ADVERTISEMENT

ಪಾತ್ರಗಳಲ್ಲಿ ಕಲಾವಂತಿಕೆ ಹುಡುಕುವ ಅಂಬರೀಷ್‌

ಹೇಮಾ ವೆಂಕಟ್
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST
ಈಶ್ವರನ ಪಾತ್ರದಲ್ಲಿ ಅಂಬರೀಷ್‌ ಸಾರಂಗಿ
ಈಶ್ವರನ ಪಾತ್ರದಲ್ಲಿ ಅಂಬರೀಷ್‌ ಸಾರಂಗಿ   

ಕಿರುತೆರೆಯಲ್ಲಿ ಗಂಭೀರ ಪಾತ್ರಗಳನ್ನು ನಿರ್ವಹಿಸುತ್ತಿರುವ ಅಂಬರೀಷ್‌ ಸಾರಂಗಿ ನಟನೆಯನ್ನು ಅಷ್ಟೇ ಗಂಭೀರವಾಗಿ ತೆಗೆದುಕೊಂಡವರು. ಚಿತ್ರದುರ್ಗದ ಹಿರಿಯೂರಿನ ರಂಗೇನಹಳ್ಳಿಯವರಾದ ಇವರು ನಟನೆಯ ಜೊತೆಗೆ ಸಹಜ ಕೃಷಿ ಪದ್ಧತಿಯಲ್ಲಿ ಕೃಷಿ ಮಾಡುವುದರಲ್ಲೂ ತೊಡಗಿಸಿಕೊಂಡಿದ್ದಾರೆ.

ದಾವಣಗೆರೆಯಲ್ಲಿ ಪದವಿ ಓದುತ್ತಿರುವಾಗಲೇ ಸಿನಿಮಾ ನಟನಾಗುವ ಕನಸು ಕಂಡವರು. ಆ ಉದ್ದೇಶದಿಂದಲೇ ಆದರ್ಶ ಫಿಲ್ಮ್‌್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನೆಯಲ್ಲಿ ಡಿಪ್ಲೊಮಾ ಮಾಡಿದ್ದಾರೆ. ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನೃತ್ಯ–ನಾಟಕ–ಸಂಗೀತ ವಿಷಯದಲ್ಲಿ ಎಂ.ಎ. ಮಾಡಿದ್ದಲ್ಲದೆ, ‘ರಂಗಭೂಮಿಯ ಮೂಲಕ ಶಿಕ್ಷಣದ ಮೌಲ್ಯವರ್ಧನೆ’ ಎಂಬ ವಿಷಯದಲ್ಲಿ ಪಿಎಚ್‌.ಡಿಯನ್ನೂ ಮಾಡಿದ್ದಾರೆ. ಈಗವರು ಡಾ.ಅಂಬರೀಷ್‌.

ಸಾಲುಸಾಲು ಮೆಗಾ ಧಾರಾವಾಹಿಗಳಲ್ಲಿ ಅಂಬರೀಷ್‌ ಪಾತ್ರ ಮಾಡಿದ್ದಾರೆ. ಕಲಾ ಗಂಗೋತ್ರಿ  ಮಂಜು ನಿರ್ದೇಶನದ  ‘ಬಂದೇ ಬರುತಾವ ಕಾಲ’, ‘ಅರುಂಧತಿ’ ಧಾರಾವಾಹಿಗಳಲ್ಲಿ ಪಾತ್ರ ಮಾಡಿದ್ದಾರೆ. ‘ಶಿರಡಿ ಸಾಯಿಬಾಬಾ’  ಧಾರಾವಾಹಿಯಲ್ಲಿ ಬಾಬಾ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದ ಅಂಬರೀಷ್‌ 2012ರಿಂದ 2014ರವರೆಗೆ ಪ್ರಸಾರವಾದ ‘ಮಹಾಭಾರ’ ಧಾರಾವಾಹಿಯಲ್ಲಿ ‘ಅರ್ಜುನ’ ಪಾತ್ರ ಮಾಡಿ ಪೌರಾಣಿಕ ಪಾತ್ರಗಳಿಗೂ ಸೈ ಎನಿಸಿಕೊಂಡವರು. 

