ADVERTISEMENT

ಬದಲಾಗಿದೆ ಬ್ಲೇಜರ್‌

ಮಂಜುನಾಥ ರಾಠೋಡ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ಬದಲಾಗಿದೆ  ಬ್ಲೇಜರ್‌
ಬದಲಾಗಿದೆ ಬ್ಲೇಜರ್‌   

ಬಿಳಿ ಷರ್ಟ್ ಧರಿಸಿ ಟೈ ಕಟ್ಟಿದವರೇ ಬ್ಲೇಜರ್ ಹಾಕಬೇಕು ಎಂಬ ಅಲಿಖಿತ ನಿಯಮ ಇಂದಿಗೆ ಗಾಳಿಗೆ ತೂರಿ ಹೋಗಿದೆ. ಕಾರ್ಪೊರೇಟ್ ಮಂದಿಗೆ, ಎಕ್ಸಿಕ್ಯೂಟಿವ್‌ ವರ್ಗದವರಿಗೆ ಮಾತ್ರ ಸೀಮಿತ ಎನಿಸಿಕೊಂಡಿದ್ದ ಬ್ಲೇಜರ್‌ ಇಂದು ಸ್ಟೈಲ್ ಸಂಕೇತಗಳಾಗಿ ಮಾರ್ಪಟ್ಟಿದೆ.

ಕಪ್ಪು, ಬೂದು, ಬಿಳಿ ರೀತಿಯ ಗಂಭೀರ ಬಣ್ಣಗಳಲ್ಲಿ ಮಾತ್ರ ಸಿಗುತ್ತಿದ್ದ ಬ್ಲೇಜರ್‌ಗಳು ಇಂದು ಯುವಕರ ಅಭಿರುಚಿಗೆ ತಕ್ಕಂತೆ ತಮ್ಮ ಬಣ್ಣ ಬದಲಿಸಿಕೊಂಡು ಹಲವು ಬಣ್ಣಗಳಲ್ಲಿ ಲಭ್ಯವಿವೆ.

ಕೆಂಪು, ನೀಲಿ, ಹಸಿರು, ಕಿತ್ತಳೆ ಹೀಗೆ ಹಲವು ಆಕರ್ಷಕ ಬಣ್ಣಗಳಲ್ಲಿ ಬ್ಲೇಜರ್‌ಗಳು ಲಭ್ಯ. ಪ್ಲೇನ್‌ ಮಾತ್ರವಲ್ಲದೆ ಚಿತ್ತಾರದ ವಿನ್ಯಾಸ ಹೊಂದಿದ ಬ್ಲೇಜರ್‌ಗಳು ಮಾರುಕಟ್ಟೆಯಲ್ಲಿ ಈಗ ದೊರಕುತ್ತದೆ.

ADVERTISEMENT

ಹೀಗೆ ಧರಿಸಿದರೆ ಚೆಂದ: ಬ್ಲೇಜರ್‌ಗಳನ್ನು ಶರ್ಟ್ ಮತ್ತು ಟೀಶರ್ಟ್‌ಗಳ ಕಾಂಬಿನೇಶನ್‌ನೊಂದಿಗೆ ಧರಿಸಬಹುದು, ವಿ (v) ನೆಕ್‌ ಟೀಶರ್ಟ್‌ ಮೇಲೆ ಬಣ್ಣದ ಬ್ಲೇಜರ್ ಧರಿಸಿ ಗುಂಡಿ ಹಾಕದೇ ಬಿಟ್ಟಲ್ಲಿ ಸ್ಟೈಲಿಷ್‌ ಲುಕ್ ಸಿಗುತ್ತದೆ. ಕ್ಯಾಶುವಲ್ ಶರ್ಟ್, ಟೈ ಧರಿಸಿ ಮೇಲೆ ಬ್ಲೇಜರ್ ಹಾಕಿದರೆ ಕಾರ್ಪೊರೇಟ್ ಲುಕ್, ಟ್ರೆಂಡಿ ಶರ್ಟ್ ಮೇಲೆ ಬ್ಲೇಜರ್ ಜೊತೆಗೆ ಜೀನ್ಸ್ ಧರಿಸಿದರೆ ಪಾರ್ಟಿ ಲುಕ್!

ಬ್ಲೇಜರ್‌ಗಳು ಬಿಗಿಯಾಗಿರಬಾರದು. ಧರಿಸಿದವರಿಗೆ ಅದು ಚೆಂದದ ನೋಟ ನೀಡಲಾರದು ಹಾಗೆಂದು ತೀರಾ ಸಡಿಲವಾದವುಗಳನ್ನೂ ಹಾಕಬಾರದು.

