ADVERTISEMENT

ಸಮಾಜಮುಖಿ ಸೂಪರ್‌ ಮಾಡೆಲ್‌

ರಮೇಶ ಕೆ
Published 26 ಮೇ 2017, 19:30 IST
Last Updated 26 ಮೇ 2017, 19:30 IST
ಸಮಾಜಮುಖಿ ಸೂಪರ್‌ ಮಾಡೆಲ್‌
ಸಮಾಜಮುಖಿ ಸೂಪರ್‌ ಮಾಡೆಲ್‌   

ಮಾಡೆಲಿಂಗ್‌ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಬಹುತೇಕ ರೂಪದರ್ಶಿಯರು ಬೆಳ್ಳಿತೆರೆಯಲ್ಲಿ ಮಿಂಚಬೇಕು, ಜನಪ್ರಿಯ ನಟಿಯಾಗಬೇಕು ಎಂಬ ಕನಸನ್ನು ಇಟ್ಟುಕೊಂಡಿರುತ್ತಾರೆ. ಆದರೆ ಈ ರೂಪದರ್ಶಿ ಕೊಂಚ ಭಿನ್ನವಾಗಿ ಯೋಚಿಸುತ್ತಾರೆ.

ಮಾಡೆಲಿಂಗ್‌ಅನ್ನು ಸದುದ್ದೇಶಕ್ಕಾಗಿ ಆಯ್ಕೆಮಾಡಿಕೊಂಡಿದ್ದಾರೆ. ಇದರಿಂದ ಬರುವ ಹಣವನ್ನು ಎನ್‌ಜಿಒಗಳಿಗೆ ದೇಣಿಗೆ ನೀಡುವ ಮೂಲಕ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ನಾಗರಬಾವಿ ನಿವಾಸಿ  ಅನಘಾ ಭಾಸ್ಕರ್‌ ಸದುದ್ದೇಶವನ್ನಿಟ್ಟುಕೊಂಡು ಮಾಡೆಲಿಂಗ್‌ ಆಯ್ಕೆ ಮಾಡಿಕೊಂಡವರು.

ADVERTISEMENT

ಮೈಸೂರು ರಸ್ತೆಯ ಆರ್‌.ವಿ. ಕಾಲೇಜಿನಲ್ಲಿ ನಾಲ್ಕನೇ ವರ್ಷದ ವಾಸ್ತುಶಿಲ್ಪಶಾಸ್ತ್ರ ಪದವಿ ಮಾಡುತ್ತಿರುವ ಅನಘಾಗೆ ಒಂದು ವರ್ಷದಿಂದ ಮಾಡೆಲಿಂಗ್‌ ಕ್ಷೇತ್ರದ ನಂಟು. ಎಲೆನ್‌ ಸ್ಟ್ರೀಟ್‌, ರೋಡ್‌ಸ್ಟಾರ್‌ ಸೇರಿದಂತೆ ಅನೇಕ ಬ್ರ್ಯಾಂಡ್‌ಗಳಿಗೂ ರೂಪದರ್ಶಿಯಾಗಿದ್ದಾರೆ.

‘ಫೆಮಿನಾ ಮಿಸ್‌ ಸ್ಟೈಲ್‌ ದಿವಾ ಸೌತ್‌’ ಫ್ಯಾಷನ್‌ ಷೋನಲ್ಲಿ ಭಾಗವಹಿಸಿ ಅಂತಿಮ 14 ಮಂದಿಯಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೇ ‘ಸೌತ್‌ ಸೂಪರ್‌ ಮಾಡೆಲ್‌’ ಸ್ಪರ್ಧೆಯಲ್ಲೂ ರ್ಯಾಂಪ್‌ ವಾಕ್‌ ಮಾಡಿ ಮೆಚ್ಚುಗೆಪಡೆದಿದ್ದಾರೆ.