ಬರಗೂರು ರಾಮಚಂದ್ರಪ್ಪ ಅವರ ‘ಶಬರಿ’, ‘ಬೆಕ್ಕು’, ‘ಭೂಮಿತಾಯಿ’ ಮುಂತಾದ ಕಲಾತ್ಮಕ ಚಿತ್ರಗಳಲ್ಲಿ ನಟಿಸಿದ ಇವರು ‘ಬಳ್ಳಾರಿ ನಾಗ’ ಕಮರ್ಷಿಯಲ್‌ ಸಿನಿಮಾದಲ್ಲೂ ನಟಿಸಿದ್ದಾರೆ. ಆ ನಂತರ  ಸಿನಿಮಾದಲ್ಲಿ ಹೆಚ್ಚು ಅವಕಾಶ ಸಿಕ್ಕಿಲ್ಲ. ಆದರೆ, ಆ ಬಗ್ಗೆ ಕೊರಗು ಅವರಲ್ಲಿಲ್ಲ. ಸಿಕ್ಕ  ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

‘ಅಂತಿಮ ವರ್ಷದ ಎಂಎಯಲ್ಲಿ ಒಂದು ನಾಟಕ ನಿರ್ದೇಶನ ಮಾಡುವುದು ಕಡ್ಡಾಯ. ಹೀಗೆ ನಾಟಕ ನಿರ್ದೇಶನ ಮಾಡುವುದನ್ನು ಕಲಿತೆ. ಸಹಪಾಠಿಗಳ ನಿರ್ದೇಶನದಲ್ಲಿ ನಟಿಸಿದೆ. 2005ರಲ್ಲಿ ರಂಗೋತ್ಸವ ಶುರು ಮಾಡಿದರು. ಹಳೇ ವಿದ್ಯಾರ್ಥಿಗಳು ರಂಗೋತ್ಸವದಲ್ಲಿ  ಸಕ್ರಿಯವಾಗಿ ಭಾಗವಹಿಸುತ್ತಿದ್ದೆವು. ರಂಗೋತ್ಸವದಲ್ಲಿ ಸುಮಾರು ಆರೇಳು ನಾಟಕಗಳಲ್ಲಿ ಅಭಿನಯಿಸಿದೆ. ನಟನೆಯಲ್ಲಿ ಆತ್ಮವಿಶ್ವಾಸ ಹೆಚ್ಚಿತು’ ಎಂದು ಬದುಕಿನ ಮೊದಲ ಮೆಟ್ಟಿಲುಗಳನ್ನು ನೆನಪಿಸಿಕೊಳ್ಳುತ್ತಾರೆ ಅವರು.

‘ಅಭಿನಯದ ಕನಸಿಗೆ ರಂಗೋತ್ಸವ ಸಹಾಯಕವಾಯಿತು. ನಾಟಕಗಳ ಫೋಟೊ ಕೈಲಿ ಹಿಡಿದು ನಿರ್ದೇಶಕರ ಮನೆ ಬಾಗಿಲಿಗೆ ಎಡತಾಕಲು ಆರಂಭಿಸಿದೆ. 2006ರವರೆಗೂ ನಾಟಕ ಮಾಡುವುದು, ಫೋಟೊ ಹಿಡಿದು ಅಲೆಯುವುದೇ ಕೆಲಸವಾಯಿತು.  2007ರಲ್ಲಿ ಈ ಟೀವಿಯಲ್ಲಿ ಪ್ರಸಾರವಾದ ‘ಮಿಂಚು’ ಧಾರಾವಾಹಿಯಲ್ಲಿ ಸಹ ನಿರ್ದೇಶಕನಾಗುವ ಅವಕಾಶ ಸಿಕ್ಕಿತ್ತು. ಅದಾದ ನಂತರ ಟಿ.ಎನ್‌.ಸೀತಾರಾಂ ಅವರ ‘ಭೂಮಿಕಾ ಪ್ರೊಡಕ್ಷನ್‌’ ನಿರ್ಮಾಣದ ‘ಮಳೆಬಿಲ್ಲು’ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತು. ಆನಂತರ ಅವಕಾಶಕ್ಕಾಗಿ ಬೇಡುವ ಪರಿಸ್ಥಿತಿ ಬರಲಿಲ್ಲ’ ಎಂದು ತಮ್ಮ  ಕಲಾ ಪಯಣವನ್ನು ವಿವರಿಸುತ್ತಾರೆ ಅಂಬರೀಷ್‌.

