ADVERTISEMENT

ಪ್ರೇಮ ತುಳುಕಿಸುವ ಚಿತ್ರಗಳು

ಸತೀಶ ಬೆಳ್ಳಕ್ಕಿ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
ಹಮ್‌ ದಿಲ್‌ ದೆ ಚುಕೆ ಸನಮ್‌
ಹಮ್‌ ದಿಲ್‌ ದೆ ಚುಕೆ ಸನಮ್‌   

ಪ್ರೀತಿ ಎಂಬ ಎರಡಕ್ಷರದ ಪದ ತುಂಬ ಹಿಂದಿನಿಂದಲೂ ಸಿನಿಮಾ ನಿರ್ಮಾಣದ ಪ್ರಮುಖ ಸರಕಾಗಿ ಗುರ್ತಿಸಿಕೊಂಡಿದೆ. ಪ್ರೀತಿಯಲ್ಲಿ ಬೀಳುವಂತೆ ಪ್ರೇಕ್ಷಕರ ಮನಸ್ಸನ್ನು ಉಜ್ಜುವಂತಹ ಸಾಕಷ್ಟು ಸಿನಿಮಾಗಳು ಬಾಲಿವುಡ್‌ನಲ್ಲಿ ಬಂದಿವೆ. ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಜೀವನದ ಯಾವುದೋ ಒಂದು ಸಮಯದಲ್ಲಿ  ಬೆಳ್ಳಿತೆರೆಯ ಮೇಲೆ ನೋಡಿದ ಚೆಂದದ ಪ್ರೇಮಕಥಾನಕವನ್ನು ಮೆಚ್ಚಿಕೊಂಡು, ಅದರಲ್ಲಿ ತನ್ನನ್ನು ತಾನು ಕಲ್ಪಿಸಿಕೊಂಡು ಕಲ್ಪನೆಯ ಜೋಕಾಲಿಯಲ್ಲಿ ಜೀಕಿಯೇ ಇರುತ್ತಾನೆ. 

ಅಂದಿನಿಂದ ಇಂದಿನವರೆಗೂ  ಸಿನಿಮಾಗಳ ಪ್ರಭಾವಕ್ಕೆ ಒಳಗಾಗಿ ಅನೇಕ ಹುಡುಗ–ಹುಡುಗಿಯರು ಪ್ರೀತಿಯಲ್ಲಿ ಬಿದ್ದ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಇದು ಮುಂದೆಯೂ ಇರುತ್ತದೆ. ಪ್ರೀತಿಯನ್ನೇ ಧ್ಯೇನಿಸುವ ಪ್ರಣಯಪಕ್ಷಿಗಳ ಪಾಲಿಗೆ ಸದಾಕಾಲ ಪ್ರೇಮಾರಾಧನೆ ಎಂಬ ಸಾಂಬ್ರಾಣಿಯ ಘಮಲು ತುಂಬುವ ಕೆಲವು ಬಾಲಿವುಡ್‌ ಸಿನಿಮಾಗಳನ್ನು ಈ ವ್ಯಾಲೆಂಟೈನ್ಸ್‌ ಡೇ ಸಂದರ್ಭದಲ್ಲಿ ವೀಕ್ಷಿಸಲೇಬೇಕು.
*
ಹಮ್‌ ತುಮ್‌
ಚಿತ್ರದ ಪ್ರತಿಯೊಂದು ಸನ್ನಿವೇಶದಲ್ಲೂ ಮಧುರ ಮತ್ತು ಶೃಂಗಾರದ ಭಾವ ಅನುರಣನಗೊಳ್ಳಬೇಕು– ಈ ಬಗೆಯ  ಸಿನಿಮಾ ನೋಡಬೇಕೆಂದು ಬಯಸುವವರಿಗೆ ‘ಹಮ್‌ ತುಮ್‌’ ಅತ್ಯುತ್ತಮ ಆಯ್ಕೆ. ಸೈಫ್‌ ಅಲಿ ಖಾನ್‌, ರಾಣಿ ಮುಖರ್ಜಿ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾ ಪ್ರೇಮಿಗಳ ಭಾವ ಬಟ್ಟಲಿಗೆ ಅಮೃತ ಪ್ರಾಶನ ಮಾಡಿಸುತ್ತದೆ. ಹಾಗಾಗಿ, ಪ್ರೇಮಿಗಳ ದಿನದಂದು ಪ್ರೇಮಕಥಾನಕ ಸಿನಿಮಾ ನೋಡಬೇಕೆಂದು ಅಂದು ಕೊಂಡವರು ಹಮ್‌ ತುಮ್‌ ಕೂಡ ಪರಿಶೀಲಿಸಬಹುದು.
*
ಕಲ್‌ ಹೋ ನಾ ಹೊ
ನಿಖಿಲ್‌ ಅಡ್ವಾಣಿ ಅವರ ಚೊಚ್ಚಿಲ ‘ಚಿತ್ರ ಕಲ್‌ ಹೋ ನ ಹೊ’. ಶಾರುಖ್‌ ಖಾನ್‌, ಪ್ರೀತಿ ಜಿಂಟಾ, ಸೈಫ್‌ ಅಲಿ ಖಾನ್‌, ಜಯಾ ಬಚ್ಚನ್‌ ಪ್ರಮುಖ ತಾರಾಗಣದಲ್ಲಿರುವ ಈ ಸಿನಿಮಾಕ್ಕೆ ಪ್ರೇಮಿಗಳ ಎದೆಯಲ್ಲಿ ಅಡಗಿ ಕುಳಿತಿರುವ ನೂರು ಭಾವತಂತುಗಳನ್ನು ಮೀಟುವ ಶಕ್ತಿ ಇದೆ. ಹಲವು ಭಾವಗಳ ಗೊಂಚಲುಗಳನ್ನು ಒಂದೇ ಎರಡೂವರೆ ಗಂಟೆಯಲ್ಲಿ ಪ್ರೇಕ್ಷಕರಿಗೆ ಕಾಣಿಸುವ ಈ ಸಿನಿಮಾ ಪ್ರೇಮಿಗಳ ಮನಸ್ಸು ಆಚೀಚೆ ಸರಿಯದಂತೆ ಹಿಡಿದಿಟ್ಟುಕೊಳ್ಳುವಷ್ಟು ಶಕ್ತವಾಗಿದೆ.
*
ರೆಹನಾ ಹೈ ತೇರೆ ದಿಲ್ ಮೆ
ಕತೆಯಿಂದಷ್ಟೇ ಅಲ್ಲದೇ ಸಂಗೀತದ ಮಾಧುರ್ಯದಿಂದಲೂ ಪ್ರೇಮಿಗಳ ಹೃದಯ ಗೆದ್ದ ಸಿನಿಮಾ ಇದು. ಪ್ರೀತಿಗೆ ಬಿದ್ದ ಮನಸ್ಸುಗಳನ್ನು ಅತಿಯಾದ ಭಾವೋತ್ಕಟತೆಗೆ ದೂಡಿ, ಅವರ ಮನಸ್ಸಿನಲ್ಲಿ ಹಿತವಾದ ನೋವು ಮೀಟುವ ಶಕ್ತಿ ಈ ಸಿನಿಮಾಕ್ಕಿದೆ. ‘... ರೆಹನಾ ಹೈ ತೇರೆ ದಿಲ್‌ ಮೆ’ ಗೀತೆಯನ್ನು ಕೇಳುವಾಗ ಪ್ರೇಮಿಗಳ ಮನಸ್ಸು ಭಾವಪರವಶಗೊಳ್ಳುತ್ತದೆ.  ಈ ಸಿನಿಮಾದಲ್ಲಿ ದಿಯಾ ಮಿರ್ಜಾ ಮತ್ತು ಆರ್‌. ಮಾಧವನ್‌ ಜೋಡಿ ಪ್ರೇಕ್ಷಕರನ್ನು ಸೂಪರ್‌ ಆಗಿ ಮೋಡಿ ಮಾಡಿತ್ತು. ಈ ಜೋಡಿಯನ್ನು ತೆರೆಯ ಮೇಲೆ ಮತ್ತೊಮ್ಮೆ ಕಣ್ತುಂಬಿಕೊಳ್ಳಬೇಕು ಎಂಬ ಬಯಕೆ ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಇದ್ದರೂ ಅದು ಇಂದಿಗೂ ಈಡೇರಿಲ್ಲ. ಮ್ಯಾಡಿ ಮತ್ತು ರೀನಾ ಮಲ್ಹೋತ್ರಾ ಅವರ ಮುಗ್ಧ ಪ್ರೇಮಕತೆಯನ್ನು ಮತ್ತೊಮ್ಮೆ ಕಣ್ತುಂಬಿಕೊಂಡು ಪುಳಕಿಗೊಳ್ಳಲು ಪ್ರೇಮಿಗಳ ದಿನಕ್ಕಿಂತ ಶುಭ ಮುಹೂರ್ತ ಮತ್ತಿನ್ಯಾವುದಿದೆ!
