ADVERTISEMENT

ವಿಶೇಷ ಮಕ್ಕಳ ಕಲೆಯ ಅನಾವರಣ

ದಯಾನಂದ ಎಚ್‌.ಎಚ್‌.
Published 28 ಆಗಸ್ಟ್ 2014, 19:30 IST
Last Updated 28 ಆಗಸ್ಟ್ 2014, 19:30 IST

ಅವರು ವಿಶೇಷ ಸಾಮರ್ಥ್ಯದ ಮಕ್ಕಳು. ಎಲ್ಲ ಮಕ್ಕಳ ಕಲಿಕೆಗಿಂತ ಅವರ ಕಲಿಕೆ ಹಾಗೂ ಆಸಕ್ತಿ ಭಿನ್ನ. ಮಾನಸಿಕ ವೈಕಲ್ಯ ಹೊಂದಿರುವ ಈ ಆಟಿಸಂ ಮಕ್ಕಳಲ್ಲೂ ಕಲೆಯ ಬಗ್ಗೆ ವಿಶೇಷ ಒಲವಿದೆ. ಅವರ ಕಲೆ ಇಂದಿನಿಂದ ಮಹಾತ್ಮ ಗಾಂಧಿ ರಸ್ತೆಯ ಮೆಟ್ರೊ ರಂಗೋಲಿ ಕಲಾಕೇಂದ್ರದ ‘ವಿಸ್ಮಯ’ ಗ್ಯಾಲರಿಯಲ್ಲಿ ಅನಾವರಣಗೊಳ್ಳಲಿದೆ.

ಜಕ್ಕೂರಿನ ‘ಸೆನ್ಸ್ ಕಲೈಡಸ್ಕೋಪ್‌’ ವಿಶೇಷ ಮಕ್ಕಳ ಕಲಿಕಾ ಕೇಂದ್ರದ ಮಕ್ಕಳು ರಚಿಸಿರುವ ಚಿತ್ರಗಳು ಹಾಗೂ ಕರಕುಶಲ ವಸ್ತುಗಳು ವಿಸ್ಮಯದಲ್ಲಿ ಮೂರು ದಿನಗಳ ಕಾಲ (ಆಗಸ್ಟ್‌ 29ರಿಂದ 31ರವರೆಗೆ) ಪ್ರದರ್ಶನಗೊಳ್ಳಲಿವೆ.

ಕಳೆದ ವರ್ಷ ಆರಂಭಗೊಂಡ ಈ ಕಲಿಕಾ ಕೇಂದ್ರದಲ್ಲಿ ಸದ್ಯ ಹತ್ತು ಮಕ್ಕಳು ಮಾತ್ರ ಕಲಿಯುತ್ತಿದ್ದಾರೆ. ಸಾಮಾನ್ಯ ಮಕ್ಕಳಿಗೆ ನೀಡುವ ಶಿಕ್ಷಣಕ್ಕಿಂತ ಭಿನ್ನವಾಗಿ ಈ ವಿಶೇಷ ಮಕ್ಕಳ ಕೌಶಲ ವೃದ್ಧಿಸುವ ಕಲಿಕೆಯ ಕಡೆಗೆ ಈ ಕೇಂದ್ರದ ಶಿಕ್ಷಕರು ಗಮನ ಹರಿಸುತ್ತಿದ್ದಾರೆ. ಇಲ್ಲಿ ಒಂದು ಮಗುವಿಗೆ ಒಬ್ಬ ಶಿಕ್ಷಕ ಪರಿಕಲ್ಪನೆಯಡಿ ಕೌಶಲ ತರಬೇತಿ ನೀಡಲಾಗುತ್ತಿದೆ.

‘ವಿಶೇಷ ಮಕ್ಕಳ ಕಲೆಯ ಒಲವೂ ಭಿನ್ನವಾಗಿರುತ್ತದೆ. ಅವರಲ್ಲಿನ ಕಲಾಸಕ್ತಿಗೆ ಒತ್ತಾಸೆ ನೀಡಿದರೆ ಅವರ ಕಲೆಯ ಸಾಮರ್ಥ್ಯ ವೃದ್ಧಿಸುತ್ತದೆ. ಚಿತ್ರಕಲೆ ಹಾಗೂ ಕರಕುಶಲ ವಸ್ತುಗಳ ತಯಾರಿಕೆಗೆ ಮಕ್ಕಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಮಕ್ಕಳು ರಚಿಸಿದ ಸುಮಾರು 60 ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ’ ಎಂದು ಕಲಿಕಾ ಕೇಂದ್ರದ ಕ್ಯುರೇಟರ್‌ ಮಾನಸ ತಿಳಿಸಿದರು.