ಬ್ಲೇಜರ್‌ ಧರಿಸುವಾಗ ಅದರ ಒಳಗೆ ಧರಿಸುವ ಶರ್ಟ್‌ ಅಥವಾ ಟೀಶರ್ಟ್‌ನ ಬಣ್ಣಗಳ ಬಗ್ಗೆ ಕಾಳಜಿವಹಿಸಿ. ಗಾಢ ಬಣ್ಣದ ಬ್ಲೇಜರ್ ತೊಡುವುದಾದರೆ ತೆಳು ಬಣ್ಣದ ಶರ್ಟ್‌ ಅಥವಾ ಟೀ ಶರ್ಟ್ ತೊಡಿ. ವಿ ಆಕಾರದ ಕುತ್ತಿಗೆಯ ಟೀಶರ್ಟ್ ಧರಿಸಿದಲ್ಲಿ ಗುಂಡಿ ಹಾಕದೆ ಬ್ಲೇಜರ್ ತೊಡಬೇಕು. ಇದು ಫಂಕಿ ಲುಕ್ ನೀಡುತ್ತದೆ. ಕಾರ್ಪೊರೇಟ್ ಶೈಲಿಯ ಬ್ಲೇಜರ್‌ ಧರಿಸಿದರೆ ಟೈ ಕಡ್ಡಾಯ. ಇದು ನಿಮ್ಮ ವ್ಯಕ್ತಿತ್ವಕ್ಕೆ ಶ್ರೀಮಂತ ನೋಟ ನೀಡುತ್ತದೆ.

ಯಾವುದೇ ರೀತಿಯ ಬ್ಲೇಜರ್‌ ಧರಿಸಿದರೂ ಚಪ್ಪಲಿ ಹಾಕದಿರಿ. ಕಡ್ಡಾಯವಾಗಿ ಶೂಗಳನ್ನೇ ಧರಿಸಿ.

ಕಾಟನ್, ಲಿನನ್ ಮತ್ತು ಉಣ್ಣೆ ಬಟ್ಟೆಯ ಬ್ಲೇಜರ್‌ಗಳು ಹೆಚ್ಚು ಜನಪ್ರಿಯ. ಇತರ ಬಟ್ಟೆಗಳಂತೆ ಬ್ಲೇಜರ್‌ಗಳಿಗೂ ಕೂಡ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ನಿಗದಿಯಾಗಿರುತ್ತದೆ. ಸಾವಿರ ರೂಪಾಯಿಯ ಬ್ಲೇಜರ್‌ನಿಂದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬ್ಲೇಜರ್‌ಗಳೂ ಮಾರುಕಟ್ಟೆಯಲ್ಲಿ ಲಭ್ಯ.

ಪ್ರಮುಖ ಬ್ರ್ಯಾಂಡ್‌ಗಳು: ವ್ಯಾನ್ ಹುಸೇನ್, ರೇಮಂಡ್ಸ್, ಪಾರ್ಕ್ ಅವೆನ್ಯೂ, ಟಾಮಿ ಹಿಲ್ಫಿಗರ್, ಕೆಲ್ವಿನ್ ಕ್ಲೇನ್, ರಾಲ್ಫ್‌ ಲೊರೇನ್, ಅರ್ಮಾನಿ, ಡೀಸೆಲ್.

**

ಬ್ಲೇಜರ್‌ನಲ್ಲಿ ಮೂರು ಬಗೆ

ಬ್ಲೇಜರ್‌ ಕೊಳ್ಳುವ ಮುನ್ನ ಯಾವ ವಿಧದ ಬ್ಲೇಜರ್ ಕೊಳ್ಳಬೇಕಿದೆ ಎಂಬುದನ್ನು ನಿರ್ಧರಿಸಿಕೊಳ್ಳಿ. ಬ್ಲೇಜರ್‌ನಲ್ಲಿ ಪ್ರಮುಖ ಮೂರು ಆಯ್ಕೆಗಳು ಸಿಗುತ್ತವೆ. ಡಬಲ್ ಬ್ರೆಸ್ಟೆಡ್  ಬ್ಲೇಜರ್ ಮತ್ತು ಟು ಬಟನ್ ಬ್ಲೇಜರ್‌ಗಳು. ಹೆಚ್ಚು ಆಯ್ಕೆ ಮತ್ತು ವಿನ್ಯಾಸಗಳಲ್ಲಿ ಲಭ್ಯವಿರುವುದು ಟು ಬಟನ್ ಬ್ಲೇಜರ್‌ಗಳಲ್ಲಿ. ಕಚೇರಿ ಅಥವಾ ಸಭೆ ಸಮಾರಂಭಗಳಿಗಾದರೆ ಗಾಢ ಬಣ್ಣದ ಬ್ಲೇಜರ್‌ಗಳನ್ನು ಕೊಳ್ಳುವುದು ಉತ್ತಮ.

