ADVERTISEMENT

ರಾಜಕೀಯ ವಿಡಂಬನೆಗೆ ಹಾಸ್ಯದ ಕನ್ನಡಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST
ದಾನಿಷ್‌ ಸೇಠ್‌, ಶ್ರುತಿ ಹರಿಹರನ್, ಸಾದ್ ಖಾನ್
ದಾನಿಷ್‌ ಸೇಠ್‌, ಶ್ರುತಿ ಹರಿಹರನ್, ಸಾದ್ ಖಾನ್   

ಚಂದನವನಕ್ಕೆ ಹೊಸದಾಗಿ ಎಂಟ್ರಿ ಕೊಡುತ್ತಿರುವ ಸೃಜನಶೀಲ ಮಂದಿ ಕೇವಲ ಕನಸುಗಳನ್ನಷ್ಟೆ ಹೊತ್ತು ಬರುತ್ತಿಲ್ಲ. ಬದಲಿಗೆ ಸಿನಿಮಾ ಮಾರುಕಟ್ಟೆ, ಪ್ರಚಾರ ಹಾಗೂ ಪ್ರೇಕ್ಷಕರ ಮನಸ್ಥಿತಿಯನ್ನು ಅಧ್ಯಯನ ಮಾಡಿ ಇತ್ತ ಕಾಲಿಡುತ್ತಿರುವುದು ಈ ಕಾಲದ ಹೊಸ ಬೆಳವಣಿಗೆ. ‘ಹಂಬಲ್ ಪೊಲಿಟಿಷಿಯನ್ ನಾಗರಾಜ್‌’ ಚಿತ್ರತಂಡ ಇತ್ತೀಚೆಗೆ ಆ ಸಾಲಿಗೆ ಹೊಸ ಸೇರ್ಪಡೆ.

ರಾಜಕೀಯ ಹಾಸ್ಯದ ಕಥಾವಸ್ತು ಹೊಂದಿರುವ ಈ ಚಿತ್ರಕ್ಕೆ ಬಾಲಿವುಡ್‌ನ ಸಾದ್‌ ಖಾನ್ ಮೊದಲ ಸಲ ಕನ್ನಡದಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಅನು ಅಂಟಿ ಹಾಸ್ಯ ಷೋ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಹಾಸ್ಯ ಷೋಗಳ ಮೂಲಕ ಪರಿಚಿತರಾಗಿರುವ ದಾನಿಷ್‌ ಸೇಠ್‌ ನಾಯಕ ನಟನಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ತ್ರಿಮೂರ್ತಿಗಳಾದ ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಪಕ, ಹೇಮಂತರಾವ್ ಹಾಗೂ ರಕ್ಷಿತ್‌ ಶೆಟ್ಟಿ ಹೊಸ ಪ್ರಯತ್ನ ಮೆಚ್ಚಿ ಬಂಡವಾಳ ಹಾಕುತ್ತಿದ್ದಾರೆ. ಮುಹೂರ್ತದ ಸಲುವಾಗಿ ಮಾಧ್ಯಮದವರನ್ನು ಬರಮಾಡಿಕೊಂಡ ತಂಡ, ತಮ್ಮ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು.

‘ವರ್ತಮಾನದಲ್ಲಿ ರಾಜಕೀಯವಾಗಿ ಬೆಳೆಯಲು ಯತ್ನಿಸುವವರು ನಡೆಸುವ ಸರ್ಕಸ್‌ ಕಥೆಯನ್ನು ಹಾಸ್ಯಭರಿತವಾಗಿ ಹೆಣೆಯಲಾಗಿದೆ. ಚಿತ್ರದಲ್ಲಿ ಯಾರನ್ನೂ ವಿಡಂಬನೆ ಮಾಡುತ್ತಿಲ್ಲ. ಯಾವ ವ್ಯಕ್ತಿಗಳಿಗೂ ಇಲ್ಲಿನ ಪಾತ್ರಗಳು ಹೋಲಿಕೆಯಾಗುವುದಿಲ್ಲ’ ಎಂದು ನಿರ್ದೇಶಕ ಸಾದ್‌ ಖಾನ್ ನಗು ಸೂಸುತ್ತಲೇ ಅರೆಬರೆ ಕನ್ನಡದಲ್ಲಿ ಚಿತ್ರದ ಎಳೆಯನ್ನು ಬಿಡಿಸಿಟ್ಟರು.