*
ಆಶಿಕಿ 2
ತೀವ್ರತರವಾದ, ಆಳವಾದ ಭಾವನಾತ್ಮಕ ಪ್ರೇಮಕಥೆಗಳ ಚೆಲುವನ್ನು ಹೀರುವ ರಸಗ್ರಾಹಿಗಳು ನೀವು ಆಗಿದ್ದಲ್ಲಿ ಪ್ರೇಮಿಗಳ ದಿನದಂದು ತಪ್ಪದೇ ‘ಆಶಿಕಿ 2’ ಸಿನಿಮಾ ನೋಡಬೇಕು. ಮೋಹಿತ್‌ ಸೂರಿ ನಿರ್ದೇಶನದ ಮ್ಯೂಸಿಕಲ್‌ ರೊಮ್ಯಾಂಟಿಕ್‌ ಸಿನಿಮಾ ಇದು. ಆದಿತ್ಯ ರಾಯ್‌ ಕಪೂರ್‌ ಮತ್ತು ಶ್ರದ್ಧಾ ಕಪೂರ್‌ ಅವರು ಈ ಸಿನಿಮಾದಲ್ಲಿ ಉತ್ಕಟ ಪ್ರೇಮಿಗಳ ಪಾತ್ರ ನಿರ್ವಹಿಸಿದ್ದಾರೆ. ನವಯುಗ ಪ್ರೇಮಿಗಳ ಮನವನ್ನು ರಾಹುಲ್‌ ಜೈಕರ್‌ ಮತ್ತು ಆರೋಹಿ ಪಾತ್ರಗಳು ಸದಾ ಕಾಡುತ್ತಲೇ ಇರುತ್ತವೆ.
*
ಜಬ್‌ ವಿ ಮೆಟ್‌
ಬಿ–ಟೌನ್‌ನ ಕ್ಯೂಟ್‌ ಸ್ಟಾರ್‌ ಶಾಹಿದ್‌ ಕಪೂರ್‌ ಮತ್ತು ಸೈಜ್‌ ಝೀರೊ ಚೆಲುವೆ ಕರೀನಾ ಕಪೂರ್‌ ಜೋಡಿಯಲ್ಲಿ ಮೂಡಿಬಂದ ಸಿನಿಮಾ ‘ಜಬ್‌ ವಿ ಮೆಟ್‌’. ಟ್ರಾವೆಲ್‌ ಸಿನಿಮಾ ರೂಪಿಸುವಲ್ಲಿ ಪಳಗಿರುವ ಇಮ್ತಿಯಾಜ್‌ ಆಲಿ ನಿರ್ದೇಶನದ ಸಿನಿಮಾ ಇದು. ಪ್ರೇಮಿಗಳ ಪಾಲಿಗೆ ಸಾರ್ವಕಾಲಿಕವಾಗಿ ಮುದ್ದಾದ ಸಿನಿಮಾ ಎನ್ನಬಹುದು. ಪ್ರತಿಯೊಬ್ಬ ಪ್ರೇಮಿಯ ಹೃದಯ ತಟ್ಟುವ ಶಕ್ತಿ ಈ ಸಿನಿಮಾಕ್ಕಿದೆ.
*
ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ 
ಶಾರುಖ್‌ ಖಾನ್‌ ಮತ್ತು ಕೃಷ್ಣಸುಂದರಿ ಕಾಜೋಲ್‌ ಅಭಿನಯದ ಡಿಡಿಎಲ್‌ಜೆ, ಬಾಲಿವುಡ್‌ನ   ರೊಮ್ಯಾಂಟಿಕ್‌ ಕಲ್ಟ್‌ ಸಿನಿಮಾಗಳ ಪೈಕಿ ಪ್ರಮುಖವಾದದ್ದು. ಇದು ಬಾಲಿವುಡ್‌ನ ಸಾರ್ವಕಾಲಿಕ ಅತಿಸುಂದರ ಪ್ರೇಮ ಕಾವ್ಯ ಇದ್ದಂತೆ. ಈ ಸಿನಿಮಾದಲ್ಲಿ ಬರುವ ರಾಜ್‌ ಮತ್ತು ಸಿಮ್ರನ್‌ ಎಂಬ ಐಕಾನಿಕ್‌ ಪಾತ್ರಗಳು ಪ್ರತಿಯೊಬ್ಬ ಚಿತ್ರಪ್ರೇಮಿಯ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿವೆ. ಈ ಸಿನಿಮಾವನ್ನು ನಿರ್ದೇಶಕ ಆದಿತ್ಯ ಚೋಪ್ರಾ ಅವರು ತಾಜ್‌ ಮಹಲ್‌ ರೀತಿಯಲ್ಲೇ ಕಟ್ಟಿಕೊಟ್ಟಿದ್ದಾರೆ. ಡಿಡಿಎಲ್‌ಜೆ ಸಿನಿಮಾದ ಕ್ಲೈಮ್ಯಾಕ್ಸ್‌ ದೃಶ್ಯವನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಇದು ಟ್ರೆಂಡ್‌ ಸೆಟ್ಟರ್‌ ದೃಶ್ಯ. ಈ ಸಿನಿಮಾದ ಕ್ಲೈಮ್ಯಾಕ್ಸ್‌ ಹಲವು ಭಾಷೆಯ ಚಿತ್ರಗಳಲ್ಲಿ ಬಳಕೆಯಾಗಿದೆ.