ADVERTISEMENT

ಭೀಮೇಶ್ವರಿಯಲ್ಲಿ ನೀರಿದೆ ಮೋಜಿಗೆ ದಾರಿ ನೂರಿದೆ

ಮಂಜುನಾಥ್ ಹೆಬ್ಬಾರ್‌
Published 28 ಜುಲೈ 2017, 19:30 IST
Last Updated 28 ಜುಲೈ 2017, 19:30 IST
ಭೀಮೇಶ್ವರಿಯಲ್ಲಿ ನೀರಿದೆ ಮೋಜಿಗೆ ದಾರಿ ನೂರಿದೆ
ಭೀಮೇಶ್ವರಿಯಲ್ಲಿ ನೀರಿದೆ ಮೋಜಿಗೆ ದಾರಿ ನೂರಿದೆ   

ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬೆಟ್ಟದ ತುತ್ತತುದಿಯಿಂದ ಒಮ್ಮೆಲೆ ಕೆಳಗೆ ಧುಮುಕಿ ಜಿಪ್‌ಲೈನ್‌ ಮೂಲಕ ಸರ್ರನೆ ಜಾರುವ ಮೋಜು, ಸ್ವಚ್ಛಂದ ನೀರಾಟದ ಮಜಾ, ಹಗ್ಗದ ಮೇಲಿನ ನಡಿಗೆಯ ಕಸರತ್ತು... ಬೆಟ್ಟಗಳಿಂದಾವೃತವಾದ ಪುಟ್ಟ ಹಸಿರು ಕಾಡಿನ ನಡುವೆ ನಡೆಯುವ ಈ ಸಾಹಸಮಯ ಕ್ರೀಡೆಗಳ ಗಮ್ಮತ್ತೇ ಬೇರೆ.

ಅಂದಹಾಗೆ ಈ ಖುಷಿಯನ್ನು ಸವಿಯಬೇಕಾದರೆ ಒಮ್ಮೆ ಭೀಮೇಶ್ವರಿಗೆ ಭೇಟಿ ನೀಡಬೇಕು. ವಾರಾಂತ್ಯದ ಮೋಜಿನ ಪ್ರವಾಸಕ್ಕೆ ಪ್ರಶಸ್ತವಾದ ತಾಣವಿದು.

‘ಪ್ರಕೃತಿಪ್ರಿಯರ ಸ್ವರ್ಗ’ ಎಂದೇ ಪ್ರಖ್ಯಾತವಾಗಿರುವ ಭೀಮೇಶ್ವರಿ, ಸುಂದರ ಬೆಟ್ಟ, ಗುಡ್ಡಗಳಿಂದ ನೈಸರ್ಗಿಕವಾಗಿ ರೂಪುಗೊಂಡ ಪ್ರವಾಸಿ ಕೇಂದ್ರ. ಮಂಡ್ಯ ಜಿಲ್ಲೆಯ ಈ ಪುಟ್ಟ ಊರು ಚಾರಣಪ್ರಿಯರ ನೆಚ್ಚಿನ ತಾಣವೂ ಹೌದು.

ADVERTISEMENT

ಜುಳು ಜುಳು ನಿನಾದ ಮಾಡುತ್ತಾ ಪ್ರಶಾಂತವಾಗಿ ಹರಿಯುವ ಕಾವೇರಿ, ಸಾಹಸ ಕ್ರೀಡೆಗಳಲ್ಲಿ ಬೆವರಿಳಿಸುವ ಪ್ರವಾಸಿಗರ ಬಳಲಿಕೆಯನ್ನು ಕಳೆಯುತ್ತಾಳೆ. ಸ್ವಚ್ಛ ಜಲರಾಶಿಯಲ್ಲಿ ಈಜಾಡುತ್ತಾ ಮೈಮರೆತರೆ ಹೊತ್ತು ಹೋಗಿದ್ದೇ ತಿಳಿಯದು. ಜಲಕ್ರೀಡೆಯ ಮಧುರ ಅನುಭೂತಿ ಹೊಸ ಹುಮ್ಮಸ್ಸನ್ನು ಮೂಡಿಸುತ್ತದೆ. ಇಲ್ಲಿನ ಆಹ್ಲಾದಕರ ಪರಿಸರ ನವೋತ್ಸಾಹ ತುಂಬುತ್ತದೆ.

