ADVERTISEMENT

ಮೋಹಕ ರ‍್ಯಾಂಪ್ ನಡಿಗೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2017, 19:30 IST
Last Updated 21 ಆಗಸ್ಟ್ 2017, 19:30 IST
ಚಿತ್ರಗಳು: ಎಸ್‌.ಕೆ. ದಿನೇಶ್‌
ಚಿತ್ರಗಳು: ಎಸ್‌.ಕೆ. ದಿನೇಶ್‌   

ಚೀತ್ಕಾರ ಮುಗಿಲು ಮುಟ್ಟಿತ್ತು, ಎಡೆಬಿಡದೆ ಕ್ಯಾಮರಾ ಕಣ್ಣು ಹೊಡೆದುಕೊಳ್ಳುತ್ತಿದ್ದವು, ವಿದ್ಯಾರ್ಥಿಗಳು ‍‍ರ‍್ಯಾಂಪ್ ಮೇಲೆ ಹೆಜ್ಜೆ ಇಡುತ್ತಿದ್ದಂತೆ ಹಂತ ಹಂತವಾಗಿ ಸಂಗೀತ ತಾರಕಕ್ಕೆರುತ್ತಿತ್ತು.

ಸಿಎಂಆರ್ ಕಾನೂನು ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ‘ಟ್ರೆಂಡ್ಸ್’ ಸಹಯೋಗದ ‘ಡೆಕ್ಕನ್ ಹೆರಾಲ್ಡ್ ಮೆಟ್ರೊ ಲೈಫ್ ಫ್ಯಾಷನ್ ಶೋ’, ಆಧುನಿಕತೆ ಹಾಗೂ ಕ್ರಿಯಾಶೀಲತೆಯಿಂದ ಗಮನ ಸೆಳೆಯಿತು. ಈ ಫ್ಯಾಷನ್‌ ಶೋದಲ್ಲಿ ಮಹಿಳಾ ಸಬಲೀಕರಣ ಹಾಗೂ ಪರಿಸರದ ನಿಗೂಢತೆ ಕುರಿತ ಥೀಮ್‌ಗಳು ಪ್ರದರ್ಶನಗೊಂಡವು.

ಉತ್ತರ ವಲಯದ ಪ್ರಥಮ ಹಂತ, ಕಲ್ಪನೆ ಮತ್ತು ಗ್ಲಾಮರ್ ಸ್ಪರ್ಧೆಯಲ್ಲಿ ಆರ್ಮಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಆಂಡ್ ಡಿಸೈನ್ ಪ್ರಥಮ ಸ್ಥಾನ ಗೆದ್ದುಕೊಂಡಿತು. ಮಹಿಳೆಯ ಬದುಕಿನ ಮೇಲೆ ಹೇರಲಾದ ಏಕತಾನತೆಯನ್ನು ಮುರಿಯುವ ಮಹಿಳೆಯರ ವಿಷಯವನ್ನಿಟ್ಟುಕೊಂಡು ಈ ಕಾಲೇಜು ಪ್ರದರ್ಶನ ನೀಡಿತ್ತು. ಕಪ್ಪು ದ್ರಾಕ್ಷಿಯ ಪ್ರಿಂಟ್ ಇರುವ ಸ್ಟೈಲಿಶ್ ಬಟ್ಟೆಗಳು, ತೆಲೆಯ ಮೇಲಿನ ಆಲಂಕಾರಿಕ ವಸ್ತುಗಳು ಪ್ರೇಕ್ಷಕರನ್ನು ಮೋಡಿ ಮಾಡಿದವು.

ADVERTISEMENT

ಎರಡನೇ ಬಹುಮಾನವನ್ನು ಪಡೆದ ಸೇಂಟ್ ಜೋಸೆಫ್ ಕಾಲೇಜು ‘ಚೆಕ್ ವಿತ್ ಅ ಟ್ವಿಸ್ಟ್’ ಕುರಿತ ಪ್ರದರ್ಶನ ನೀಡುತ್ತು. ವೈವಿಧ್ಯಮಯ ಕ್ರೇಪ್ಸ್‌, ಪ್ರಿಂಟೆಡ್ ಬಟ್ಟೆಗಳು ವೀಕ್ಷಕರನ್ನು ಆಕರ್ಷಿಸಿದವು. ವೋಗ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಕಾಲೇಜಿಗೆ ಮೂರನೇ ಸ್ಥಾನ ಗಳಿಸಿತು. ಕಪ್ಪು ಹಾಗೂ ಗಾಢ ಮರೂನ್‌ನೊಂದಿಗೆ ಅಲಂಕಾರಗೊಂಡ ಆಭರಣಗಳು ಎಲ್ಲರ ಮನ ಸೆಳೆದವು.