‘ಆಟಿಸಂ ಮಕ್ಕಳ ಭಾವನೆಗಳಿಗೆ ತಕ್ಕಂತೆ ಬಣ್ಣಗಳ ಅಭಿವ್ಯಕ್ತಿ ಇರುತ್ತದೆ. ಈ ಮಕ್ಕಳ ಕಲ್ಪನೆಗಳೂ ಸೂಕ್ಷ್ಮವಾಗಿರುತ್ತವೆ. ಕಲಾಕೃತಿ ರಚನೆಗೂ ಮುನ್ನ ಸಾಕಷ್ಟು ಪೂರ್ವಾಭ್ಯಾಸ ಮಾಡಿಸಲಾಗಿದೆ. ಕಲಾಕೃತಿಗಳಿಗೆ ಮಕ್ಕಳು ಅಂತಿಮ ರೂಪ ನೀಡಿದಾಗ ಅವರ ಸಾಮರ್ಥ್ಯದ ಬಗ್ಗೆ ಹೆಮ್ಮೆಯಾಯಿತು’ ಎನ್ನುತ್ತಾರೆ ಅವರು.

‘ನನ್ನ ಮಗನೂ ಇದೇ ಕಲಿಕಾ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಮಗನ ಪಾಲನೆಯ ಜತೆಗೆ ನಾನೂ ಕೇಂದ್ರದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಕಲಿಸುವುದರಲ್ಲಿ ಸಂತೃಪ್ತಿಯಿದೆ’ ಎನ್ನುತ್ತಾರೆ ಕಲಿಕಾ ಕೇಂದ್ರದ ಶಿಕ್ಷಕಿ ವಿದ್ಯಾ.

‘ಆಟಿಸಂ ಇರುವ ಮಕ್ಕಳಿಗೆ ಸಾಮಾನ್ಯ ಔಪಚಾರಿಕ ಶಿಕ್ಷಣದ ಮೂಲಕ ಕಲಿಸುವುದು ಕಷ್ಟಸಾಧ್ಯ. ಹೀಗಾಗಿ ಈ ವಿಶೇಷ ಮಕ್ಕಳಲ್ಲಿ ಇರುವ ಸಾಮರ್ಥ್ಯವನ್ನು ಮೊದಲು ಗುರ್ತಿಸಬೇಕು. ಬಳಿಕ ಅವರ ಆಸಕ್ತಿಯ ಕ್ಷೇತ್ರದಲ್ಲಿ ತರಬೇತಿ ನೀಡಬೇಕು. ಕೇಂದ್ರದ ವಿಶೇಷ ಮಕ್ಕಳು ತಯಾರಿಸಿದ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿರುವುದು ಸಂತಸ ತಂದಿದೆ’ ಎಂಬುದು ಅವರ ಮಾತು.

‘ಆಟಿಸಂ ಮಕ್ಕಳು ತಯಾರಿಸಿದ ಕಲಾಕೃತಿಗಳ ಪ್ರದರ್ಶನ ರಂಗೋಲಿ ಕಲಾಕೇಂದ್ರದಲ್ಲಿ ನಡೆಯುತ್ತಿರುವುದು ಇದೇ ಮೊದಲು. ವಿಶೇಷ ಮಕ್ಕಳ ಕಲೆಯ ಅನಾವರಣ ವಿಸ್ಮಯದಲ್ಲಿ ಆಗುತ್ತಿದೆ. ವಾರಾಂತ್ಯದ ರಜಾ ದಿನಗಳಿದ್ದರೂ ನಗರದ ಜನ ಹೆಚ್ಚಿನ ಸಂಖ್ಯೆಯಲ್ಲಿ ಗ್ಯಾಲರಿಗೆ ಭೇಟಿ ನೀಡಿ, ಈ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು’ ಎನ್ನುತ್ತಾರೆ ರಂಗೋಲಿ ಕಲಾಕೇಂದ್ರದ ಕ್ಯುರೇಟರ್‌ ಸುರೇಖಾ.

ಮೊದಲ ಪ್ರದರ್ಶನ
‘ಸ್ಕಾಟ್ಲೆಂಡ್‌ನಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಆಟಿಸಂ ಮಕ್ಕಳ ಕಲಿಕೆಯ ಕ್ಷೇತ್ರದಲ್ಲೇ ಕೆಲಸ ಮಾಡಿದ್ದೆ. ಸ್ವದೇಶಕ್ಕೆ ಮರಳಿದ ಮೇಲೆ ಇದೇ ಕ್ಷೇತ್ರದಲ್ಲಿ ಮುಂದುವರಿಯಬೇಕೆಂದು ಕಲಿಕಾ ಕೇಂದ್ರ ತೆರೆದೆವು.ಇದು ನಮ್ಮ ಕೇಂದ್ರದ ಮಕ್ಕಳ ಕಲೆಯ ಮೊದಲ ಪ್ರದರ್ಶನ. ಕಲಾಕೃತಿಗಳ ಮಾರಾಟದಿಂದ ಬರುವ ಹಣವನ್ನೂ ಆ ಮಕ್ಕಳ ಬೆಳವಣಿಗೆಗೆ ಮೀಸಲಿಡಲಾಗುವುದು’
– ಅಕ್ಷಯಿ ಶೆಟ್ಟಿ, ‘ಸೆನ್ಸ್ ಕಲೈಡಸ್ಕೋಪ್‌’ ಕಲಿಕಾ ಕೇಂದ್ರದ ಸಂಸ್ಥಾಪಕಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.