ADVERTISEMENT

ಬದಲಾಗೋಣ ‘ನಾವು’

ಕಿರುದಾರಿ

ಅಮೃತ ಕಿರಣ ಬಿ.ಎಂ.
Published 7 ನವೆಂಬರ್ 2016, 19:30 IST
Last Updated 7 ನವೆಂಬರ್ 2016, 19:30 IST
ಬದಲಾಗೋಣ ‘ನಾವು’
ಬದಲಾಗೋಣ ‘ನಾವು’   

(ಕತೆ:1) ಆಕೆ: ಅವತ್ತೊಂದು ದಿನ ಅವಳು ಒಬ್ಳೇ ಬಯಲಿಗೆ ಹೋಗಿದ್ಲು.  ಗುಂಪಾಗಿ ಇರುವೆ ಮುತ್ತಿಕೊಂಡಂತೆ ಮುತ್ತಿಕೊಂಡ್ರು. ಬಯಲಿನಲ್ಲೇ ಎಲ್ಲ ನಡೆದು ಹೋಯ್ತು. ತಪ್ಪು ಯಾರ್ದು ಹೇಳಿ?’
 
ಆತ: ಅಯ್ಯೋ ತಪ್ಪು ಆಯಮ್ಮುಂದೆ. ರೇಪ್‌ ಮಾಡೋಕೆ ಬಂದಾಗ ಅಣ್ಣಾ ಅಣ್ಣಾ ಅಂತಾ ಕಾಲ್ ಹಿಡ್ಕೊಂಡಿದ್ರೆ ಹಿಂಗೆಲ್ಲಾ ಆಗ್ತಿರಲಿಲ್ಲ.

(ಕತೆ: 2) ಚಿತ್ರ ನಿರ್ದೇಶಕ: ಮಚ್ಚು, ಲಾಂಗು, ಮರ್ಡರ್. ಎರಡು ಐಟಂ ಸಾಂಗು, ಮೂರು ರೇಪ್, ಫಿಲ್ಮ್ ಸೂಪರ್ ಡೂಪರ್.

(ಕತೆ: 3) ಗರ್ಭಿಣಿ: ಗಂಡು ಮಕ್ಕಳನ್ನು ಹುಟ್ಟಿಸೋದು ನಾವೇ. ಹಾಲು ಕುಡಿಸಿ ಬೆಳೆಸೋದೂ ನಾವೇ. ಇಷ್ಟೆಲ್ಲಾ ಮಾಡ್ತೀವಂತೆ. ಅತ್ಯಾಚಾರನೂ ಮಾಡಿಸ್ಕೊಂಡ್ರಾಯ್ತು ಬಿಡಿ!

****
ಇದು ‘ವೀ’ (we) ಎಂಬ ಕಿರುಚಿತ್ರ ಕಟ್ಟಿಕೊಡುವ ನಮ್ಮದೇ ಸಮಾಜದ ಕ್ರೌರ್ಯದ ಚಿತ್ರಣ. ಈ ಬಿಡಿಬಿಡಿ ಘಟನೆಗಳಲ್ಲಿ ಕತೆಗಳಿವೆ, ಕಾರಣಗಳಿವೆ, ಪ್ರಶ್ನೆಗಳಿವೆ. ಉತ್ತರವೂ ಇದೆ. ಅದು ‘ನಾವು’ ಎಂಬುದು.

ಒಂದಿಷ್ಟು ಪುಟ್ಟ ಪುಟ್ಟ ಕತೆ ಹೇಳ್ತೀವಿ. ಆದರೆ ಅದಕ್ಕೆ ಒಂದು ಅಂತ್ಯ ಕೊಡಬೇಕಾದವರು ನೀವು ಎಂದು ಆರಂಭದಿಂದಲೇ ನೋಡುಗರನ್ನು ಈ ಕಿರುಚಿತ್ರ ಸೆಳೆಯುತ್ತದೆ.ಎಲ್ಲ ನಾಗರಿಕ ಸಮಾಜಗಳ ಹೆಣ್ಮಕ್ಕಳೂ ‘ರೇಪ್’ ಪದ ಕೇಳಿದರೆ ಬೆಚ್ಚಿ ಬೀಳ್ತಾರೆ. ಅದೊಂದು ಮಾನಸಿಕ– ದೈಹಿಕ ಯಾತನಾಮಯ ಬದುಕು. ಕಾಮಾಂಧರ ವಾಂಛೆಗೆ ಭಾರತದಲ್ಲಿ ನಿತ್ಯ  ಪ್ರತಿ ಅರ್ಧಗಂಟೆಗೆ ಒಂದು ಬದುಕು ಬಾಡಿ ಹೋಗುತ್ತಿದೆ.

ಸಂಕಷ್ಟಕ್ಕೆ ಒಳಗಾದ ಹೆಣ್ಣುಮಕ್ಕಳ ಕತ್ತಲ ಬದುಕಿನ ಮೇಲೆ ಬೆಳಕು ಚೆಲ್ಲುವ, ಕಣ್ಣು ತೆರೆಸುವ ಯತ್ನ ಈ ಕಿರುಚಿತ್ರದಲ್ಲಿ ಇದೆ. ಕಾರಣ ಕೊಡುವವರಿದ್ದಾರೆಯೇ ಹೊರತು ಪರಿಹಾರ ಹುಡುಕುವವರಿಲ್ಲ. ಅವರಿವರ ಮೇಲೆ ಹಾಕಿ ಜಾರಿಕೊಳ್ಳುವ ಜಾಯಮಾನದ ಬದಲು ಪ್ರತಿಯೊಬ್ಬರೂ ಮುಂದೆ ಬಂದು ಬದಲಾವಣೆಗೆ ಮುನ್ನಡಿ  ಬರೆಯಬೇಕು ಎಂಬ ಆಶಯ ಇಲ್ಲಿದೆ. 5.57 ನಿಮಿಷದ ಕಿರುಚಿತ್ರವನ್ನು ಜನದನಿ ಸಂಸ್ಥೆ ನಿರ್ಮಿಸಿದೆ. ಇದು ಜನದನಿಯ ಮೂರನೇ ಪ್ರಯೋಗ.