‘ಸ್ನೇಹಿತರ ಒತ್ತಾಯದಿಂದ ಮಾಡೆಲಿಂಗ್‌ ಕ್ಷೇತ್ರಕ್ಕೆ ಬಂದೆ. ಶಿಕ್ಷಣಕ್ಕೆ ನನ್ನ ಮೊದಲ ಆದ್ಯತೆ. ಮಾಡೆಲಿಂಗ್‌ಗೆ ಬಂದ ಮೇಲೆ ತೆಲುಗು ಹಾಗೂ ಕನ್ನಡ ಸಿನಿಮಾಗಳಿಂದ ಅವಕಾಶಗಳು ಬಂದವು. ವಿದ್ಯಾಭ್ಯಾಸದ ದೃಷ್ಟಿಯಿಂದ ಒಪ್ಪಿಕೊಳ್ಳಲಿಲ್ಲ. ವಾರಾಂತ್ಯದ ದಿನಗಳಲ್ಲಿ ಮಾಡೆಲಿಂಗ್‌ಗೆ ಸಮಯ ಮೀಸಲಿಡುತ್ತೇನೆ’ ಎನ್ನುತ್ತಾರೆ ಅನಘಾ.
ಸಮರ್ಥನಂ ಅಂಧ ಮಕ್ಕಳ ಶಾಲೆಯಲ್ಲಿ ಉಚಿತವಾಗಿ ಇಂಗ್ಲಿಷ್‌ ಪಾಠ ಮಾಡುತ್ತಿದ್ದ ಅನಘಾ ಅವರು, ಸಮಾಜಸೇವೆ ಮಾಡುವ ಗುರಿ ಇಟ್ಟುಕೊಂಡಿದ್ದಾರೆ. ಜೊತೆಗೆ ಐಎಎಸ್‌ ಅಧಿಕಾರಿಯಾಗಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸರಳ ಡಯಟ್‌ ಪಾಲನೆ
‘ನಾನು ಎಷ್ಟು ತಿಂದರೂ ದಪ್ಪ ಆಗುವುದಿಲ್ಲ. ಆದ್ದರಿಂದ ದೇಹ ಫಿಟ್‌ಆಗಿ ಇಟ್ಟುಕೊಳ್ಳುವುದು ಕಷ್ಟವಾಗಿಲ್ಲ. ಆದರೂ ಮಾಡೆಲಿಂಗ್‌ನಲ್ಲಿ ತೆಳ್ಳಗಿದ್ದಷ್ಟೂ ಒಳ್ಳೆಯದೇ. ಬೆಳಿಗ್ಗೆ ಒಂದು ಗಂಟೆ ಜಿಮ್‌ಗೆ ಹೋಗುತ್ತೇನೆ. ಕಾರ್ಡಿಯೊ ಮಾಡುತ್ತೇನೆ. ಸಂಜೆ ಬೆಲ್ಲಿ ಡಾನ್ಸ್‌ ಅಭ್ಯಾಸ ಮಾಡುತ್ತೇನೆ’ ಎನ್ನುತ್ತಾರೆ ಅನಘಾ.

ಬೆಳಿಗ್ಗೆ ದೋಸೆ, ಇಡ್ಲಿ, ಬಿಸಿಬೇಳೆ ಬಾತ್‌– ಈ ಪೈಕಿ ಯಾವುದಾದರೊಂದು ತಿಂಡಿ  ತಿನ್ನುವ ಅನಘಾ ಅವರು, ಮಧ್ಯಾಹ್ನ ಅನ್ನ–ರಸಂ, ರಾತ್ರಿ ಚಪಾತಿ ಅಥವಾ ಮುದ್ದೆ ಊಟ ಮಾಡುತ್ತಾರೆ. ಚಿಕನ್‌, ಮೀನು ಹಾಗೂ ಸಿಗಡಿಯನ್ನೂ ಇಷ್ಟಪಡುವ ಇವರು ಸರಳ ಡಯಟ್‌ ಪಾಲಿಸುತ್ತಾರೆ.

‘ಮುಂದಿನ ತಿಂಗಳು ನಡೆಯಲಿರುವ ಮಿಸ್‌ ಇಂಡಿಯಾ ಗಾರ್ಜಿಯಸ್‌’ ಸ್ಪರ್ಧೆಗೆ ಸಿಲ್ವರ್‌ ಸ್ಟಾರ್‌ ಫ್ಯಾಷನ್‌ ಶಾಲೆಯಲಿ ರವಿ ಅವರ ಬಳಿ ಗ್ರೂಮಿಂಗ್‌ ತರಬೇತಿ ಪಡೆಯುತ್ತಿದ್ದೇನೆ. ನಡಿಗೆ, ಕ್ಯಾಮೆರಾ ಎದುರಿಸುವ ಬಗೆ, ಆಟಿಟ್ಯೂಡ್‌ ಇನ್ನಿತರೆ ಅಂಶಗಳತ್ತ ಗಮನ ನೀಡುತ್ತಿದ್ದೇನೆ’ ಎಂದರು ಅನಘಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.