ADVERTISEMENT

ಮುಗ್ಧ ಮೊಗದ ನಗು ಚಂದ

ವಿದ್ಯಾಶ್ರೀ ಎಸ್.
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
‘ರಸ ಆಧಾರಣ್‌’ ಸಂಸ್ಥೆ ಮಕ್ಕಳಿಂದ ರಾಮಾಯಣ ನಾಟಕ ಪ್ರದರ್ಶನ.
‘ರಸ ಆಧಾರಣ್‌’ ಸಂಸ್ಥೆ ಮಕ್ಕಳಿಂದ ರಾಮಾಯಣ ನಾಟಕ ಪ್ರದರ್ಶನ.   

ಬುದ್ಧಿಮಾಂದ್ಯ ಮಕ್ಕಳ ಮೊಗದಲ್ಲಿ ನಗೆ ಮೂಡಿಸಬೇಕು. ಜೀವನ ಕೌಶಲದ ಬೋಧನೆ ಮೂಲಕ ಅವರು ಸ್ವತಂತ್ರವಾಗಿ ಬದುಕಲು ನೆರವಾಗಬೇಕು ಎಂಬ ಉದ್ದೇಶದಿಂದ ಸ್ಥಾಪನೆಯಾಗಿರುವ ಸಂಸ್ಥೆ  ರಸ ಆಧಾರಣ್‌.

ಬುದ್ಧಿಮಾಂದ್ಯ ಮಕ್ಕಳಲ್ಲಿಯೂ ಪ್ರತಿಭೆ ಇದೆ. ಬದುಕು ಮುನ್ನಡೆಸುವ ಆತ್ಮವಿಶ್ವಾಸ ಬೆಳೆಸಿದರೆ ಅವರು ಸ್ವತಂತ್ರವಾಗಬಲ್ಲರು ಎಂಬ ವಿಶ್ವಾಸ ಈ ಸಂಸ್ಥೆಯದ್ದು.

ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ರಸ ಆಧಾರಣ್‌ ಬುದ್ಧಿಮಾಂದ್ಯ ಮಕ್ಕಳಿಗೆ ಸ್ವತಂತ್ರವಾಗಿ ಜೀವನ ನಡೆಸುವ ಕೌಶಲದ ತರಬೇತಿಯನ್ನು ಉಚಿತವಾಗಿ ನೀಡುತ್ತಿದೆ.

ADVERTISEMENT

ಈ ಸಂಸ್ಥೆ ಪ್ರಾರಂಭವಾಗಿ ನಾಲ್ಕು ವರ್ಷವಾಗಿದೆ. ಬುದ್ಧಿಮಾಂದ್ಯ ಮಕ್ಕಳು ಎಲ್ಲರಂತಲ್ಲ. ಅವರಿಗೆ ವಿಷಯವನ್ನು ಅರ್ಥ ಮಾಡಿಸುವುದು ಕಷ್ಟ. ಹಾಗಂತ ಸಾಧ್ಯವಿಲ್ಲ ಎಂದು ಕೈಚೆಲ್ಲುವುದು ಸರಿಯಲ್ಲ. ತಾಳ್ಮೆಯಿದ್ದರೆ ಆ ಮಕ್ಕಳ ಬದುಕನ್ನು ಬದಲಿಸುವುದು ಸಾಧ್ಯ ಎಂಬ ಧ್ಯೇಯದೊಂದಿಗೆ ಸಂಸ್ಥೆ ಕೆಲಸ ಮಾಡುತ್ತಿದೆ.

ಈ ಸಂಸ್ಥೆಯನ್ನು ಅಂಬಿಕಾ ಕಾಮೇಶ್ವರ್‌ ಅವರು ಮೊದಲ ಬಾರಿಗೆ ಚೆನ್ನೈನಲ್ಲಿ ಪ್ರಾರಂಭಿಸಿದರು. ನಾಲ್ಕು ವರ್ಷದ ಹಿಂದೆ ನಗರದಲ್ಲಿ ಇದರ ಶಾಖೆ ಆರಂಭವಾಗಿದೆ.

ರೂಪಾ ಹೇಮಂತ್‌ ಅವರು ನಗರದಲ್ಲಿರುವ ಸಂಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಇಲ್ಲಿ ನಾಲ್ಕು ಶಿಕ್ಷಕರಿದ್ದಾರೆ. ಮಕ್ಕಳನ್ನು ಹೇಗೆ  ನೋಡಿಕೊಳ್ಳಬೇಕು ಎಂಬುದರ ಕುರಿತು  ಪೋಷಕರಿಗೆ ತರಬೇತಿ ನೀಡಲಾಗುತ್ತದೆ.

