ADVERTISEMENT

ಪ್ರೀತಿಯ ಗಾಳಿಯು ಬೀಸುತ್ತಿದೆ...

ಹರವು ಸ್ಫೂರ್ತಿ
Published 20 ಸೆಪ್ಟೆಂಬರ್ 2017, 19:30 IST
Last Updated 20 ಸೆಪ್ಟೆಂಬರ್ 2017, 19:30 IST
ಪ್ರೀತಿಯ ಗಾಳಿಯು ಬೀಸುತ್ತಿದೆ...
ಪ್ರೀತಿಯ ಗಾಳಿಯು ಬೀಸುತ್ತಿದೆ...   

‘ಪ್ರೀತಿಯೊಂದೇ ಸತ್ಯ’ ಎಂಬುದನ್ನು ಸಾರಿಹೇಳಲೆಂಬಂತೆ ನಿರ್ಮಿಸಿರುವ ಕಿರುಚಿತ್ರ ‘ಮಾಯ’.

ಎರಡು ಭಿನ್ನ ಧರ್ಮಗಳಿಗೆ ಸೇರಿದ ಹುಡುಗ-ಹುಡುಗಿ ಪರಸ್ಪರ ಪ್ರೀತಿಸುತ್ತಿರುತ್ತಾರೆ. ಇಬ್ಬರ ಪೋಷಕರು ಮದುವೆಗೆ ಒಪ್ಪುವುದಿಲ್ಲ. ಕುಟುಂಬಗಳ ಹಿತಾಸಕ್ತಿಯ ಕಾರಣ ಇಬ್ಬರೂ ದೂರಾಗುತ್ತಾರೆ. ಇದಿಷ್ಟೇ ಈ ಕಿರುಚಿತ್ರದ ಕಥೆಯಾಗಿದ್ದರೆ ಇದರಲ್ಲಿ ಏನು ವಿಶೇಷ ಎನಿಸುತ್ತಿರಲಿಲ್ಲ. ಕಿರುಚಿತ್ರದ ಕೊನೆಯಲ್ಲಿ ಒಂದು ತಿರುವಿದೆ. ಅದು ಧರ್ಮಗಳನ್ನೂ ಮೀರಿದ್ದು.

ಧರ್ಮದ ಬಗ್ಗೆ ಪೂರ್ವಾಗ್ರಹ; ದ್ವೇಷವನ್ನು ಬಿಟ್ಟು ಶಾಂತಿಯ ಬದುಕು ಕಟ್ಟಿಕೊಳ್ಳಲು ಬಯಸುವ ಕಿರುಚಿತ್ರದ ಯುವ ಜೋಡಿ ಒಂದು ವಿಶಿಷ್ಟ ಮಾದರಿಯಾಗಿ ನಿಲ್ಲುತ್ತದೆ.

ADVERTISEMENT

ಈ ಕಿರುಚಿತ್ರದ ಕಥೆಯನ್ನು ರಚಿಸಲು ಸ್ಫೂರ್ತಿ ತೆಲುಗು ಸಿನಿಮಾ ‘ಎ ಮಾಯ ಚೇಸಾವೆ’. ಈ ಸಿನಿಮಾದಲ್ಲೂ ಭಿನ್ನ ಧರ್ಮಿಯರು ಪ್ರೀತಿಸಿ ದೂರಾಗುವ ಸನ್ನಿವೇಶವಿದೆ. ಅದೇ ಎಳೆಯನ್ನು ಇಟ್ಟುಕೊಂಡು ಮುಂದೇನು ಮಾಡಬಹುದು ಎಂಬ ಭವಿಷ್ಯದ ವಿಸ್ತರಣೆಯನ್ನೂ ಸೇರಿಸಿ ಕಥೆ ಹೆಣೆದಿದ್ದಾರೆ ಸಾತ್ವಿಕ್.

ನೂತನ್ ಮತ್ತು ತೇಜಸ್ವಿನಿ ಕಥೆಗೆ ಜೀವಕೊಟ್ಟಿದ್ದಾರೆ. ರಂಗಭೂಮಿ ಹಿನ್ನೆಲೆ ಇರುವ ನೂತನ್ ಅವರ ಅಭಿನಯ ಸಹಜ ಸೊಗಡಿನಲ್ಲಿದೆ. ‘ನಾನು ಏಳೆಂಟು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದೇನೆ. ಕಿರುಚಿತ್ರದಲ್ಲಿ ಅಭಿನಯಿಸಿದ್ದು ಇದೇ ಮೊದಲು. ಇದೊಂಥರ ಹೊಸ ಅನುಭವ. ರಂಗಪ್ರಯೋಗದ ಗಾಂಭಿರ್ಯ ಅಭಿನಯ ಕೌಶಲಗಳು ಇಲ್ಲಿ ಬಳಕೆಗೆ ಬರುವುದಿಲ್ಲ. ಸಹಜವಾಗಿ ಸರಳವಾಗಿ ಅಭಿನಯಿಸಬೇಕು’ ಎನ್ನುವುದು ಅವರ ಮಾತು.

