ADVERTISEMENT

ಪಾಶ್ಚಾತ್ಯ ಹಾಡುಗಳ ಹಾದಿಯಲ್ಲಿ ಶಾರ್ವಿ...

ನಗರದ ಅತಿಥಿ

ಸುರೇಖಾ ಹೆಗಡೆ
Published 19 ಏಪ್ರಿಲ್ 2017, 19:30 IST
Last Updated 19 ಏಪ್ರಿಲ್ 2017, 19:30 IST
ಶಾರ್ವಿ ಯಾದವ್‌
ಶಾರ್ವಿ ಯಾದವ್‌   

ಮಿನುಗುವ ಕಣ್ಣು, ಚೆಂದದ ಮೊಗ, ಮುದ್ದಾದ ನಗು, ಬೆಳ್ಳನೆ ಮೈಬಣ್ಣದ ಶಾರ್ವಿ ಯಾದವ್‌ ವೇದಿಕೆ ಏರಿ ಏರು ದನಿಯಲ್ಲಿ ಇಂಗ್ಲಿಷ್‌ ಗೀತೆಗಳನ್ನು ಹಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದವರು.

ಹಾಡಿನ ತಾಳಕ್ಕೆ ತಕ್ಕಂತೆ ಬೆರಳನ್ನೂ ಕುಣಿಸುತ್ತಾ,  ಕೆಲವೊಮ್ಮೆ ದೇಹವನ್ನೂ ಬಾಗಿಸುತ್ತಾ, ಕಣ್ಮುಚ್ಚಿ ಹಾಡುತ್ತಿದ್ದ ಆಕೆಗೆ ‘ದ ಸ್ಟೇಜ್‌ 2’ ರಿಯಾಲಿಟಿ ಷೋನಲ್ಲಿ ಪ್ರಶಸ್ತಿಯೂ ದಕ್ಕಿದೆ.

ನವದೆಹಲಿ ಮೂಲದ ಶಾರ್ವಿ ಸ್ಪರ್ಧೆ ಗೆದ್ದ ಮೇಲೆ ಹಾಡುವ ಅವಕಾಶಕ್ಕಾಗಿ ಮುಂಬೈ ಸೇರಿದ್ದಾರೆ. ಬೇರೆ ಸಂಗೀತ ಸಂಯೋಜಕರೊಂದಿಗೆ ಕೆಲಸ ಮಾಡುತ್ತಾ ಹೊಸ ಪ್ರಾಜೆಕ್ಟ್‌ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 



* ನಿಮ್ಮ ಬಗ್ಗೆ ಹೇಳಿ?
ಕಳೆದ ವರ್ಷವಷ್ಟೇ ಪದವಿ ಮುಗಿಸಿದ್ದೇನೆ. ಆಗ ಕಲರ್ಸ್‌ ಇನ್ಫಿನಿಟಿಯಲ್ಲಿ ಆಂಗ್ಲ ಭಾಷೆಗೆ ಸಂಬಂಧಿಸಿದ ಸಂಗೀತ ಸ್ಪರ್ಧೆ ಇರುವುದು ತಿಳಿಯಿತು. ಭಾರತದಲ್ಲಿ ಪಾಶ್ಚಿಮಾತ್ಯ ಹಾಡುಗಳಿಗೆ ವೇದಿಕೆ ಒದಗಿಸಿದ್ದು ಇದೊಂದೇ ರಿಯಾಲಿಟಿ ಷೋ. ವಿಶಾಲ್‌ ದಡ್ಲಾನಿ, ಮೋನಿಕಾ ಡೋಗ್ರಾ, ಎಹಸಾನ್‌ ನೂರಾನಿ, ದೇವರಾಜ್‌ ಸನ್ಯಾಲ್‌ ತೀರ್ಪುಗಾರರಾಗಿದ್ದರು.

* ರಿಯಾಲಿಟಿ ಷೋ ನಿಮ್ಮ ಬದುಕನ್ನು ಹೇಗೆ ಬದಲಿಸಿದೆ?
ಸಂಗೀತವನ್ನು ವೃತ್ತಿಯಾಗಿ ಸ್ವೀಕರಿಸಲು ಹಾಗೂ ಸಂಗೀತ ಪಯಣದಲ್ಲಿ ನನ್ನನ್ನು ಪ್ರೇರೇಪಿಸಿಕೊಳ್ಳಲಿ ಈ ರಿಯಾಲಿಟಿ ಷೋ ಮುಖ್ಯ ಕಾರಣವಾಯಿತು. ಸ್ಪರ್ಧೆ ತುಂಬ ಕಠಿಣವಾಗಿತ್ತು. ಅವರ ಮಧ್ಯೆ ನಾನು ಗೆದ್ದಾಗ ನಿಜವಾಗಿಯೂ ಖುಷಿ ಆಯಿತು. ನಂತರ ಸಿಕ್ಕ ಜನಪ್ರಿಯತೆ, ಜನರು ತೋರುವ ಗೌರವ ಆತ್ಮವಿಶ್ವಾಸ ಹೆಚ್ಚಿಸಿದೆ. ಸಂಗೀತ ಸಂಯೋಜಕರೊಂದಿಗೆ ಕೆಲಸ ಮಾಡುವ ಹಾಗೂ ಬಾಲಿವುಡ್‌ನಲ್ಲಿ ಕೆಲಸ ಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ.

* ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಿದೆಯಾ?
ಇನ್ನೂ ಇಲ್ಲ, ಕಳೆದ ಮೂರು ತಿಂಗಳಿನ ಹಿಂದಷ್ಟೇ ಮುಂಬೈಗೆ ಬಂದಿದ್ದೇನೆ. ಇಲ್ಲಿ ಯಾರ ಪರಿಚಯವೂ ನನಗಿಲ್ಲ. ಅವಕಾಶಗಳಿಗಾಗಿ ಪ್ರಯತ್ನ ಮುಂದುವರೆದಿದೆ. ಅಲ್ಲದೆ FY* ಎನ್ನುವ ಪ್ರಾಜೆಕ್ಟ್‌ ಒಂದರ ಮೇಲೆ ಕೆಲಸ ಮಾಡುತ್ತಿದ್ದೇನೆ. ಜನರಿಗೆ ಹಿಂದಿ ಹಾಗೂ ಇಂಗ್ಲಿಷ್‌ ಹಾಡುಗಳು ಮೆಚ್ಚುಗೆಯಾಗುತ್ತವೆ. ಹೀಗಾಗಿ ನನ್ನ FY* ಪ್ರಾಜೆಕ್ಟ್‌ನಲ್ಲಿ ಹಿಂದಿ ಹಾಗೂ ಇಂಗ್ಲಿಷ್‌ ಹಾಡುಗಳನ್ನು ಸೇರಿಸಿ ಹೊಸ ಸಂಗೀತ ಸಂಯೋಜಿಸುವ ಪ್ರಯತ್ನದಲ್ಲಿದ್ದೇನೆ.

* ಸಂಗೀತ ಪ್ರೀತಿ ಬೆಳೆದಿದ್ದು ಹೇಗೆ?
ಕಳೆದ ಹತ್ತು ವರ್ಷಗಳಿಂದ ಸಂಗೀತ ಕಲಿಯುತ್ತಿದ್ದೇನೆ. ಲಂಡನ್‌ ಮೂಲದ ಟ್ರಿನಿಟಿ ಸಂಸ್ಥೆಯಿಂದ ಸಂಗೀತ ಕಲಿತಿದ್ದೇನೆ. ಚಿಕ್ಕಂದಿನಿಂದಲೂ ಶಿಕ್ಷಕರೆಲ್ಲಾ ನನಗೆ ಹಾಡುವಂತೆ ಪ್ರೇರೇಪಿಸುತ್ತಿದ್ದರು. ವಿಶ್ವದ ಪ್ರತಿಷ್ಠಿತ ಸಂಗೀತ ಶಾಲೆಗಳಿಂದ ಬಂದವರು ನನಗೆ ಸಂಗೀತ ಶಿಕ್ಷಕರಾಗಿದ್ದರು. ನಾನು ಹಾಡಬೇಕು ಎನ್ನುವುದನ್ನು ನನ್ನ ಶಿಕ್ಷಕಿಯಾದ ಶೇಸಿ ಫರ್ನಾಂಡಿಸ್‌ ನಿರ್ಧರಿಸಿದ್ದು. ಅವರೇ ನನಗೆ ಪ್ರೇರಣೆ.

* ಮನೆಯ ಬೆಂಬಲ ಹೇಗಿದೆ?
ಚಿಕ್ಕಂದಿನಿಂದಲೂ ನನಗೆ ಎಲ್ಲಾ ವಿಷಯದಲ್ಲಿ ಅವರು ಬೆಂಬಲಿಸಿದ್ದಾರೆ. ನಾನು ಏನೇ ಮಾಡುತ್ತೇನೆ ಎಂದಾಗಲೂ ಬೇಡ ಎನ್ನಲಿಲ್ಲ. ಸ್ಪರ್ಧೆಯಲ್ಲಿ ಗೆದ್ದ ನಂತರ  ನಾನು ಮುಂಬೈಗೆ ಹೋಗುತ್ತೇನೆ ಎಂದಾಗಲೂ ಅವರು ಕಳುಹಿಸಿಕೊಟ್ಟರು. ನಾನೇನೇ ಸಾಧಿಸಿದರೂ ಅದಕ್ಕೆ ಅವರ ಪ್ರೋತ್ಸಾಹವೇ ಕಾರಣ.

* ನಿಮ್ಮ ನೆಚ್ಚಿನ ಸಂಗೀತಗಾರರು ಯಾರು?
ಪಾಶ್ಚಿಮಾತ್ಯ ಸಂಗೀತಗಾರರಲ್ಲಿ ಏಲಾ ಫಿಟ್ಜ್‌ಗೆರಾಲ್ಡ್‌, ಸಿಯಾ ಬಿಯೋನ್ಸ್‌, ಲೂಯಿಸ್‌ ಆರ್ಮ್‌ಟ್ರಾಂಗ್‌ ತುಂಬಾ ಇಷ್ಟ. ಬಾಲಿವುಡ್‌ ಗಾಯಕಿಯರಲ್ಲಿ ಸುನಿಧಿ ಚೌಹಾನ್‌, ಶ್ರೇಯಾ ಘೋಷಾಲ್‌, ಶಿಲ್ಪಾ ರಾಯ್‌, ಸೋನು ನಿಗಮ್‌ ನನಗಿಷ್ಟ.

* ನಿಮ್ಮ ಗುರಿ?
ನಿರ್ಗತಿಕರಿಗೆ, ಅಸಹಾಯಕರಿಗೆ ಸಹಾಯ ಮಾಡಬೇಕು. ಅಲ್ಪಸಂಖ್ಯಾತರಿಗೆ, ಮಹಿಳೆಯರಿಗಾಗಿ ನಾನೇನಾದರೂ ವಿಶೇಷ ಕಾರ್ಯ ಮಾಡಬೇಕು ಎನ್ನುವ ಆಸೆ ಇದೆ.

* ಬೆಂಗಳೂರಿಗೆ ಇದೇ ಮೊದಲು ಬಂದಿದ್ದಾ?
ಈ ಮೊದಲು ಎರಡು ಬಾರಿ ಬಂದಿದ್ದೆ. ಹೊಸ ವರ್ಷದ ಸಂಭ್ರಮಾಚರಣೆಗೆ ಇಲ್ಲಿಗೆ ಬಂದಿದ್ದೆ. ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಸ್ವಲ್ಪ ದಿನ ಇದ್ದೆ. ಹಾರ್ಡ್‌ರಾಕ್‌ ಬ್ಯಾಂಡ್‌ ಜೊತೆ ಸಂಗೀತ ಕಾರ್ಯಕ್ರಮ ನೀಡಿದ್ದೆ. ಇಲ್ಲಿಯವರು ಸಂಗೀತವನ್ನು ತುಂಬಾ ಪ್ರೀತಿಯಿಂದ ಆಸ್ವಾದಿಸುತ್ತಾರೆ, ಮೆಚ್ಚುತ್ತಾರೆ, ಪ್ರೋತ್ಸಾಹಿಸುತ್ತಾರೆ. ತುಂಬಾ ಸ್ವಚ್ಛವಾದ ನಗರ ಇದು. ಇಲ್ಲಿಗೆ ಬರುವುದು, ಕಾರ್ಯಕ್ರಮ ನೀಡುವುದು ಎಂದರೆ ನನಗೆ ಖುಷಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT