ADVERTISEMENT

ಬದುಕು ಕೊಟ್ಟವಳು ನನ್ನಾಕೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2017, 19:30 IST
Last Updated 3 ಏಪ್ರಿಲ್ 2017, 19:30 IST
ಬದುಕು ಕೊಟ್ಟವಳು ನನ್ನಾಕೆ
ಬದುಕು ಕೊಟ್ಟವಳು ನನ್ನಾಕೆ   

ನಲವತ್ತೇಳು ವರ್ಷಗಳ ಹಿಂದೆ ಬಾಳ ಸಂಗಾತಿಯ ಕೈಹಿಡಿಯುವಾಗ  ನಮ್ಮ ಕುಟುಂಬ ತೀರಾ ಬಡತನದಲ್ಲಿತ್ತು.  ಬಡತನದ ಜೊತೆ ನಮ್ಮ ಕುಟುಂಬವು ಸಾಮಾಜಿಕ ಪ್ರಜ್ಞೆಯಲ್ಲಿ ತೀರಾ ಹಿಂದುಳಿದಿತ್ತು.  ನನ್ನ ತಂದೆ-ತಾಯಿ ಇಬ್ಬರೂ ಅನಕ್ಷರಸ್ಥರು. ಅವರಿಗೆ ದುಡಿದು ತಿನ್ನುವುದೊಂದನ್ನು ಬಿಟ್ಟರೆ ಬೇರೇನೂ ತಿಳಿಯದು. ಎಷ್ಟೇ ದುಡಿದರೂ ಬಡತನದ ಬೇಗೆ ನಮ್ಮಿಂದ ದೂರವಾಗಲಿಲ್ಲ.

ಬಡತನದಲ್ಲೂ  ಹೈಸ್ಕೂಲ್‌ವರೆಗೆ ನಾನು ಓದಿದ್ದೆ. ಇಂತಹ ತಾಕಲಾಟದಲ್ಲಿರುವಾಗಲೇ ನನ್ನ ವಿವಾಹವಾಗಿ ನಮ್ಮ ಕುಟುಂಬಕ್ಕೆ ಮತ್ತೊಬ್ಬ ಸದಸ್ಯೆಯ ಸೇರ್ಪಡೆಯಾಯಿತು. ಇದರಿಂದ ಕುಟುಂಬದ ಭಾರ ಮತ್ತಷ್ಟು ಹೆಚ್ಚಿತು.

ಆದರೆ, ಕುಟುಂಬಕ್ಕೆ ಹೊಸ ಸದಸ್ಯಳಾಗಿ ಪ್ರವೇಶಿಸಿದ  ನನ್ನ ಪತ್ನಿಯಿಂದ ನಮ್ಮ ಕುಟುಂಬದ ಹಾದಿಯೇ ಬದಲಾಯಿತು.  ನಮ್ಮ ರೂಢಿಗತ ಅನಾಗರಿಕತೆಗಳೇ ನಮ್ಮ ಬಡತನಕ್ಕೆ ಕಾರಣ ಎಂಬುದನ್ನು ಮನದಟ್ಟು ಮಾಡಿದಳು. ನಮ್ಮ ಎಲ್ಲಾ ಕಷ್ಟ ಸಂಕಷ್ಟಗಳಲ್ಲಿ ತಾನೂ ಭಾಗಿಯಾಗಿ ಎಲ್ಲರಿಗೂ ಭರವಸೆಯ ದನಿಯಾದಳು.

ADVERTISEMENT

ಅವಳು ಹೊರಗೆ ಹೋಗಿ ದುಡಿಯದಿದ್ದರೂ ಸಂಸಾರದ ನಿರ್ವಹಣೆಯಲ್ಲಿ  ವಹಿಸಿದ ಪಾತ್ರ   ನಮಗೆ ಒಳ್ಳೆಯ ಫಲಿತಾಂಶವನ್ನೇ ತಂದು ಕೊಟ್ಟಿತು.  ಕುಟುಂಬದ ಆರ್ಥಿಕ ಸ್ಥಿತಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿತು.  ನನಗೆ ಎರಡು ಮಕ್ಕಳಾದ ಮೇಲೆ, ಹೆತ್ತವರನ್ನು ಮತ್ತು ಇಬ್ಬರು ಸಹೋದರರನ್ನು ಬಿಟ್ಟು ಮನೆಯಿಂದ ಹೊರಬರಬೇಕಾಯಿತು. ನಮ್ಮ   ಸಂಸಾರವು ಮತ್ತೆ ಅದೇ ಕಷ್ಟದ ಸುಳಿಯಲ್ಲಿ ಸಿಕ್ಕಿಕೊಂಡಿತು. 

ನನಗೆ ಬರುತ್ತಿದ್ದ ಸಂಬಳ ಸಾಕಾಗುತ್ತಿರಲಿಲ್ಲ. ಅದರಲ್ಲೇ ನನ್ನ ಪತ್ನಿ ಸಂಸಾರದ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಳು. ನಾನು ತಿಂಗಳಿಗೊಮ್ಮೆ ಸಂಬಳ ತಂದು ಅವಳ ಕೈಯಲ್ಲಿ ಹಾಕಿದರೆ, ಎಲ್ಲವನ್ನು ತಾನೇ ಅಚ್ಚುಕಟ್ಟಾಗಿ ಸರಿದೂಗಿಸಿಕೊಂಡು ಹೋಗುವಷ್ಟು ದಕ್ಷತೆ ಮೆರೆದಳು.

ಕಷ್ಟದ ಬದುಕಿನ ನಡುವೆಯೂ ಮಕ್ಕಳಿಗೆ ಒಳ್ಳೆಯ ಶಿಕ್ಷಣಕ್ಕೆ ಆದಿಯಿಂದಲೇ ಭದ್ರವಾದ ಬುನಾದಿ ಹಾಕಿದಳು.  ಪುರುಷರು ಕೇವಲ ಹೊರಗೆ ದುಡಿಯುವುದರಲ್ಲೇ ತಲ್ಲೀನರಾದರೆ, ಮಹಿಳೆಯರಿಗೆ ಮನೆಯಲ್ಲಿ ಅದರ ಎರಡು ಪಟ್ಟು ಹೆಚ್ಚು ಜವಾಬ್ದಾರಿ. ಮನೆಯ ಜೊತೆಗೆ ಹೊರಗಿನ ಪ್ರಪಂಚವನ್ನೂ ನಿರ್ವಹಿಸಬೇಕಾಗದ ಪರಿಸ್ಥಿತಿ ಆಕೆಯದ್ದಾಗಿತ್ತು. ಸುಲಭವಾಗಿ ಎಲ್ಲಾ ಜವಾಬ್ದಾರಿಗಳನ್ನೂ ಪೂರೈಸುತ್ತಿದ್ದಳು ನನ್ನ ಮಡದಿ. ಮಹಿಳೆ ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ನನ್ನ ಪತ್ನಿಯೇ ಸಾಕ್ಷಿ.

ಸದಾ ಬಳಕೆಯಲ್ಲಿರುವ ವಸ್ತುವಿನ ಪ್ರಾಧಾನ್ಯತೆ ನಮಗೆ ಅಷ್ಟಾಗಿ ಗೊತ್ತಾಗುವುದಿಲ್ಲ. ಅದು ಇಲ್ಲವಾದಾಗ ಅದರ ಮಹತ್ವ ಎಷ್ಟೆಂದು ಗೊತ್ತಾಗುತ್ತದೆ. ಇಂದು ನನ್ನ ಪತ್ನಿ ಇಲ್ಲ, ಅವಳು ಸತ್ತು ಹನ್ನೆರಡು ವರ್ಷಗಳಾಗಿವೆ. ನಾನು ಒಂಟಿ. ಬಾಳ ಸಂಜೆಯಲ್ಲಿದ್ದೇನೆ. ದಾಂಪತ್ಯದ ಕೊಡುಗೆಯಾಗಿ ಅವಳು ಬಿಟ್ಟು ಹೋದ ಇಬ್ಬರು ಮಕ್ಕಳಿದ್ದಾರೆ. ಮಕ್ಕಳಲ್ಲಿ ಅವಳ ಪ್ರತಿಬಿಂಬವನ್ನು ಕಾಣುತ್ತಿದ್ದೇನೆ.  

ಮಾಡಿದ ಒಳ್ಳೆಯ ಕಾರ್ಯಗಳಿಗೆ ಎಂದಿಗೂ ಸಾವಿಲ್ಲ.  ವ್ಯಕ್ತಿ ಸತ್ತರೂ ಸಮಾಜದಲ್ಲಿ ಅವರಿಗೊಂದು ಸ್ಥಾನ ಎಂದಿಗೂ ಇದ್ದೇ ಇದೆ. ಸಮಾಜದಲ್ಲಿ ಸೇವೆಗೈದು ಗಣನೀಯ ಸಾಧನೆ ಮಾಡಿದ ಮಹಿಳೆಯರನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನೆನೆಯುವಾಗ ನನ್ನ ಪತ್ನಿಯೂ ನೆನಪಿಗೆ ಬರುತ್ತಾಳೆ. ಅವಳ  ಕಾರ್ಯಗಳು ಇನ್ನೂ ನನ್ನ ಕಣ್ಮುಂದೆ ಹಚ್ಚಹಸಿರಾಗಿವೆ.
ಎಲ್.ಚಿನ್ನಪ್ಪ,
ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.