ಶಾರುಖ್‌ ಖಾನ್‌ ಮತ್ತು ಕೃಷ್ಣಸುಂದರಿ ಕಾಜೋಲ್‌ ಅಭಿನಯದ ಡಿಡಿಎಲ್‌ಜೆ, ಬಾಲಿವುಡ್‌ನ   ರೊಮ್ಯಾಂಟಿಕ್‌ ಕಲ್ಟ್‌ ಸಿನಿಮಾಗಳ ಪೈಕಿ ಪ್ರಮುಖವಾದದ್ದು. ಇದು ಬಾಲಿವುಡ್‌ನ ಸಾರ್ವಕಾಲಿಕ ಅತಿಸುಂದರ ಪ್ರೇಮ ಕಾವ್ಯ ಇದ್ದಂತೆ. ಈ ಸಿನಿಮಾದಲ್ಲಿ ಬರುವ ರಾಜ್‌ ಮತ್ತು ಸಿಮ್ರನ್‌ ಎಂಬ ಐಕಾನಿಕ್‌ ಪಾತ್ರಗಳು ಪ್ರತಿಯೊಬ್ಬ ಚಿತ್ರಪ್ರೇಮಿಯ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿವೆ. ಈ ಸಿನಿಮಾವನ್ನು ನಿರ್ದೇಶಕ ಆದಿತ್ಯ ಚೋಪ್ರಾ ಅವರು ತಾಜ್‌ ಮಹಲ್‌ ರೀತಿಯಲ್ಲೇ ಕಟ್ಟಿಕೊಟ್ಟಿದ್ದಾರೆ. ಡಿಡಿಎಲ್‌ಜೆ ಸಿನಿಮಾದ ಕ್ಲೈಮ್ಯಾಕ್ಸ್‌ ದೃಶ್ಯವನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಇದು ಟ್ರೆಂಡ್‌ ಸೆಟ್ಟರ್‌ ದೃಶ್ಯ. ಈ ಸಿನಿಮಾದ ಕ್ಲೈಮ್ಯಾಕ್ಸ್‌ ಹಲವು ಭಾಷೆಯ ಚಿತ್ರಗಳಲ್ಲಿ ಬಳಕೆಯಾಗಿದೆ.
*
ಹಮ್‌ ದಿಲ್‌ ದೆ ಚುಕೆ ಸನಮ್‌
ಒಂದು ಕಾಲದಲ್ಲಿ ಸಲ್ಮಾನ್‌ ಖಾನ್‌ ಮತ್ತು ಐಶ್ವರ್ಯಾ ರೈ (ಈಗ ಬಚ್ಚನ್‌) ಜೋಡಿ ಬಾಲಿವುಡ್‌ನ ಅತ್ಯಂತ ಜನಪ್ರಿಯ ಮತ್ತು ಹಾಟೆಸ್ಟ್‌ ಪೇರ್‌ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಅವೆಲ್ಲವೂ ಪ್ರೇಕ್ಷಕರ ಪಾಲಿಗೆ ಖುಷಿಯನ್ನು ಮೊಗೆದು ಉಣಿಸುವಂತಹ ಹಳೆಯ ದಿನಗಳು ಬಿಡಿ. ಬಿ–ಟೌನ್‌ನ ಸೂಪರ್‌ಸ್ಟಾರ್‌ ಸಲ್ಲು ಭಾಯ್‌ ಮತ್ತು ಚೆಂದುಳ್ಳಿ ಚೆಲುವೆ ಐಶ್ವರ್ಯಾ ರೈ ಅವರ ಜೋಡಿಯನ್ನು ಇಷ್ಟಪಡುವ ಪ್ರೇಮಿಗಳು ನೀವಾಗಿದ್ದಲ್ಲಿ ಈ ವ್ಯಾಲೆಂಟೈನ್ಸ್‌ ಡೇ ದಿನ ಈ ಸಿನಿಮಾ ನೋಡಲೇಬೇಕು. ಪ್ರೇಮಿಗಳ ದಿನದ ಸಂಭ್ರಮಾಚರಣೆಗೆ ಈ ಸಿನಿಮಾ ಒಂದೊಳ್ಳೆ ವಿಶುವಲ್‌ ಟ್ರೀಟ್‌ ಇದ್ದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.