ರಾಫ್ಟಿಂಗ್‌, ಕಯಾಕಿಂಗ್‌, ಜಿಪ್‌ ಲೈನ್‌, ಕೊರಾಕಲ್‌ ರೈಡ್‌, ಹಗ್ಗದ ಮೇಲೆ ನಡಿಗೆ.... ನಾನಾ ನಮೂನೆಯ ಆಟಗಳು ಬದುಕಿನ ರೋಚಕ ಕ್ಷಣಗಳ ಹೊಸ ಲೋಕವನ್ನು ಪರಿಚಯಿಸುತ್ತವೆ. ಇಲ್ಲಿ ವೈವಿಧ್ಯಮಯ ಸಾಹಸಕ್ರೀಡೆಗಳು ಮಾತ್ರ ಇರುವುದಲ್ಲ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯೋಮಾನದವರೂ ಪಾಲ್ಗೊಳ್ಳಬಹುದಾದ ವಿವಿಧ ಚಟುವಟಿಕೆಗಳೂ ಇಲ್ಲಿವೆ.  ಇಲ್ಲಿನ ಅರಣ್ಯದಲ್ಲಿರುವ ಚಿರತೆ, ಜಿಂಕೆ, ಕರಡಿ, ಮೊಸಳೆ, ಪಕ್ಷಿ ಸಂಕುಲಗಳನ್ನೂ ಕಣ್ತುಂಬಿಕೊಳ್ಳಬಹುದು.

ಮಶೀರ್ ಮೀನುಗಳ ತವರು: ಉಷ್ಣ ವಲಯದ ದೈತ್ಯ ಎಂದೇ ಹೆಸರಾದ ಮಶೀರ್ ಮೀನುಗಳ ತವರು ಇದು. ಭಾರಿಗಾತ್ರದ ಈ ಮೀನುಗಳ ಚೆಲ್ಲಾಟ ನೋಡುತ್ತಿದ್ದರೆ ಮನದೊಳಗೇನೋ ಪುಳಕ. ನದಿ ದಂಡೆಯಲ್ಲಿ ಮೀನಿಗಾಗಿ ಗಾಳ ಹಾಕುತ್ತಾ ತಾಸುಗಟ್ಟಲೆ ಕೂರುವವರೂ ಇದ್ದಾರೆ. ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಮೀನು ಹಿಡಿಯುವವರು ಇದ್ದಾರೆ. ಆಸುಪಾಸಿನ ನಿವಾಸಿಗಳ ಈ ಚಟುವಟಿಕೆ ಮೇಲೆ ನಿಗಾ ವಹಿಸುವುದು ಕಷ್ಟ. ಈ ನದಿಯಲ್ಲಿ ಮೊಸಳೆಗಳೂ ಇವೆ. ಮೀನಿನ ಆಸೆಯಿಂದ ನೀರಿಗಿಳಿದರೆ ಅಪಾಯವೂ ಕಾದಿದೆ ಎಂದು ಎಚ್ಚರಿಸುತ್ತಾರೆ ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ.

ಬರ ತಂದ ಸಂಕಟ: ಕಳೆದ ಮೂರು ವರ್ಷಗಳಿಂದ ದಕ್ಷಿಣ ಒಳನಾಡಿನಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಇದರಿಂದಾಗಿ ಕಾವೇರಿ ನೀರಿನ ಹರಿವು ಕಡಿಮೆಯಾಗಿದೆ. ಇದರಿಂದಾಗಿ ಭೀಮೇಶ್ವರಿಯಲ್ಲಿ ಸಾಹಸ ಚಟುವಟಿಕೆ ಮೇಲೂ ಪರಿಣಾಮ ಬೀರಿದೆ. ನೀರಿದ್ದರೆ ಸಾಹಸ ಚಟುವಟಿಕೆಯ ಗಮ್ಮತ್ತೇ ಬೇರೆ ಎಂದು ತರಬೇತುದಾರರ ಅನಿಸಿಕೆ. ಆದರೆ, ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎನ್ನುತ್ತಾರೆ ಅವರು.