ರಂಗಭೂಮಿಯಿಂದ ಬಂದವರಿಗೆ ಎಂಥ ಪಾತ್ರಗಳಿಗೂ ಜೀವ ತುಂಬುವ  ಕಸುವಿರುತ್ತದೆ. ನಾಟಕಗಳಲ್ಲಿ ತಮ್ಮ ವಯಸ್ಸಿಗೆ ಮೀರಿದ ಪಾತ್ರಗಳಿಗೆ ಜೀವ ತುಂಬುವುದು ಅವರಿಗೆ ಸುಲಭ. ಅಂಬರೀಷ್‌ ಕೂಡಾ ಇಂಥದ್ದೇ ಸವಾಲು ಎದುರಿಸಿದವರು. ಕಳೆದ ಮೂರು ವರ್ಷಗಳಿಂದ  ‘ಶುಭ ವಿವಾಹ’ ಧಾರಾವಾಹಿಯಲ್ಲಿ ಮಲೆನಾಡಿನ ಮನೆಯೊಂದರ ಹಿರಿಯ  ಯಜಮಾನನ ಪಾತ್ರ  ನಿರ್ವಹಿಸುತ್ತಿದ್ದಾರೆ.
‘ನನ್ನ ಆತ್ಮಸಾಕ್ಷಿಗೆ ವಿರುದ್ಧವಿರುವ, ಕಲಾವಂತಿಕೆ ಮತ್ತು ಸಾಮಾಜಿಕ ಜವಾಬ್ದಾರಿ ಇಲ್ಲದ ಪಾತ್ರಗಳನ್ನು ಸಾರಾ ಸಗಟಾಗಿ ನಿರಾಕರಿಸಿದ್ದೇನೆ. ಹಾಗಾಗಿಯೇ ‘ಅಕ್ಕ’ ಧಾರಾವಾಹಿಯಿಂದ ಬೇಗನೇ ಹೊರ ಬಂದೆ. ತಂಗಿಗೆ ಅಕ್ಕ ಆದರ್ಶವಾಗಬೇಕು ಎಂದು ನಂಬಿರುವ ಸಮಾಜ ನಮ್ಮದು. ಆದರೆ, ಆ ಧಾರಾವಾಹಿಯಲ್ಲಿ ಅಕ್ಕನನ್ನು ನಾವು ನಂಬಿರುವ ಆದರ್ಶಕ್ಕೆ ವಿರುದ್ಧವಾಗಿ ತೋರಿಸಲಾಗುತ್ತಿತ್ತು.  ನನ್ನ ಆತ್ಮಸಾಕ್ಷಿಗೆ ವಿರುದ್ಧ ಎನಿಸಿ ಹೊರ ಬಂದೆ’ ಎಂದು ತಮ್ಮ ಸ್ವಭಾವಕ್ಕೆ ಕನ್ನಡಿ ಹಿಡಿದರು.

‘ಮೆಗಾ ಧಾರಾವಾಹಿಗಳ ಕತೆಯ ಆರಂಭಕ್ಕೂ ನಂತರ ಅವು ಸಾಗುವ ದಿಕ್ಕಿಗೂ ಸಂಬಂಧವೇ ಇರುವುದಿಲ್ಲ. ಕಿರುತೆರೆಯಲ್ಲಾದರೂ ಒಂದೇ ಪಾತ್ರಗಳಿಗೆ  ಅಂಟಿಕೊಳ್ಳುವುದು ನನಗೆ ಇಷ್ಟವಿಲ್ಲ. ಹಾಗಾಗಿ  ಒಂದೇ ಬಗೆಯ ಪಾತ್ರಗಳಿದ್ದಾಗ ಒಲ್ಲೆ ಎನ್ನುತ್ತೇನೆ. ಮೆಗಾ ಧಾರಾವಾಹಿಗಳಲ್ಲಿ ಮೂರು–ನಾಲ್ಕು ವರ್ಷ ಒಂದೇ ಬಗೆಯ ಪಾತ್ರದಲ್ಲಿ ಅಭಿನಯಿಸುವುದೇ ಹಿಂಸೆ. ಅದಾದ ನಂತರವೂ ಅಂಥದ್ದೇ ಪಾತ್ರ ಮಾಡುವುದೆಂದರೆ ಜುಗುಪ್ಸೆಯಾಗುತ್ತದೆ. ಹಾಗಾಗಿ, ವಿಭಿನ್ನ ಪಾತ್ರ ಸಿಕ್ಕಿದರೆ ಮಾತ್ರ ಒಪ್ಪಿಕೊಳ್ಳುತ್ತೇನೆ’ ಎಂದು ನೇರವಾಗಿ ನುಡಿಯುತ್ತಾರೆ.

