ADVERTISEMENT

ಫೋಟೊ ಮ್ಯಾರಥಾನ್‌

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2014, 19:30 IST
Last Updated 29 ಸೆಪ್ಟೆಂಬರ್ 2014, 19:30 IST
ಫೋಟೊ ಮ್ಯಾರಥಾನ್‌
ಫೋಟೊ ಮ್ಯಾರಥಾನ್‌   

ಫೋಟೊ ಮ್ಯಾರಥಾನ್‌ ೫ನೇ ಆವೃತ್ತಿಗೆ ನಗರದ ಮ್ಯೂಸಿಯಂ ರಸ್ತೆಯಲ್ಲಿರುವ ಗುಡ್‌ ಶೆಫರ್ಡ್ಸ್ ಸಭಾಂಗಣದಲ್ಲಿ ಶನಿವಾರ ಚಾಲನೆ ನೀಡಲಾಯಿತು.

ಬಹುದೊಡ್ಡ ಸಂಖ್ಯೆಯಲ್ಲಿ ಹವ್ಯಾಸಿ, ವೃತ್ತಿಪರ ಛಾಯಾಗ್ರಾಹಕರು, ಆರಂಭಿಕ ಹಂತದಲ್ಲಿನ ಡಿಎಸ್‌ಎಲ್‌ಆರ್ ಬಳಕೆದಾರರು ಹಾಗೂ ಛಾಯಾಗ್ರಹಣದಲ್ಲಿ ವಿಶೇಷ ಆಸಕ್ತಿ ಉಳ್ಳವರು ಕೆನಾನ್‌ ಫೋಟೊಮ್ಯಾರಥಾನ್‌ನ ಈ ಥೀಮ್ ಆಧಾರಿತ ಸ್ಪರ್ಧೆಯನ್ನು ಸಂಭ್ರಮಿಸಿದರು.

ದಿನವಿಡೀ ನಡೆದ ಕೆನಾನ್ ಫೋಟೊಮ್ಯಾರಥಾನ್ ದೇಶವ್ಯಾಪಿ ಫೋಟೊಗ್ರಾಫಿಕ್ ಪ್ರತಿಭೆಗಳ ಸಮ್ಮಿಲನಕ್ಕೆ ವಿಶಿಷ್ಟ ವೇದಿಕೆ ಒದಗಿಸಿತು. ಇಂಡೋನೇಷ್ಯ, ಕೊಲಂಬಿಯಾ, ಚೀನಾ, ಹಾಂಗ್‌ಕಾಂಗ್, ಮಲೇಷ್ಯ, ಫಿಲಿಪ್ಪೀನ್ಸ್, ಸಿಂಗಾಪುರ, ಥಾಯ್ಲೆಂಡ್, ವಿಯೆಟ್ನಾಮ್‌ನಲ್ಲಿಯೂ ಈ ರೀತಿಯ ಕಾರ್ಯಕ್ರಮ ಆಯೋಜಿಸಿದ ಕೆನಾನ್, ಇದೀಗ ಮತ್ತೊಂದು ಸಂಭ್ರಮಕ್ಕೆ ಸಾಕ್ಷಿಯಾಯಿತು.

‘ಯುವಪೀಳಿಗೆ ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಮೂಲಕ ತಮ್ಮಲ್ಲಿನ ಸೃಜನಶೀಲತೆಯನ್ನು ಹೊರಹಾಕುತ್ತಿದ್ದಾರೆ. ಇಂತಹವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ಕೆನಾನ್ ಇಂಡಿಯಾ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ಅಲೋಕ್ ಭಾರದ್ವಾಜ್ ತಿಳಿಸಿದರು.

‘ಮಹಿಳಾ ವರ್ಗ ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿ ಸಮುದಾಯವನ್ನು ಫೋಟೊಗ್ರಫಿಗೆ ಸೆಳೆಯುವುದು ನಮ್ಮ ಮುಂದಿನ ಗುರಿ. ವಿನೋದ ಮತ್ತು ಕಲಿಕೆಯಿಂದ ಕೂಡಿದ ಫೋಟೊಮ್ಯಾರಥಾನ್ ದೇಶದ ಫೋಟೊಗ್ರಫಿ ಪ್ರತಿಭೆಗಳನ್ನು ಒಂದೆಡೆ ಸೇರಿಸಲಿದೆ’ ಎಂದು ಅವರು ಹೇಳಿದರು.

ಹೀಗಿತ್ತು ಮ್ಯಾರಥಾನ್
ಕೆನಾನ್ ಫೋಟೊಮ್ಯಾರಥಾನ್ ೨೦೧೪ರಲ್ಲಿ ಸ್ಪರ್ಧಿಗಳಿಗೆ ನಿರ್ದಿಷ್ಟ ಥೀಮ್ ಮೇಲೆ ನಿಗದಿತ ಸಮಯದಲ್ಲಿ ಫೋಟೊ ಕ್ಲಿಕ್ಕಿಸಲು ಸೂಚಿಸಲಾಯಿತು. ಇನ್ನಷ್ಟು ಪೈಪೋಟಿ ಉಂಟುಮಾಡಲು ಕಾರ್ಯಕ್ರಮ ಆರಂಭಕ್ಕೆ ಕೆಲವೇ ಕ್ಷಣಗಳ ಮುನ್ನ ಥೀಮ್ ಘೋಷಿಸಲಾಯಿತು. ತೀರ್ಪುಗಾರರಾಗಿರುವ ನುರಿತ ಛಾಯಾಗ್ರಾಹಕರು ಸೃಜನಾತ್ಮಕತೆ, ತಾಂತ್ರಿಕತೆ ಮತ್ತು ಥೀಮ್ ಅನ್ನು ಹೇಗೆ ಅಥೈಸಿಕೊಂಡಿದ್ದಾರೆ ಎನ್ನುವುದನ್ನು ಆಧರಿಸಿ ವಿಜೇತರನ್ನು ಆಯ್ಕೆ ಮಾಡಿದರು. ಫೋಟೊಕ್ಲಿನಿಕ್ ಗ್ರಾಂಡ್ ವಿಜೇತರು ಜೀವಮಾನದಲ್ಲಿ ಒಮ್ಮೆ ಲಭ್ಯವಾಗುವಂತಹ, ಪರಿಣತ ಫೋಟೊಗ್ರಾಫರ್‌ಗಳ ನೇತೃತ್ವದಲ್ಲಿ ವಿಶ್ವದ ಆಯ್ದ ಪ್ರದೇಶಗಳಿಗೆ ಭೇಟಿ ನೀಡಬಹುದು. ಉಳಿದ ವಿಜೇತರು ಅತ್ಯದ್ಭುತ ಫೀಚರ್‌ಗಳನ್ನು ಹೊಂದಿದ ಕೆನಾನ್ ಡಿಎಸ್‌ಎಲ್‌ಆರ್ ಕ್ಯಾಮೆರಾ, ಎಕ್ಸ್‌ಕ್ಲೂಸಿವ್ ಕೆನಾನ್ ಉಪಕರಣಗಳು ಮತ್ತು ಅಡೋಬ್ ಕ್ರಿಯೇಟಿವ್ ಕ್ಲೌಡ್ ಫೋಟೊಗ್ರಫಿ ಪ್ಲಾನ್‌ಗೆ ಒಂದು ವರ್ಷದ ಚಂದಾದಾರರಾಗುವುದು ಸೇರಿದಂತೆ ಅನೇಕ ಬಹುಮಾನಗಳನ್ನು ಪಡೆದರು. ಥೀಮ್ ಆಧಾರಿತ ವಿಜೇತರಿಗೂ ಆಕರ್ಷಕ ಬಹುಮಾನ ನೀಡಲಾಯಿತು.

ಜಾಹೀರಾತು ಮತ್ತು ಫ್ಯಾಷನ್ ಫೋಟೊಗ್ರಾಫರ್ ವಾಸೀಮ್ ಖಾನ್, ಎನ್‌ಐಸಿಸಿ ಬೆಂಗಳೂರು ನಿರ್ದೇಶಕ ಆಕಾಶ್ ರೋಸ್, ವೆಡ್ಡಿಂಗ್ ಮತ್ತು ಲೈಫ್‌ಸ್ಟೈಲ್ ಛಾಯಾಗ್ರಾಹಕಿ ನೀತಾ ಶಂಕರ್ ತೀರ್ಪುಗಾರರಾಗಿದ್ದರು.

ಸರ್ಕಾರ ಗುಟ್ಕಾ ಮತ್ತಿತರ ಮಾದಕ ದ್ರವ್ಯಗಳನ್ನು ಕುರಿತ ಜಾಹೀರಾತನ್ನು ನಿರ್ಬಂಧಿಸಿ ದಿನಗಳೇ ಉರುಳಿವೆ. ಆದರೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ಅಂಥ ಜಾಹೀರಾತುಗಳು ಈಗಲೂ ರಾಜಾಜಿಸುತ್ತಿವೆ. ಅದಕ್ಕೆ ಉದಾಹರಣೆ ಬಸ್‌ ಮೇಲಿನ ಈ ಜಾಹೀರಾತು.
ಚಿತ್ರ: ಸುಮಂತ್‌ಕುಮಾರ್‌ ಎಂ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.