ನಗರದ ಕತ್ರಿಗುಪ್ಪೆ, ಕಬ್ಬನ್ ಪಾರ್ಕ್‌, ಇಂದಿರಾನಗರದಲ್ಲಿ ಚಿತ್ರೀಕರಣವಾಗಿದೆ. ಬೆಳಕನ್ನು ಸೂಕ್ಷ್ಮವಾಗಿ ನಿರ್ವಹಿಸುವ ಸಾತ್ವಿಕ್‌ ಅವರಿಗೆ ಸ್ಥಿರ ಛಾಯಾಗ್ರಹಣದಲ್ಲಿ ಆಸಕ್ತಿ. ಕಿರುಚಿತ್ರದ ಛಾಯಾಗ್ರಹಣವೂ ಅವರದೇ. ಕೆಲ ದೃಶ್ಯಗಳ ಪ್ರೇಮಿಂಗ್‌ನಲ್ಲಿ ಕೊಂಚ ಗೊಂದಲಕ್ಕೆ ಒಳಗಾದಂತೆ ಭಾಸವಾಗುತ್ತದೆ. ಮೂವಿಂಗ್‌ನಲ್ಲಿ ಲಾಂಗ್‌ಶಾಟ್‌ ಬಳಸಿರುವುದರಿಂದ ದೃಶ್ಯಗಳು ಹೆಚ್ಚು ಸ್ಫುಟವಾಗಿ ಮೂಡಿ ಬಂದಿವೆ. ಸರಳ ಫ್ರೇಮಿಂಗ್‌ ಮತ್ತು ಒನ್‌ ಟೂ ಒನ್‌ ಶಾಟ್‌ಗಳಲ್ಲೇ ಕಿರುಚಿತ್ರ ಮುಗಿಸಿದ್ದಾರೆ.

ಕಿರುಚಿತ್ರದಲ್ಲಿ ನೇರ ಧ್ವನಿಗ್ರಹಣವಿಲ್ಲ. ಹೆಚ್ಚಿನ ದೃಶ್ಯಗಳಲ್ಲಿ ವಾತಾವರಣದ ಸಹಜ ಶಬ್ದಗಳೂ ಇಲ್ಲ. ಕೇವಲ ಸಂಭಾಷಣೆಯು ಕಿರುಚಿತ್ರದ ಭಾವತೀವ್ರತೆಯ ಮೇಲೆ ಪರಿಣಾಮ ಬೀರಿದೆ. ಭಾವನಾತ್ಮಕ ಕಥೆ ಇರುವುದರಿಂದ ಹರಿತ ಹಿನ್ನೆಲೆ ಸಂಗೀತ ಹೊಸ ಮೆರುಗು ಕೊಡುತ್ತಿತ್ತು. ಮುಖ್ಯಪಾತ್ರಗಳಿಗೆ ಪ್ರವೀಣ್, ತುಳಸಿರಾಮ್ ಕಂಠದಾನ ಮಾಡಿದ್ದಾರೆ.

***

ಕಿರುಚಿತ್ರ: ಮಾಯ

ಛಾಯಾಗ್ರಹಣ, ರಚನೆ, ನಿರ್ದೇಶನ: ಸಾತ್ವಿಕ್

ಕಲಾವಿದರು: ನೂತನ್ ಕುಮಾರ್, ತೇಜಸ್ವಿನಿ, ಮಹದೇವ್, ರಮೇಶ್, ಮಂಜುಳಾ

ಸಂಕಲನ: ಕಲ್ಯಾಣ್ ಹೊಳ್ಳ

ಸಂಗೀತ: ಅರುಣ್ ಎಚ್.ಎಸ್.

ಚಿತ್ರಕಥೆ: ನಂದೀಶ್, ಸಾತ್ವಿಕ್

ಬಳಸಿದ ಕ್ಯಾಮೆರಾ: 600 ಡಿ

ಅವಧಿ: 7.4 ನಿಮಿಷ

ಕಿರುಚಿತ್ರದ ಕೊಂಡಿ: https://www.youtube.com/watch?v=rsbK2EsCIzo

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.