ADVERTISEMENT

‘ರಾಗ ಪ್ರಹರ ದರ್ಶನ’ಕ್ಕೆ ಸಜ್ಜಾಗಿ

ಅಮೃತ ಕಿರಣ ಬಿ.ಎಂ.
Published 21 ಏಪ್ರಿಲ್ 2017, 19:30 IST
Last Updated 21 ಏಪ್ರಿಲ್ 2017, 19:30 IST
ಸಂಗೀತಾ ಕಟ್ಟಿ ಕುಲಕರ್ಣಿ
ಸಂಗೀತಾ ಕಟ್ಟಿ ಕುಲಕರ್ಣಿ   

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ‘ಪ್ರಹರ’ ರಾಗಕ್ಕೆ ವಿಶೇಷ ಮಹತ್ವವಿದೆ. ಯಾವ ಸಮಯಕ್ಕೆ ಯಾವ ರಾಗ ಹಾಡಿದರೆ ಬೀರುವ ಪರಿಣಾಮವೇ ಪ್ರಹರದ ಹೆಗ್ಗಳಿಕೆ. ಬೆಳಗಿನ ರಾಗಗಳು, ಮಧ್ಯಾಹ್ನ, ಸಂಜೆ, ರಾತ್ರಿ, ಮಧ್ಯರಾತ್ರಿಯ ರಾಗಗಳು ಎಂಬ ವೈವಿಧ್ಯತೆಯಿದೆ.
ಬೆಳಗಿನ ರಾಗವನ್ನು ಸಂಜೆ ಹಾಡುವುದು ವಿರಳ. ಒಂದು ರಾಗವು ಬೆಳಗ್ಗಿನ ಪ್ರಫುಲ್ಲತೆಯನ್ನು ಸೋಕಿಸಿ ನಮ್ಮನ್ನು ಮುದಗೊಳಿಸಿದರೆ, ಮತ್ತೊಂದು ರಾಗ ಸಂಜೆಯ ಬೇಸರಕ್ಕೆ ಜತೆಯಾಗುತ್ತದೆ. ಹೀಗೆ ಒಂದೊಂದು ಮೂಡ್‌ಗೂ ಒಂದೊಂದು ರಾಗಗಳನ್ನು ಹೊಸೆಯಲಾಗಿದೆ. ಪ್ರಹರಗಳ ಪ್ರಕಾಶವನ್ನು ಸಂಗೀತಾಸಕ್ತರ ಮನಕ್ಕೆ ಮುಟ್ಟಿಸಲು ಹೊರಟಿದೆ ಶರಣ್ಸ್ ಮ್ಯೂಸಿಕ್ಸ್ ಅಕಾಡೆಮಿ.

‘ರಾಗ ಪ್ರಹರ ದರ್ಶನ’ ಕಾರ್ಯಕ್ರಮದಲ್ಲಿ, ಒಟ್ಟು ಎಂಟು ಪ್ರಹರಗಳ ಪೈಕಿ ಎಲ್ಲವುಗಳಿಂದ ಒಂದೊಂದು ಎಂಬಂತೆ ಆಯ್ದುಕೊಂಡು ಪ್ರಸ್ತುತಪಡಿಸಲಾಗುತ್ತದೆ ಎನ್ನುತ್ತಾರೆ ಅಕಾಡೆಮಿಯ ಪಂಡಿತ್ ಶರಣ್ ಚೌಧರಿ.

ಒಂದೊಂದೂ ರಾಗಕ್ಕೆ ಇರುವ ಮಹತ್ವ, ಅದು ಕೇಳಗರ ಮೇಲೆ ಬೀರುವ ಪ್ರಭಾವ ಏನು ಎಂಬ ಸ್ಥೂಲ ವಿವರಣೆಗಳನ್ನೂ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ. ಇದು ಹಿಂದೂಸ್ತಾನಿ ಸಂಗೀತದಲ್ಲೊಂದು ಹೊಸ ಪ್ರಯೋಗ ಎನ್ನುತ್ತಾರೆ ಅವರು.