ಎಂದಿನಂತೆ ಹಾಸ್ಯದ ಧಾಟಿಯಲ್ಲಿ ಮಾತು ಆರಂಭಿಸಿದ ದಾನಿಷ್ ಸೇಠ್‌ಗೆ, ಚಿತ್ರದ ಶೀರ್ಷಿಕೆ ನಾಗರಾಜ್ ಅಥವಾ ನೋಗರಾಜ್ –ಈ ಗೊಂದಲ ಬಗೆಹರಿಸಿ ಎಂಬ ಪ್ರಶ್ನೆ ಎದುರಾಯಿತು.

‘ಭಿನ್ನ ಸಂಸ್ಕೃತಿ ಹಾಗೂ ಭಾಷೆಯ ಜನರು ಬೇರೆ ಬೇರೆ ಭಾಗದ ಹೆಸರುಗಳನ್ನು ಉಚ್ಛಾರಣೆ ಮಾಡುವಾಗ ನಾಗರಾಜ್ ಎಂಬುದು ಕೆಲವೊಮ್ಮೆ ನೋಗರಾಜ್ ಆಗುತ್ತದೆ. ಅಲ್ಲೂ ಒಂಥರಾ ಕಾಮಿಡಿ ಇದೆ. ಅದನ್ನೇ ಇಟ್ಟುಕೊಂಡು ಚಿತ್ರದ ಪ್ರಮೋಷನ್ ಪಬ್ಲಿಸಿಟಿ ಆರಂಭಿಸಿದೆವು. ನಿಜ ಹೇಳಬೇಕೆಂದರೆ ಚಿತ್ರದ ಶೀರ್ಷಿಕೆ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಎಂದು ತಾವೂ ನಕ್ಕೂ, ಎದುರಿಗಿದ್ದವರನ್ನೂ ನಗಿಸಿ ಗೊಂದಲಕ್ಕೆ ತೆರೆ ಎಳೆದರು ಸೇಠ್.

‘ಚಿತ್ರದ ನಿರ್ದೇಶಕನಿಗೆ ತನ್ನ ಚಿತ್ರದ ಎಲ್ಲಾ ಆಯಾಮಗಳ ಬಗ್ಗೆ ಸ್ಪಷ್ಟ ಕಲ್ಪನೆ ಇದ್ದಾಗ, ಅವನು ಅರ್ಧ ಗೆದ್ದಂತೆ. ಅಂತಹ ಸ್ಪಷ್ಟತೆಯನ್ನು ಸಾದ್‌ ಖಾನ್ ಮತ್ತು ದಾನಿಷ್ ಸೇಠ್ ಅವರಲ್ಲಿ ಕಂಡಿದ್ದೇನೆ’ ಎಂದು ರಕ್ಷಿತ್ ಶೆಟ್ಟಿ ಹೇಳಿದರೆ, ‘ಕಥೆಯಲ್ಲಿರುವ ಹೊಸತನ ಇಷ್ಟವಾಯಿತು. ಇದು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಕಥೆಯಲ್ಲಿ ಸಂದೇಶವೂ ಇದೆ’ ಎಂದು ಹೇಮಂತ್‌ ರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.

 ‘ಹೊಸ ಆಲೋಚನೆ ಮತ್ತು ಹುರುಪು ಇರುವ ತಂಡದ ಜತೆ ಕೆಲಸ ಮಾಡುತ್ತಿರುವುದು ಹರ್ಷ ತಂದಿದೆ’ ಎಂದು ನಾಯಕಿ ನಟಿ ಶ್ರುತಿ ಹರಿಹರನ್ ಮತ್ತು ರೋಜರ್ ನಾರಾಯಣ್ ನುಡಿದರು. ಕರಮ್ ಚಾವ್ಲಾ ಛಾಯಾಗ್ರಹಣ ಹೊಣೆಯನ್ನು ವಹಿಸಿಕೊಂಡಿದ್ದು, ಮಾರ್ಚ್ 1ರಿಂದ ಶೂಟಿಂಗ್‌ ಆರಂಭಿಸಲಾಗುವುದು ಎಂದು ಚಿತ್ರತಂಡ ಹೇಳಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.