ADVERTISEMENT

ಮಹಾನಗರದ ಸಂಧ್ಯಾರಾಗ

ಪದ್ಮನಾಭ ಭಟ್ಟ‌
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST
ಮಹಾನಗರದ ಸಂಧ್ಯಾರಾಗ
ಮಹಾನಗರದ ಸಂಧ್ಯಾರಾಗ   

ಬೆಂಗಳೂರಿನ ಬ್ಯುಸಿ ಬದುಕಿನಲ್ಲಿ ವೃತ್ತಿಜೀವನ ಸವೆಸಿದವರಿಗೆ ನಿವೃತ್ತರಾದ ನಂತರ ವಿಚಿತ್ರವಾದ ಶೂನ್ಯ ಆವರಿಸಿಕೊಳ್ಳುತ್ತದೆ. ಅಲ್ಲಿಗೇ ಅವರು ಮಾನಸಿಕವಾಗಿ ಅರ್ಧ ವೃದ್ಧರಾಗಿಬಿಡುತ್ತಾರೆ.

ವೃತ್ತಿಯಲ್ಲಿದ್ದಾಗ ‘ಛೇ, ಈ ಕಚೇರಿ ಕೆಲಸ ಸಾಕಾಗಿ ಹೋಯ್ತು, ರಜೆ ಸಿಕ್ಕರೆ ಸಾಕು’ ಎಂದು ಹಂಬಲಿಸುತ್ತಿದ್ದ ಅದೇ ಮನಸ್ಸು ಈಗ  ಖಾಯಂ ಆಗಿ ಒದಗಿಬಂದ ರಜೆಯನ್ನು ಹೇಗೆ ಕಳೆಯಬೇಕು ಎಂಬುದು ತಿಳಿಯದೇ ಚಡಪಡಿಸಲು ಆರಂಭವಾಗುತ್ತದೆ.

ತಮ್ಮ ದೈನಂದಿನ ಜಂಜಡಗಳಲ್ಲಿ ಮಕ್ಕಳು ಮುಳುಗಿಹೋಗಿರುವುದರಿಂದ ಇವರ ಒಂಟಿತನ ಇನ್ನೂ ಹೆಚ್ಚುತ್ತದೆ. ತಾನಿಲ್ಲದೆಯೂ ನಿತ್ಯ ಸಂಚರಿಸುವ ಬಸ್‌ಗಳು ಹಾಗೆಯೇ ಇವೆ. ತನ್ನ ಅನುಪಸ್ಥಿತಿಯಲ್ಲಿಯೂ ತಾನು ಜೀವನಪರ್ಯಂತ ಕೆಲಸ ಮಾಡಿದ ಸಂಸ್ಥೆ ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತಿದೆ. ಸಮಯ ಕಳೆಯದೇ ತಾನು ಅತ್ತಿಂದಿತ್ತ ಖಾಲಿಪೀಲಿ ಅಡ್ಡಾಡುವಾಗಲೂ ಗಡಿಯಾರ ಅದೇ ವೇಗದಲ್ಲಿ ಚಲಿಸುತ್ತಿರುತ್ತದೆ. ತಾನು ಮಧುಮೇಹ ಪೀಡಿತನಾದರೂ ಬೇಕರಿಗಳಲ್ಲಿ ಸಿಹಿತಿಂಡಿಗಳು ಭರಪೂರ ಮಾರಾಟವಾಗುತ್ತಲೇ ಇರುತ್ತವೆ. ಡಾಕ್ಟರ್‌ ಸಲಹೆಯ ಮೇರೆಗೆ ಮದ್ಯಪಾನ ನಿಲ್ಲಿಸಿದರೂ ಬಾರುಗಳು ನಡುರಾತ್ರಿಯವರೆಗೆ ತೆರೆದಿರುತ್ತವೆ...

ಹೀಗೆ ಅನುಕ್ಷಣ ಓಡುತ್ತಿರುವ ಈ ಜಗತ್ತಿನಲ್ಲಿ ನಾನು ನಿರುಪಯೋಗಿ, ಅನುದಿನ ಗಳಿಕೆಯ ರೇಸಿಗೆ ಬಿದ್ದ ಈ ಜನರೆದುರು ನಾನು ಉತ್ಪನ್ನಹೀನ ಎಂದು ಒಮ್ಮೆ ಮನಸ್ಸಿಗೆ ಬಂತೆಂದರೆ ಅಲ್ಲಿಗೆ ಮುದಿತನವೆಂಬ ಏಕಾಂಗಿತನದ ಸುರಂಗದೊಳಕ್ಕೆ ಜಾರಿದರೆಂದೇ ಅರ್ಥ.
ಇದೇ ಸಮಯಕ್ಕೆ ಸರಿಯಾಗಿ ಮನಸಿನ ಮುದಿತನಕ್ಕೆ ದೇಹದ ಅಸಹಕಾರ ಬೇರೆ ಸಾಥ್‌ ನೀಡಲು ಶುರುವಾಗುತ್ತದೆ.

ಅಪಾರ್ಟ್‌ಮೆಂಟಿನ ಮೂರನೇ ಮಹಡಿಯಲ್ಲಿನ ಮನೆಗೆ ಮೆಟ್ಟಿಲುಗಳಲ್ಲಿ ಹತ್ತಿ ಹೋಗುವಷ್ಟರಲ್ಲಿ ಹಣೆಯ ಮೇಲೆ ಬೆವರ ಸಾಲು, ಮಂಡಿ ಚಿಪ್ಪಿನೊಳಗೆ ನೋವು, ಮಧುಮೇಹ, ರಕ್ತದೊತ್ತಡ, ಮೂಳೆ ಸವೆತ, ಸಂಧಿನೋವು, ನಿಶ್ಶಕ್ತಿ, ದೃಷ್ಟಿದೋಷ ಹೀಗೆ ಒಂದೊಂದೇ ಸಮಸ್ಯೆಗಳು ಮೈಯನ್ನು ಹಿಂಡಲಾರಂಭಿಸುತ್ತವೆ. ಮೊಮ್ಮಗ ಆಟಕ್ಕೆ ದೂಡಿದರೂ ಸಮತೋಲನ ತಪ್ಪದ ದೇಹ.. ಆದರೆ ಜಗತ್ತಿನೆದುರು ‘ನಾನು ಮುದುಕ, ಅಸಹಾಯಕ’ ಎಂಬುದನ್ನು ಮನಸ್ಸು ಒಪ್ಪಲೊಲ್ಲದು.

ಈ ಕಾರಣದಿಂದಲೇ ಬಸ್‌ನಲ್ಲಿ ‘ಹಿರಿಯ ನಾಗರಿಕರಿಗೆ’ ಎಂದು ಬರೆದ ಆಸನದಲ್ಲಿ ಕೂಡಲು ಏನೋ ಹಿಂಜರಿಕೆ. ನಾನು ಎಲ್ಲರಂತೇ ನಿಂತೇ ಪ್ರಯಾಣಿಸಬಲ್ಲೆ ಎಂಬ ಮನಸ್ಸಿನ ಹಟಕ್ಕೆ ದೇಹ ಸಾಥ್‌ ನೀಡಬೇಕಲ್ಲ. ಹಾಗೆಂದು ಯಾರಾದರೂ ಆಸನ ಬಿಟ್ಟುಕೊಟ್ಟು ‘ಕುಳಿತುಕೊಳ್ಳಿ ತಾತಾ’ ಎಂದರೂ ಸರ್ರನೇ ನೆತ್ತಿಗೇರುವ ಪಿತ್ತದಲ್ಲಿ ಮನಸ್ಸಿನ ನೋವೆಷ್ಟೋ, ರಕ್ತದೊತ್ತಡದ ಪಾಲೆಷ್ಟೋ?

‘ಅಪ್ಪಾ, ನಿಮಗೆ ಇದು ಬೇಕಾಗಲ್ಲ ಗೊತ್ತು. ಆದ್ರೂ ಯಾವ್ದಕ್ಕೂ ಇಟ್ಕೊಂಡಿರಿ’ ಎಂದು ನಯವಾಗಿ ಹೇಳಿ ಮಗ ಕೈಯಲ್ಲಿ ಕೋಲು ಹಿಡಿಸಿದ ಕ್ಷಣ ವೃದ್ಧಾಪ್ಯದ ಕಾಡೊಳಗೆ ಯಾರೋ ಒತ್ತಾಯದಿಂದ ದೂಡಿ ಒಗೆದಂತಹ ಅನುಭವ.

ಸಮಯ ಕಳೆಯುವುದೇ ಸಾಹಸ
ವೃದ್ಧರಿಗೆ ಸಮಯ ಕಳೆಯುವುದೊಂದು ದೊಡ್ಡ ಸಮಸ್ಯೆ. ಮನೆ ಬಿಟ್ಟು ಎಲ್ಲೆಂದರಲ್ಲಿ ಅವರು ತಿರುಗಾಡುವಂತಿಲ್ಲ. ಮುಸ್ಸಂಜೆ ಮನೆಯಿಂದ ಹೊರಡುವಾಗಲೇ ‘ಎಲ್ಲಿಗೆ ಹೊರಟಿರಿ? ಬೇಗ ವಾಪಸ್‌ ಬಂದುಬಿಡಿ. ನಾವು ಹುಡುಕಲು ಬರುವಂತೆ ಮಾಡಬೇಡಿ’ ಹೀಗೆ ನೂರು ಷರತ್ತುಗಳನ್ನು ಹೊತ್ತುಕೊಂಡೇ ಹೊಸ್ತಿಲು ದಾಟುವ ಕರ್ಮಕ್ಕೆ ಮರುಗದ ವೃದ್ಧರಿಲ್ಲ. ಮನೆಯವರ ಕಾಳಜಿಯೇ ಅವರಿಗಿಲ್ಲಿ ಸೆರೆಯಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಏನೆಲ್ಲಾ ಆಟವಾಡುತ್ತಾರೆ ಎನ್ನುವುದು ಅವರಿಗೇ ಗೊತ್ತು.

ನಿರ್ಬಂಧಗಳ ಸೆರೆಯೊಳಗೆ...
ಸಿಹಿ ಪದಾರ್ಥ ತಿನ್ನಬೇಡಿ. ಕರಿದ ತಿಂಡಿಗಳು ವರ್ಜ್ಯ. ಯಾವಾಗಲೂ ಮೊಬೈಲ್ ಜತೆಯಲ್ಲಿಟ್ಟುಕೊಂಡಿರಿ. ಮನೆಯ ವಿಷಯಗಳನ್ನೆಲ್ಲ ಹೊರಗಿನ ಜನರ ಬಳಿಯೆಲ್ಲಾ ಹೇಳಿಕೊಳ್ಳುತ್ತಿರಬೇಡಿ. ನಾವು ಹೊರಗೆ ಹೋದಾಗ ಬಾಗಿಲು ಹಾಕಿಕೊಂಡಿರಿ. ಯಾರಾದರೂ ಬಂದರೆ ಸರಿಯಾಗಿ ವಿಚಾರಿಸಿಕೊಳ್ಳದೇ ಬಾಗಿಲು ತೆಗೆದುಬಿಡಬೇಡಿ. ಅಂಗಡಿಯಲ್ಲಿ ಚಿಲ್ಲರೆ ಕೊಟ್ಟಾಗ ಎರಡೆರಡು ಸಲ ಎಣಿಸಿಕೊಳ್ಳಿ... ಹೀಗೆ ಮನೆಯವರ ಕಾಳಜಿಯ ಒಂದೊಂದು ಮಾತೂ ತಮ್ಮ ಸೆರೆಮೆನೆಯ ಒಂದೊಂದು ಸರಳಿನಂತೆ ಕಾಣತೊಡಗುತ್ತದೆ. ವೃದ್ಧಾಪ್ಯ ಎನ್ನುವುದು ಅಸಹನೀಯವಾಗಿ ಕಾಡಲಾರಂಭಿಸುತ್ತದೆ.

ಒಳಮಾರ್ಗದಲ್ಲಿ ಸಾಗುವ ಕಿಲಾಡಿತನ
ಇವೆಲ್ಲದರ ನಡುವೆಯೇ  ‘ಒಳಮಾರ್ಗ’ದಲ್ಲಿ ಸಾಗಿ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳುವ ಕಿಲಾಡಿ ತಾತ/ಅಜ್ಜಿಯಂದಿರ ಸಂಖ್ಯೆಯೇನೂ ಕಮ್ಮಿಯಿಲ್ಲ.

ಮನೆಯಲ್ಲಿ ಸಿಹಿ ತಿನ್ನಲು ಅವಕಾಶ ಇಲ್ಲದವರು ಬೆಳಿಗ್ಗೆ ವಾಕಿಂಗ್‌ ಹೋಗುತ್ತೇನೆ ಎಂದು ಹೇಳಿ ಹೊರಗೆ ಹೋಟೆಲ್‌ನಲ್ಲಿ ಕೇಸರಿಭಾತ್‌ ತಿಂದು ಬಂದುಬಿಡುತ್ತಾರೆ. ಸಂಜೆ ವಾಯುಸಂಚಾರದ ನೆಪದಲ್ಲಿ ಹೊಸ್ತಿಲು ದಾಟಿದವರು ತಿನ್ನುವುದು ರಸ್ತೆ ಬದಿಯ ಗರಿಗರಿ ಕರಿದ ಪದಾರ್ಥಗಳನ್ನು! ಯಾವುದೋ ದೇವಸ್ಥಾನಕ್ಕೋ, ಪುಸ್ತಕ ಬಿಡುಗಡೆಗೋ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಬಸ್‌ ಹತ್ತಿ ಸುಮ್ಮನೇ ಎಲ್ಲೆಲ್ಲಿಯೋ ಅಡ್ಡಾಡುವ ಸಂಚಾರ ಪ್ರಿಯ ಹಿರಿಯರೂ ಸಾಕಷ್ಟಿದ್ದಾರೆ.

ಒಂಟಿತನವೊಂದು ನೀಗಿದರೆ...
ವೃದ್ಧರ ಇಂತಹ ಬಹುತೇಕ ಸಮಸ್ಯೆಗಳಿಗೆ ಮತ್ತು ಅವರ ವರ್ತನೆಗಳಿಗೆ ಕಾರಣ ಅವರನ್ನು ಕಾಡುವ ಒಂಟಿತನ. ವೃದ್ಧಾಪ್ಯಕ್ಕೆ ಹೇಗೆ ಮದ್ದಿಲ್ಲವೋ ಹಾಗೆಯೇ ಅವರ ಸಮಸ್ಯೆಗಳಿಗೂ ಪೂರ್ಣ ಪರಿಹಾರವಿಲ್ಲ. ಆದರೆ ಬೇಕೋ ಬೇಡವೋ ತಮ್ಮನ್ನು ಆವರಿಸಿಬಿಟ್ಟಿರುವ ವೃದ್ಧಾಪ್ಯವನ್ನು ಬದುಕಿನ ಇನ್ನೊಂದು ಘಟ್ಟವಷ್ಟೆ ಎಂಬ ವಾಸ್ತವವನ್ನು ಒಪ್ಪಿಕೊಳ್ಳಬೇಕು. ಹಾಗೆಯೇ ಕುಟುಂಬದ ಸದಸ್ಯರು ಮತ್ತು ಸಮಾಜದ ಇತರರು ಅವರ ಒಂಟಿತನವನ್ನು ಅರ್ಥೈಸಿಕೊಂಡು ಸಹಕಾರದಿಂದ ನಡೆದುಕೊಂಡರೆ ವೃದ್ಧಾಪ್ಯ ಎಂಬುದು ಇನ್ನಷ್ಟು ಸಹನೀಯವಾಗಬಹುದು.

ನಿರ್ಲಕ್ಷ್ಯವೇ ಸಮಸ್ಯೆ

ನಗರದಲ್ಲಿನ ವೃದ್ಧರ ದೊಡ್ಡ ಸಮಸ್ಯೆಯೆಂದರೆ ಅವರು ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾಗುತ್ತಿರುವುದು. ಇಂಥವರು ತಮ್ಮ ಮಾನಸಿಕ ತುಮುಲವನ್ನು ಹೇಳಿಕೊಳ್ಳಲಾಗದೇ ಒದ್ದಾಡುತ್ತಿರುತ್ತಾರೆ.

ವಿದೇಶಗಳಲ್ಲಿ ಇಂತಹ ವಾತಾವರಣವಿಲ್ಲ. ಅಲ್ಲಿ ಮಕ್ಕಳು ವಯಸ್ಸಿಗೆ ಬಂದಂತೆ ಅವರ ಮದುವೆ ಮಾಡಿ ಮನೆಯಿಂದ ಹೊರಗೆ ಕಳಿಸಿಬಿಡಲಾಗುತ್ತದೆ. ಆದರೆ ನಮ್ಮಲ್ಲಿ ಮಕ್ಕಳ ಮದುವೆ ಮಾಡಿದ ನಂತರ ಮಕ್ಕಳೇ ಅಪ್ಪ ಅಮ್ಮನನ್ನು ಮನೆಯಿಂದ ಹೊರಗೆ ಕಳಿಸುತ್ತಾರೆ.

ಕಾಲ ಮಿಂಚಿದ ನಂತರ ಇವನ್ನೆಲ್ಲ ಯೋಚಿಸಿ ಪ್ರಯೋಜನವಿಲ್ಲ. ಅದಕ್ಕೆ ಬದಲಾಗಿ ಮೊದಲಿನಿಂದಲೇ ವೃದ್ಧರಾದ ಮೇಲೆ ಆರ್ಥಿಕವಾಗಿ ಮಕ್ಕಳ ಮೇಲೆ ಅವಲಂಬಿತರಾಗದಂತೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
- ಲಕ್ಷ್ಮೀನಾರಾಯಣ, ನಿರ್ಮಾಣ್ ಶೆಲ್ಟರ್ಸ್ ಸಂಸ್ಥಾಪಕ


ಲೈಂಗಿಕ ಚಟುವಟಿಕೆ ವರ್ಜ್ಯವಲ್ಲ

ADVERTISEMENT

ಮಹಾನಗರಗಳಲ್ಲಿ ಎಲ್ಲರೂ ತಮ್ಮದೇ ಜಗತ್ತಿನಲ್ಲಿ ಮುಳುಗಿರುತ್ತಾರೆ. ಆದ್ದರಿಂದ ವೃದ್ಧರಿಗೆ ಕೌಟಂಬಿಕ ಮತ್ತು ಸಾಮಾಜಿಕ ಬೆಂಬಲ ಕಡಿಮೆಯಾಗುತ್ತಾ ಹೋಗುತ್ತದೆ. ಶೇ 75ರಷ್ಟು ವೃದ್ಧರು ಖಿನ್ನತೆಯಿಂದ ನರಳುತ್ತಿದ್ದಾರೆ. ಸಂಗಾತಿಯನ್ನು ಕಳೆದುಕೊಳ್ಳುವುದು. ಆರ್ಥಿಕವಾಗಿ ಮಕ್ಕಳ ಮೇಲೆ ಅವಲಂಬಿತರಾಗಬೇಕಾದ ಅನಿವಾರ್ಯ ಹೀಗೆ ಅನೇಕ ಅಂಶಗಳು ಅವರ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ರಿಲಾಕ್ಸೇಷನ್‌, ಸಂಗೀತ ಕೇಳುವುದು, ಅಧ್ಯಾತ್ಮ ಹೀಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದರಲ್ಲಿ ತಮ್ಮನ್ನು ತಾವು ಗಾಢವಾಗಿ ತೊಡಗಿಸಿಕೊಳ್ಳುವುದರ ಮೂಲಕ ತಮ್ಮ ಒಂಟಿತನವನ್ನು ನೀಗಿಕೊಳ್ಳಬಹುದು. ವೃದ್ಧರು ಲೈಂಗಿಕ ಆಸೆ ಇರಿಸಿಕೊಳ್ಳುವುದು ಅಪರಾಧ ಎಂಬ ಮನೋಭಾವ ನಮ್ಮ ಸಮಾಜದಲ್ಲಿದೆ. ಆದರೆ ವೃದ್ಧರಾದ ಮೇಲೂ ಲೈಂಗಿಕ ಆಸಕ್ತಿ ಹಾಗೇ ಉಳಿದಿರುತ್ತದೆ. ಅವರು ಯಾವುದೇ ಪಾಪಪ್ರಜ್ಞೆ ಇಲ್ಲದೇ ಸಂಗಾತಿಯೊಂದಿಗೆ ಲೈಂಗಿಕ ಚಟುವಟಿಕೆ ನಡೆಸಬಹುದು. ಇದು ಕೂಡ ವೃದ್ಧಾಪ್ಯದಲ್ಲಿ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
–ಮೋಹನ್‌ ರಾಜು ಎಸ್‌., ಕ್ಲಿನಿಕಲ್‌ ಸೈಕಿಯಾಲಾಜಿಸ್ಟ್‌, ಎಂ.ಎಸ್‌. ರಾಮಯ್ಯ ವೈದ್ಯಕೀಯ ಕಾಲೇಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.