ಕೃಷಿ ಬಿಟ್ಟಿಲ್ಲ...
‘ನಟನಾ ವೃತ್ತಿಗೆ ಬಂದರೂ ಊರಿನಲ್ಲಿ ಕೃಷಿ ಮಾಡುವುದನ್ನು ಬಿಟ್ಟಿಲ್ಲ.  ರಂಗೇನಹಳ್ಳಿಯಲ್ಲಿ ಸ್ವಲ್ಪ ಜಮೀನು ಇದೆ. ಅಲ್ಲಿ ಮೊದಲು ಈರುಳ್ಳಿ ಬೆಳೆಯುತ್ತಿದ್ದೆ. ಕಿರುತೆರೆಯಲ್ಲಿ ಹೆಚ್ಚು ಅವಕಾಶ ಸಿಕ್ಕಿದಾಗ ಕೃಷಿಗೆ ಸಂಪೂರ್ಣ ಗಮನ ನೀಡುವುದು ಸಾಧ್ಯವಾಗಲಿಲ್ಲ.

ಹಾಗಾಗಿ ಈರುಳ್ಳಿ ಬಿಟ್ಟು ದಾಳಿಂಬೆ  ಹಾಕಿದೆ.  ನೀರಿನ ಮಿತ ಬಳಕೆಗೆ ಪೂರಕವಾಗಿ ಹನಿ ನೀರಾವರಿ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದೇನೆ.  ನೈಸರ್ಗಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆ ಮಾಡುತ್ತೇನೆ.  ಕೃಷಿಯನ್ನು ಲಾಭದ ದೃಷ್ಟಿಯಿಂದಷ್ಟೇ ನೋಡಬಾರದು ಎಂಬುದನ್ನು  ರಂಗಭೂಮಿ ಕಲಿಸಿದೆ’ ಎಂದು ಕೃಷಿ ಕಾಯಕದ ಬಗ್ಗೆ  ವಿವರಿಸುತ್ತಾರೆ.

ಮೆಗಾ ಧಾರಾವಾಹಿ ಸ್ಲೋ ಪಾಯಿಸನ್‌ ಇದ್ದಂತೆ
‘ಈಜು ಬಾರದವರು ನೀರಿನಲ್ಲಿ ಮುಳುಗಿ ಸಾಯುವುದು ಸಹಜ. ಆದರೆ ಈಜು ಬರುವವರು ನೀರಿನಲ್ಲಿ ಮುಳುಗಿ ಸಾಯುವುದು ತಪ್ಪು ಎಂದು ನನ್ನ ಗುರುಗಳು ಹೇಳುತ್ತಿದ್ದರು. ಮೆಗಾ ಧಾರಾವಾಹಿಗಳು ಸ್ಲೋ ಪಾಯಿಸನ್‌ ಇದ್ದಂತೆ. ನಮ್ಮ ಸ್ವಂತಿಕೆಯನ್ನು ನಿಧಾನವಾಗಿ ಕೊಲ್ಲುತ್ತವೆ. ಆ ಬಗ್ಗೆ ಎಚ್ಚರದಿಂದಿದ್ದೇನೆ’.
–ಅಂಬರೀಷ್‌ ಸಾರಂಗಿ, ಕಿರುತೆರೆ ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.