ADVERTISEMENT

ಮೆಂಟಲ್ ಮಂಜನ ‘ಪ್ರೇಮನಗರ’

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2015, 19:30 IST
Last Updated 22 ಏಪ್ರಿಲ್ 2015, 19:30 IST

‘ಪ್ರೇಮ ನಗರ’ ಚಿತ್ರದ ಹೆಸರು. ಈ ಶೀರ್ಷಿಕೆಗೆ ತಕ್ಕಂತೆಯೇ ಪ್ರೇಮಕಥೆಯನ್ನು ಹೊಂದಿಸಿದ್ದಾರೆ ನಿರ್ದೇಶಕ ಸಂಪತ್ ಕುಮಾರ್. ಮುಂದಿನವಾರ (ಮೇ 1) ತೆರೆಗೆ ಬರಲಿರುವ ‘ಪ್ರೇಮ ನಗರ’ ಚಿತ್ರ ಒನ್ ಮ್ಯಾನ್ ಶೋ ಎಂದರೂ ತಪ್ಪಿಲ್ಲ. ನಿರ್ಮಾಪಕ ನಿರ್ದೇಶಕ–ಕಥೆ–ಚಿತ್ರಕಥೆ ಹೀಗೆ ಆಲ್‌ರೌಂಡರ್‌ ರೂಪದಲ್ಲಿ ಕಾಣಿಸಿಕೊಂಡಿರುವ ಸಂಪತ್ ಕುಮಾರ್ ಅವರಿಗಿದು ಮೂರನೇ ಸಿನಿಮಾ.

‘ಇದು ಲವ್ ಕಿಲ್ಲಿಂಗ್ ವಿಷಯ. ಮಾಸ್ ಲವ್ ಸ್ಟೋರಿಯಾಗಿರುವ ಈ ಚಿತ್ರವನ್ನು ಮಾಸ್ ಆಗಿಯೇ ಜನರು ಇಷ್ಟಪಡುವರು’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು ನಿರ್ದೇಶಕರು. ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆದಿದೆಯಂತೆ. ಸುಮಾರು 75 ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.

ಈ ಹಿಂದೆ ‘ಮೆಂಟಲ್ ಮಂಜ’ ಚಿತ್ರದ ಮೂಲಕ ಗಾಂಧಿನಗರದಲ್ಲಿ ಕಾಣಿಸಿಕೊಂಡು ಅದೇ ಹೆಸರಿನಲ್ಲಿಯೇ ನಾಯಕನೂ ಆಗಿರುವ ಮೆಂಟಲ್ ಮಂಜ ‘ಪ್ರೇಮ ನಗರ’ದ ನಾಯಕ. ‘ನಾನು ಈ ಚಿತ್ರದಲ್ಲಿ ಮೆಕ್ಯಾನಿಕ್ ಆಗಿರುತ್ತೇನೆ. ಪ್ರೀತಿ ಸಿಗುವುದಕ್ಕೆ ಏನೆಲ್ಲ ಕಷ್ಟಪಡುತ್ತೇವೆ, ಪ್ರೀತಿ ಸಿಗದಿದ್ದರೆ ಹೇಗೆ? ಎನ್ನುವುದು ನನ್ನ ಪಾತ್ರದಲ್ಲಿ ಕಾಣಲಿದೆ’ ಎಂದರು ಮಂಜ. ಇವರ ಮುಂದಿನ ‘ಮೆಂಟಲ್ ಮಂಜ ಪಾರ್ಟ್ 2’ಚಿತ್ರಕ್ಕೂ ಸಂಪತ್ ಬಂಡವಾಳ ತೊಡಗಿಸಲಿದ್ದಾರಂತೆ.

ನಿರ್ದೇಶಕರು ‘ಪ್ರೇಮನಗರ’ದೊಳಗೆ ನಾಯಕಿಯರ ಪರೇಡ್‌ ನಡೆಸಿದ್ದಾರೆ. ವರ್ಷ, ಅಶ್ವಿನಿ ಮತ್ತು ಮಂಜುಳಾ ‘ಪ್ರೇಮನಗರ’ದ ಚೆಲುವೆಯರು. ಆದರೆ ಯಾರೂ ಸುದ್ದಿಗೋಷ್ಠಿಯಲ್ಲಿ ಕಾಣಲಿಲ್ಲ. ‘ತಂಗಾಳಿ’ ನಾಗರಾಜ್ ಸಂಗೀತ ನೀಡಿದ್ದಾರೆ. ಹೊನ್ನವಳ್ಳಿ ಕೃಷ್ಣ, ವೈಜನಾಥ್ ಬಿರಾದಾರ್ ಮತ್ತಿತರರು ನಟಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.