ರಂಗಕಲೆಯ ಮೂಲಕ ಮಕ್ಕಳಿಗೆ ವಿಷಯದ ಗ್ರಹಿಕೆ ಮಾಡಲಾಗುತ್ತದೆ. ಸಂಗೀತ, ನಾಟಕ, ನೃತ್ಯ, ಕಥೆ ಹೇಳುವುದು, ಕರಕುಶಲ ಕಲೆಯ ಮೂಲಕ ಮಕ್ಕಳ ಜ್ಞಾನ ವೃದ್ಧಿಸಲಾಗುತ್ತದೆ.

ಇಲ್ಲಿ ಒಟ್ಟು ಇಪ್ಪತ್ತೈದು ಮಕ್ಕಳಿದ್ದಾರೆ. ಈ ಮಕ್ಕಳನ್ನು ಎರಡು ಗುಂಪು ಮಾಡಿ ಅಭ್ಯಾಸ ನಡೆಸಲಾಗುತ್ತದೆ. ವಿಷಯ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರುವ ಮಕ್ಕಳಿಗೆ ಗುಂಪಿನಲ್ಲಿ ಕಲಿಸಲಾಗುತ್ತದೆ. ಗ್ರಹಿಕೆಯಲ್ಲಿ ಸಮಸ್ಯೆ ಇರುವ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಿ ಹೇಳಿಕೊಡಲಾಗುತ್ತದೆ.

ಸಂಸ್ಥೆಯು ಪ್ರಸ್ತುತ 15 ವರ್ಷ ಮೇಲ್ಪಟ್ಟ ಮಕ್ಕಳನ್ನು ಸೇರಿಸಿಕೊಳ್ಳುತ್ತಿದೆ. ಅಕಾಡೆಮಿಕ್‌ ಆಗಿ ಕಲಿಸುವುದಕ್ಕಿಂತ ನಿತ್ಯದ ಜೀವನಕ್ಕೆ ಅಗತ್ಯವಾದ ಕೌಶಲಗಳಿಗೆ ಆದ್ಯತೆ ನೀಡಲಾಗುತ್ತದೆ.

‘ಎಬಿಸಿಡಿ ಕಲಿಸುವುದು ನಮ್ಮ ಉದ್ದೇಶವಲ್ಲ. ಬದುಕು ನಡೆಸುವ ಪಾಠ ಹೇಳಿಕೊಟ್ಟು ಮಕ್ಕಳ ಭವಿಷ್ಯ ರೂಪಿಸಲು ಯತ್ನಿಸುತ್ತೇವೆ. ಮಕ್ಕಳ ಆಸಕ್ತಿಯನ್ನು ಗುರುತಿಸಿ, ಅದರಲ್ಲಿಯೇ ಮುಂದುವರೆಯಲು ಪ್ರೋತ್ಸಾಹಿಸುತ್ತೇವೆ. ಒಟ್ಟಿನಲ್ಲಿ ಅವರು ಸಂತೋಷದಿಂದಿರಬೇಕು ಎಂಬುದಷ್ಟೇ ನಮ್ಮ ಉದ್ದೇಶ’ ಎನ್ನುವುದು ರೂಪಾ ಅವರ ಮಾತು.

‘ಆದರೆ ಈ ಉದ್ದೇಶ ಈಡೇರುವುದು ಸುಲಭವಲ್ಲ. ಕಡಿಮೆ ಸಮಯದಲ್ಲಿ ಇದೆಲ್ಲ ಸಾಧ್ಯವಿಲ್ಲ. ಮೂರು ವರ್ಷದಿಂದ ಇಲ್ಲಿರುವ ಮಕ್ಕಳು ಆಶ್ಚರ್ಯ ಎನ್ನುವಷ್ಟು ಸುಧಾರಿಸಿದ್ದಾರೆ. ಸದ್ಯದಲ್ಲಿ ಸಾಧ್ಯವಾಗದ್ದು, ಮುಂದೆ ಹತ್ತು ವರ್ಷದಲ್ಲಿ ಆಗಬಹುದು. ನಾವು ಕಾಯುತ್ತೇವೆ. ಪೋಷಕರಿಗೂ ತಾಳ್ಮೆ ಬೇಕು’ ಎನ್ನುತ್ತಾರೆ ಅವರು.

ಬುದ್ಧಿಮಾಂದ್ಯ ಮಕ್ಕಳಿಗೆ ಅರ್ಥ ಮಾಡಿಸುವುದು ಕಷ್ಟ. ಬಾಯಲ್ಲಿ ಹೇಳುವುದಕ್ಕಿಂತ ಅಭ್ಯಾಸದ ಮೂಲಕವೇ ವಿಷಯದ ಅರಿವು ಬೆಳೆಸಲಾಗುತ್ತದೆ. ನಾಟಕ ಮಾಡಿಸುವ ಮೂಲಕ ಅಪರಿಚಿತರ ಬಳಿ ಹೇಗೆ ವ್ಯವಹರಿಸಬೇಕು. ಮನೆಯವರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸಲಾಗುತ್ತದೆ. ಬದುಕಿನ ಮೌಲ್ಯಗಳನ್ನು  ನಾಟಕ, ಕಥೆಗಳ ಮೂಲಕವೇ ಪ್ರಸ್ತುತ ಪಡಿಸಲಾಗುತ್ತದೆ.

ಮಕ್ಕಳಿಗೆ ವ್ಯವಹಾರ ಜ್ಞಾನ ಬೆಳೆಯಬೇಕು ಎಂಬ ಉದ್ದೇಶದಿಂದ ಅವರಿಂದಲೇ ಅಡುಗೆ ಮಾಡಿಸುತ್ತಾರೆ. ಈ ಮಕ್ಕಳೇ ಮನೆಯಿಂದ ದುಡ್ಡು ತಂದು ಮಾರ್ಕೆಟ್‌ಗೆ ಹೋಗಿ ಅಡುಗೆಗೆ ಬೇಕಾದ ಸಾಮಾನುಗಳನ್ನು ಕೊಂಡು ತರುತ್ತಾರೆ. ಜೊತೆಯಲ್ಲಿ ಒಬ್ಬ ಶಿಕ್ಷಕರಿರುತ್ತಾ.

ಕಲಾ ಚಟುವಟಿಕೆಯ ಮೂಲಕ  ಬಣ್ಣ, ಗಾತ್ರ, ಆಕಾರದ ಜ್ಞಾನ ಬೆಳೆಸಲಾಗುತ್ತದೆ. ಪ್ರತಿ ತಿಂಗಳು ಛದ್ಮವೇಷ, ಅಡುಗೆ ಮಾಡುವುದು, ಕ್ರೀಡಾ ಚಟುವಟಿಕೆಗಳು ಇರುತ್ತವೆ. ವಾರಕ್ಕೊಮ್ಮೆ ಸ್ಕೌಟ್ಸ್‌ ಅಂಡ್‌ ಗೈಡ್‌ ತರಬೇತಿ ನೀಡಲಾಗುತ್ತದೆ. ವರ್ಷಕ್ಕೊಮ್ಮೆ ಮಕ್ಕಳನ್ನು ಒಂದು ದಿನದ ಪ್ರವಾಸಕ್ಕೂ ಕರೆದುಕೊಂಡು ಹೋಗುತ್ತಾರೆ.

ಆಗಾಗ್ಗೆ  ಕ್ರೀಡಾಕೂಟವನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಪೋಷಕರು ಪಾಲ್ಗೊಳ್ಳುತ್ತಾರೆ. ಪೋಷಕರ ಕಣ್ಣಿಗೆ ಭೂತಕನ್ನಡಿ ಕಟ್ಟಿ ಮುಂದೆ ಹೋಗುವಂತೆ ತಿಳಿಸುವುದು, ಕಾಲಿಗೆ ಕಷ್ಟ ಎನಿಸುವಂತಹ ಚಪ್ಪಲಿ ಹಾಕಿ ನಡೆಸುವುದು... ಹೀಗೆ ಈ ಮಕ್ಕಳು ಅನುಭವಿಸುವ ಕಷ್ಟವನ್ನು ಪೋಷಕರಿಗೆ ತಿಳಿಸುವ ಪ್ರಯತ್ನವನ್ನು ಕ್ರೀಡಾ ಚಟುವಟಿಕೆ ಮೂಲಕ ನಡೆಸಲಾಗುತ್ತದೆ.

ಸ್ವಾವಲಂಬಿಗಳಾಗಲು ನೆರವು
ಇಲ್ಲಿಯ ಮಕ್ಕಳು ಸ್ವಾವಲಂಬಿಗಳಾಗಬೇಕು ಎಂಬುದು ಸಂಸ್ಥೆಯ ಉದ್ದೇಶ. ಈ ಕಾರಣಕ್ಕೆ ಅವರಿಗೆ ಗೃಹಾಲಂಕಾರ ವಸ್ತುಗಳ ತಯಾರಿಕೆಯ ತರಬೇತಿ ನೀಡಲಾಗುತ್ತದೆ. ಈ ವಸ್ತುಗಳನ್ನು ಮಾರಾಟ ಮಾಡಿ, ಬಂದ ಹಣವನ್ನು ಮಕ್ಕಳಿಗೆ ಮಾಸಿಕ ಗೌರವಧನ ನೀಡಲಾಗುತ್ತದೆ. ಇಲ್ಲಿಯ ಮಕ್ಕಳು ಐಟಿ ಕಂಪೆನಿಗಳಲ್ಲಿ ನಾಟಕ, ನೃತ್ಯ ಪ್ರದರ್ಶನವನ್ನು ನೀಡುತ್ತಾರೆ.
ಸಂಪರ್ಕಕ್ಕೆ: 080 2344688

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.