ADVERTISEMENT

ಮಿಶ್ರ ಮಾಧ್ಯಮ ಕಲಾ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST

ಇಂದಿರಾನಗರ ಕ್ಲಬ್‌ನ ಸಹಯೋಗದೊಂದಿಗೆ ಆರ್ಟ್‌ಲ್ಯಾಬ್ಸ್ ವತಿಯಿಂದ ‘ಸ್ಟೆಪ್ ಆ್ಯಂಡ್‌ ಬಿಯಾಂಡ್’ ಶೀರ್ಷಿಕೆಯಡಿ ಶನಿವಾರ ಮತ್ತು ಭಾನುವಾರ (ಏ.19ರಿಂದ 20) ಕಲಾವಿದೆ ಸಂಧ್ಯಾ ಕೆ. ಸಿರ್ಸಿ ಅವರ ಮಿಶ್ರ ಮಾಧ್ಯಮ ಕಲಾ ಪ್ರದರ್ಶನ ಆಯೋಜಿಸಲಾಗಿದೆ.

ಬೆಂಗಳೂರಿನಲ್ಲಿ ನೆಲೆಸಿರುವ ಸಂಧ್ಯಾ ಕೆ. ಸಿರ್ಸಿ ಅವರು ದೃಶ್ಯಕಲೆಯಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದಾರೆ. ಇವರ ಚಿತ್ರಗಳು ಸಕಾರಾತ್ಮಕ ಹಾಗೂ ಪ್ರಗತಿಪರ ಚಿಂತನೆಗಳನ್ನು ಆಧರಿಸಿದ್ದು, ಆಕ್ರಿಲಿಕ್‌ ಹಾಗೂ ಮಿಶ್ರ ಮಾಧ್ಯಮದ ಶ್ರೇಣಿಯ ಕಲಾಕೃತಿಗಳಾಗಿವೆ.
‘ಕಲಾಕೃತಿಗಳಲ್ಲಿ ಭೌತಿಕ, ಭಾವನಾತ್ಮಕ ಹಾಗೂ ನಮ್ಮನ್ನು ನಾವು ಅವಲೋಕಿಸಿಕೊಳ್ಳುವಂತೆ ಮಾಡುವ ಗುಣಲಕ್ಷಣಗಳನ್ನು ಒಳಗೊಂಡಿವೆ’ ಎನ್ನುತ್ತಾರೆ ಸಂಧ್ಯಾ ಕೆ. ಸಿರ್ಸಿ.

ಸಂಧ್ಯಾ ಅವರು ಚಿತ್ರಕಲೆ ಅಲ್ಲದೆ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ್ದು, ಫ್ಯಾಷನ್‌ ಟೆಕ್ನಾಲಜಿಯಲ್ಲಿ ಡಿಪ್ಲೊಮೊ ಪೂರೈಸಿದ್ದಾರೆ. 2007ರಲ್ಲಿ ‘ಆರಂಭ’ ಹೆಸರಿನಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, 2009ರಲ್ಲಿ ‘ಆಲ್‌ ಇನ್‌ ಎ ಲೈನ್’ 2011ರಲ್ಲಿ ‘ಇನ್‌ರೆಟ್ರೊ’ ರೇಖಾಚಿತ್ರ ಹಾಗೂ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಿದ್ದಾರೆ.

ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಪ್ರದರ್ಶನವಿರುತ್ತದೆ. ಸ್ಥಳ: ಕಾವೇರಿ ಸಭಾಂಗಣ, ಆರ್ಟ್‌ ಲ್ಯಾಬ್‌, ಇಂದಿರಾನಗರ 6ನೇ ಮುಖ್ಯರಸ್ತೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.