಿ ಪ್ರದರ್ಶನಕ್ಕೆ ‘ಪಡ್ಡಾಯಿ’ ಆಯ್ಕೆಯಾಗಿದೆ. ಮುಂದಿನ ತಿಂಗಳು ಪ್ರದರ್ಶನದ ದಿನಾಂಕ ತಿಳಿಯಲಿದೆ. ಇದು ತುಳುನಾಡಿನ ಸಿನಿಮಾ. ಕಥೆ ಕೂಡ ಕರಾವಳಿ ಭಾಗದ ಮೊಗವೀರರ ಬದುಕಿಗೆ ಸಂಬಂಧಿಸಿದ್ದು. ಹಾಗಾಗಿ, ಈ ಸಿನಿಮಾವನ್ನು ಕನ್ನಡ ಅಥವಾ ಬೇರೆ ಯಾವ ಭಾಷೆಯಲ್ಲೂ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗದು ಎಂಬ ಕಾರಣಕ್ಕೆ ತುಳುವಿನಲ್ಲೇ ನಿರ್ಮಿಸಿದೆ. ಸಾಂಪ್ರದಾಯಿಕ ಮೀನುಗಾರಿಕೆ ತೊರೆದು ಆಧುನಿಕ ಮೀನುಗಾರಿಕೆಗೆ ಆತುಕೊಂಡ ಪರಿಣಾಮ ಕಡಲ ಜೀವಜಗತ್ತು ಮತ್ತು ಮೊಗವೀರರ ಬದುಕಿನಲ್ಲಾಗುತ್ತಿರುವ ಪಲ್ಲಟಗಳ ಮೇಲೂ ಚಿತ್ರ ಬೆಳಕು ಚೆಲ್ಲುತ್ತದೆ’ ಎನ್ನುತ್ತಾರೆ ನಿರ್ದೇಶಕ ಅಭಯಸಿಂಹ.

ADVERTISEMENT

ಸೂರ್ಯ ಕಂತುವ ದಿಕ್ಕಿಗೆ (ಪಶ್ಚಿಮ) ‘ಪಡ್ಡಾಯಿ’ ಎಂಬರ್ಥವಿದೆ. ಕಡಲ ಮಕ್ಕಳಾದ ಮೊಗವೀರರು ಸಮುದ್ರಕ್ಕೂ ‘ಪಡ್ಡಾಯಿ’ ಎನ್ನುತ್ತಾರೆ. ಈಗಾಗಲೇ ಪ್ರೀಮಿಯರ್‌ ಶೋ ಮುಗಿಸಿ, ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಚಿತ್ರ ರಸಿಕರ ಮನಗೆದ್ದಿರುವ ‘ಪಡ್ಡಾಯಿ’ ಸಿನಿಮಾ ನೋಡಬೇಕೆಂದರೆ ಪ್ರೇಕ್ಷಕರು ಇನ್ನೂ ಸ್ವಲ್ಪ ದಿನ ಕಾಯಬೇಕು. ಏಕೆಂದರೆ, ‘ಪಡ್ಡಾಯಿ’ ಸಿನಿಮಾ ನ್ಯೂಯಾರ್ಕ್‌ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡ ನಂತರವಷ್ಟೇ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.