ADVERTISEMENT

ಭಾರತಕ್ಕೆ ಕರ್ದಶಿಯಾನ್‌

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2014, 19:30 IST
Last Updated 16 ನವೆಂಬರ್ 2014, 19:30 IST

ಅಮೆರಿಕದ ಕಿರುತೆರೆ ರಿಯಾಲಿಟಿ ತಾರೆ ಕಿಮ್ ಕರ್ದಶಿಯಾನ್‌ ಅವರು ಮುಂದಿನ ವಾರ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
ಅಂದಹಾಗೆ ಅವರು ಸುಗಂಧ ದ್ರವ್ಯವೊಂದರ ಪ್ರಚಾರಕ್ಕಾಗಿ ಜಗತ್ತಿನಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅದರ ಭಾಗವಾಗಿ ಭಾರತಕ್ಕೆ ಭೇಟಿ ನೀಡುವ ಕಾರ್ಯಕ್ರಮವೂ ನಿಗದಿಯಾಗಿದೆ. ಆಸ್ಟ್ರೇಲಿಯಾದಿಂದ ಆರಂಭಗೊಂಡಿರುವ ಅವರ ಪ್ರವಾಸ ಬಳಿಕ ಭಾರತ, ದುಬೈನಲ್ಲಿ ನಡೆಯಲಿದೆ.

ಈ ವಿಷಯವನ್ನು ಸ್ವತಃ ಕರ್ದಶಿಯಾನ್‌ ಅವರೇ ಅವರ ಅಭಿಮಾನಿಗಳಿಗೆ ಟ್ವಿಟ್ಟರ್‌ನಲ್ಲಿ ತಿಳಿಸಿರುವುದು ವಿಶೇಷ. ‘ಈಗತಾನೇ ಆಸ್ಟ್ರೇಲಿಯಾ ನೆಲದಲ್ಲಿ ಕಾಲೂರಿದ್ದೇನೆ. ನನ್ನ ಜಾಹೀರಾತು ಪ್ರಚಾರ ಕಾರ್ಯಕ್ರಮ ಇಲ್ಲಿಂದ ಆರಂಭವಾಗಿ ಜಗತ್ತಿನಾದ್ಯಂತ ಮುಂದುವರೆಯಲಿದೆ. ಮುಂದಿನ ನಿಲುಗಡೆ ಭಾರತ, ಅದರ ಬಳಿಕ ದುಬೈ. ಇದೆಲ್ಲವೂ ಒಂದು ವಾರದಲ್ಲಿ ಪೂರ್ಣಗೊಳ್ಳಲಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

  ಕರ್ದಶಿಯಾನ್‌ ಅವರು ಈ ಬಾರಿ ಪತಿ ಕಾನ್ಯೆ ವೆಸ್ಟ್‌ ಮತ್ತು ಒಂದು ವರ್ಷದ ಮಗಳನ್ನು ಮನೆಯಲ್ಲೇ ಬಿಟ್ಟು ಏಕಾಂಗಿಯಾಗಿ ಪ್ರವಾಸ ಕೈಗೊಂಡಿದ್ದಾರೆ. ‘ಮಗಳನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದಕ್ಕೆ ಬಹಳ ಬೇಸರವಾಗುತ್ತಿದೆ. ಒಂದೇ ವಾರದಲ್ಲಿ ಮೂರು ರಾಷ್ಟ್ರಗಳ ಪ್ರವಾಸ ಕೈಗೊಳ್ಳಬೇಕಾಗಿರುವುದರಿಂದ ಹೀಗೆ ಮಾಡಿದ್ದೇನೆ. ಅವಳ ತಂದೆ ಆಕೆಯನ್ನು ಚೆನ್ನಾಗಿ ಆರೈಕೆ ಮಾಡುತ್ತಾರೆ’ ಎಂದಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.