ADVERTISEMENT

ಪುರುಷರಿಗೊಪ್ಪುವ ಲಾಂಗ್‌ ಹುಡಿ

ರಮೇಶ ಕೆ
Published 14 ಆಗಸ್ಟ್ 2017, 19:30 IST
Last Updated 14 ಆಗಸ್ಟ್ 2017, 19:30 IST
ಲಾಂಗ್‌ ಹುಡಿ
ಲಾಂಗ್‌ ಹುಡಿ   

ಪುರುಷರ ಫ್ಯಾಷನ್‌ ಲೋಕದಲ್ಲಿ ದಿನೇದಿನೇ ವಿದೇಶಿ ಉಡುಗೆ ತೊಡುಗೆಗಳು ಪರಿಚಯಗೊಳ್ಳುತ್ತಲೇ ಇರುತ್ತವೆ. ಫ್ಯಾಷನ್‌ ಮತ್ತು ಟ್ರೆಂಡ್‌ಗಳನ್ನು ಅನುಸರಿಸುವುದರಲ್ಲಿ ಪುರುಷರೇನೂ ಕಮ್ಮಿಯಿಲ್ಲ ಬಿಡಿ. ತಮ್ಮ ನೆಚ್ಚಿನ ಸಿನಿಮಾ ನಟರು, ಕ್ರಿಕೆಟ್‌ ಆಟಗಾರರು ಧರಿಸುವ ಉಡುಪುಗಳನ್ನು ತಾವೂ ಧರಿಸಿ ಟ್ರೆಂಡ್‌ ಆಗಿಸಿಬಿಡುವ ಕಲೆ ಈಗ ಪುರುಷರಿಗೂ ಸಿದ್ಧಿಸಿದೆ.

ಈ ಸಾಲಿಗೆ ಲಾಂಗ್‌ ಹುಡಿ ಜಾಕೆಟ್‌ಗಳು (ಹುಡಿ ಎಂದರೆ ಹೆಡೆಯಂತೆ ಕಾಣುವ ತಲೆಯುಳ್ಳ ಭಾಗ) ಸೇರಿಕೊಂಡಿವೆ. ತಲೆಯಿಂದ ಮೊಣಕಾಲಿನವರೆಗೂ ಚಾಚಿಕೊಂಡ ಈ ‘ಲಾಂಗ್‌ ಹುಡಿ’ಗಳು ಯುವಕರ ನೆಚ್ಚಿನ ಉಡುಪಾಗುತ್ತಿವೆ. ತಲೆಯಿಂದ ಸೊಂಟದವರೆಗಿನ ‘ರೆಗ್ಯುಲರ್‌ ಹುಡಿ’ಗಳೂ ಮಾರುಕಟ್ಟೆಯಲ್ಲಿವೆ. ಇವುಗಳನ್ನು ಕ್ಯಾಷುವಲ್‌ ಉಡುಪಾಗಿಯೂ ಧರಿಸಬಹುದು.

ಮೊಣಕಾಲುದ್ದದ ಲಾಂಗ್‌ ಹುಡಿಗಳು ಎತ್ತರ ಇರುವವರಿಗೆ ಚೆಂದ ಕಾಣುತ್ತವೆ. ಕುಳ್ಳಗಿರುವವರಿಗೆ ರೆಗ್ಯುಲರ್‌ ಹುಡಿಗಳು ಹೊಂದಿಕೊಳ್ಳುತ್ತವೆ. ಚಳಿಗಾಲಕ್ಕೂ ಈ ಹುಡಿಗಳು ಬೆಚ್ಚನೆಯ ಭಾವ ನೀಡುತ್ತವೆ. ಅಸಲಿಗೆ ಈ ಉಡುಗೆಗಳು ಪಾಶ್ಚಾತ್ಯ ದೇಶಗಳಲ್ಲಿ ಚಳಿಗಾಲದ ವಿಶೇಷ ಉಡುಗೆಯಾಗಿಯೇ ಪರಿಚಿತ.