ಉದಾಹರಣೆಗೆ ಕಪ್ಪು, ಬೂದು, ಕಾಫಿ ಬಣ್ಣ, ಬಿಳಿ ಹೊಂದುತ್ತದೆ. ಕ್ಯಾಶುವಲ್‌ವೇರ್‌ಗೆ ಯಾವ ಬಣ್ಣದ್ದಾದರೂ ಪರವಾಗಿಲ್ಲ. ಬ್ಲೇಜರ್‌ ಕೊಳ್ಳುವಾಗ ಬ್ಲೇಜರ್ ಒಳಗೆ ಉಪಯೋಗಿಸಿರುವ ಬಟ್ಟೆಯ ಗುಣಮಟ್ಟ ಉತ್ತಮವಾಗಿದೆಯೇ ಎಂದು ಖಾತರಿ ಮಾಡಿಕೊಳ್ಳಿ, ಮೇಲೆ ರಂಗುರಂಗಾಗಿ ಕಾಣುವ ಬ್ಲೇಜರ್ ಒಳಗೆ ಕಳಪೆ ಗುಣಮಟ್ಟದ ಬಟ್ಟೆ ಬಳಸಿದ್ದಲ್ಲಿ ಹೊಲಿಗೆ ಬಿಟ್ಟುಕೊಳ್ಳುವ ಹಾಗೂ ಬೇಗನೆ ಹಾಳಾಗಿ ಬಿಡುವ ಸಾಧ್ಯತೆ ಇರುತ್ತದೆ.

**

ಫಿಟ್ಟಿಂಗ್  ಬಗ್ಗೆ ಗಮನ ಕೊಡಿ

ದೇಹದ ಆಕಾರ ಸಣ್ಣದೇ ಇದ್ದರೂ, ಸ್ಥೂಲವಾಗಿದ್ದರೂ ಬ್ಲೇಜರ್‌ ತೊಡಬಹುದು. ಆದರೆ ಫಿಟ್ಟಿಂಗ್  ಬಗ್ಗೆ ಗಮನ ಕೊಡುವುದು ಅತ್ಯವಶ್ಯ. ಕೃಶ ಕಾಯದವರು ಸಡಿಲವಾದ ಬ್ಲೇಜರ್‌ ಧರಿಸಿದರೆ ವ್ಯಕ್ತಿಗಿಂತ ಬ್ಲೇಜರ್‌ ಕಡೆಗೇ ಗಮನ ಹರಿಯುತ್ತದೆ. ಮಾತ್ರವಲ್ಲ, ಹಾಸ್ಯಪಟುವಿನಂತೆ ಕಾಣುತ್ತೀರಿ.

ದಪ್ಪಗಿರುವವರು ಹೊಟ್ಟೆ ಬಿರಿಯುವಂತಹ ಇಲ್ಲವೇ ಎದೆಭಾಗದಲ್ಲಿ ತೀರಾ ಬಿಗಿಯಾಗಿರುವ ಬ್ಲೇಜರ್‌ ಧರಿಸಿದರೆ ಸೀರೆಯ ರವಿಕೆ ಹಾಕಿಕೊಂಡಂತೆ ಭಾಸವಾದೀತು. ಅಷ್ಟೇ ಅಲ್ಲ ಹಾಸ್ಯಾಸ್ಪದವಾಗಿ ಕಾಣುವುದು ಖಚಿತ. ಯಾವ ಬಣ್ಣದ ಬ್ಲೇಜರ್ ತೊಡುತ್ತೀರೊ ಅದರ ವಿರುದ್ಧ ಬಣ್ಣದ ಅಂಗಿ ಧರಿಸಿದರೆ ಚೆಂದ. ಬಹುತೇಕ ಬ್ಲೇಜರ್‌ಗಳಿಗೆ ಬಿಳಿ ಬಣ್ಣದ ಅಂಗಿ ಉತ್ತಮವಾಗಿ ಕಾಣುತ್ತದೆ.

-ರಫೀಕ್ ಜಿ.ಶಿರಹಟ್ಟಿ, ಫ್ಯಾಷನ್ ಡಿಸೈನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.