ADVERTISEMENT

ಪರಿಕಲ್ಪನೆ: ‘ಯುವ ಜನಾಂಗಕ್ಕೆ ಸಂಗೀತದ ಬಗ್ಗೆ ಆಸಕ್ತಿ ಹೆಚ್ಚು ಇದ್ದರೂ ಅವರಲ್ಲಿ ಗೊಂದಲವಿದೆ. ಬಹುತೇಕರಿಗೆ ಹಿಂದೂಸ್ತಾನಿ ಸಂಗೀತದ ಮಹತ್ವದ ಅರಿವಿಲ್ಲ. ಹಿಂದೂಸ್ತಾನಿ ಎಂದರೇನು, ಪ್ರಹರ ಎಂದರೇನು ಎಂಬ ಪ್ರಶ್ನೆಗಳಿಂದ ಹಿಡಿದು ರಾಗಗಳ ಶ್ರೇಷ್ಠತೆಯನ್ನು ಅರ್ಥಮಾಡಿಸುವ ಸಂಕಲ್ಪ ಮಾಡಿಕೊಂಡೆ. ಶುದ್ಧ ಹಿಂದೂಸ್ತಾನಿ ರಾಗ ಸಂಯೋಜನೆಯಲ್ಲಿ ಮೂಡಿಬಂದಿರುವ ಹಿಂದಿ ಗೀತೆಗಳನ್ನು ಪ್ರಸ್ತುತಪಡಿಸುವ ವಿಭಿನ್ನ ಆಲೋಚನೆ ಹೊಳೆಯಿತು’ ಎನ್ನುತ್ತಾರೆ ಕಾರ್ಯಕ್ರಮದ ರೂವಾರಿಯೂ ಆಗಿರುವ ಚೌಧರಿ.

ಮೂಲ ಹಿಂದೂಸ್ತಾನಿ ಬಂದಿಶ್ ಶೈಲಿಗಳು ಹಿಂದಿ ಭಾಷೆಯಲ್ಲೇ ಇವೆ. ಅವುಗಳ ಸತ್ವ ಇರುವುದು ಮೂಲ ಹಿಂದಿಯಲ್ಲೇ. ಸಾಂಸ್ಕೃತಿಕ ಕೇಂದ್ರ ಎನಿಸಿರುವ ಬೆಂಗಳೂರಿನಲ್ಲಿ ಅನ್ಯಭಾಷಿಕರದ್ದೂ ದೊಡ್ಡ ಬಳಗವಿದೆ. ಎಲ್ಲರಿಗೂ ಹಿಂದೂಸ್ತಾನಿಯನ್ನು ಹಳೆಯ ಹಿಂದಿ ಗೀತೆಗಳ ಮೂಲಕ ತಲುಪಿಸುವ ಯತ್ನವಿದು. ಕನ್ನಡಕ್ಕೆ ಮೊದಲ ಆದ್ಯತೆ. ವಚನ ಸಂಗೀತ, ದಾಸರ ಕೀರ್ತನೆಗಳೂ ಇಲ್ಲಿ ಮೇಳೈಸಲಿವೆ.  ವಿದುಷಿ ಸಂಗೀತಾ ಕಟ್ಟಿ ಕುಲಕರ್ಣಿ, ಪಂ. ರವೀಂದ್ರ ಸೊರಗಾವಿ ಅವರಂತಹ ಖ್ಯಾತನಾಮರು ಕಾರ್ಯಕ್ರಮದಲ್ಲಿ ಹಾಡಲಿದ್ದಾರೆ. ಇವರ ಜತೆ ಪಂ. ಬಸವರಾಜ ಮುಗಳಖೋಡ, ವೀಣಾ ಸೂರಿ, ವಿದ್ವಾನ್ ರಾಮಾನುಜಂ, ಶ್ರುತಿ ಮೋಹನ್, ನವೀನ್‌ಚಂದ್ರ, ಗುರುರಾಜ್ ಮನ್ಸಬ್‌ದಾರ್ ಅವರು ಹಿಂದೂಸ್ತಾನಿಯನ್ನು ಉಣಬಡಿಸಲಿದ್ದಾರೆ. ಕಾರ್ಯಕ್ರಮದ ಕೇಂದ್ರ ಬಿಂದು ಶರಣ್ ಚೌಧರಿ ಅವರ ಜತೆ ಅವರ ಶಿಷ್ಯ ಬಳಗವೂ ಸಂಗೀತದ ಔತಣ ನೀಡಲಿದೆ. 

ಕಾರ್ಯಕ್ರಮದ ವಿವರ
ಉದ್ಘಾಟನೆ:
ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ.  ಏ. 22 ಶನಿವಾರ, ಸ್ಥಳ: ಅಂಬೇಡ್ಕರ್ ಭವನ, ಮಿಲ್ಲರ್‍ಸ್ ರಸ್ತೆ, ವಸಂತನಗರ. ಸಂಜೆ 4 ಗಂಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.