ADVERTISEMENT

ಮಳೆ ನಮ್ಮ ಶತ್ರು

ಬದುಕು ಬನಿ

ರೋಹಿಣಿ ಮುಂಡಾಜೆ
Published 26 ಸೆಪ್ಟೆಂಬರ್ 2016, 9:13 IST
Last Updated 26 ಸೆಪ್ಟೆಂಬರ್ 2016, 9:13 IST
ವೈದ್ಯನಾಥ
ವೈದ್ಯನಾಥ   

ನೋಡಿ ಇವತ್ತು ಬೆಳಿಗ್ಗೆನೇ ಮಳೆ ಹನಿಯಿತು. ಮಧ್ಯಾಹ್ನ ಮೂರು ಗಂಟೆ ಕಳೆದರೂ ಮುಸುಕಿದ ಮೋಡ ಕರಗಿಲ್ಲ. ಮಳೆ ಬಂದರೆ ನಮ್ಮ ದಿನದ ವ್ಯಾಪಾರಕ್ಕೆ ಕಲ್ಲು ಬಿದ್ದಂಗೆ. ಈ ಮಳೆ ನಮ್ಮ ಪಾಲಿನ ಶತ್ರು.

ಮಹಾತ್ಮ ಗಾಂಧಿ ರಸ್ತೆ ಮತ್ತು ಬ್ರಿಗೇಡ್‌ ರಸ್ತೆಯಲ್ಲಿ ನನ್ನ ಹೆಸರು ಯಾರಿಗೂ ಗೊತ್ತಿಲ್ಲ. ಎಲ್ಲರೂ ಚೋಟು ಅಂತಲೇ ಕರೀತಾರೆ. ಇಲ್ಲಿನ ಬೀದಿ ವ್ಯಾಪಾರಿಗಳ ಪೈಕಿ ನಾನೇ ಸಣ್ಣೋನು.  10 ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡ್ಕೊಂಡು ಇದ್ದೇನೆ.

ನನ್ನ ಹೆಸರು ವೈದ್ಯನಾಥ. ಬೀದರ್‌ನೋನು. ಊರಲ್ಲಿ ನಮ್ಮದು ತುಂಬು ಕುಟುಂಬ. ಅಣ್ಣ, ತಮ್ಮ ವ್ಯವಸಾಯ ಮಾಡ್ತಾರೆ. ನಾನು ಊರು ಬಿಟ್ಟು ಬಂದೋನು ಬೆಂಗಳೂರು ಸೇರ್ಕೊಂಡೆ. ಯಾಕೆ ಅಂತ ಕೇಳ್ಬೇಡಿ. ಬಂದಿದ್ದೇನೆ ಅಷ್ಟೇ.

ಈ ಹಿಂದೆ ಟ್ರೆಂಡಿ ಟೋಪಿಗಳನ್ನು ಮಾರಾಟ ಮಾಡುತ್ತಿದ್ದೆ. ಆಮೇಲೆ ಸಾಕ್ಸ್‌ಗಳನ್ನು ಮಾರಾಟ ಮಾಡುವಂತೆ ಹಿತೈಷಿಗಳು ಸಲಹೆ ಮಾಡಿದ್ರು. ಸಹಾಯನೂ ಮಾಡಿದ್ರು. ಇಲ್ಲಿ ಮುಂಚೆ ಮೈಸೂರು ಬ್ಯಾಂಕ್‌ ಇತ್ತು. ಈಗ ಶಿಫ್ಟ್‌ ಆಗಿದೆ. ಎಲ್ಲಾ ವ್ಯಾಪಾರಿಗಳು ಒಂದೇ ಕುಟುಂಬದಂತೆ ಇರುತ್ತೇವೆ. ಆದರೆ ಫುಟ್‌ಪಾತ್‌ ಅಂಗಡಿಗಳ ವ್ಯಾಪಾರ ಹೀಗೇ ಅಂತ ಹೇಳಲು ಆಗುವುದಿಲ್ಲ. ಅತಂತ್ರ.

‘ಅವೆನ್ಯೂ ರಸ್ತೆಯಿಂದ ಹೋಲ್‌ಸೇಲ್‌ ದರದಲ್ಲಿ ಸಾಕ್ಸ್‌ಗಳನ್ನು ತಂದು ಮಾರುತ್ತೇನೆ. ಲಾಭ ಅತ್ಯಂತ ಕಡಿಮೆ. ದಿನಕ್ಕೆ 500 ರೂಪಾಯಿ ಬಂದರೆ  ಹೆಚ್ಚು. ಮಳೆಗಾಲ ಅಂದ್ರೆ ಕಷ್ಟ ತಪ್ಪಿದ್ದಲ್ಲ.  ಮಳೆಗಾಲದಲ್ಲಿ ಸ್ಯಾಂಡಲ್ಸ್‌ಗೆಲ್ಲ ಸಾಕ್ಸ್‌ ಹಾಕಲು ಆಗೋದಿಲ್ಲ. ಅಂದ್ರೆ ನಮ್ಮ ವ್ಯಾಪಾರಕ್ಕೆ ಕತ್ತರಿ ಬಿದ್ದಂತೆ ಅಲ್ವಾ?

‘ಸಾಕ್ಸ್‌ಗಳಲ್ಲಿ ಎಷ್ಟೊಂದು ನಮೂನೆ ಇದೆ ಗೊತ್ತಾ? ಉಡುಗೆ ತೊಡುಗೆಯಲ್ಲಿ ಫ್ಯಾಷನ್‌ ಬಂದಂತೆ ಸಾಕ್ಸ್‌ಗಳಲ್ಲೂ ಬೇಜಾನ್‌ ಮಾದರಿಗಳು ಸಿಗ್ತಾವೆ. ಮನೆಯೊಳಗೆ ಥಂಡಿ ಆಗದಂತೆ  ಹಾಕ್ಕೊಳ್ಳೋ ಸಾಕ್ಸ್‌ಗಳನ್ನು ಲೋಫರ್ ಸಾಕ್ಸ್‌ ಅಥವಾ ಲೋ ಸಾಕ್ಸ್‌ ಅಂತಾರೆ. ಉಲ್ಲನ್‌, ಸಿಂಥೆಟಿಕ್‌ ಸಾಕ್ಸ್‌ಗಳೇ ಹೆಚ್ಚು ಬರೋದು.

‘ಈಗ ಸಾಕ್ಸ್‌ಗಳನ್ನೂ ಆನ್‌ಲೈನ್‌ನಲ್ಲಿ ಖರೀದಿ ಮಾಡ್ತಾರೆ. ಮನೆ ಬಾಗಿಲಿಗೋ, ಆಫೀಸ್‌ಗೋ ತಂದುಕೊಡ್ತಾರಲ್ಲ. ಹಾಗಾಗಿ ಸಾಕ್ಸ್‌ ತಗೊಳ್ಳೋಕೆ ಅಂತ ಅಂಗಡಿಗೆ ಹೋಗೋರು ಕಡಿಮೆ.

‘ಊರಿಗೆ ಹೋಗಲೇಬೇಕು ಅಂತ ಏನೂ ಇಲ್ಲ. ವರ್ಷಕ್ಕೊಮ್ಮೆ ಅಥವಾ ಎರಡು ಸಲ ಹೋಗಿ ಬರ್ತೀನಿ. ದುಡ್ಡು ಇದ್ರೆ ಕೊಡ್ತೀನಿ. ಇಲ್ಲದಿದ್ದರೆ ಇಲ್ಲ. ನಾನು ಮನೆಯ ಜವಾಬ್ದಾರಿ ತಗೊಂಡಿಲ್ಲ. ವ್ಯಾಪಾರ ಹೀಗೆ ಕೈಕೊಟ್ಟಾಗ ಭವಿಷ್ಯ ಹೇಗೆ ಅಂತ ಚಿಂತೆ ಆಗ್ತದೆ. ಆದರೆ ಬೇರೆ ಏನೂ ಯೋಚನೆ ಮಾಡಿಲ್ಲ. ಮುಂದಿನ ದಾರಿ ಏನು ಗೊತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.