ಸಾಹಸ ಚಟುವಟಿಕೆಗಳ ನಿರ್ವಹಣೆಗೆಂದೇ ನಾಲ್ಕು ಮಂದಿ ಅನುಭವಿ ತರಬೇತುದಾರರು ಇದ್ದಾರೆ. ಸಂಭಾವ್ಯ ಅಪಾಯ ತಪ್ಪಿಸಲು ಇವರ ಮಾರ್ಗದರ್ಶನ ಬಹಳ ಮುಖ್ಯ. ಸುರಕ್ಷತೆಗೆ ಮೊದಲ ಆದ್ಯತೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಪರಿಸರ ಸ್ನೇಹಿ ವ್ಯವಸ್ಥೆ: ಸಂಪೂರ್ಣ ಪರಿಸರ ಸ್ನೇಹಿ ವ್ಯವಸ್ಥೆ ಅಳವಡಿಸಿಕೊಂಡಿರುವುದು ಇಲ್ಲಿನ ಮತ್ತೊಂದು ವಿಶೇಷ. ‘ಪ್ರವಾಸದ ಮುಖ್ಯ ಉದ್ದೇಶವೇ ಪರಿಸರ ಸ್ನೇಹಿ ಮನೋರಂಜನಾ ವ್ಯವಸ್ಥೆ ಕಲ್ಪಿಸುವುದು. ಹೀಗಾಗಿ ಇಲ್ಲಿನ ಗಿಡಮರ ಕಡಿಯದೇ, ಹಾಗೆಯೇ ಉಳಿಸಿಕೊಂಡು ಹೊಸ ಲೋಕವೊಂದನ್ನು ರೂಪಿಸಿದ್ದೇವೆ’ ಎನ್ನುತ್ತಾರೆ ಸಿಬ್ಬಂದಿ.

ಇಲ್ಲಿ ಜೂನ್‌ನಿಂದ ಫೆಬ್ರುವರಿವರೆಗೂ ಪ್ರವಾಸಿಗರ ದಟ್ಟಣೆ ಇರುತ್ತದೆ.

**

ದಾರಿ ಯಾವುದಯ್ಯಾ

ಬೆಂಗಳೂರು ನಗರದಿಂದ ಭೀಮೇಶ್ವರಿ 100 ಕಿ.ಮೀ. ದೂರದಲ್ಲಿದೆ. ಕನಕಪುರ- ಕೊಳ್ಳೇಗಾಲ ಹೆದ್ದಾರಿಯಲ್ಲಿ ಹಲಗೂರು ಮೂಲಕ ಭೀಮೇಶ್ವರಿಗೆ ತಿರುವು ಪಡೆದುಕೊಳ್ಳಬೇಕು. ಮುತ್ತತ್ತಿ ಮೂಲಕವೂ ತೆರಳಬಹುದು. ಆದರೆ, ಆ ರಸ್ತೆ ಸಂಪೂರ್ಣ ಹದಗೆಟ್ಟಿದೆ. 16 ಕಿ.ಮೀ. ಸಂಚಾರ ಮಾಡಲು ಕನಿಷ್ಠ ಒಂದು ಗಂಟೆ ಬೇಕು. ಈ ರಸ್ತೆಯಲ್ಲಿ ಸಾಗಿದರೆ ಈ ತಾಣವನ್ನು ತಲುಪುವ ಮುನ್ನವೇ ಪ್ರವಾಸದ ಖುಷಿ ಮಾಯವಾಗಿ ಬಿಡುತ್ತದೆ.

ಸೌಲಭ್ಯಗಳು ಏನಿವೆ?

ಭೀಮೇಶ್ವರಿಯಲ್ಲಿ ಊಟ, ವಸತಿ ಸೌಲಭ್ಯವನ್ನು ಪ್ರವಾಸೋದ್ಯಮ ಇಲಾಖೆಯ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ ಒದಗಿಸುತ್ತದೆ. ನೆಲದ ಮೇಲೆ ಹಾಕುವ ಡೇರೆ, ಮರದ ಮೇಲೆ ಬಿದಿರಿನಿಂದ ನಿರ್ಮಿಸಿದ ಗುಡಿಸಲು, ಕಾಟೇಜ್, ಲಾಗ್‌ಹಟ್‌ಗಳು ಇಲ್ಲಿವೆ. ಪ್ರವಾಸಿಗರು ಇವುಗಳಲ್ಲಿ ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಈ ಶುಲ್ಕದಲ್ಲಿ ವಸತಿ, ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ, ಶಿಬಿರಾಗ್ನಿ ( ಕ್ಯಾಂಪ್‌ ಫೈರ್‌), ಪ್ರಕೃತಿ ನಡಿಗೆ (ನೇಚರ್‌ ವಾಕ್‌) ಸೇರಿದೆ.
ಮುಂಗಡ ಕಾಯ್ದಿರಿಸುವಿಕೆ ಸೌಲಭ್ಯವೂ ಇದೆ.
ಸಂಪರ್ಕ: 91-80-40554055,

ಇಮೇಲ್‌– info@junglelodges.com.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.