ADVERTISEMENT

ನಗರದಲ್ಲಿ ಲಾಂಗ್‌ ಹುಡಿಗಳು ಅಷ್ಟಾಗಿ ಜನಪ್ರಿಯವಾಗಿರಲಿಲ್ಲ. ವಿಭಿನ್ನ ಬಗೆಯ ಲಾಂಗ್‌ ಹುಡಿಗಳನ್ನು ಆನ್‌ಲೈನ್‌ ಮಾರುಕಟ್ಟೆಗೆ ಪರಿಚಯಿಸಿದವರು Attiitude.comನ ಸ್ಥಾಪಕ ಮನ್ಸೂರ್ ಅಹಮ್ಮದ್‌. ‘ಫ್ಯಾಷನ್‌ ಎಂಬುದು ಈಗ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಅಮೆರಿಕದಲ್ಲಿ ಉಡುಪೊಂದು ಜನಪ್ರಿಯವಾದರೆ ಜಗತ್ತಿನಾದ್ಯಂತ ಅದು ಟ್ರೆಂಡ್‌ ಆಗಿ ಬದಲಾಗುತ್ತದೆ. ಯುರೋಪಿಯನ್‌ ದೇಶಗಳಲ್ಲಿ ಈ ಹುಡಿಗಳಿಗೆ ಹೆಚ್ಚು ಬೇಡಿಕೆಯಿದೆ. ನಮ್ಮಲ್ಲೂ 18ರಿಂದ 30 ವರ್ಷದೊಳಗಿನವರು ಹುಡಿ ಖರೀದಿಸುತ್ತಿದ್ದಾರೆ. ತಿಂಗಳಿಗೆ 1 ಸಾವಿರ ಹುಡಿಗಳು ಮಾರಾಟವಾಗಿವೆ’ ಎಂದು ಮಾಹಿತಿ ನೀಡುತ್ತಾರೆ

‘ಮೇಲ್ಭಾಗ ಹತ್ತಿ, ಒಳಭಾಗ ಉಲ್ಲನ್‌ ಬಳಸಿ ಮಾಡಿದ ಹುಡಿಗಳು ಚಳಿಗಾಲಕ್ಕೆ ಸೂಕ್ತವಾಗಿರುತ್ತವೆ. ಇವು ಯುರೋ‍ಪಿಯನ್‌ ದೇಶಗಳಲ್ಲಿ ಹೆಚ್ಚು ಬೇಡಿಕೆಯಲ್ಲಿವೆ. ಹತ್ತಿ ಬಟ್ಟೆಯಿಂದ ಮಾಡಿದ ಹುಡಿಗಳು ನಮ್ಮ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿವೆ’ ಎನ್ನುತ್ತಾರೆ ಮನ್ಸೂರ್‌.

ಬಿಳಿ, ಕಪ್ಪು ಹಾಗೂ ಕಂದು ಬಣ್ಣದ ಹುಡಿಗಳನ್ನು ಯುವಕರು ಹೆಚ್ಚು ಇಷ್ಟಪಡುತ್ತಿದ್ದಾರೆ‌. ಕ್ರಿಕೆಟಿಗ ಕ್ರಿಸ್‌ ಗೇಲ್‌ ಲಾಂಗ್‌ ಹುಡಿ ಧರಿಸುವುದು ಸಾಮಾನ್ಯ. ಅವರು ಲಾಂಗ್‌ ಹುಡಿ ಧರಿಸಿದ ಬಹಳಷ್ಟು ಫೋಟೊಗಳು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ.

ಹೆಸರಾಂತ ಬ್ರ್ಯಾಂಡ್‌ಗಳ ಹುಡಿಗಳ ಬೆಲೆ ₹1700ರಿಂದ ಆರಂಭವಾಗುತ್ತವೆ. ಆನ್‌ಲೈನ್ ಮಾರುಕಟ್ಟೆಯಲ್ಲೂ ಲಾಂಗ್‌ ಹುಡಿಗಳು ಲಭ್ಯ.

**

ಅಪರೂಪಕ್ಕೆ ಹುಡಿಗಳನ್ನು ಹಾಕಿಕೊಳ್ಳುತ್ತೇನೆ, ಪ್ರವಾಸ, ಮಾಲ್‌ಗಳಿಗೆ ಹೋಗುವಾಗ ಧರಿಸುತ್ತೇನೆ. ರೆಗ್ಯುಲರ್‌ ಹುಡಿಗಳು ಹೆಚ್ಚಾಗಿ ಖರೀದಿಸುತ್ತೇನೆ. ಬಿಳಿ, ಕಪ್ಪು ಹಾಗೂ ನೀಲಿ ಬಣ್ಣದ ಹುಡಿಗಳು ಇಷ್ಟವಾಗುತ್ತವೆ.


–ವಿಜಯ ರಾಘವೇಂದ್ರ, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.