ಕಪ್ಪು ಹಾಗೂ ಕೇಸರಿ ಬಣ್ಣಗಳಿಂದ ಮಾಡಿದ ಆಕರ್ಷಕ ಬಟ್ಟೆಗಳನ್ನು ಪ್ರದರ್ಶಿಸಿದ ಸಿಎಂಆರ್ ವಿಶ್ವವಿದ್ಯಾಲಯಕ್ಕೆ (ಸಿಟಿ ಕ್ಯಾಂಪಸ್‌) ನಾಲ್ಕನೆ ಸ್ಥಾನ ಲಭಿಸಿತು. ಇದೇ ಕಾಲೇಜಿನ ‘ಮೌನ’ ಥೀಮ್‌ಗಾಗಿ ಬಳಸಿದ ಬೆಳ್ಳಿಯ ಚಿತ್ತಾರದ ಹಾಗೂ ಹೂವಿನ ತಲೆ–ಆಭರಣ ಹಾಗೂ ಪ್ರೊಪ್ಸ್‌ಗಳಿಂದ ಐದನೇ ಸ್ಥಾನವನ್ನು ಗೆದ್ದುಕೊಂಡಿತು. ವೈವಿಧ್ಯಮಯ ವಿನ್ಯಾಸ ಹಾಗೂ ಕ್ರಿಯಾಶೀಲತೆಯಿಂದ ಉಳಿದ ಕಾಲೇಜುಗಳು ಎಲ್ಲರ ಗಮನ ಸೆಳೆದವು. ಸೀರೆಯ ಜೊತೆಗೆ ಬೆಳ್ಳಿಯ ಆಭರಣಗಳನ್ನು ಬಾಲ್ಡ್‌ವಿನ್ ಮಹಿಳಾ ಮೆಥೊಡಿಸ್ಟ್ ಕಾಲೇಜು ಪ್ರದರ್ಶಿಸಿತು.

ಉದ್ಯೋಗಸ್ಥ ಮಹಿಳೆಯರ ಬಟ್ಟೆಗಳಿಗೆ ಹೊಸ ರೂಪವನ್ನು ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು ನೀಡಿತು. ಸಾದಾ ಕಂದು ಬಣ್ಣದ ಹಾಗೂ ಹೂವಿನ ಅಲಂಕಾರ ಇರುವ ಪ್ರಿಂಟೆಡ್ ಬಟ್ಟೆಗಳು ಆಕರ್ಷಕವಾಗಿದ್ದವು. ಖಾಕಿ, ಆಲಿವ್ ಹಾಗೂ ವಿವಿಧ ಬಣ್ಣಗಳ ಬಟ್ಟೆಗಳನ್ನು ಜೇನ್‌ ವಿಶ್ವವಿದ್ಯಾಲಯ ಪ್ರದರ್ಶಿಸಿದರೆ, ರೇಷ್ಮೆ ಬಟ್ಟೆಗಳ ಜೊತೆಗೆ ಆಕರ್ಷಕ ಕನ್ನಡಗಳನ್ನು ಹಾಕಿಕೊಂಡು ಆಚಾರ್ಯ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಕೇಂಬ್ರಿಜ್ಡ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತನ್ನ ಉಡುಗೆಗಳ ಮೂಲಕ ಗಾಢ ಬಣ್ಣಗಳ ಹೊಳಪನ್ನು ನೀಡಿತು. ದೇಶಿ ಪರಂಪರೆಯನ್ನು ಹೋಲುವ ಉಡುಗೆಗಳನ್ನು ಸಿಂಧು ಕಾಲೇಜು, ಸಿಎಂಆರ್ ರಾಷ್ಟ್ರೀಯ ಪದವಿ ಕಾಲೇಜು, ಸಿಎಂಆರ್ ಮ್ಯಾನೇಜ್‌ಮೆಂಟ್ ಕಾಲೇಜು ಸ್ಪರ್ಧೆಗೆ ಆಯ್ಕೆ ಮಾಡಿಕೊಂಡಿದ್ದವು.

ಫ್ಯಾಷನ್ ಶೋದ ನಡುವೆ ಏರ್ಪಡಿಸಿದ್ದ ನೃತ್ಯ ಹಾಗೂ ಮೂಕಾಭಿನಯ ವೀಕ್ಷಕರ ಉತ್ಸಾಹವನ್ನು ಇಮ್ಮಡಿಗೊಳಿಸಿತು. ರೇಡಿಯೋ ಜಾಕಿ ರಾಜ್ ಇಡೀ ವಾತಾವರಣವನ್ನು ತಮ್ಮ ಪೆಪ್ಪೀ ಹಾಡುಗಳ ಮೂಲಕ ಹಾಗೂ ಸೋಏಬ್ ನಿರೂಪಣೆಯ ಮೂಲಕ ರಂಜಿಸಿದರು. ಸೂರಜ್ ಗೌಡ, ಕೃಷಿ ತಾಪಂಡ, ಮೇಘನಾ ರಾಜ್ ಫ್ಯಾಷನ್ ಶೋನಲ್ಲಿ ಉಪಸ್ಥಿತರಿದ್ದರು. ಶೋನ ತೀರ್ಪುಗಾರರಾಗಿ ನಟ ಹಾಗೂ ಮಾಡೆಲ್ ರಾಹುಲ್ ರಾಜಶೇಖರನ್ ಹಾಗೂ ವಿನ್ಯಾಸಕ ರೂನಾ ಆಗಮಿಸಿದ್ದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮೇಘನಾ, ತಮ್ಮ ಕಾಲೇಜಿನ ದಿನಗಳನ್ನು ನೆನಪಿಸಿಕೊಂಡರು ಹಾಗೂ ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಮಚ್ಚಿಕೊಂಡರು. ಎರಡನೇ ಹಂತದ ದಕ್ಷಿಣ ವಲಯದ ಸ್ಪರ್ಧೆ ಜಯನಗರದ ಎನ್‌ಎಂಕೆಆರ್‌ವಿ ಮಹಿಳಾ ಕಾಲೆಜಿನಲ್ಲಿ ಆಗಸ್ಟ್ 26ರಂದು ನಡೆಯಲಿದೆ. ಗ್ರ್ಯಾಂಡ್‌ ಫಿನಾಲೆಯು ಸೆಪ್ಟೆಂಬರ್ 2ರಂದು ಕುಮಾರಸ್ವಾಮಿ ಬಡಾವಣೆಯ ದಯಾನಂದ ಸಾಗರ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.