ಜನದನಿ ಸಂಘಟನೆ
ಈ ಸಂಘಟನೆ ಲೈಂಗಿಕ ಕಿರುಕುಳ ಸಂತ್ರಸ್ತರಿಗೆ ಆಪ್ತ ಸಮಾಲೋಚನೆ ಒದಗಿಸುತ್ತದೆ. ಅತ್ಯಾಚಾರಗಳು ನಡೆದಾಗ ಕೌನ್ಸೆಲಿಂಗ್‌ ನಡೆಸುವುದಕ್ಕಿಂತ ಅದನ್ನು ತಡೆಗಟ್ಟಲು ಮುಂದಾದರೆ ಹೇಗೆ ಎಂಬ ಆಲೋಚನೆಯು ಕಿರುಚಿತ್ರ ನಿರ್ಮಾಣಕ್ಕೆ ಪ್ರೇರಣೆಯಾಯಿತು. ದೃಶ್ಯ ಮಾಧ್ಯಮದ ಮೂಲಕ ಜನರಿಗೆ ಶಿಕ್ಷಣ ನೀಡುವ ಅಲೋಚನೆ ಬಂತು. ಎರಡು ವರ್ಷಗಳ ಹಿಂದೆ ಹುಟ್ಟಿದ ಸಂಘಟನೆ ಇದು. ಕರ್ನಾಟಕದ ಹಲವು ಕಡೆ, ಅದರಲ್ಲೂ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ.

ಟೀಂ ವರ್ಕ್
ಹಿಂದಿ ಭಾಷೆಯ ಕಿರುಚಿತ್ರದ ಪ್ರೇರಣೆ ಇಟ್ಟುಕೊಂಡು ಇದನ್ನು ನಿರ್ಮಿಸಲಾಗಿದೆ. ಕಂಠದಾನ ಕಲಾವಿದೆ ಕುಮುದವಲ್ಲಿ ಚಿತ್ರಕಥೆ ಬರೆದಿದ್ದಾರೆ. 3ಡಿ ಅನಿಮೇಷನ್, ವಿಷುವಲ್‍ ಎಫೆಕ್ಟ್ ಕೆಲಸಗಳು ಅಮೋಲ್‍ ಅವರ ಕೈಚಳಕದಲ್ಲಿ ಮೂಡಿ ಬಂದಿವೆ. ಕ್ಯಾಮೆರಾ ನಿರ್ವಹಿಸಿದವರು ಜರೋಮ್. ಜನದನಿಯ ಸದಸ್ಯರೇ ಇಲ್ಲಿನ ಕಲಾವಿದರು. ಹೆಚ್ಚು ಖರ್ಚು ಮಾಡದೇ ಒಂದೇ ದಿನದಲ್ಲಿ ಶೂಟಿಂಗ್ ಮಾಡಲಾಗಿದೆ. ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿಯ ಸಾಯಿಕಿರಣ್‍ ಅವರು ಸಂಗೀತ ನೀಡಿದ್ದಾರೆ.

***
ಯುವ ನಿರ್ದೇಶಕ

ನಿರ್ದೇಶಕ ಅಮೋಲ್ ಪಾಟೀಲ್‌ ಅವರು ಯೋಗರಾಜ ಭಟ್ ಅವರ ‘ದನಕಾಯೋನು’ ಹಾಗೂ ಬಿ.ಸುರೇಶ್‍ ಅವರ ‘ದೇವರ ನಾಡಲ್ಲಿ’ ತಂಡದ ಜತೆ ಕೆಲಸ ಮಾಡಿದ್ದಾರೆ. 3ಡಿ ಅನಿಮೇಷನ್, ವಿಷುವಲ್‍ ಎಫೆಕ್ಟ್‍ ಅನ್ನು ಸ್ವತಃಕಲಿತಿದ್ದು, ಎಡಿಟಿಂಗ್, ಕ್ಯಾಮರಾ ಕೆಲಸವೂ ಇವರಿಗೆ ಸಿದ್ಧಿಸಿದೆ.


***
ಕಮೆಂಟ್ ಕೂಡಾ ಕಿರುಕುಳ

‘ಲೈಂಗಿಕ ದೌರ್ಜನ್ಯ ಎಂದರೆ ಬರೇ ಅತ್ಯಾಚಾರವಲ್ಲ. ಅಶ್ಲೀಲ ಕಮೆಂಟ್‌ ಕೂಡಾ ಕಿರುಕುಳವೇ. ಸಮಾಜ ಹೇಗೆ ಬದಲಾಗಬೇಕು ಎಂದು ಬಿಂಬಿಸುವುದೇ ಈ ಕಿರುಚಿತ್ರದ ಆಶಯ’ ಎನ್ನುತ್ತಾರೆ ಅಮೋಲ್ ಪಾಟೀಲ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT